- ಬಂಡಾಯ ಅಭ್ಯರ್ಥಿಯಾಗಿ ಮುಂದುವರೆದ ಪುತ್ತಿಲ
- ನಾಮಪತ್ರ ಹಿಂಪಡೆದ ಮಾಜಿ ಶಾಸಕಿ ಶಾರದಾ ಶೆಟ್ಟಿ
ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಸೋಮವಾರ, ಮಾತೃ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿಸಿದ್ದ ಹಲವು ಪ್ರಮುಖರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಆ ಮೂಲಕ ಅಧಿಕೃತ ಅಭ್ಯರ್ಥಿಗಳಿಗೆ ಕೊಂಚ ನಿರಾಳವಾಗುವಂತೆ ಮಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣಾ ಕಣದಲ್ಲಿ ಪ್ರಸ್ತುತ 2,613 ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಪುರುಷ ಅಭ್ಯರ್ಥಿಗಳ ಸಂಖ್ಯೆ 2,427 ಇದ್ದರೆ, ಕೇವಲ 185 ಮಹಿಳೆಯರು ಮಾತ್ರ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಮಾತೃ ಪಕ್ಷಗಳಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅನೇಕರು ಬಂಡಾಯ ಸಾರಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಅವರಲ್ಲಿ ಕೆಲವರು ನಾಮಪತ್ರ ವಾಪಸ್ ಪಡೆದಿದ್ದು, ಪಕ್ಷಗಳು ನಿಟ್ಟುಸಿರು ಬಿಡುವಂತಾಗಿದೆ.
ನಾಮಪತ್ರ ಹಿಂಪಡೆದ ಬಂಡಾಯ ಅಭ್ಯರ್ಥಿಗಳು
ಕಾಂಗ್ರೆಸ್‌ನ ಚಿಕ್ಕಪೇಟೆ ಕ್ಷೇತ್ರದ ಆಕಾಂಕ್ಷಿ ಮಾಜಿ, ಮೇಯರ್ ಗಂಗಾಂಭಿಕೆ, ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ನಾಮಪತ್ರ ಹಿಂಪಡೆದಿದ್ದಾರೆ. ಜೊತೆಗೆ ರಾಜಕೀಯವಾಗಿ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.
ಬಿಜೆಪಿಯಿಂದ ರಾಮದುರ್ಗ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿದ್ದ ಹಾಲಿ ಶಾಸಕ ಮಹದೇವಪ್ಪ ಯಾದವಾಡ ಸೇರಿದಂತೆ ಐವರು ನಾಮಪತ್ರ ವಾಪಸ್ ಪಡೆದಿದ್ದಾರೆ.
ಧಾರವಾಡ ಗ್ರಾಮಾಂತರ ಕ್ಷೇತ್ರದ ಮತ್ತೋರ್ವ ಬಂಡಾಯ ಅಭ್ಯರ್ಥಿ ಬಸವರಾಜ ಕೊರವರ್, ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕಿಳಿದಿದ್ದ ಹನುಮಂತ ಸಾ ನಿರಂಜನ ಕೂಡ ನಾಮಪತ್ರ ವಾಪಸ್ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿದ್ಧಾಂತ ಬದ್ಧತೆ ಕಳೆದುಕೊಂಡಿರುವ ಬಿಜೆಪಿ ಈಗ ವಿನಾಶದತ್ತ ಸಾಗುತ್ತಿದೆ; ಜಗದೀಶ್ ಶೆಟ್ಟರ್
ಮುಂದುವರೆದ ಬಂಡಾಯ ಅಭ್ಯರ್ಥಿಗಳು
ಆದರೆ ಬೆಂಗಳೂರು ಗಾಂಧಿನಗರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿ, ಪುತ್ತೂರಿನಲ್ಲಿ ಅರುಣ್ ಪುತ್ತಿಲ, ಹೊಸದುರ್ಗದ ಗೂಳಿಹಟ್ಟಿ ಶೇಖರ್ ಬಂಡಾಯ ಅಭ್ಯರ್ಥಿಗಳಾಗಿ ಮುಂದುವರೆದಿದ್ದಾರೆ. ಉಳಿದಂತೆ ರಾಜ್ಯಾದ್ಯಂತ ಇರುವ ಬಿಜೆಪಿ ಬಂಡಾಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಬೈಲಹೊಂಗಲ- ಮಾಜಿ ಶಾಸಕ ವಿಶ್ವನಾಥ ಪಾಟೀಲ, ಚನ್ನಗಿರಿ – ಮಾಡಾಳು ಮಲ್ಲಿಕಾರ್ಜುನ್, ಕಾರವಾರ – ಮಾಜಿ ಶಾಸಕ ಗಂಗಾಧರ ಭಟ್, ಅಫಜಲಪುರ – ನಿತೀನ್ ಗುತ್ತೇದಾರ, ಕುಂದಗೋಳ – ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ರಾಣಿಬೆನ್ನೂರು – ಸಂತೋಷಕುಮಾರ ಪಾಟೀಲ, ಹೊಳಲ್ಕೆರೆ – ಡಾ. ಜಯಸಿಂಹ, ಬಾಗಲಕೋಟೆ – ಮಲ್ಲಿಕಾರ್ಜುನ ಚರಂತಿಮಠ, ನಾಗಮಂಗಲ – ಫೈಟರ್ ರವಿ, ಕೊಳ್ಳೇಗಾಲ- ಕಿನಕಹಳ್ಳಿ ರಾಚಯ್ಯ, ಮಾಲೂರು-ಹೂಡಿ ವಿಜಯಕುಮಾರ್, ತುಮಕೂರು-ಸೊಗಡು ಶಿವಣ್ಣ, ಕೊರಟಗೆರೆ- ಮುನಿಯಪ್ಪ,
ಹಾಗೆಯೇ ಕಾಂಗ್ರೆಸ್‌ನ ಚಿಕ್ಕಪೇಟೆ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆಜಿಎಫ್ ಬಾಬು ಅವರನ್ನು ಒಳಗೊಂಡಂತೆ ಅರಭಾವಿ- ಭೀಮಪ್ಪ ಗಡಾದ, ರಾಯಬಾಗ- ಶಂಭು ಕೃಷ್ಣಾ ಕಲ್ಲೋಳಿಕರ, ಬೀದರ ದಕ್ಷಿಣ- ಚಂದ್ರಾ ಸಿಂಗ್, ಶಿರಹಟ್ಟಿ – ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಗಳೂರು – ಮಾಜಿ ಶಾಸಕ ಎಚ್ ಪಿ ರಾಜೇಶ, ಶಿವಮೊಗ್ಗ ಗ್ರಾಮಾಂತರ – ಭೀಮಪ್ಪ, ಶಿಕಾರಿಪುರ – ನಾಗರಾಜ ಗೌಡ, ಚಿತ್ರದುರ್ಗ- ಸೌಭಾಗ್ಯ ಬಸವರಾಜನ್, ಮುಧೋಳ- ಸತೀಶ ಬಂಡಿವಡ್ಡರ, ಜಮಖಂಡಿ- ಸುಶೀಲಕುಮಾರ ಬೆಳಗಲಿ, ತರೀಕೆರೆ- ಎಚ್ ಎಂ ಗೋಪಿಕೃಷ್ಣ, ಹರಪನಹಳ್ಳಿ- ಎಂ ಪಿ ಲತಾ, ಅರಕಲಗೂಡು- ಎಂ ಟಿ ಕೃಷ್ಣೇಗೌಡ, ಶ್ರೀರಂಗಪಟ್ಟಣ- ಪಾಲಹಳ್ಳಿ ಚಂದ್ರಶೇಖರ್, ಮಾಯಕೊಂಡ- ಡಾ. ಸವಿತಾಬಾಯಿ ಮಲ್ಲೇಶ ನಾಯ್ಕ್, ತೇರದಾಳ- ಡಾ ಪದ್ಮಜಿತ್ ನಾಡಗೌಡ ಪಾಟೀಲ, ಕುಣಿಗಲ್-ರಾಮಸ್ವಾಮಿಗೌಡ, ಶಿಡ್ಲಘಟ್ಟ- ಪುಟ್ಟುಆಂಜಿನಪ್ಪ ಸ್ಪರ್ಧಾ ಅಂಕಣದಲ್ಲಿ ಉಳಿದುಕೊಂಡಿದ್ದಾರೆ.
ಉಳಿದಂತೆ ಜೆಡಿಎಸ್‌ನ ಬಂಡಾಯ ಅಭ್ಯರ್ಥಿಗಳ ಪಟ್ಟಿ ಇಂತಿದೆ. ಯಾದಗಿರಿ – ಹನುಮೇಗೌಡ ಬೀರನಕಲ್, ಮಂಡ್ಯ- ಕೆ ಎಸ್ ವಿಜಯ್ ಆನಂದ, ಶ್ರೀರಂಗಪಟ್ಟಣ- ತಗ್ಗಹಳ್ಳಿ ವೆಂಕಟೇಶ್, ತುಮಕೂರು- ನರಸೇಗೌಡ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಈ ಬಾರಿಯ ಚುನಾವಣಾ ಕಣದಲ್ಲಿ 2613 ಅಭ್ಯರ್ಥಿಗಳು
ರಾಜ್ಯ ವಿಧಾನಸಭಾ ಚುನಾವಣೆಗೆ ಅನೇಕರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಪೈಕಿ ಅನೇಕರು ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದು, ಅಂತಿಮವಾಗಿ 2613 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಬಿಜೆಪಿಯಿಂದ 224 ಅಭ್ಯರ್ಥಿಗಳು, ಕಾಂಗ್ರೆಸ್ 223, ಆಮ್ ಆದ್ಮಿ ಪಕ್ಷ 209, ಬಿಎಸ್‌ಪಿ 133, ಸಿಪಿಐಎಂ 4, ಜೆಡಿಎಸ್ 207, ಎನ್‌ಪಿಪಿ 2, ನೋಂದಾಯಿತ ಗುರುತಿಸದ ಪಕ್ಷಗಳ 693 ಹಾಗೂ 918 ಸ್ವತಂತ್ರ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.