‘ಸಪ್ತ ಸಾಗರದಾಚೆ ಎಲ್ಲೋ’ ಮತ್ತು ‘ಕಾಂತಾರ’ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಅವರು ತಮ್ಮ ನಕಲಿ ವಿಡಿಯೋ ವೈರಲ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು 29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ನಟಿ ರುಕ್ಮಿಣಿ ಅವರು ಬಿಕಿನಿ ಧರಿಸಿದ್ದಾರೆ ಎಂಬಂತೆ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದ್ದ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಾರಿ ಚರ್ಚೆಗೂ ಗ್ರಾಸವಾಗಿತ್ತು.
ವೈರಲ್ ಆದ ವಿಡಿಯೋ ಕುರಿತು ಸ್ಪಷ್ಟೀಕರಣ ನೀಡಿದ್ದ ರುಕ್ಮಿಣಿ, ಅದೊಂದು ನಕಲಿ ವಿಡಿಯೋ, ಕಿಡಿಗೇಡಿಗಳು ಎಐ ತಂತ್ರಜ್ಞಾನ ಬಳಸಿ, ಡೀಪ್ಫೇಕ್ ವಿಡಿಯೋ ಸೃಷ್ಟಿಸಿದ್ದಾರೆ ಎಂದು ಹೇಳಿದ್ದರು. ಇದೀಗ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಕಿಡಿಗೇಡಿಗಳು ಎಐ ಮತ್ತು ಡೀಪ್ಫೇಕ್ ತಂತ್ರಜ್ಞಾನವನ್ನು ಅತ್ಯಂತ ದುರುದ್ದೇಶಪೂರ್ವಕವಾಗಿ ಬಳಸಿಕೊಂಡಿದ್ದಾರೆ. ಬೇರೊಬ್ಬರ ದೇಹಕ್ಕೆ ನನ್ನ ಮುಖವನ್ನು ಡಿಜಿಟಲ್ ಆಗಿ ಜೋಡಿಸುವ ಮೂಲಕ ನಕಲಿ ಬಿಕಿನಿ ವಿಡಿಯೋ ಮತ್ತು ಫೋಟೋಗಳನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಸಾರ್ವಜನಿಕವಾಗಿ ನನ್ನ ಗೌರವ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತರುವ ವ್ಯವಸ್ಥಿತ ಪ್ರಯತ್ನ ನಡೆದಿದೆ,” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವ ದಮನಕ್ಕೆ ಮೋದಿ ‘SIR’ ಅಸ್ತ್ರ ಬಳಸುತ್ತಿರುವುದು ಯಾಕೆ?
ನಕಲಿ ವಿಡಿಯೋವನ್ನು ಹರಿಬಿಟ್ಟು, ಅದನ್ನು ವೈರಲ್ ಮಾಡಲು ಕಾರಣವಾದ ಒಟ್ಟು 29 ಪ್ರಮುಖ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ರುಕ್ಮಿಣಿ ದೂರು ನೀಡಿದ್ದಾರೆ. ಅವುಗಳಲ್ಲಿ 14 ಎಕ್ಸ್ ಖಾತೆಗಳು, 09 ಇನ್ಸ್ಟಾಗ್ರಾಂ ಖಾತೆಗಳು ಹಾಗೂ 06 ಫೇಸ್ಬುಕ್ ಖಾತೆಗಳು ಸೇರಿವೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ವಿಡಿಯೋ ಅಪ್ಲೋಡ್ ಮಾಡಿದ ಮೂಲ ಐಪಿ ಅಡ್ರೆಸ್ ಹಾಗೂ ಖಾತೆದಾರರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.




