ಹಿಂದಿ ಚಿತ್ರರಂಗದಲ್ಲಿ ಖಾರೂಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮಿರ್ ಖಾನ್ ಅವರೇ ಪ್ರಸ್ತುತ ಸಂದರ್ಭದಲ್ಲಿ ಸ್ಟಾರ್ ನಟರೆಂದು ಕರೆಯಲಾಗುತ್ತಿದೆ. ಮಾತ್ರವಲ್ಲದೆ, ಈ ಮೂವರೇ ‘ಅಂತಿಮ ಸ್ಟಾರ್‘ಗಳೂ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ‘ಇಂತಹ ಮಾತುಗಳನ್ನು ನಾನು ಒಪ್ಪುವುದಿಲ್ಲ. ಪ್ರತಿ ಪೀಳಿಗೆಯೂ ತನ್ನದೇ ಆದ ಸ್ಟಾರ್‌ಗಳನ್ನು ಹೊಂದಿರುತ್ತದೆ. ಕಾಲಾನಂತರದಲ್ಲಿ ಅವರೂ ಮರೆತುಹೋಗುತ್ತಾರೆ’ ಎಂದು ಅಮಿರ್ ಖಾನ್ ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿರ್ ಖಾನ್, “90ರ ದಶಕದಲ್ಲಿ ಮುನ್ನೆಲೆಗೆ ಬಂದ ಕಲಾವಿದರು ‘ಸ್ಟಾರ್’ ಕಿರೀಟಗಳನ್ನು ಪಡೆದಿದ್ದಾರೆ. ಆದರೆ, ಆ ನಟರಂತೆ ಈಗಿನ ಪೀಳಿಗೆಯ ಕಲಾವಿದರು ‘ಸ್ಟಾರ್’ಗಳೆಂದು ಗುರುತಿಸಿಕೊಳ್ಳುತ್ತಿಲ್ಲ ಎನ್ನಲಾಗದು. ಪ್ರತಿ ಪೀಳಿಗೆಯು ಹಿಂದಿನ ಪೀಳಿಗೆಗಿಂತ ಉತ್ತಮವಾಗಿ ಮುಂದೆ ಬರುತ್ತದೆ. ಈ ಪೀಳಿಗೆಯಲ್ಲೂ ದೊಡ್ಡ ತಾರೆಗಳು ಹುಟ್ಟಿಕೊಳ್ಳುತ್ತಾರೆ. ‘ನಾವು ಸ್ಟಾರ್‌ಗಳಲ್ಲಿ ಕೊನೆಯವರು’ ಎಂಬುದಾಗಿ ನಾನು ಭಾವಿಸುವುದಿಲ್ಲ. ನಮ್ಮ ನಂತರವೂ ಸ್ಟಾರ್‌ಗಳು ಬರುತ್ತಾರೆ” ಎಂದು ಹೇಳಿದ್ದಾರೆ.
“ಬಹುಶಃ ಇನ್ನು ಮುಂದೆ ನಾವೂ ಬ್ರಹ್ಮ, ವಿಷ್ಣು, ಮಹೇಶ್ವರರಾಗಿ (ಅಮಿರ್, ಶಾರೂಖ್, ಸಲ್ಮಾನ್) ಲೆಕ್ಕದಲ್ಲಿರುವುದಿಲ್ಲ. ಜನರು ನಮ್ಮನ್ನು ಮರೆತುಬಿಡುತ್ತಾರೆ. ಸಮಯ ಮುಂದೆ ಸಾಗುತ್ತಲೇ ಇರುತ್ತದೆ. ನೀವು ಎಲ್ಲವನ್ನೂ ಮರೆತುಬಿಡುತ್ತೀರಿ” ಎಂದು ಹೇಳಿದ್ದಾರೆ.
“ನಾನು, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಂದು ಚಿತ್ರದಲ್ಲಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ಬಗ್ಗೆ ಚರ್ಚಿಸಿದ್ದೇವೆ. ಒಳ್ಳೆಯ ಕತೆಗಾಗಿ ಕಾಯುತ್ತಿದ್ದೇವೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಗುಟ್ಕಾ ಜಾಹೀರಾತು | ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಸಮನ್ಸ್
ಅಮೀರ್ ಖಾನ್ ಅವರು ‘ಸೀತಾರೆ ಜಮೀನ್ ಪರ್’ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸಲ್ಮಾನ್ ಅವರ ‘ಸಿಕಂದರ್’ ಚಿತ್ರ ಮಾರ್ಚ್ 30ರಂದು ಬಿಡುಗಡೆಯಾಗಲಿದೆ. ಶಾರುಖ್ ಖಾನ್ ಅವರು ತಮ್ಮ ಮಗಳು ಸುಹಾನಾ ಖಾನ್ ಜೊತೆ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ.