- ಶೆಟ್ಟರ್ ಸೋಲಿಸಲು ಹಲವು ತಂತ್ರ ಹೆಣೆಯುತ್ತಿರುವ ಬಿಜೆಪಿ
- ಶೆಟ್ಟರ್ ಮನೆಗೆ ಹೋಗಿ ಬರುವವರ ಮೇಲೆ ಆರ್ಎಸ್ಎಸ್ ನಿಗಾ
ನಾಗಪುರದಿಂದ ಕರೆಸಲಾದ ಆರ್ಎಸ್ಎಸ್ ಕಾರ್ಯಕರ್ತರು ಮತ್ತು ಸ್ಥಳೀಯ ಆರ್ಎಸ್ಎಸ್ ಕಾರ್ಯಕರ್ತರನ್ನು ಶೆಟ್ಟರ್ ಮೇಲೆ ಗೂಢಾಚಾರಿಕೆ ಮಾಡಲು ಬಿಟ್ಟಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ವಿರುದ್ಧ ಟಿಕೆಟ್ ತಪ್ಪಲು ಅವರೇ ಕಾರಣ ಎಂದು ಆರೋಪ ಮಾಡಿದ ನಂತರ, ಅದನ್ನು ಬಿಜೆಪಿ ಮತ್ತು ಸಂಘ ಪರಿವಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ.
ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಜಗದೀಶ ಶೆಟ್ಟರ್ ಅವರನ್ನು ವಿಧಾನಸಭೆಗೆ ಆಯ್ಕೆಯಾಗದಂತೆ ನೋಡಿಕೊಳ್ಳಲು ಕ್ಷೇತ್ರದೊಳಗೆ ರಣತಂತ್ರ ಹೆಣೆಯುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಹೇಗಾದರೂ ಮಾಡಿ ಈ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಮತ್ತು ತಮ್ಮ ಮತಬ್ಯಾಂಕ್ ಅನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಆರ್ಎಸ್ಎಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ.
ನಾಗ್ಪುರದಿಂದ ಸುಮಾರು 50 ಆರ್ಎಸ್ಎಸ್ ಕಾರ್ಯಕರ್ತರನ್ನು ಹುಬ್ಬಳ್ಳಿಗೆ ಕರೆಸಿಕೊಳ್ಳಲಾಗಿದ್ದು, ಅವರಿಗೆ ವಿವಿಧ ಸಂಘಟನಾ ಜವಾಬ್ದಾರಿ ವಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಮೂಲಕ ಬಿಜೆಪಿ ಹಲವು ತಂತ್ರಗಳನ್ನು ಜಗದೀಶ್ ಶೆಟ್ಟರ್ ಸುತ್ತ ಹೆಣೆದಿದೆ.
ಶೆಟ್ಟರ್ ಮೇಲೆ ಗೂಡಾಚಾರಿಕೆ
ನಾಗ್ಪುರದಿಂದ ಬಂದ ಆರ್ಎಸ್ಎಸ್ ಕಾರ್ಯಕರ್ತರು ಮತ್ತು ಸ್ಥಳೀಯ ಆರ್ಎಸ್ಎಸ್ ಕಾರ್ಯಕರ್ತರನ್ನು ಶೆಟ್ಟರ್ ಮೇಲೆ ಗೂಢಾಚಾರಿಕೆ ಮಾಡಲು ಬಿಟ್ಟಿದ್ದಾರೆ ಎನ್ನಲಾಗಿದೆ. ಶೆಟ್ಟರ್ ಅವರ ಪ್ರತಿಯೊಂದು ನಡೆಯನ್ನು ಅವರು ಸೂಕ್ಷ್ಮವಾಗಿ ಗಮನಿಸಲು ಈಗಾಗಲೇ ಆ ವಿಶೇಷ ಪಡೆ ಆರಂಭಿಸಿದ್ದು, ಶೆಟ್ಟರ್ ಮನೆಗೆ ಹೋಗಿ ಬರುವವರ ಮೇಲೂ ನಿಗಾ ಇಟ್ಟಿದ್ದಾರೆ.
ಬಿ ಎಲ್ ಸಂತೋಷ್ ಅವರನ್ನು ಟೀಕಿಸಿದ್ದಕ್ಕೆ ಆರ್ಎಸ್ಎಸ್ ಸಹ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಹೀಗಾಗಿ ಶೆಟ್ಟರ್ ಚಲನವಲನದ ಮೇಲೆ ರಹಸ್ಯವಾಗಿ ಕಣ್ಣಿಟ್ಟಿರುವ ಆರ್ಎಸ್ಎಸ್ ಕಾರ್ಯಕರ್ತರ ತಂಡ, ಈ ಬಾರಿ ಹೇಗಾದರೂ ಮಾಡಿ ಶೆಟ್ಟರ್ ಅವರನ್ನು ಮಣಿಸಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರನ್ನು ಗೆಲ್ಲಿಸಲು ಪಣತೊಟ್ಟಿದೆ ಎನ್ನಲಾಗುತ್ತಿದೆ.
ಈ ನಡುವೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹುಬ್ಬಳ್ಳಿಗೆ ಭೇಟಿ ನೀಡಿ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ.