- ಸಿದ್ದರಾಮಯ್ಯರನ್ನು ಮುಸ್ಲಿಮರ ನಾಯಕ ಎಂದ ಕೇಂದ್ರ ಸಚಿವೆ
- ಕಾಂಗ್ರೆಸ್ ವಿರುದ್ಧ ಬಿಜೆಪಿಯ ಧರ್ಮ ರಾಜಕಾರಣದ ಅಸ್ತ್ರ ಪ್ರಯೋಗ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಓಡಾಡುವುದಕ್ಕೆ ನಮಗೆ ಭಯ ಆಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಶೋಭಾ ಕರಂದ್ಲಾಜೆ, “ನಮಗೆ ಪುತ್ತೂರಿನಲ್ಲಿ ಓಡಾಡಲು ಭಯವಾಗುತ್ತದೆ. ಅಲ್ಲಿ ನಾವು ಕಾರಿನಲ್ಲಿ ಹೋಗಬೇಕಾದರೆ, ಹಸಿರು ಭಾವುಟಗಳನ್ನು ಹಾಕಿಕೊಂಡು ಹಿಂಬಾಲಿಸುತ್ತಾರೆ” ಎಂದು ಹೇಳಿದರು.
“ಪ್ರವೀಣ್ ನೆಟ್ಟಾರು ಕೊಲೆ ಮಾಡಿದವರು ನಮ್ಮ ಮನೆಯ ಪಕ್ಕದಲ್ಲಿಯೇ ಸಿಗುತ್ತಾರೆ. ಇವರಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸಹಕಾರವಿದೆ” ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
“ಬಿಜೆಪಿ ತಂದಿರುವ ಮತಾಂತರ ಕಾಯಿದೆ ಮತ್ತು ಗೋ ಹತ್ಯೆ ನಿಷೇಧ ಕಾಯಿದೆ ವಾಪಸು ಪಡೆಯುವುದಾಗಿ ಕಾಂಗ್ರೆಸ್ ಹೇಳಿದೆ. ಹಿಂದೂ ವಿರೋಧಿ, ಸಿದ್ದರಾಮಯ್ಯ ಅವರು ಮುಸ್ಲಿಮರ ನಾಯಕರಾದರೆ, ಡಿಕೆ ಶಿವಕುಮಾರ್ ಅವರು ಕ್ರಿಮಿನಲ್‌ಗಳ ನಾಯಕ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ ರುಂಡ ಚೆಂಡಾಡುತ್ತೇನೆ ಎಂದಿದ್ದ ಚನ್ನಬಸಪ್ಪಗೆ ಬಿಜೆಪಿ ಟಿಕೆಟ್
“ಕಾಂಗ್ರೆಸ್‌ನ ಕೈ ಕಲುಷಿತ ಆಗಿದೆ. ಕಾಂಗ್ರೆಸ್ ಕೈಗೆ ರಕ್ತ ಅಂಟಿದೆ. ನಮ್ಮ ಮತ ಯಾರಿಗೆ ಎನ್ನುವ ಪ್ರಶ್ನೆಯಿಲ್ಲ ಇದು ನಮ್ಮ ಅಸ್ತಿತ್ವದ ಪ್ರಶ್ನೆ, ಮುಸ್ಲಿಮರಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಧೈರ್ಯವಿದೆ” ಎಂದು ಹೇಳಿದರು.
“ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್‌ನನ್ನು ಗುರು ಎಂದಿರುವ, ಹಿಂದೂಗಳ ವಿರುದ್ಧ ದ್ವೇಷಪೂರಿತ ಭಾಷಣ ಮಾಡುವ ಶಾಯರ್ ಇಮ್ರಾನ್ ಕರ್ನಾಟಕದ ಕಾಂಗ್ರೆಸ್ ಚುನಾವಣಾ ಸ್ಟಾರ್ ಪ್ರಚಾರಕ. ಕಾಂಗ್ರೆಸ್ ದೇಶದ್ರೋಹಿಗಳ ಪರವಾಗಿದೆ” ಎಂದು ಆರೋಪಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಯತ್ನಿಸಿದರು. ಪುತ್ತೂರಿನಲ್ಲಿ ಸ್ವತಃ ಸ್ವಪಕ್ಷದ ಸಂಜೀವ ಮಠಂದೂರು ಅವರೇ ಶಾಸಕರಾಗಿದ್ದರೂ, ಪುತ್ತೂರಿನಲ್ಲಿ ಓಡಾಡಲು ಭಯವಾಗುತ್ತದೆ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ.