- ಮುಖ್ಯಮಂತ್ರಿ ವಿಶೇಷ ಅನುದಾನದಿಂದ 5 ಲಕ್ಷ ರೂ. ಪರಿಹಾರ
- ಯಶ್‌ರಾಜ್ ಅಂಗಾಂಗದಿಂದ ಆರು ಮಂದಿಗೆ ಮರುಜೀವ
ಬಸ್ಸಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಪಿ.ಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಪರಿಣಾಮ ಪೋಷಕರು ಆತನ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಹಾಗೂ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಅವರು ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನದಿಂದ 5 ಲಕ್ಷ ಪರಿಹಾರ ಕೊಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಉಳ್ಳಾಲ ಮಾಸ್ತಿಕಟ್ಟೆ, ಬೈದೆರೆಪಾಲು ನಿವಾಸಿಗಳಾಗಿರುವ ತ್ಯಾಗರಾಜ್, ಮಮತಾ ಕರ್ಕೇರ ದಂಪತಿಯ ಮೊದಲ ಪುತ್ರ ಯಶ್‌ರಾಜ್ (16) ಅಪಘಾತಕ್ಕೀಡಾದ ದುರ್ದೈವಿ.
ಮಾತು ಕೊಟ್ಟಂತೆ ಪರಿಹಾರ ಕೊಡಿಸಿದ ಶಾಸಕ: ಸಾವಲ್ಲೂ ಸಾರ್ಥಕತೆ ಮೆರೆದ ಯಶರಾಜ್ ಮನೆಗೆ ಭೇಟಿ ನೀಡಿದ ಮಂಗಳೂರು ಕ್ಷೇತ್ರದ ಶಾಸಕ ಯು ಟಿ ಖಾದರ್, ‘ಮುಖ್ಯಮಂತ್ರಿಗಳ ವಿಶೇಷ ಅನುದಾನ’ದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ತಮ್ಮ ಆಪ್ತ ಸಹಾಯಕರ ಮೂಲಕವೇ ಎಲ್ಲ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಇದೀಗ ಯಶರಾಜ್ ತಂದೆ ತ್ಯಾಗರಾಜ್ ಅವರ ಬ್ಯಾಂಕ್ ಖಾತೆಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಿಂದ 5 ಲಕ್ಷ ರೂ. ಜಮೆ ಆಗಿದೆ.
ಕೇಳದೇನೆ ಬಂದು ನೊಂದ ಕುಟುಂಬಕ್ಕೆ ಪರಿಹಾರ ಒದಗಿಸಿಕೊಟ್ಟ ಶಾಸಕ ಯು.ಟಿ ಖಾದರ್ ಅವರ ಸರಳತೆ, ಕಾಳಜಿಗೆ ಮೃತನ ತಂದೆ ತ್ಯಾಗರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.
“ಮನೆ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಎಷ್ಟು ಕೊಟ್ಟರೂ ಕಮ್ಮಿನೆ. ಅಂಗಾಂಗ ದಾನದ ನಿಮಿತ್ತ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಪರಿಹಾರ ಕೊಡಿಸಿದ್ದೇನೆ. ಇತ್ತೀಚೆಗೆ ಕುತ್ತಾರಲ್ಲಿ ಸಂಭವಿಸಿದ ಅಪಘಾತದಲ್ಲಿ ಕಲ್ಲಾಪಿನ ಭೂಷಣ್ ರೈ ಎಂಬ ಯುವಕನ ಮೆದುಳು ನಿಷ್ಕ್ರಿಯಗೊಂಡಿತ್ತು. ಬಳಿಕ ಅವರ ದೇಹದ ಅಂಗಾಂಗ ದಾನ ಮಾಡಲಾಗಿತ್ತು. ಆ ಬಡ ಕುಟುಂಬಕ್ಕೂ ಸಹಾಯವಾಗುವ ಸಲುವಾಗಿ ಪರಿಹಾರ ಒದಗಿಸಲು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರವೇ ಹಣ ಬಿಡುಗಡೆಯಾಗುವುದು” ಎಂದು ಶಾಸಕ ಯು ಟಿ ಖಾದರ್ ತಿಳಿಸಿದ್ದಾರೆ.
ಅಂಗಾಂಗ ದಾನದ ಕುರಿತು ಜನಜಾಗೃತಿ ಮೂಡಿಸಬೇಕು: ಅಂಗಾಂಗ ದಾನದ ಬಗ್ಗೆ ಜನಜಾಗೃತಿ ಮೂಡಿಸಬೇಕು. ಯಶರಾಜ್‌ನ ಮೆದುಳು ನಿಷ್ಕ್ರಿಯಗೊಂಡಿದ್ದ ಸಂದರ್ಭದಲ್ಲಿ ಆತನ ಕುಟಂಬದವರು ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾದರು. ಆತನಿಂದ ಇಂದು ಆರು ಮಂದಿ ಜೀವಿಸುವಂತಾಗಿದೆ.
ಘಟನೆ ಹಿನ್ನೆಲೆ
ಉಳ್ಳಾಲ ಮಾಸ್ತಿಕಟ್ಟೆ, ಬೈದೆರೆಪಾಲು ನಿವಾಸಿಗಳಾಗಿರುವ ತ್ಯಾಗರಾಜ್, ಮಮತಾ ಕರ್ಕೇರ ದಂಪತಿಯ ಮೊದಲ ಪುತ್ರ ಯಶರಾಜ್ (16) ಕಳೆದ ಸೆಪ್ಟೆಂಬರ್ 7ರಂದು ಬೆಳಿಗ್ಗೆ ಉಳ್ಳಾಲದಿಂದ ಸಿಟಿ ಬಸ್‌ನಲ್ಲಿ ಮಂಗಳೂರಿನ ಕಾಲೇಜಿಗೆ ಪ್ರಯಾಣಿಸುತ್ತಿದ್ದಾಗ ಬಸ್ಸಿನಿಂದ ಹೊರಗೆ ಬಿದ್ದಿದ್ದರು. ತಲೆಗೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಯಶರಾಜ್‌ನನ್ನು ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಯಶರಾಜ್‌ಗೆ ಚಿಕಿತ್ಸೆ ನೀಡಿದ ವೈದ್ಯರು ಸೆ.13 ರಂದು ಆತನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ್ದರು. ಪೋಷಕರ ನಿರ್ಧಾರದಂತೆ ಯಶರಾಜ್‌ನ ಅಂಗಾಂಗಗಳನ್ನು ದಾನ ಮಾಡಲಾಗಿತ್ತು.