- ಬಿಜೆಪಿ ಸರ್ಕಾರ ಅಭಿವೃದ್ಧಿ ಎನ್ನುವ ಪದ ಮುಂದಿಟ್ಟು ಬೊಕ್ಕಸ ಲೂಟಿ ಮಾಡುತ್ತಿದೆ
- ಬಿಜೆಪಿ ಕಿತ್ತು ಹಾಕುವ ಮೂಲಕ ದೇಶಕ್ಕೆ ಒಳ್ಳೆಯ ಸಂದೇಶವನ್ನು ರಾಜ್ಯ ನೀಡಲಿದೆ
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಭಿವೃದ್ಧಿ ಎನ್ನುವ ಪದ ಮುಂದಿಟ್ಟುಕೊಂಡು ಬೊಕ್ಕಸವನ್ನು ಲೂಟಿ ಮಾಡುತ್ತಿದೆ. ಜನರು ಬದಲಾವಣೆ ಬಯಸಿದ್ದು, ಕರ್ನಾಟಕದಲ್ಲಿ ಬಿಜೆಪಿ ಕಿತ್ತು ಹಾಕುವ ಮೂಲಕ ದೇಶಕ್ಕೆ ಒಳ್ಳೆಯ ಸಂದೇಶ ಕೊಡಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಸೋಮವಾರ ಚಿಕ್ಕಮಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಈ ಚುನಾವಣೆ ಇಡೀ ದೇಶದಲ್ಲೇ ಮಹತ್ವ ಪಡೆದಿದೆ. ಕೇವಲ ರಾಜ್ಯದ ದೃಷ್ಟಿಯಿಂದ ಮಾತ್ರವಲ್ಲ. ದೇಶದ ದೃಷ್ಟಿಯಿಂದ ಒಳ್ಳೆಯ ಸಂದೇಶ ಕೊಡಲು ರಾಜ್ಯದ ಪ್ರಜ್ಞಾವಂತ ಜನರಿಗೆ ಅವಕಾಶ ಸಿಕ್ಕಿದೆ” ಎಂದರು.
ರಾಜ್ಯದ ಜನರಿಗೆ ನನ್ನ ಮನವಿ ಇಷ್ಟೇ: ಶಾಸಕರನ್ನೇ ಕಳ್ಳತನ ಮಾಡುವ ಸಂಸ್ಕೃತಿ ಬಿಜೆಪಿಯಲ್ಲಿ ಬೇರೂರಿದೆ. ಬಹುತೇಕ ಕಳ್ಳತನದ ಮೂಲಕವೇ ಬಿಜೆಪಿ ನಾನಾ ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದೆ. ಹೀಗಾಗಿ ಕಳ್ಳರ ಹಾವಳಿ ಜಾಸ್ತಿ ಇದ್ದು, ಬಹುಮತಕ್ಕೆ ಬೇಕಾದ ಸಂಖ್ಯೆ ಕೊಟ್ಟರೂ ಈ ಬಿಜೆಪಿಗರು ಕಳ್ಳತನ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಾಲ್ಕೈದು ಸ್ಥಾನ ಹೆಚ್ಚು ಬಂದರೂ ಆ ಶಾಸಕರು ಬ್ಲ್ಯಾಕ್ ಮೇಲ್ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವುದೇ ಅಂತಂತ್ರವಾಗದಂತೆ ಕಾಂಗ್ರೆಸ್ಸಿಗೆ 140-150 ರವರೆಗೆ ಸ್ಥಾನಗಳನ್ನು ನೀಡುವ ಮೂಲಕ ಸುಭದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಡಿ” ಎಂದು ಖರ್ಗೆ ಕೋರಿದರು.
