‘ನಾನು ಹಾಡುವುದೇ ನನ್ನ ಹಾಗೂ ನಮ್ಮೂರ ಜನರ ಖುಷಿಗಾಗಿ. ಹೀಗಾಗಿ ಪದ ಹಾಡಿದಾಗ ಏನನ್ನೂ ಬಯಸುವುದಿಲ್ಲ’ – ಹೀಗಂತ ಹೇಳಿದ್ದು 65 ವರ್ಷದ ಹಿರಿಯ ಜೀವ ಸಿದ್ಧಗಂಗಮ್ಮ. ಅವರ ಮುಗ್ಧ ಮಾತುಗಳು ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರ ‘ಎದೆ ತುಂಬಿ ಹಾಡುವೆನು’ ಗೀತೆಯ ‘ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ’ ಸಾಲನ್ನು ನೆನಪಿಸಿದವು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸೋಮಲಾಪುರ ಎಂಬ ಪುಟ್ಟ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಸೋಬಾನೆ ಪದ ಹಾಡುತ್ತ ಬಂದಿರುವ ಸಿದ್ಧಗಂಗಮ್ಮ, ಅಳಿವಿನಂಚಿನಲ್ಲಿರುವ ಈ ಜಾನಪದ ಕಲೆಯ ರಾಯಭಾರಿಯೂ ಹೌದು. ಇಂದಿಗೂ ದಣಿವರಿಯದೆ ಗಂಟೆಗಟ್ಟಲೆ ಸೋಬಾನೆ ಪದಗಳನ್ನು ಹಾಡುತ್ತಾರೆ.
ಜನಪದ ಸಂಸ್ಕೃತಿಯಲ್ಲಿ ಸೋಬಾನೆ ಪದಕ್ಕೆ ವಿಶಿಷ್ಟ ಸ್ಥಾನವಿದೆ. ಅದು ಮೌಖಿಕವಾಗಿ ಒಬ್ಬರಿಂದ ಒಬ್ಬರಿಗೆ ದಾಟಿಬಂದಂತಹ ಕಲೆ. ಇಂತಹ ಕಲೆ ಈಗ ಟಿವಿ, ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಕಣ್ಮರೆಯಾಗುತ್ತಿದೆ ಎಂಬುದು ವಿಷಾದದ ಸಂಗತಿ. ಹಳ್ಳಿಗಳಲ್ಲಿ ಸೋಬಾನೆ ಪದ ಹಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಹೊಸ ತಲೆಮಾರಿನ ಮಕ್ಕಳಲ್ಲಿ ಕಲಿಯುವ ಉತ್ಸಾಹವೂ ಕ್ಷೀಣಿಸಿದೆ. ಇವೆಲ್ಲದರ ನಡುವೆಯೂ ಸಿದ್ಧಗಂಗಮ್ಮ ಅವರ ಹಾಡುವ ಉತ್ಸಾಹ ಕುಂದಿಲ್ಲ.

5ನೇ ತರಗತಿಯವರೆಗೂ ಓದಿರುವ ಸಿದ್ಧಗಂಗಮ್ಮ, ಈಗಲೂ ಕೂಲಿ ಮಾಡಿಯೇ ಬದುಕು ನಡೆಸುತ್ತಿದ್ದಾರೆ. ತಮ್ಮ ತಾಯಿ ಹಾಗೂ ಅಜ್ಜಿಯಿಂದ ಕಲಿತಿರುವ ಸೋಬಾನೆ ಪದಗಳನ್ನು ಗ್ರಾಮದ ಇತರ ಹೆಣ್ಣು ಮಕ್ಕಳಿಗೂ ಕಲಿಸಿದ್ದಾರೆ. ಈ ಮೂಲಕ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಿದ್ದಾರೆ.
ಸೋಮಲಾಪುರದಲ್ಲಿ ತಮ್ಮದೇ ತಂಡ ಕಟ್ಟಿಕೊಂಡಿರುವ ಸಿದ್ಧಗಂಗಮ್ಮ, ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿಗೆ ಹೋಗಿ ಪದ ಹಾಡುತ್ತಾರೆ. ಅವರ ತಂಡದಲ್ಲಿ ರೇಣುಕಮ್ಮ (55), ಕರಿಯಮ್ಮ (48), ನರಸಮ್ಮ (80), ತಿಮ್ಮಕ್ಕ (55) ಹಾಗೂ ಲಕ್ಷ್ಮಮ್ಮ (50) ಇದ್ದಾರೆ.
ಊರಿನ ಜಾತ್ರೆ, ಮದುವೆ, ಪೂಜೆ ಸೇರಿದಂತೆ ಗ್ರಾಮದಲ್ಲಿ ಯಾವುದೇ ಸಮಾರಂಭ ಇರಲಿ, ಅಲ್ಲಿ ಸಿದ್ಧಗಂಗಮ್ಮ ತಂಡ ಇರಲೇಬೇಕು. ಆದರೆ ಇಂತಹ ಅಪರೂಪದ ಕಲಾವಿದೆಯನ್ನು ಗುರುತಿಸುವಲ್ಲಿ ಸರ್ಕಾರ ಗುರುತಿಸುವಲ್ಲಿ ವಿಫಲವಾಗಿದೆ.
‘ಕಳೆದ 4 ದಶಕದಿಂದ ಸೋಬಾನೆ ಪದಗಳನ್ನು ಹಾಡಿಕೊಂಡು ಬಂದಿರುವ ಸಿದ್ಧಗಂಗಮ್ಮ ಅವರು ಇಂದಿಗೂ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ. ತಾವು ಹಾಡುವ ಜೊತೆಗೆ ಬೇರೆಯವರಿಗೂ ಕಲಿಸುವ ಮೂಲಕ ಜಾನಪದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ನೆರವಾಗಬೇಕು’ ಎಂದು ಗ್ರಾಮದ ಅಂಜಲಿ ಮನವಿ ಮಾಡಿದರು.
‘ಸರ್ಕಾರದಿಂದ ಆಯೋಜಿಸುವ ಜಾನಪದ ಕಾರ್ಯಕ್ರಮಗಳಲ್ಲಿ ನಮ್ಮೂರಿನ ಹೆಮ್ಮೆ ಆಗಿರುವ ಸಿದ್ಧಗಂಗಮ್ಮ ಅವರಿಗೆ ಅವಕಾಶ ಕೊಡಬೇಕು. ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಬೇಕು’ ಎಂಬುದು ಗ್ರಾಮದ ಮುಖಂಡರ ಒತ್ತಾಯವಾಗಿದೆ.