ರಂಗಶಂಕರದಲ್ಲಿ ‘ಆ ಲಯ ಈ ಲಯ’

Date:

Advertisements

ಭಾರತೀಯರಾದ ನಮ್ಮ ಮನಸ್ಸನ್ನು ನಮ್ಮ ದೇಶದ ಒಳಗೆಯೇ ನಡೆಯುತ್ತ ಬಂದಿರುವ ಜನಾಂಗೀಯ ಹಿಂಸೆ ಮತ್ತು ವರ್ಣಭೇದ ನೀತಿಯ ವಾಸ್ತವವು ಬಹಳವೇನೂ ಬಾಧಿಸಿಲ್ಲ ಎನ್ನುವುದು ಮುಜುಗರ, ನಾಚಿಕೆ ಮತ್ತು ನೋವಿನ ಸಂಗತಿ, ಅದು ಹಾಗಿದ್ದರೂ, ಆಫ್ರಿಕಾ, ಅಮೆರಿಕ ಮೊದಲಾದ ದೇಶಗಳ ಮೂಲನಿವಾಸಿ ಜನರ ಮೇಲೆ ಯೂರೋಪು ಮೂಲದ ಬಂಡವಳಿಗ – ಸಾಮ್ರಾಜ್ಯಶಾಹೀ ದೇಶಗಳವರು ನಡೆಸಿದ ಅಪಾರ ಹಿಂಸಾಚಾರವೂ, ಆ ಜನರನ್ನು ಅವರು ಬಗ್ಗುಬಡಿದು, ನೂರಾರು ವರ್ಷ ಶೋಷಿಸುತ್ತ ಬಂದಿರುವುದರ ಕ್ರೌರ್ಯವೂ ನಮ್ಮನ್ನು ಅಲುಗಾಡಿಸಿ, ಅಸ್ವಸ್ಥಗೊಳಿಸಿಬಿಡುತ್ತದೆ.

a laya 1

ಆ ಹಿಂಸೆ ಮತ್ತು ಶೋಷಣೆಯ ಕಥನಗಳು ದೇಶ, ಭಾಷೆ, ಹಾಗೂ ವೈಯಕ್ತಿಕ ಅನುಭವಗಳ ಗಡಿ ದಾಟಿ ನಮ್ಮ ಅಂತಃಕರಣವನ್ನು ಕಲಕಿ ನಮ್ಮನ್ನು ನಾವು ಆ ನತದೃಷ್ಟರೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುತ್ತವೆ. ಜೊತೆಗೆ, ನಾವು ನಮ್ಮೊಳಗೆಯೇ ನೋಡಿಕೊಂಡು, ನಿರ್ದಾಕ್ಷಿಣ್ಯ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತವೆ.

ಅದಕ್ಕೊಂದು ಉದಾಹರಣೆ, ದಕ್ಷಿಣ ಆಫ್ರಿಕಾದ ದೇಶದ ಬರಹಗಾರ ಲೂಯಿ ನಕೋಸಿ ಬರೆದ ನಾಟಕ ‘ದ ರಿದಮ್ ಆಫ್ ವಯೊಲೆನ್ಸ್’, ದಕ್ಷಿಣ ಆಫ್ರಿಕಾದ ವಿದ್ಯಾರ್ಥಿ ಬಳಗವೊಂದು ಜನಾಂಗೀಯ ಹಿಂಸೆಗೆ ಪ್ರತಿಕ್ರಿಯಿಸಿದ ಬಗೆಯನ್ನು ಬಿಚ್ಚಿಡುತ್ತದೆ ಈ ನಾಟಕ.

