ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡಲಿರುವ ರಮ್ಯ
ರಾಜಕೀಯ ಮರು ಪ್ರವೇಶದ ಸುಳಿವು ನೀಡಿದ ಮಾಜಿ ಸಂಸದೆ
ಕಳೆದ ಕೆಲ ವರ್ಷಗಳಿಂದ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಖ್ಯಾತ ನಟಿ, ಮಾಜಿ ಸಂಸದೆ ರಮ್ಯ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕಿಳಿಯುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿರುವ ಹೊತ್ತಿನಲ್ಲೇ ತಮಗೆ ಬಿಜೆಪಿ ಮತ್ತು ಜೆಡಿಎಸ್‌ನಿಂದಲೂ ಆಫರ್ ಬಂದಿತ್ತು ಎಂದು ಅಚ್ಚರಿ ಮೂಡಿಸಿದ್ದಾರೆ.
ಶನಿವಾರ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ರಮ್ಯ, ತಾವು ಕಾಂಗ್ರೆಸ್ ಪಕ್ಷ ತೊರೆದ ಬಗ್ಗೆ, ಈಗ ಮತ್ತದೇ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿರುವ ಬಗ್ಗೆ ಮಾತನಾಡಿದ್ದಾರೆ. “2019ರ ಲೋಕಸಬಾ ಚುನಾವಣೆಗೂ ಮುನ್ನ ಅನಾರೋಗ್ಯದ ಕಾರಣದಿಂದಾಗಿ ನಾನು ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಈ ಬಗ್ಗೆ ನಾನು ನೇರವಾಗಿ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದಾಗ ಅದಕ್ಕವರು ಒಪ್ಪಲಿಲ್ಲ. ಆದರೆ, ನನಗೆ ಎಲ್ಲದರಿಂದಲೂ ಬಿಡುವು ಬೇಕಿತ್ತು. ಹೀಗಾಗಿ ಕೆಲ ಕಾಲ ದೂರ ಉಳಿದುಕೊಂಡಿದ್ದೆ. ಈಗ ಕೆ.ಸಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಪಕ್ಷದ ಪರವಾಗಿ ಪ್ರಚಾರ ಮಾಡುವಂತೆ ನನ್ನನ್ನು ಸಂಪರ್ಕಿಸಿದರು. ಎಲ್ಲ ಅಭ್ಯರ್ಥಿಗಳ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ. ಕೆಲವು ಅಗತ್ಯ ಕ್ಷೇತ್ರಗಳಲ್ಲಿ ನಾನು ಕಾಂಗ್ರೆಸ್ ಪರ ಮತ ಯಾಚನೆ ಮಾಡಲಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ತಮಗೆ ಬಿಜೆಪಿಯಿಂದ ಆಫರ್ ಬಂದ ಬಗ್ಗೆ ಮಾತನಾಡಿರುವ ರಮ್ಯ, “ಈ ಬಾರಿಯ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲು ಬಿಜೆಪಿಯ ಪ್ರಮುಖ ನಾಯಕರೇ ನನ್ನನ್ನು ಸಂಪರ್ಕಿಸಿ ಪಕ್ಷ ಸೇರಿಕೊಳ್ಳುವಂತೆ ಆಹ್ವಾನಿಸಿದ್ದರು. ನಾನು ಕಾಂಗ್ರೆಸ್ ಪಕ್ಷದ ಜೊತೆಗಿನ ಸಂಬಂಧ ಕಡಿದುಕೊಂಡಿದ್ಧೇನೆ ಎಂದುಕೊಂಡಿದ್ದರು. ಹೀಗಾಗಿ ಬಿಜೆಪಿ ಸೇರಿದರೆ ಮಂತ್ರಿ ಪದವಿಯನ್ನು ನೀಡುವುದಾಗಿಯೂ ಹೇಳಿದ್ದರು. ಬಿಜೆಪಿ ಮಾತ್ರವಲ್ಲದೆ ಜೆಡಿಎಸ್‌ನಿಂದಲೂ ಆಫರ್ ಬಂದಿತ್ತು. ಒಮ್ಮೆ ಆಕಸ್ಮಿಕವಾಗಿ ಕುಮಾರಸ್ವಾಮಿ ಅವರು ಭೇಟಿಯಾಗಿದ್ದರು. ಆಗ ನಿಮ್ಮಂಥ ಸಮರ್ಥರು ರಾಜಕಾರಣದಿಂದ ದೂರ ಇರಬಾರದು. ನೀವು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದು ಪರೋಕ್ಷವಾಗಿ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ, ನಾನು ಎಂದು ಮಾಹಿತಿ ನೀಡಿದ್ದಾರೆ. ಉದಾರವಾದಿ ಸಿದ್ಧಾಂತವನ್ನು ನಂಬಿದವಳು ಹೀಗಾಗಿ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲಾರೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ರೈತ ನಾಯಕ ಪುಟ್ಟಣ್ಣಯ್ಯನವರ ಮಗನ ಪರ ದರ್ಶನ್ ಪ್ರಚಾರ : ರೈತರ ರಾಯಭಾರಿ ಎಂದ ಅಭಿಮಾನಿಗಳು
“ಕೇವಲ ಬಿಜೆಪಿ ಮತ್ತು ಜೆಡಿಎಸ್‌ನಿಂದ ಮಾತ್ರವಲ್ಲ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ನಿಂದಲೂ ಆಫರ್ ಇತ್ತು. ಆರು ವಿಧಾನಸಭಾ ಕ್ಷೇತ್ರಗಳನ್ನು ಸೂಚಿಸಿ, ಆಯ್ಕೆಗೆ ಅವಕಾಶ ಕೊಟ್ಟಿದ್ದರು. ಆದರೆ, ಸದ್ಯಕ್ಕೆ ಚುನಾವಣಾ ಸ್ಪರ್ಧೆ ಬೇಡ ಎಂದು ನಿರಾಕರಿಸಿದೆ. ಈ ಬಾರಿ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತೇನಷ್ಟೇ” ಎನ್ನುವ ಮೂಲಕ ಸದ್ಯದಲ್ಲೇ ರಾಜಕೀಯ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದ್ದಾರೆ.