“ಕರ್ನಾಟಕ ಪ್ರಗತಿಪರ ವಿಚಾರಧಾರೆ ಹೊಂದಿರುವ ರಾಜ್ಯ. ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿ ಗಮನ ಸೆಳೆದಿದೆ. ಕೆಲವೇ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಳ್ಳೆ ಆಡಳಿತ ಕಂಡ ರಾಜ್ಯ. ಆದರೆ ಇಂದು ರಾಜ್ಯದ ಆಡಳಿತದಲ್ಲಿ ಸಾಕಷ್ಟು ವ್ಯತ್ಯಾಸ ಆಗಿದೆ. ಜನರ ಅಪೇಕ್ಷೆಯಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. 40 ಪರ್ಸೆಂಟ್ ಕಮಿಷನ್ ಸರ್ಕಾರ ರಾಜ್ಯದಲ್ಲಿದೆ. ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿರಲಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-4: ಭ್ರಷ್ಟಾಚಾರವೇ ಚುನಾವಣೆಯ ಪ್ರಧಾನ ಸಂಗತಿ
“ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕುರಿತು ಪ್ರಧಾನಿ ಮೋದಿ, ರಾಷ್ಟ್ರಪತಿ, ರಾಜ್ಯಪಾಲರಿಗೆ ಗುತ್ತಿಗೆದಾರರು ಪತ್ರ ಬರೆದರೂ ಅವರೆಲ್ಲರೂ ಕಿವುಡರಾಗಿ ನಡೆದುಕೊಂಡರು. ಕೆಲವು ಮಠಾಧೀಶರು ಕೂಡ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದರು. ಇದೆಲ್ಲವೂ ನಾನು ಹೇಳುತ್ತಿಲ್ಲ. ಎಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಸರ್ಕಾರ ಕಿತ್ತುಹಾಕಬೇಕು ಎಂಬುದು ಜನರ ಇಚ್ಛೆ. ಕಾಂಗ್ರೆಸ್ ಕೂಡ ಅಷ್ಟೇ ಹೋರಾಟ ಮಾಡಿದೆ” ಎಂದು ಹೇಳಿದರು.
“ಕೇಂದ್ರ ಸರ್ಕಾರವು ರಾಜ್ಯದ ಭ್ರಷ್ಟಾಚಾರ ವಿಚಾರವಾಗಿ ಈವರೆಗೂ ತುಟಿ ಬಿಚ್ಚಿಲ್ಲ. ಈ ಸರ್ಕಾರಕ್ಕೆ ಕೋಮುವಾದಿ ಚಟುವಟಿಕೆಯಲ್ಲಿ ತೋರಿಸುವ ಆಸಕ್ತಿ ಅಭಿವೃದ್ಧಿ ವಿಚಾರಗಳಿಗೆ ಇಲ್ಲ. ಮೋದಿ ಮತ್ತು ಶಾಗೆ ರಾಜ್ಯದ ಭ್ರಷ್ಟಾಚಾರ ಗೊತ್ತಿದ್ದು ಮೌನವಾಗಿದ್ದಾರೆ. ಅವರಿಗೆ ಒಂದು ಮಾತು ಹೇಳಲು ಇಷ್ಟಪಡುವೆ; ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನೂ ಇಲ್ಲ. ಎಕ್ಸ್‌ಪ್ರೆಸ್ ರೋಡ್ ಉದ್ಘಾಟನೆ ಎಂಬುದು ಹಳೆ ರೋಡ್ ಉದ್ಘಾಟನೆ ಅಷ್ಟೇ” ಎಂದು ಟೀಕಿಸಿದರು
“ಚಿಕ್ಕಮಗಳೂರು ಪ್ರವಾಸೋದ್ಯಮ ಕೇಂದ್ರ ಆಗಬೇಕಿತ್ತು. ಎಲ್ಲಿ ಆಗಿದೆ? ಡಬಲ್ ಎಂಜಿನ್ ಸರ್ಕಾರ ಎಂಬುದು ಕೆಟ್ಟ ಎಂಜಿನ್ ಅದು. ನಾವು ನಾಲ್ಕು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮುಂದೆ ಹೋಗಿದ್ದೇವೆ. ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆಯನ್ನು ರಾಜ್ಯದ ಜನ ತಾವೇ ಮುಂದೆ ಬಂದು ತೋರುತ್ತಿದ್ದಾರೆ” ಎಂದರು.