Advertisements

ಹೆಚ್ಚಾಗಿ, ವಿದ್ಯಾರ್ಥಿಗಳ ಕೂಡುತಾಣವಾದ ಕೆಫೆಯೊಂದರಲ್ಲಿ ನಡೆಯುವ ಇದರ ದೃಶ್ಯಗಳು ಆ ಯುವಕಯುವತಿಯರ ಆಸೆ, ಆತಂಕ, ಪ್ರಣಯ, ಪ್ರಲೋಭನ, ಬಯಕೆ, ಭರಾಟೆ, ಕನಸು, ಕುಡಿತ, ಕುಣಿತ ಮತ್ತು ದಣಿವುಗಳನ್ನೂ, ಅವರ ನಡುವೆ ನಡೆವ ರಾಜಕೀಯ ತತ್ತ್ವಜಿಜ್ಞಾಸೆಯನ್ನೂ ಅವರು ಮಾಡಲು ಹೊರಟ ಬಾಂಬ್‌ ಸ್ಫೋಟದ ಘಟನೆಯೊಂದರ ಹಿನ್ನೆಲೆಯಾಗಿ ಚಿತ್ರಿಸುತ್ತವೆ; ತಮ್ಮ ಜನರ ಬಿಡುಗಡೆಯ ಹೋರಾಟಗಳ ಭಾಗವಾಗಿ ಅವರು ನಡೆಸಲು ಎಳಸುವ ಆ ಹಿಂಸಾಚಾರದ ತಯಾರಿ, ಆ ವೇಳೆಯಲ್ಲಿ ಅವರಲ್ಲಿ ತಲೆದೋರುವ ನೈತಿಕ ಒಳತೋಟಿ, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ಭಾವನಾತ್ಮಕ ಭಾವುಕ ಸಂಕಟ ಸಿಕ್ಕುಗಳು, ಇವುಗಳನ್ನು ಪ್ರಖರವಾಗಿ ನಾಟ್ಯೀಕರಿಸುತ್ತವೆ. ಅದರಿಂದಾಗಿ, ಈ ನಾಟಕದ ಘಟನಾವಳಿಗೂ, ಇದರ ಪಾತ್ರಗಳ ಒಳಗಿನ ತುಮುಲ, ತಳಮಳಕ್ಕೂ ಒಂದು expressionist ಗುಣವಿದ್ದು, ಅದು ಪ್ರೇಕ್ಷಕರ ಮನಸ್ಸನ್ನು ಸಂಕಟಕ್ಕೊಡ್ಡಿ, ಮೀಟುತ್ತದೆ; ಅವರು ಒಬ್ಬರಿನ್ನೊಬ್ಬರೊಂದಿಗೆ ಸಾಮಾಜಿಕ ಐತಿಹಾಸಿಕವಾದ ಕಾರ-ಪ್ರತಿಕಾರ, ಹಿಂಸೆ-ಪ್ರತಿಹಿಂಸೆಯನ್ನು ಕುರಿತಾಗಿ ತೀವ್ರವಾದ ಜಿಜ್ಞಾಸೆ ನಡೆಸುವತ್ತ ದೂಡುತ್ತದೆ.

aa laya

ಪ್ರಸ್ತುತ ಪ್ರಯೋಗದ ರಂಗವಿನ್ಯಾಸ, ಉಡುಗೆ ತೊಡುಗೆಯ ವಿನ್ಯಾಸ, ಅಭಿನಯ- ಎಲ್ಲವೂ expressionist ಗುಣವನ್ನು ಢಾಳಾದ ತುರ್ತಿನಿಂದ ಧ್ವನಿಸುತ್ತದೆ. ಹಾಗೆಯೇ ಈ ನಾಟಕದ ಸಂಗೀತ ವಿನ್ಯಾಸವು ಜಾಜ್‍ ಸಂಗೀತ ಮತ್ತು ಹೋರಾಟದ ಹಾಡುಗಳನ್ನು ಕಸಿ ಮಾಡುವುದರ ಮುಖಾಂತರ ಪ್ರತಿರೋಧದ ಸಂಗೀತ ಮತ್ತು ಹಾಡುಗಾರಿಕೆಗಳ ಕಲಾಮೀಮಾಂಸೆಯತ್ತ ಬೊಟ್ಟು ಮಾಡುತ್ತದೆ.

