ಶ್ರವಣಬೆಳಗೊಳ ಕ್ಷೇತ್ರ | ಗೌಡರ ಗದ್ದಲದಲ್ಲಿ `ದೊಡ್ಡ’ಗೌಡರಿಗೇ ಗೆಲುವು

Date:

Advertisements
  • 1999ರಲ್ಲಿ ಎಚ್.ಸಿ ಶ್ರೀಕಂಠಯ್ಯನವರು ಗೆದ್ದದ್ದೇ ಕಾಂಗ್ರೆಸ್ ಗೆದ್ದ ಕೊನೆ ಚುನಾವಣೆ
  • 2004ರಿಂದ 2018ರ ತನಕ, ನಾಲ್ಕು ಚುನಾವಣೆಗಳಿಂದ ಜೆಡಿಎಸ್ ಗೆಲ್ಲುತ್ತಲೇ ಸಾಗಿದೆ

ಚನ್ನರಾಯಪಟ್ಟಣ ಎಂದಾಕ್ಷಣ ಶ್ರೀಕಂಠಯ್ಯ ಎನ್ನುವ ಪ್ರತೀತಿ ಇದೆ. ಅದಕ್ಕೆ ಕಾರಣ ಕಾಂಗ್ರೆಸ್ಸಿನ ಕಟ್ಟಾಳು ಎಂದೇ ಕರೆಸಿಕೊಂಡ, ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ, ಜನಾನುರಾಗಿಯಾಗಿದ್ದ ಎಚ್.ಸಿ ಶ್ರೀಕಂಠಯ್ಯ ಉರುಫ್ ಹಿರೀಸಾವೆ ಅಣ್ಣಯ್ಯನವರ ವ್ಯಕ್ತಿತ್ವ. ದ್ವೇಷದ ರಾಜಕಾರಣ ಮಾಡದ, ನಿರುದ್ಯೋಗಿ ಪದವೀಧರರಿಗೆ ಕೆಲಸ ಕೊಡಿಸುತ್ತಿದ್ದ ಶ್ರೀಕಂಠಯ್ಯನವರು, ಹಾಸನ ಜಿಲ್ಲೆಯ ಘಟಾನುಘಟಿ ರಾಜಕಾರಣಿಗಳಾದ ದೇವೇಗೌಡ-ಪುಟ್ಟಸ್ವಾಮಿಗೌಡರಿಗೆ ಹೋಲಿಸಿದರೆ ಮಾನವಂತ ರಾಜಕಾರಣಿ. ಇವರು ಮನಸ್ಸು ಮಾಡಿದ್ದರೆ, 1980ರಲ್ಲಿ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅವರ ಸಾಮರ್ಥ್ಯವನ್ನು ಅವರೇ ಅರಿಯದೆ ಹಿನ್ನಲೆಗೆ ಸರಿದರು. ಅವರನ್ನು ಸಂಪರ್ಕ ಸೇತುವೆಯನ್ನಾಗಿಸಿಕೊಂಡ ಆರ್. ಗುಂಡೂರಾವ್ ಮುಖ್ಯಮಂತ್ರಿಯಾದರು.

ಮುಖ್ಯಮಂತ್ರಿಯಾಗುವ ಅವಕಾಶ ತಾನಾಗಿಯೇ ಒಲಿದು ಬಂದರೂ, ಕೈ ಚೆಲ್ಲಿದ ಶ್ರೀಕಂಠಯ್ಯನವರು, ಗುಂಡೂರಾವ್ ಸರ್ಕಾರದಲ್ಲಿ ಸಹಕಾರ ಸಚಿವ ಸ್ಥಾನಕ್ಕೆ ಹಾಗೂ ಸ್ಕಾಚ್ ವ್ಹಿಸ್ಕಿ, ನಾಟಿ ಕೋಳಿಗಷ್ಟೇ ಸಂತೃಪ್ತರಾದರು. 1999ರಲ್ಲಿ ಎಸ್.ಎಂ ಕೃಷ್ಣ ಅವರ ಕ್ಯಾಬಿನೆಟ್ ನಲ್ಲಿ ಕಂದಾಯ ಸಚಿವರಾದಾಗ, ಇನ್ನೊಮ್ಮೆ ಗೆಲ್ಲುವುದು ಸಾಧ್ಯವಿಲ್ಲವೆಂದು ಭಾವಿಸಿ, ಹಣ ಮಾಡುವ ಹಪಾಹಪಿಗೆ ಬಿದ್ದರು. ಆ ಧಾವಂತದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ ಬೇಕಾದ ನಾಯಕನನ್ನು ಬೆಳೆಸುವುದನ್ನೇ ಮರೆತರು. ಶ್ರೀಕಂಠಯ್ಯನವರ ಹಿಂದೆ ಹಲವಾರು ಎರಡನೇ ಸಾಲಿನ ನಾಯಕರು ಓಡಾಡಿಕೊಂಡಿದ್ದರೂ, ಅವರಾರೂ ವರ್ಚಸ್ವಿ ನಾಯಕರಾಗಿ ಹೊರಹೊಮ್ಮಲಿಲ್ಲ; ಶಾಸಕರಾಗುವಷ್ಟು ಶಕ್ತಿವಂತರು, ಬುದ್ಧಿವಂತರೂ ಆಗಿರಲಿಲ್ಲ.

