ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ
ಬೆಳಗಿನ ರೋಡ್ ಶೋನಲ್ಲಿ ನಟಿ ನಿಶ್ವಿಕಾ ನಾಯ್ಡು ಭಾಗಿ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ವರುಣಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಸ್ಯಾಂಡಲ್‌ವುಡ್‌ನ ಖ್ಯಾತನಾಮರು ಗುರುವಾರ ಮತ ಯಾಚನೆ ನಡೆಸಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಆಪ್ತರ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಶಿವರಾಜ್ ಕುಮಾರ್, ನಟಿ, ಮಾಜಿ ಸಂಸದೆ ರಮ್ಯಾ, ಸ್ಟಾರ್ ನಟ ದುನಿಯಾ ವಿಜಯ್ ಮತ್ತು ಯುವ ನಟಿ ನಿಶ್ವಿಕಾ ನಾಯ್ಡು ಅವರು ಸಿದ್ದರಾಮಯ್ಯನವರ ಪರ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ ಅವರ ಜೊತೆಗೆ ರೋಡ್ ಶೋ ಆರಂಭಿಸಿರುವ ನಿಶ್ವಿಕಾ ನಾಯ್ಡು, “ನನಗೆ ರಾಜಕೀಯ ಅಷ್ಟಾಗಿ ಗೊತ್ತಿಲ್ಲ. ರಾಕೇಶ್ ಸಿದ್ದರಾಮಯ್ಯನವರು ನನ್ನ ಚಿಕ್ಕಪ್ಪ. ಹೀಗಾಗಿ ನನ್ನ ಕೈಲಾದ ಬೆಂಬಲವನ್ನು ನೀಡುವ ಸಲುವಾಗಿ ನಾನು ಪ್ರಚಾರದಲ್ಲಿ ಭಾಗಿಯಾಗಿದ್ದೀನಿ. ಇಲ್ಲಿನ ಜನ ಅಪ್ಪಾಜಿಯ ಮೇಲಿಟ್ಟಿರುವ ಪ್ರೀತಿಯನ್ನು ನೋಡುತ್ತಿದ್ದರೆ ಖುಷಿಯಾಗುತ್ತದೆ. ಮೊದಲ ಬಾರಿಗೆ ಈ ರೀತಿ ಪ್ರಚಾರಕ್ಕೆ ಬಂದಿದ್ದೀನಿ. ವರುಣಾ ಕ್ಷೇತ್ರದ ಜನತೆ ಅಪ್ಪಾಜಿಯವರ ಕೈ ಹಿಡಿಯುತ್ತಾರೆ” ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದಾದ ಬೆನ್ನಲ್ಲೇ ಸೊರಬ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ತಮ್ಮ ಸಂಬಂಧಿ, ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಿದ್ದರು. ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ಅವರನ್ನು ಬೆಂಬಲಿಸಿ ರೋಡ್ ಶೋ ನಡೆಸಿದ್ದ ಅವರು, ತೀರ್ಥಹಳ್ಳಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲೂ ಭಾಗಿಯಾಗಿದ್ದರು. ಇದೀಗ ಸಿದ್ದರಾಮಯ್ಯನವರ ಪ್ರಚಾರ ಕೈಗೊಂಡಿದ್ದು, ಜಗದೀಶ್ ಶೆಟ್ಟರ್, ಭೀಮಣ್ಣ ನಾಯಕ್, ಅಶೋಕ್ ಖೇಣಿ ಮುಂತಾದವರ ಪರ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾನು ರಾಹುಲ್ ಗಾಂಧಿ ಅಭಿಮಾನಿ ಎಂದ ಶಿವರಾಜ್ ಕುಮಾರ್
ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗೌಡ ಪರ ಇತ್ತೀಚೆಗೆ ರೋಡ್ ಶೋ ನಡೆಸುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದ್ದ ನಟಿ ರಮ್ಯಾ, ಬುಧವಾರ ಟಿ. ನರಸೀಪುರ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಎಚ್.ಸಿ ಮಹದೇವಪ್ಪ ಅವರ ಪರವೂ ಮತ ಯಾಚನೆ ಮಾಡಿದ್ದಾರೆ. ಗುರುವಾರ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್‌ನ ಹಲವು ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ನಾನು ಮಂಡ್ಯ ಗೌಡತಿ ಎನ್ನುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದೆ ಸುಮಲತಾ ವಿರುದ್ಧ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರ ಬಗ್ಗೆ ಮೊದಲಿನಿಂದಲೂ ಅಭಿಮಾನ ಹೊಂದಿರುವ ನಟ ದುನಿಯಾ ವಿಜಯ್, ಕಾಂಗ್ರೆಸ್ ಪಕ್ಷದ ಪರವಾಗಲ್ಲದೇ ಕೇವಲ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ವರುಣಾದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.