- ಸಿದ್ದರಾಮಯ್ಯ ಪ್ರಚಾರಕ್ಕೆ ಜೊತೆಯಾದ ಮೊಮ್ಮಗ ಧವನ್
- ತಾತನಂತೆ ನಾನೂ ರಾಜಕೀಯಕ್ಕೆ ಬರುವೆ ಎಂದ ರಾಕೇಶ್ ಪುತ್ರ
ಕೊನೆಯ ಚುನಾವಣೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರನೇ ತಲೆಮಾರಿನ ರಾಜಕೀಯ ಉತ್ತರಾಧಿಕಾರಿಯ ಆಗಮನವಾಗಿದೆ.
ತಾತನಂತೆಯೇ ರಾಜಕೀಯದಲ್ಲಿ ಬೆಳೆದು ಮೈಸೂರು ಜನರ ಪಾಲಿಗೆ ನಾಯಕನಾಗುವ ಭರವಸೆಯನ್ನು ಸಿದ್ದರಾಮಯ್ಯನವರ ಮೊಮ್ಮಗ ಧವನ್ ನೀಡಿದ್ದಾನೆ.
ಹೌದು, ಮಂಗಳವಾರವಷ್ಟೇ ತಾತ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ಕಣದಲ್ಲಿ ಕಾಣಿಸಿಕೊಂಡ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಪುತ್ರ ಧವನ್ ಈಗ ತಾತನ ಆಸೆ ಈಡೇರಿಸಲು ಮುಂದಾಗಿದ್ದಾನೆ.
ಮಗ ರಾಕೇಶ್ ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಹೊರಟಿದ್ದ ಸಿದ್ದರಾಮಯ್ಯ ಆಸೆಗೆ ವಿಧಿ ತಣ್ಣೀರೆರಚಿದ ಬಳಿಕ, ಅಪ್ಪನ ಆಸೆ ಅರಿತು ಎರಡನೇ ಪುತ್ರ ಯತೀಂದ್ರ ರಾಜಕೀಯ ಪ್ರವೇಶ ಮಾಡಿ ಅವರ ಕೊರಗನ್ನ ದೂರ ಮಾಡಿದ್ದರು.
ಈಗ ತಾತನ ನಿಜ ಆಸೆ ಈಡೇರಿಸಲು ರಾಕೇಶ್ ಪುತ್ರ ಧವನ್ ಮುಂದಾಗಿದ್ದಾನೆ. ಸಿದ್ದರಾಮಯ್ಯ ನಾಮಪತ್ರ ಸಲಿಕೆಗೂ ಮುನ್ನ ಸಿದ್ದರಾಮನಹುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ವೇಳೆ ತಾತನಿಗೆ ಧವನ್ ಜೊತೆಯಾಗಿದ್ದ.
ಈ ಸುದ್ದಿ ಓದಿದ್ದೀರಾ? :ಈದಿನ ವಿಶೇಷ : ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ವಾಹನ ಕೊಡುಗೆ ನೀಡಿದ ಆಂಧ್ರ ಅಭಿಮಾನಿ!
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಧವನ್ ರಾಕೇಶ್, ನನಗೆ ರಾಜಕೀಯದಲ್ಲಿಆಸಕ್ತಿ ಇದೆ. ತಾತನ ರೀತಿ ಲಾ ಓದಿ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ ಎಂದಿದ್ದಾನೆ.
ರಾಜಕೀಯದಲ್ಲಿರಲು ತಂದೆ ರಾಕೇಶ್ ಅವರಿಗೆ ತುಂಬಾ ಆಸೆ ಇತ್ತು. ಆದರೆ ಅವರು ತೀರಿಕೊಂಡ್ರು, ನಾನು ಅವರ ಕನಸನ್ನು ನನಸು ಮಾಡುತ್ತೇನೆ. ನಾನು ಈಗ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಮುಂದೆ ತಾತನ ಆಸೆ ಈಡೇರಿಸುವೆ ಎಂದು ಧವನ್ ಹೇಳಿಕೊಂಡಿದ್ದಾನೆ.