ಹಾಗಾಗಿ, 1999ರಲ್ಲಿ ಎಚ್.ಸಿ ಶ್ರೀಕಂಠಯ್ಯನವರು ಗೆದ್ದದ್ದೇ ಕಾಂಗ್ರೆಸ್ಸಿನ ಕೊನೆ ಚುನಾವಣೆ ಆಯಿತು. ಅಲ್ಲಿಂದ ಇಲ್ಲಿಯವರೆಗೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಾಣಲಾಗಿಲ್ಲ. 2011ರಲ್ಲಿ, ತಮ್ಮ 84 ವಯಸ್ಸಿನಲ್ಲಿ ತೀರಿಹೋದ ಶ್ರೀಕಂಠಯ್ಯನವರು ತೆರವು ಮಾಡಿದ ಕ್ಷೇತ್ರಕ್ಕೆ, ಇವತ್ತಿನವರೆಗೂ ಮತ್ತೊಬ್ಬ ಕಾಂಗ್ರೆಸ್ಸಿನ ಸಮರ್ಥ ವಾರಸುದಾರ ಹುಟ್ಟಿ ಬರಲೇ ಇಲ್ಲ.

Advertisements

ಇದನ್ನು ಓದಿದ್ದೀರಾ?: ಚುನಾವಣೆ 2023 | ಹಾಸನ ಜಿಲ್ಲೆಯಲ್ಲಿ 73 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಕಾಂಗ್ರೆಸ್ಸಿನ ಈ ನಿರ್ವಾತ ಸ್ಥಿತಿಯನ್ನು ಗೆಲುವಿನ ಮೆಟ್ಟಿಲನ್ನಾಗಿ ಪರಿವರ್ತಿಸಿಕೊಂಡಿದ್ದು ಜಾತ್ಯತೀತ ಜನತಾ ದಳ. 1994ರಲ್ಲಿ ಜನತಾ ದಳದಿಂದ ಕಣಕ್ಕಿಳಿದ ಸಿ.ಎಸ್ ಪುಟ್ಟೇಗೌಡ ಎಂಬ ಯುವಕ, ಹಳೆ ಹುಲಿ ಶ್ರೀಕಂಠಯ್ಯನವರನ್ನು ಮಣಿಸಿ, ಹೊಸ ಭರವಸೆಯನ್ನು ಹುಟ್ಟುಹಾಕಿದ್ದರು. ಆದರೆ ಗೌಡ-ಪಟೇಲರ ಜಂಗೀಕುಸ್ತಿಯಿಂದಾಗಿ ಜನತಾದಳ ಹೋಳಾಯಿತು. ಆಡಳಿತ ವಿರೋಧಿ ಅಲೆ ಅಪ್ಪಳಿಸಿತು. 1999ರ ಚುನಾವಣೆಯಲ್ಲಿ ಪುಟ್ಟೇಗೌಡರು ಸೋತು ಶ್ರೀಕಂಠಯ್ಯನವರು ಗೆಲ್ಲುವಂತಾಯಿತು. ಆದರೆ ಆನಂತರದ ನಾಲ್ಕು ಚುನಾವಣೆಗಳಲ್ಲಿ, 2004ರಿಂದ 2018ರ ತನಕ, ಜೆಡಿಎಸ್ ಗೆದ್ದು, ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಸಾಗಿದೆ.

