ನಾಲ್ಕೈದು ದಿನಗಳ ಹಗ್ಗಜಗ್ಗಾಟದ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ತುಂಬಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಆದರೆ, ಮುಖ್ಯಮಂತ್ರಿ ಹುದ್ದೆ ಸಮಸ್ಯೆ ಬಗೆಹರಿಯುತ್ತಿದ್ದಂತೆಯೇ ಸಚಿವ ಸಂಪುಟದ ತಲೆನೋವು ಶುರುವಾಗಿದೆ. ಶುಕ್ರವಾರ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಮತ್ತೆ ದೆಹಲಿಗೆ ತೆರಳಲಿದ್ದಾರೆ.
ಇಬ್ಬರೂ ನಾಯಕರು ತಮಗೆ ಪ್ರಬಲ ಖಾತೆಗಳು ಬೇಕು. ಜೊತೆಗೆ, ತಮ್ಮ ಆಪ್ತರಿಗೂ ಸಚಿವ ಸ್ಥಾನ ನೀಡಬೇಕೆಂದು ಕೇಳಿದ್ದಾರೆ. ರಾಜ್ಯದ 36 ಖಾತೆಗಳ ಪೈಕಿ ಸಿದ್ದರಾಮಯ್ಯ ಅವರು ಮೂರು ಖಾತೆ ಮತ್ತು ಡಿ.ಕೆ ಶಿವಕುಮಾರ್ ಎರಡು ಖಾತೆಗಳನ್ನು ತಮ್ಮಲ್ಲಿ ಇಟ್ಟುಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಜೊತೆಗಿರುವ 10 ಶಾಸಕರು ಹಾಗೂ ಡಿ.ಕೆ ಶಿವಕುಮಾರ್ ಜೊತೆಗಿನ 10 ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು. ಉಳಿದ, ಸ್ಥಾನಗಳಿಗೆ ತಾವೇ ಶಾಸಕರನ್ನು ಆಯ್ಕೆ ಮಾಡುವುದಾಗಿ ಹೈಕಮಾಂಡ್ ಹೇಳಿದೆ ಎಂದು ತಿಳಿದುಬಂದಿದೆ. ಮೂರು ಖಾತೆಗಳನ್ನು ಖಾಲಿ ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಡಿ.ಕೆ ಶಿವಕುಮಾರ್ ತಮಗೆ ಹಣಕಾಸು ಖಾತೆ ಬೇಕೆಂದು ಕೇಳಿದ್ದರು. ಆದರೆ, ಮುಖ್ಯಮಂತ್ರಿಯಾದ ತಮ್ಮ ಬಳಿಯೇ ಆ ಖಾತೆ ಇರಲಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಹೀಗಾಗಿ, ಇಂಧನ, ಜಲ ಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ಪೈಕಿ ಎರಡು ಖಾತೆಗಳನ್ನು ಪಡೆದುಕೊಳ್ಳಲು ಶಿವಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ?: 24ನೇ ಸಿಎಂ ಸಿದ್ದರಾಮಯ್ಯ | ರಾಜ್ಯ ಕಂಡ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರಪತಿ ಆಳ್ವಿಕೆಯ ಸಂಪೂರ್ಣ ವಿವರ
ಗೃಹ ಖಾತೆಯನ್ನು ಬಿ.ಕೆ ಹರಿಪ್ರಸಾದ್ ಅವರಿಗೆ ನೀಡುವ ಸಾಧ್ಯತೆ ಇದೆ ಎಂದೂ ತಿಳಿದುಬಂದಿದೆ. ಶುಕ್ರವಾರ ಸಚಿವರ ಪಟ್ಟಿ ಅಂತಿಮವಾಗಲಿದ್ದು, ಶನಿವಾರ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಿದ್ದರಾಮಯ್ಯ ಜೊತೆಗೆ ಡಿ.ಕೆ ಶಿವಕುಮಾರ್ ಹಾಗೂ 20 ಮಂದಿ ಸಚಿವರೂ ಕೂಡ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.