‘ಕಾಟೇರ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ, ರಾಷ್ಟ್ರಪ್ರಶಸ್ತಿ ವಿಜೇತ ನಟ ಮಾಸ್ಟರ್ ರೋಹಿತ್ಗೆ ನಿನ್ನೆ ತಡರಾತ್ರಿ ಅಪಘಾತವಾಗಿ ಗಂಭೀರ ಗಾಯವಾಗಿದೆ. ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿನ ಪಾಲಹಳ್ಳಿ ಬಳಿ ಕಾರು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ರೋಹಿತ್ ಮತ್ತು ಅವರ ತಾಯಿ ಇಬ್ಬರಿಗೂ ಗಾಯಗಳಾಗಿವೆ. ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಾಸ್ಟರ್ ರೋಹಿತ್, ಶ್ರೀರಂಗಪಟ್ಟಣದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಮಾಸ್ಟರ್ ರೋಹಿತ್, ಅವರ ತಾಯಿ, ಒಬ್ಬ ಉಪನ್ಯಾಸಕ ಹಾಗೂ ರೋಹಿತ್ರ ಗೆಳೆಯರು KA11 N 4173 ಸಂಖ್ಯೆಯ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆಯಲ್ಲಿ ಕೇರಳದ ಪ್ರವಾಸಿ ಬಸ್ಸೊಂದಕ್ಕೆ ಕಾರು ಡಿಕ್ಕಿ ಆಗಿದ್ದು, ಕಾರಿನಲ್ಲಿದ್ದ ಎಲ್ಲರಿಗೂ ತೀವ್ರ ಗಾಯಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!
ರೋಹಿತ್ಗೆ ವಸಡು, ತಲೆ ಬುರುಡೆ ಸೇರಿದಂತೆ ಹಲವು ಕಡೆ ತೀವ್ರ ಪೆಟ್ಟಾಗಿದೆ. ಅವರನ್ನು ಮೈಸೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಹಿತ್ರ ತಾಯಿಯ ಎರಡೂ ಕಾಲಿಗೆ ತೀವ್ರ ಪೆಟ್ಟಾಗಿದ್ದು ಮೂಳೆಗಳು ಮುರಿದಿವೆ ಎನ್ನಲಾಗುತ್ತಿದೆ. ರೋಹಿತ್ರ ಗೆಳೆಯ ಹಾಗೂ ಉಪನ್ಯಾಸಕರಿಗೂ ತೀವ್ರ ಪೆಟ್ಟಾಗಿದೆ.
ಮಾಸ್ಟರ್ ರೋಹಿತ್, ‘ಒಂದಲ್ಲ ಎರಡಲ್ಲ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ಸಿನಿಮಾಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿತ್ತು. ಕಳೆದ ವರ್ಷ ಬಿಡುಗಡೆ ಆದ ‘ಕಾಟೇರ’ ಸಿನಿಮಾದಲ್ಲಿ ರೋಹಿತ್ ನಟಿಸಿದ್ದರು.