ಕಳೆದ ನಾಲ್ಕು ಚುನಾವಣೆಗಳಿಂದಲೂ, ವ್ಯಕ್ತಿ ಬದಲಾದರೂ ಮತದಾರರು ಮಾತ್ರ ಜೆಡಿಎಸ್ ಅನ್ನು ಬಿಡದೆ ಗೆಲ್ಲಿಸುತ್ತಿರುವುದರಿಂದ ಸದ್ಯಕ್ಕೆ ಈ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಂತೆ ಕಾಣುತ್ತಿದೆ. ಕಳೆದ ಎರಡು ಚುನಾವಣೆಗಳಿಂದ ಗೆಲುವಿನ ನಾಗಾಲೋಟದಲ್ಲಿರುವ ಸಿ.ಎನ್ ಬಾಲಕೃಷ್ಣ, ಹ್ಯಾಟ್ರಿಕ್ ಗೆಲುವಿಗಾಗಿ ಕಾದಿದ್ದಾರೆ. ಎಚ್.ಡಿ ದೇವೇಗೌಡರ ಅಳಿಯ ಡಾ.ಸಿ.ಎನ್ ಮಂಜುನಾಥ್ ರ ಸಹೋದರರಾದ ಬಾಲಕೃಷ್ಣರನ್ನು ಬೆಳೆಸಲು, ಈ ಮುಂಚೆ ತಮ್ಮ ಪಕ್ಷಕ್ಕಾಗಿ ದುಡಿದಿದ್ದ, ಗೆಲುವು ತಂದುಕೊಟ್ಟಿದ್ದ, ಯಾವ ಸ್ಥಾನಮಾನಗಳನ್ನು ಕೇಳದಿದ್ದ ಸಿ.ಎಸ್ ಪುಟ್ಟೇಗೌಡರಿಗೆ ಕಿರುಕುಳ ಕೊಟ್ಟು, ಪಕ್ಷ ಬಿಟ್ಟು ಹೋಗುವಂತೆ ಮಾಡಿದ `ಕೀರ್ತಿ’ ಗೌಡರ ಕುಟುಂಬಕ್ಕೆ ಸಲ್ಲುತ್ತದೆ.

ತೆರವಾದ ಸ್ಥಾನದಲ್ಲಿ ಗೌಡರ ಕುಟುಂಬದ ಕುಡಿಯಾದ ಸಿ.ಎನ್ ಬಾಲಕೃಷ್ಣ ಅವರನ್ನು ಪ್ರತಿಷ್ಠಾಪಿಸಲಾಯಿತು. ಬೇಸತ್ತ ಪುಟ್ಟೇಗೌಡರು ಕಾಂಗ್ರೆಸ್ ಸೇರಿ, ಬಾಲಕೃಷ್ಣರ ಎದುರು ಸ್ಪರ್ಧಿಸಿದರೂ, ಎರಡುಬಾರಿ ಸೋತರು. ವಯಸ್ಸು ಮತ್ತು ಆರೋಗ್ಯದ ನೆಪವೊಡ್ಡಿ ಪುಟ್ಟೇಗೌಡ, ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ನಿಂದ ಗೋಪಾಲಸ್ವಾಮಿಗೆ ಟಿಕೆಟ್ ನೀಡಲಾಗಿದೆ. ಆದರೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ಜತ್ತೇನಳ್ಳಿ ರಾಮಚಂದ್ರ, ವಿಜಯಕುಮಾರ್(ಎಚ್.ಸಿ ಶ್ರೀಕಂಠಯ್ಯನವರ ಪುತ್ರ), ಮನೋಹರ್- ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಾರ ಎಂಬುದೇ ಸದ್ಯದ ಪ್ರಶ್ನೆಯಾಗಿದೆ. ಇನ್ನು ಈಗತಾನೆ ತಾಲೂಕಿನಲ್ಲಿ ತಳವೂರುತ್ತಿರುವ ಬಿಜೆಪಿಯಿಂದ ಚಿದಾನಂದ ಎಂಬುವವರಿಗೆ ಟಿಕೆಟ್ ನೀಡಿದ್ದರೂ, ಕಣದಲ್ಲಿರುವುದಷ್ಟೇ ಹೆಗ್ಗಳಿಕೆಯಾಗಿದೆ.

