ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

Date:

Advertisements

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಕೂಡ ತೆಲಂಗಾಣದ ಕಾಂಗ್ರೆಸ್‌ಗೆ ದೊಡ್ಡ ನೈತಿಕ ಶಕ್ತಿಯಾಯಿತು. ಒಗ್ಗಟ್ಟಿನಿಂದ ಹೋರಾಡಲು ಸ್ಫೂರ್ತಿ ನೀಡಿತು. ಮುಖ್ಯವಾಗಿ ಕರ್ನಾಟಕದ ಮಾದರಿಯಲ್ಲಿಯೇ ತೆಲಂಗಾಣದಲ್ಲಿಯೂ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿತು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ, ಕಾಂಗ್ರೆಸ್ ಸಿಎಲ್‌ಪಿ ಲೀಡರ್ ಭಟ್ಟಿ ವಿಕ್ರಮಾರ್ಕ ಪಾದಯಾತ್ರೆ, ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಸಂಘಟನೆ ಇವೆಲ್ಲದರ ಬಲದಿಂದ ಕಾಂಗ್ರೆಸ್ ತೆಲಂಗಾಣದಲ್ಲಿ ವಿಜಯ ಪತಾಕೆ ಹಾರಿಸಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ಕ್ರೆಡಿಟ್ ಅನ್ನು ತನ್ನದಾಗಿಸಿಕೊಂಡ ಕೆ ಚಂದ್ರಶೇಖರ ರಾವ್ (ಕೆಸಿಆರ್) ಎರಡು ಬಾರಿ ತೆಲಂಗಾಣದ ಮುಖ್ಯಮಂತ್ರಿಯಾಗಿದ್ದರು. ಇನ್ನು ತೆಲಂಗಾಣದಲ್ಲಿ ತನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. 2014ರ ಚುನಾವಣೆಯಲ್ಲಿ 119 ವಿಧಾನಸಭಾ ಸ್ಥಾನಗಳ ಪೈಕಿ ಟಿಆರ್‌ಎಸ್‌ 63 ಸ್ಥಾನಗಳನ್ನು ಗೆದ್ದಿತ್ತು. 2018ರಲ್ಲಿ ಒಂಬತ್ತು ತಿಂಗಳ ಮುಂಚೆಯೇ ವಿಧಾನಸಭೆ ವಿಸರ್ಜಿಸಿದ್ದ ಕೆಸಿಆರ್, ಆಗ 88 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮತ್ತೆ ಮುಖ್ಯಮಂತ್ರಿ ಕುರ್ಚಿ ಏರಿದ್ದರು. ಮಹತ್ವಾಕಾಂಕ್ಷಿಯಾಗಿದ್ದ ಕೆಸಿಆರ್ ಸರಿಯಾಗಿ ಒಂದು ವರ್ಷದ ಹಿಂದೆ, ರಾಷ್ಟ್ರ ರಾಜಕಾರಣದಲ್ಲಿಯೂ ನಿರ್ಣಾಯಕ ಪಾತ್ರ ವಹಿಸಬೇಕೆಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಎಂದಿದ್ದ ತಮ್ಮ ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಬದಲಾಯಿಸಿದ್ದರು. ಸದ್ಯದ ಚುನಾವಣೆಯ ಫಲಿತಾಂಶ ನೋಡಿದರೆ, ಕೆಸಿಆರ್, ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿರಲಿ, ಸ್ವಂತ ರಾಜ್ಯದಲ್ಲಿಯೂ ಅಧಿಕಾರ ಕಳೆದುಕೊಂಡಿದ್ದಾರೆ.