ಅಅಅಅ

2023ರ ಈ ಹೊತ್ತು, ರಾಷ್ಟ್ರೀಯತೆ, ಮತಧರ್ಮ, ರಾಜಕೀಯ ಸಿದ್ಧಾಂತಗಳ ಹೆಸರಿನಲ್ಲಿ ಎಲ್ಲಿ ನೋಡಿದರೂ ದಾರುಣವಾದ ಸಾಮೂಹಿಕ ಕಗ್ಗೊಲೆ, ನರಮೇಧ, ಯುದ್ಧ ನಡೆಯುತ್ತಿದೆ. ಪಶ್ಚಿಮದ ಸಿರಿವಂತ, ಬಂಡವಳಿಗ ದೇಶಗಳ ನಿರ್ಲಜ್ಜ ಒತ್ತಾಸೆಯಿಂದಲೂ, ಲೋಕದ ಉಳಿದ ದೇಶಗಳ ಉದಾಸೀನತೆ, ನಿಷ್ಕ್ರಿಯತೆ ಮತ್ತು ಅಸಹಾಯಕತೆಯಿಂದಲೂ ಕಳೆದ ನೂರು ವರ್ಷಗಳಿಂದ ಪ್ಯಾಲೆಸ್ತೀನಿನ ಜನರಿಗೆ ಆಗುತ್ತಾ ಬಂದಿರುವ ಘೋರ ಅನ್ಯಾಯದ ಪರಿಣಾಮವಾಗಿ ಹಮಾಸ್ ಸಂಘಟನೆಯು ಈಚೆಗೆ ಎಸಗಿದ, ಖಂಡನಾರ್ಹವೇ ಆಗಿರುವ, ಹಿಂಸಾಚಾರಕ್ಕೆ ಪ್ರತಿಕಾರವಾಗಿ, ಸಿಕ್ಕಿದ್ದೇ ಸದಾವಕಾಶ ಎಂಬಂತೆ, ಇಸ್ರೇಲ್ ಇದೀಗ ನಡೆಸುತ್ತಿರುವ ಪ್ಯಾಲೆಸ್ತೀನಿಯರ ಭೀಕರ ನರಮೇಧ ನಮ್ಮ ಕಣ್ಣ ಮುಂದೆಯೇ ಇದೆ. ಇಂಥ ಹೊತ್ತಲ್ಲಿ ಆಗುತ್ತಿರುವ ಈ ನಾಟಕ ಪ್ರಯೋಗವನ್ನು ನಾವೆಲ್ಲ ಅಗತ್ಯವಾಗಿ ನೋಡಬೇಕು.

ಇದರ ವಿನ್ಯಾಸ, ನಿರ್ದೇಶನ ಮಾಡಿರುವುದು ಇದೀಗ ನಮ್ಮ ನಡುವೆ ಬೆಳಗುತ್ತಿರುವ ಪ್ರತಿಭಾವಂತ ನಟ, ವಿನ್ಯಾಸಕಿ ಮತ್ತು ನಿರ್ದೇಶಕಿ ಎಚ್‌.ಕೆ. ಶ್ವೇತಾರಾಣಿ.

-ರಘುನಂದನ, ಹಿರಿಯ ರಂಗಕರ್ಮಿ

ನಾಟಕ: ಆ ಲಯ ಈ ಲಯ
ರಚನೆ: ಲೂಯಿ ನಕೋಸಿ,
ಕನ್ನಡಕ್ಕೆ: ನಟರಾಜ ಹೊನ್ನವಳ್ಳಿ
ನಿರ್ದೇಶನ: ಶ್ವೇತಾರಾಣಿ ಎಚ್.ಕೆ.
ರಂಗಶಂಕರ, 8 ನವೆಂಬರ್ 2023 ಟಿಕೇಟು: ರೂ. 200
ಸಮಯ: ಸಂಜೆ 7.30ಕ್ಕೆ

Book My Show Link: Aa Laya Ee Laya – Ni. Na. Sam Tirugaata

 

ರಘುನಂದನ

-ರಘುನಂದನ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X