ಹಾಗಾಗಿ ಸದ್ಯಕ್ಕೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡು ಬಾರಿ ಗೆದ್ದು ಶಾಸಕರಾಗಿ `ದಷ್ಟ-ಪುಷ್ಟ’ವಾಗಿ ಬೆಳೆದುನಿಂತಿರುವ ಬಾಲಕೃಷ್ಣರ ಹ್ಯಾಟ್ರಿಕ್ ಗೆಲುವಿಗೆ ಯಾವ ತೊಂದರೆಯೂ ಇಲ್ಲವೆನಿಸುವ ಸಂದರ್ಭ ಸೃಷ್ಟಿಯಾಗಿದೆ. ಜೊತೆಗೆ ಬಾಲಕೃಷ್ಣ, ಸಣ್ಣಪುಟ್ಟದ್ದಕ್ಕೆ ಕೈಯೊಡ್ಡದ, ಜನರ ಜೊತೆ ಸರಳವಾಗಿ ಬೆರೆಯುವ ಜನಾನುರಾಗಿ. ಗೌಡರ ಕುಟುಂಬದ ಶ್ರೀರಕ್ಷೆಯೂ ಇರುವುದರಿಂದ, ವಿರೋಧ ಪಕ್ಷಗಳು ಪೈಪೋಟಿ ನೀಡುವಷ್ಟು ಗಟ್ಟಿಗೊಳ್ಳದಿರುವುದರಿಂದ, ಇವರ ಗೆಲುವಿಗೆ ಯಾವ ಅಡೆತಡೆಗಳಿಲ್ಲ.

ಈ ಬಾರಿ ಕಾಂಗ್ರೆಸ್ ನವರು ಒಮ್ಮತಕ್ಕೆ ಬಂದು, ಗೋಪಾಲಸ್ವಾಮಿಯ ಬೆನ್ನಿಗೆ ನಿಂತರೆ, ಬಹುಸಂಖ್ಯಾತರಾದ ಒಕ್ಕಲಿಗರ ಜೊತೆಗೆ ಮುಸ್ಲಿಮರು, ಕುರುಬರು, ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಸಮಬಲದ ಸ್ಪರ್ಧೆಯೊಡ್ಡಬಹುದು. ಇಲ್ಲದಿದ್ದರೆ ಜೆಡಿಎಸ್ ಗೆ ಜಯ ಎನ್ನುವುದನ್ನು ಚುನಾವಣೆಗೆ ಮೊದಲೇ ಬರೆದಿಟ್ಟುಕೊಳ್ಳಬಹುದು, ಎನ್ನುವುದು ಮತದಾರರ ಮಾತಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ l14ರಂದು ತಹಶೀಲ್ದಾರ್ ಕಚೇರಿ ಮುತ್ತಿಗೆ: ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ತಹಶೀಲ್ದಾರ್ ಅವರ ಭ್ರಷ್ಟಾಚಾರ ಹಾಗೂ ಅನಾಗರೀಕ...

ಹಾಸನ l ಚನ್ನರಾಯಪಟ್ಟಣ ತಹಶೀಲ್ದಾರ್ ಅಮಾನತಿಗೆ ಜನಪರ ಸಂಘಟನೆ ಆಗ್ರಹ; ಪ್ರತಿಭಟನೆ ಎಚ್ಚರಿಕೆ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ತಹಶೀಲ್ದಾ‌ರ್ ಕಛೇರಿ ಒಳಗೊಂಡು ಎಲ್ಲಾ ಸರ್ಕಾರಿ...

ಶಿವಮೊಗ್ಗ | ಸಂಯುಕ್ತ ಮುಸ್ಲಿಂ ಒಕ್ಕೂಟದಿಂದ ಕಾಶ್ಮೀರದ ಭಯೋತ್ಪಾದಕ ದಾಳಿಗೆ ಖಂಡನೆ

ಏ 23 ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ...

ಹಾಸನ l ಗ್ರಾ.ಪಂ ಸಹಾಯಕ ಲೆಕ್ಕಾಧಿಕಾರಿ ಶವ ಕಾರಿನಲ್ಲಿ ಪತ್ತೆ 

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ರಾಮೇಶ್ವರ ಬಡಾವಣೆಯಲ್ಲಿ ರಸ್ತೆ ಬದಿ ನಿಂತಿದ್ದ,...

Download Eedina App Android / iOS

X