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಅಸಲಿಗೆ, ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಮಾಡಿದ್ದೇ ತಮ್ಮ ಪಕ್ಷ ಎಂದು ಕಾಂಗ್ರೆಸ್ ಹೇಳಿಕೊಂಡರೂ ಅದನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿತ್ತು. 2014ರ ಚುನಾವಣೆಯಲ್ಲಿ 119 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 21 ಸ್ಥಾನಗಳನ್ನಷ್ಟೇ ಗೆದ್ದಿತ್ತು. 2018ರಲ್ಲಿ ಇನ್ನೂ ಕೆಳಕ್ಕಿಳಿದ ಕಾಂಗ್ರೆಸ್, ಕೇವಲ 19 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಹೀಗೆ ಕಳೆಗುಂದಿದ್ದ ಪಕ್ಷಕ್ಕೆ ತೆಲಂಗಾಣದಲ್ಲಿ ಮರುಜನ್ಮ ನೀಡಿದ್ದು ರಾಹುಲ್ ಗಾಂಧಿ ಮತ್ತು ರೇವಂತ್ ರೆಡ್ಡಿ. 2022ರಲ್ಲಿ ನಡೆದಿದ್ದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಒಂದಿಷ್ಟು ಉತ್ತಮ ಎನ್ನಬಹುದಾದ ಪ್ರತಿಕ್ರಿಯೆ ವ್ಯಕ್ತವಾದಾಗ ಆ ಪಕ್ಷದಲ್ಲಿ ಆಸೆ ಮತ್ತೆ ಚಿಗುರೊಡೆದಿತ್ತು. 2017ರಲ್ಲಿ ಟಿಡಿಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದ ರೇವಂತ್ ರೆಡ್ಡಿಗೆ 2021ರಲ್ಲಿ ಅಧ್ಯಕ್ಷ ಸ್ಥಾನ ನೀಡಲಾಯಿತು. ಗಡುಸು ಸ್ವಭಾವದ ಕೆಸಿಆರ್‌ಗೆ ಅದೇ ಧಾಟಿಯಲ್ಲಿ ಉತ್ತರ ನೀಡುವ ಮೂಲಕ ರೇವಂತ್ ರೆಡ್ಡಿ ಜನರನ್ನು ಆಕರ್ಷಿಸತೊಡಗಿದರು. ಜೊತೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾದ ಭಟ್ಟಿ ವಿಕ್ರಮಾರ್ಕ ರಾಜ್ಯದಾದ್ಯಂತ ರ್ಯಾಲಿ ನಡೆಸಿದ್ದರು. ಅದು ದಲಿತ ಹಿಂದುಳಿದವರನ್ನು ಪಕ್ಷದತ್ತ ಸೆಳೆದಿತ್ತು.

Advertisements

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಕೂಡ ತೆಲಂಗಾಣದ ಕಾಂಗ್ರೆಸ್‌ಗೆ ದೊಡ್ಡ ನೈತಿಕ ಶಕ್ತಿಯಾಯಿತು. ಒಗ್ಗಟ್ಟಿನಿಂದ ಹೋರಾಡಲು ಸ್ಫೂರ್ತಿ ನೀಡಿತು. ಮುಖ್ಯವಾಗಿ ಕರ್ನಾಟಕದ ಮಾದರಿಯಲ್ಲಿಯೇ ತೆಲಂಗಾಣದಲ್ಲಿಯೂ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿತು. ಅದು ಮುಸ್ಲಿಮರು ಸೇರಿದಂತೆ ರಾಜ್ಯದ ಬಹುತೇಕ ಬಡ, ಹಿಂದುಳಿದ ಜನರನ್ನು ಕಾಂಗ್ರೆಸ್‌ನತ್ತ ಕರೆತಂದಿತು. ಇದೆಲ್ಲದರ ಫಲವಾಗಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿ, ಹತ್ತು ವರ್ಷಗಳ ನಂತರ ತೆಲಂಗಾಣದಲ್ಲಿ ಮೊದಲ ಬಾರಿಗೆ ಸರ್ಕಾರ ರಚನೆ ಮಾಡುವ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಮ್ಜಾಜಿಕ್ ನಂಬರ್ ದಾಟಿ ಮುನ್ನಡೆದಿದೆ.
ಕೋಡಂಗಲ್‌ ಹಾಗೂ ಕಾಮಾರೆಡ್ಡಿ ಎರಡು ಕಡೆ ನಿಂತಿದ್ದ ರೇವಂತ್ ರೆಡ್ಡಿ, ಕೋಡಂಗಲ್‌ನಲ್ಲಿ ಗೆದ್ದು ಕಾಮಾರೆಡ್ಡಿಯಲ್ಲಿ ಸೋತಿದ್ದಾರೆ. ಗಜ್ವಾಲ್ ಮತ್ತು ಕಾಮಾರೆಡ್ಡಿ ಎರಡು ಕಡೆ ಸ್ಪರ್ಧಿಸಿದ್ದ ಕೆಸಿಆರ್ ಕೂಡ ಒಂದು ಕಡೆ ಗೆದ್ದು, ಮತ್ತೊಂದು ಕಡೆ ಸೋತಿದ್ದಾರೆ.

ಕೆಸಿಆರ್ ಸರ್ವಾಧಿಕಾರಿ ಮನೋಭಾವದ ರಾಜಕಾರಣಿ. ಎದುರಾಳಿಯ ಬಗ್ಗೆ ಅನಿರ್ಬಂಧಿತ ವ್ಯಂಗ್ಯ, ಹಾಸ್ಯ, ಕಟು ಟೀಕೆಗಳ ಪ್ರಹಾರವನ್ನೇ ಪ್ರಯೋಗಿಸುವ ವ್ಯಕ್ತಿ ಕೆಸಿಆರ್. ಭ್ರಷ್ಟಾಚಾರದ ಆರೋಪಗಳು ಬಂದಾಗಲೂ ಅವರು ಇದೇ ರೀತಿ ಅದನ್ನು ಸಮರ್ಥಿಸಿಕೊಂಡಿದ್ದರು. ಜನರಿಂದ ದೂರವಾಗತಡೊಗಿದ ಅವರು ಅಹಂಕಾರಿಯಂತೆ ವರ್ತಿಸತೊಡಗಿದ್ದರು. ಅವರ ಈ ಸ್ವಭಾವವೇ ಅವರಿಗೆ ಮುಳುವಾಗಿದೆ. ಜೊತೆಗೆ ಕರ್ನಾಟಕದ ಜೆಡಿಎಸ್‌ನಂತೆ ಅಧಿಕಾರ ಎನ್ನುವುದು ಅವರ ಕುಟುಂಬದಲ್ಲಿಯೇ ಕೇಂದ್ರೀಕೃತವಾಗಿದೆ ಎನ್ನುವುದು ಅವರ ವಿರುದ್ಧದ ಜನರ ಅಸಹನೆಗೆ ಮತ್ತೊಂದು ಕಾರಣ. ಬಿಆರ್‌ಎಸ್‌ ಸೋಲಿಗೆ ಇವೇ ಮುಖ್ಯ ಕಾರಣ ಎನ್ನಲಾಗುತ್ತಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಮುಖ್ಯ ಕಾರಣವಾಗಿರುವುದು ಕರ್ನಾಟಕದ ಮಾದರಿ. ಕರ್ನಾಟಕದಂತೆ ಎಸ್ಸಿ ಮತ್ತು ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ ಆದಂತೆ ಹೆಚ್ಚಿನ ಮುಸ್ಲಿಮರು ಕೂಡ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ಹೈದರಾಬಾದ್‌ನಲ್ಲಿ ಮಾತ್ರ ಎಎಂಎಂಐಎಂ ಮತ್ತು ಬಿಆರ್‌ಎಸ್‌ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿವೆ. ಕಾಂಗ್ರೆಸ್ ಸ್ಥಾನ ಗಳಿಕೆಯಲ್ಲಿ ಮುಂದಿದ್ದರೂ ಕಾಂಗ್ರೆಸ್, ಬಿಆರ್‌ಎಸ್‌ ನಡುವೆ ಮತ ಗಳಿಕೆಯಲ್ಲಿ ಅಲ್ಪ ವ್ಯತ್ಯಾಸ ಇದೆ.

ಕಾಂಗ್ರೆಸ್ ಬಹುಮತ ಗೆಲ್ಲುತ್ತಿದ್ದಂತೆಯೇ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ, ಸಿಎಲ್‌ಪಿ ಲೀಡರ್ ಭಟ್ಟಿ ವಿಕ್ರಮಾರ್ಕ, ಸೋನಿಯಾ ಗಾಂಧಿ ಕುಟುಂಬಕ್ಕೆ ಆಪ್ತರಾದ ಉತ್ತಮ್ ಕುಮಾರ್ ರೆಡ್ಡಿ, ನಲ್ಗೊಂಡ ಜಿಲ್ಲೆಯಲ್ಲಿ ಪಕ್ಷವನ್ನು ಗೆಲ್ಲಿಸಿದ ಕೋಮಟಿ ರೆಡ್ಡಿ ವೆಂಕಟರೆಡ್ಡಿ ಮುಂತಾದವರು ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ. ಆದರೆ, ಪ್ರಬಲ ಸಮುದಾಯಕ್ಕೆ ಸೇರಿದ ರೇವಂತ್ ರೆಡ್ಡಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಚುನಾವಣೆ ಸಮಯದಲ್ಲೂ ರೇವಂತ್ ರೆಡ್ಡಿ ರಾಜ್ಯದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಪ್ರಸಾರ ಮಾಡಿದ್ದರು. ರಾಹುಲ್, ಪ್ರಿಯಾಂಕಾ ಗಾಂಧಿ ಜೊತೆ ರಾಜ್ಯದಾದ್ಯಂತ ಸುತ್ತಾಡಿದ್ದರು. ಆದರೆ, ಅವರು ಹೊರಗಿನಿಂದ ಬಂದವರು. ಹಾಗಾಗಿ ರೇವಂತ್ ರೆಡ್ಡಿಗೆ ಸಿಎಂ ಪದವಿ ಕೊಟ್ಟರೆ ಐದು ವರ್ಷ ಪೂರೈಸುವರೇ ಎನ್ನುವು ಪ್ರಶ್ನೆಯೂ ಹುಟ್ಟಿಕೊಂಡಿದೆ. ಮೂರು ತಲೆಮಾರಿನಿಂದ ಕಾಂಗ್ರೆಸ್‌ನಲ್ಲಿರುವ ಭಟ್ಟಿ ವಿಕ್ರಮಾರ್ಕ ಸಿಎಂ ಹುದ್ದೆಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಜೊತೆಗೆ ಅವರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ದಲಿತರೊಬ್ಬರಿಗೆ ಮುಖ್ಯಮಂತ್ರಿ ಪದವಿ ನೀಡಿದ ಹಿರಿಮೆಯೂ ಕಾಂಗ್ರೆಸ್‌ಗೆ ಸಿಗಲಿದೆ ಎನ್ನುವ ವಿಶ್ಲೇಷಣೆಗಳಿವೆ.

ಈ ಸುದ್ದಿ ಓದಿದ್ದೀರಾ: ತೆಲಂಗಾಣ | ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಸಿಎಂ ಕೆಸಿಆರ್ 

ತೆಲಂಗಾಣದಲ್ಲಿ ಒಂದು ಕಾಲದಲ್ಲಿ ಬಿಆರ್‌ಎಸ್‌ಗೆ ಪರ್ಯಾಯ ಎಂದರೆ, ಅದು ಬಿಜೆಪಿ ಮಾತ್ರ ಎನ್ನುವಂಥ ವಾತಾವರಣವಿತ್ತು. ಆದರೆ, ಕಾಂಗ್ರೆಸ್ ತನ್ನ ಚತುರ ತಂತ್ರಗಾರಿಕೆ, ಸಂಘಟನೆಗಳಿಂದ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. ಬಂಡಿ ಸಂಜಯ್ ಸೇರಿದಂತೆ ಚುನಾವಣಾ ಕಣದಲ್ಲಿದ್ದ ಮೂವರು ಬಿಜೆಪಿ ಸಂಸದರು ಸೋಲು ಕಂಡಿದ್ದಾರೆ. ಮತ ಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ ಎನ್ನುವುದೊಂದೇ ಬಿಜೆಪಿ ಪಾಲಿಗಿರುವ ಸಮಾಧಾನದ ಅಂಶ. ಉತ್ತರದಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರೆದಿದ್ದರೂ ದಕ್ಷಿಣ ಬಿಜೆಪಿ ಮುಕ್ತವಾಗಿದೆ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X