ಉರಿಗೌಡ ಮತ್ತು ನಂಜೇಗೌಡ ಎಂಬ ನಕಲಿ ಪಾತ್ರಗಳನ್ನು ಬಳಸಿಕೊಂಡು ಒಕ್ಕಲಿಗ ಮತದಾರರನ್ನು ಸೆಳೆಯಲು ಯತ್ನಿಸಿದ ಬಿಜೆಪಿಗರ ನಡೆಯನ್ನು ಖಂಡಿಸಿರುವ ಬಹುಭಾಷಾ ನಟ ಕಿಶೋರ್, ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯತ್ನ ಎಂದು ಕಿಡಿ ಕಾರಿದ್ದಾರೆ.
ಉರಿಗೌಡ ಮತ್ತು ನಂಜೇಗೌಡ ಎಂಬ ಕಲ್ಪಿತ ಪಾತ್ರಗಳ ಬಗೆಗಿನ ವರದಿಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕಿಶೋರ್, “ಯಾವುದೋ ಕಾಲದ ರಾಜರ ಹೆಸರಲ್ಲಿ ಇಂದು ರಾಜಕೀಯ ಮಾಡಲಾಗುತ್ತಿದೆ. ಇದು ಇಂದಿನ ಪ್ರಜಾಪ್ರಭುತ್ವ. ನಂಜೇಗೌಡ ಮತ್ತು ಉರಿಗೌಡರ ಸೃಷ್ಟಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯತ್ನವೇ? ಟಿಪ್ಪುವನ್ನು ಕೊಂದವರೆೆಂದು ಹೇಳಿ ಮುಸ್ಲಿಮರು ಮತ್ತು ಒಕ್ಕಲಿಗರನ್ನು ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಲೇ ಒಕ್ಕಲಿಗರು ಬ್ರಿಟೀಷರ ಪರವಾಗಿದ್ದರೆಂದು ಹೇಳಿ ಮುಂದೊಂದು ದಿನ ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ” ಎಂದು ಪ್ರಶ್ನಿಸಿದ್ದಾರೆ.
“ಮೊದಲು ಹಿಂದೂ-ಮುಸ್ಲಿಂ ಎಂದು ಮನೆಯ ಸದಸ್ಯರನ್ನು ಎತ್ತಿಕಟ್ಟಿದರು. ಗಾಂಧಿ ಎಂದು ಗಾಂಧಿಯನ್ನು ಕೊಂದರು. ರೈತರನ್ನು ಭಯೋತ್ಪಾದಕರು ಎಂದರು. ಉರಿ ಹೊತ್ತಿಸಿ, ನಂಜು ಕಾರಿ, ಒಕ್ಕಲಿಗರೆಂದರು. ಟಿಪ್ಪುವೆಂದರು, ಬಿಹಾರಿಗಳೆಂದರು, ತಮಿಳರೆಂದರು, ಧರ್ಮವೆಂದರು, ಜಾತಿಯೆಂದರು, ದಲಿತರೆಂದರು, ಭಾಷೆ ಎಂದರು, ದೇಶವೆಂದರು, ಇತಿಹಾಸ ತಿರುಚಿ ಸುಳ್ಳು ಸುದ್ದಿ ಹರಡಿದರು” ಎಂದು ಆಕ್ರೋಶ ವಕ್ತಪಡಿಸಿದ್ದಾರೆ.
“ಕೇವಲ ಅಧಿಕಾರದಾಸೆಯಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ಕದಡಿ, ʼವಸುದೇವ ಕುಟುಂಬಕಂʼನ ಹೆಮ್ಮೆಯ ಕುಟುಂಬವನ್ನು ಮುರಿಯಲು ಬರುತ್ತಿದ್ದಾರೆ. ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು. ಚುನಾವಣೆಯ ಕಾಲವಿದು ಎಚ್ಚರ” ಎಂದು ರಾಜ್ಯದ ಜನರಿಗೆ ಕಿವಿ ಮಾತು ಹೇಳಿದ್ದಾರೆ.