ಅನಾರೋಗ್ಯದ ಕಾರಣ ನೀಡಿ ತಮಗೆ ಮನೆಯಿಂದ ಊಟ ತರಿಸಿಕೊಡಬೇಕು. ಬಟ್ಟೆ, ಹಾಸಿಗೆಯನ್ನೂ ಮನೆಯಿಂದಲೇ ತರಿಸಿಕೊಡಬೇಕೆಂದು ಕೊಲೆ ಆರೋಪಿ, ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಜೈಲಿನಲ್ಲಿ ನೀಡುವ ಊಟವನ್ನೇ ತಿನ್ನಬೇಕು, ಅಲ್ಲಿ ಕೊಡುವ ಬಟ್ಟೆಗಳನ್ನೇ ಬಳಸಬೇಕೆಂದು ಸೂಚಿಸಿದೆ.
ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಮನೆಯಿಂದ ಊಟ ತರಿಸಿಕೊಡುವಂತೆ ಸೂಚನೆ ನೀಡಲು ನಿರಾಕರಿಸಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಸರ್ಕಾರಿ ವಕೀಲರು, “ಕೊಲೆ ಆರೋಪಿಗಳಿಗೆ ಮನೆಯಿಂದ ಊಟ, ಬಟ್ಟೆ, ಹಾಸಿಗೆ ತರಿಸಿಕೊಡಲು ಅವಕಾಶವಿಲ್ಲ. ಜೈಲು ನಿಯಮಾವಳಿ 728ರ ಅಡಿಯಲ್ಲಿ ಕೊಲೆ ಆರೋಪಿಗಳು ಮನೆ, ಊಟ, ಬಟ್ಟೆ, ಹಾಸಿಗೆ ಪಡೆಯುವಂತಿಲ್ಲ” ಎಂದು ವಾದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ಜೂನ್ 11ರಂದು ಬಂಧಿಸಲಾಗಿತ್ತು. ಅಂದಿನಿಂದಲೂ ದರ್ಶನ್ ಜೈಲಿನಲ್ಲಿಯೇ ಇದ್ದಾರೆ. ಅವರ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು.