ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 4ರಂದು ಪ್ರಕಟವಾಯಿತು. 15 ವರ್ಷಗಳ ಆಡಳಿತ ಬಳಿಕ ಸೋಲುಂಡ ಟಿಎಂಸಿಯ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅಂದು ಪತ್ರಿಕಾಗೋಷ್ಠಿ ನಡೆಸಿ, ಹಠದೊಂದಿಗೆ ತಮ್ಮ ನಿರ್ಧಾರ ಘೋಷಿಸಿದರು: “ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; ನಾವು ಸೋತಿರುವುದು ಸಾರ್ವಜನಿಕ ಜನಾಭಿಪ್ರಾಯದಿಂದಲ್ಲ, ಬದಲಿಗೆ ಸಂಚಿನಿಂದ. ಚುನಾವಣಾ ಆಯೋಗ ಮತ್ತು ಕೇಂದ್ರ ಭದ್ರತಾ ಪಡೆಗಳು ಬಿಜೆಪಿಯೊಂದಿಗೆ ಶಾಮೀಲಾಗಿ ಚುನಾವಣೆಯನ್ನು ‘ಲೂಟಿ’ ಮಾಡಿವೆ. ನಾನು ಸೋತಿಲ್ಲ. ಹಾಗಾಗಿ ನಾನು ಲೋಕಭವನಕ್ಕೆ ಹೋಗುವುದಿಲ್ಲ.ರಾಜೀನಾಮೆ ನೀಡುವುದಿಲ್ಲ,” ಎಂದು ಅವರು ಹೇಳಿದ್ದರು.
ನಂತರ ತಮ್ಮ ನೂತನ ಶಾಸಕರೊಂದಿಗೆ ನಡೆಸಿದ ಮುಚ್ಚಿದ ಬಾಗಿಲಿನ ಸಭೆಯಲ್ಲಿ, “ಅವರಿಗೆ ಇಷ್ಟವಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಲಿ. ನನ್ನನ್ನು ವಜಾಗೊಳಿಸಬೇಕಿದ್ದರೆ ವಜಾಗೊಳಿಸಲಿ. ಈ ದಿನವು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕಪ್ಪು ದಿನವಾಗಿ ದಾಖಲಾಗಲಿ” ಎಂದು ಮಮತಾ ಹೇಳಿದ್ದಾರೆನ್ನಲಾಗಿದೆ.
ಅವರು ಇಂತಹ ನಿಲುವು ತಳೆಯಲು ಪ್ರಮುಖ ಕಾರಣ; ಭಾರತದ ಪ್ರಜಾಪ್ರಭುತ್ವದಲ್ಲಿ ಇದುವರೆಗೆ ಅತ್ಯಂತ ನಿಷ್ಪಕ್ಷಪಾತವಾಗಿದ್ದ ಚುನಾವಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಿ, ಭಾರತವನ್ನು ಫ್ಯಾಸಿಸ್ಟ್ ‘ಹಿಂದು ರಾಷ್ಟ್ರ’ವನ್ನಾಗಿ ಪರಿವರ್ತಿಸುವ ಪ್ರಧಾನಿ ಮೋದಿ ಅವರ ಹುನ್ನಾರಕ್ಕೆ ತಾವು ಮತ್ತು ತಮ್ಮ ಪಕ್ಷ ಮೊದಲ ಬಲಿಯಾಗುತ್ತಿದೆ ಎಂಬ ಅರಿವು ಅವರಿಗಿದ್ದದ್ದು.
ಈ ‘ಹಿಂದು ರಾಷ್ಟ್ರ’ ಮತ್ತು ಫಾಸಿಸ್ಟ್ ಆಡಳಿತವನ್ನು ಭಾರತದ ಮೇಲೆ ಹೇರುವ ದಾರಿಯನ್ನು ರಹದಾರಿಯಾಗಿಸಿಕೊಳ್ಳಲು ಮೋದಿ ಆಯ್ದುಕೊಂಡಿರುವುದು ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಎಂಬ ಅಸ್ತ್ರ. ‘ವಿಶೇಷ’ ಎಂಬ ಪದವು; ‘ಮತದಾರರ ಪಟ್ಟಿಯ ಸಾಮಾನ್ಯ ನವೀಕರಣವು ನಿರಾಸಕ್ತಿಯಿಂದ ಕೂಡಿದ್ದು, ಪ್ರತಿ ಕೆಲವು ವರ್ಷಗಳಿಗೊಮ್ಮೆ ಮತದಾರರ ಪಟ್ಟಿಗಳ ತೀವ್ರ ಪರಿಶೀಲನೆಯ ಮೂಲಕ ಅದನ್ನು ಬಲಪಡಿಸುವ ಅಗತ್ಯವಿದೆ’ ಎಂಬುದನ್ನು ಬಿಂಬಿಸುತ್ತದೆ.
ಕಳೆದ ವರ್ಷ ವಿಧಾನಸಭಾ ಚುನಾವಣೆಗಳು ಹತ್ತಿರವಿದ್ದ ಕಾರಣ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ನಡೆಸಲಾಯಿತು. ನಂತರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ನಿರ್ಣಾಯಕ ಜಯ ಸಾಧಿಸಿದವು. ಈಗ ಭಾರತದ 29 ರಾಜ್ಯಗಳ ಪೈಕಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ, ದೇಶದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಒಳಗೊಂಡಿರುವ 13 ರಾಜ್ಯ/ಕೇಂದ್ರಾಡಳಿತ ಪ್ರದೇಶ (ಯುಟಿ)ಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದ 16 ರಾಜ್ಯ/ಯುಟಿಗಳಲ್ಲಿ ಎಸ್ಐಅರ್ ಆರಂಭವಾಗಿದೆ.
ಮಮತಾ ಬ್ಯಾನರ್ಜಿ ಅವರ ಎಚ್ಚರಿಕೆಯನ್ನು ನಿಜವಾಗಿಸುವ ಒಂದು ಮಾದರಿ ಈವರೆಗೆ ಎಸ್ಐಆರ್ ಪೂರ್ಣಗೊಂಡಿರುವ 13 ರಾಜ್ಯ/ಯುಟಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ; ಈ ಎಸ್ಐಆರ್ಗಳನ್ನು ವಿನ್ಯಾಸಗೊಳಿಸಿರುವುದೇ ಮೋದಿ ಸರ್ಕಾರವು ದೇಶದ ಮೇಲಿನ ತನ್ನ ಹಿಡಿತ ಸಂಪೂರ್ಣವಾಗುವವರೆಗೆ ಒಂದರ ನಂತರ ಒಂದರಂತೆ ಚುನಾವಣೆಗಳನ್ನು ಕದಿಯಲು (ಗೆಲ್ಲಲು) ಅನುಕೂಲ ಮಾಡಿಕೊಡಲು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಕಳೆದ 11 ವರ್ಷಗಳಿಂದ ಭಾರತದ ಪ್ರಧಾನಿಯಾಗಿದ್ದರೂ ಮೋದಿ ಇದನ್ನು ಈಗ ಏಕೆ ಮಾಡುತ್ತಿದ್ದಾರೆ? ಇದಕ್ಕೆ ಉತ್ತರ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರದರ್ಶನವು ಮೋದಿಗೆ ಆಘಾತ ನೀಡಿದೆ. ಆದ್ದರಿಂದ, ಅವರಿಗೆ ಈಗ ಎಸ್ಐಆರ್ನ ಅಗತ್ಯ ಎದುರಾಗಿದೆ. ಜೊತೆಗೆ, ತಾವು ಈಗಾಗಲೇ ಮಂಡಿಯೂರುವಂತೆ ಮಾಡಿಕೊಂಡಿರುವ ಚುನಾವಣಾ ಆಯೋಗದ ನೆರವಿನಿಂದ ಈ ತಂತ್ರವನ್ನು ಯಶಸ್ವಿಯಾಗಿ ಜಾರಿಗೆ ತರಬಹುದು ಎಂಬುದು ಅವರಿಗೆ ತಿಳಿದಿದೆ.
ಈ ಹಿಂದೆ, ಚುನಾವಣಾ ಆಯುಕ್ತರ ನೇಮಕಾತಿಗಾಗಿ ಇದ್ದ ಸಮಿತಿಯಲ್ಲಿ ಪ್ರಧಾನಿ, ಲೋಕಸಭಾ ವಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇರುತ್ತಿದ್ದರು. ಆದರೂ, ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ಸರ್ಕಾರದ ಸಂಪೂರ್ಣ ನಿಯಂತ್ರಣ ಇರದಂತೆ ನೋಡಿಕೊಳ್ಳಬೇಕೆಂಬ ವಿಚಾರ ಚರ್ಚೆಯಲ್ಲಿತ್ತು. ಸುಪ್ರೀಂ ಕೋರ್ಟ್ ಕೂಡ, 2023ರ ಮಾರ್ಚ್ನಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗಾಗಿ ಸೂಕ್ತ, ಸ್ವತಂತ್ರ ಹಾಗೂ ಪಾರದರ್ಶಕ ಪ್ರಕ್ರಿಯೆಗಾಗಿ ಕಾನೂನು ರೂಪಿಸಲು ಮೋದಿ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ, ಮೋದಿ ಸರ್ಕಾರವು ಆಯೋಗದ ಮೇಲೆ ತಮ್ಮ ಹಿಡಿತ ಮತ್ತಷ್ಟು ಹೆಚ್ಚಾಗುವಂತೆ ಕಾನೂನನ್ನು ರೂಪಿಸಿತು. ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನು ಹೊರಹಾಕಿ, ಪ್ರಧಾನಿ ಮತ್ತು ಪ್ರಧಾನಿ ನಾಮನಿರ್ದೇಶನ ಮಾಡುವ ಒಬ್ಬ ಕೇಂದ್ರ ಸಚಿವ ಹಾಗೂ ವಿಪಕ್ಷ ನಾಯಕರ ಸಮಿತಿ ರಚಿಸುವುದಾಗಿ ಕಾನೂನು ರೂಪಿಸಿತು.
ಆ ಕಾನೂನಿಂದಾಗಿ 2:1ನಿಂದ ಕೂಡಿದ ಆಯ್ಕೆ ಸಮಿತಿಯಲ್ಲಿ ಆಡಳಿತ ಪಕ್ಷದ ಪಾರುಪತ್ಯವೇ ಪರಮೋಚ್ಛವಾಯಿತು. ಪ್ರಧಾನಿ ಮತ್ತು ಅವರ ಕ್ಯಾಬಿನೆಟ್ ಸಚಿವ ನಿರ್ಧರಿಸುವವರೇ ಆಯೋಗದ ಆಯುಕ್ತರಾಗಿ ನೇಮಕಗೊಳ್ಳುವ ರೀತಿಯಲ್ಲಿ ಸಮಿತಿ ರಚನೆಯಾಯಿತು. ಮೋದಿ ಸರ್ಕಾರ ಮತ್ತು ಅವರ ಬಿಜೆಪಿ ಮುಂಬರುವ ದಿನಗಳಲ್ಲಿ ಅಧಿಕಾರದಲ್ಲಿ ಮುಂದುವರಿಯಲು, ಚುನಾವಣೆಗಳಲ್ಲಿ ಮತಗಳನ್ನು ಕದಿಯಲು ಈ ನ್ಯಾಯಾಲಯ ಅನುಮೋದಿತ ಕಾನೂನಿನ’ ಅಧಿಕಾರವನ್ನು ಬಳಸಿಕೊಳ್ಳುತ್ತಿದೆ.
ಸುಪ್ರೀಂ ಕೋರ್ಟ್ನ ನಿರ್ದೇಶನಕ್ಕೆ ತದ್ವಿರುದ್ಧವಾಗಿರುವ ಕಾನೂನಿನ ವಿರುದ್ಧ ದೇಶದ ಅನೇಕ ನಾಗರಿಕ ಹಕ್ಕುಗಳ ಸಂಘಟನೆಗಳು, ಮಾಜಿ-ಹಾಲಿ ಸಂಸದರು ದನಿ ಎತ್ತಿದರು. ಭಾರತದ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ನಲ್ಲಿ ಅನೇಕರು ಮೇಲ್ಮನವಿಯನ್ನೂ ಸಲ್ಲಿಸಿದರು.
ಸಲ್ಲಿಕೆಯಾದ ಹತ್ತಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಒಟ್ಟಿಗೆ ಸೇರಿಸಿದೆ. ಆದರೆ, ತನ್ನ ಎಂದಿನ ಶೈಲಿಯಲ್ಲಿ, ಅವುಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿತು. ತುರ್ತು ವಿಚಾರಣೆ ನಡೆಯಬೇಕಿದ್ದ ಅರ್ಜಿಗಳನ್ನು ಬರೋಬ್ಬರಿ 3 ವರ್ಷಗಳ ನಂತರ, ಈಗ ವಿಚಾರಣೆಗೆ ತೆಗೆದುಕೊಳ್ಳುತ್ತಿದೆ. ಈ ವಿಚಾರಣೆ ಮತ್ತು ನ್ಯಾಯದ ವಿಳಂಬವು ಮೋದಿ ಸರ್ಕಾರಕ್ಕೆ ಭಾರತದ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಮತ್ತು ಏಕಪಕ್ಷೀಯ ಅರೆ-ಫ್ಯಾಸಿಸ್ಟ್ ರಾಷ್ಟ್ರವನ್ನಾಗಿ ಪರಿವರ್ತಿಸಲು ಅಗತ್ಯವಿರುವ ಎಲ್ಲ ಸಮಯವನ್ನು ಒದಗಿಸುತ್ತಿದೆ.
ಕಾನೂನು ಜಾರಿಗೆ ಬಂದ ಕೆಲವೇ ತಿಂಗಳುಗಳಲ್ಲಿ ಮೋದಿ ಅವರು ಚುನಾವಣಾ ಆಯೋಗದ ಮೇಲಿನ ತಮ್ಮ ಸಂಪೂರ್ಣ ನಿಯಂತ್ರಣವನ್ನು ಬಳಸಲು ಪ್ರಾರಂಭಿಸಿದರು. ತಮ್ಮ ಗುರಿಯನ್ನು ಸಾಧಿಸಲು ತಾವು ಬಳಸಲು ಬಯಸಿದ್ದ ಪ್ರಮುಖ ಅಸ್ತ್ರವನ್ನು 2025ರ ಜೂನ್ 24ರಂದು ಮೋದಿ ಅನಾವರಣಗೊಳಿಸಿದರು. ಅದೇ ಮತದಾರರ ಪಟ್ಟಿಗಳ ಮೇಲೆ ‘ಎಸ್ಐಆರ್’ ನಡೆಸುವುದು.
ಈ ಎಸ್ಐಆರ್ ವಿರುದ್ಧ ಬೀದಿಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಹಲವಾರು ಮಂದಿ ಹೋರಾಟ ನಡೆಸುತ್ತಿದ್ದಾರೆ. ಚುನಾವಣಾ ಆಯೋಗವು ‘ಎಸ್ಐಆರ್’ ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಲೇ ಇದೆ. ‘ಕೊನೆಯ ಬಾರಿಗೆ ಪೂರ್ಣ ಪ್ರಮಾಣದ ತೀವ್ರ ಪರಿಶೀಲನೆ ನಡೆದದ್ದು 2002-2004ರಲ್ಲಿ. ಅಂದಿನಿಂದ ದೇಶದಲ್ಲಿ ಭಾರೀ ಜನಸಂಖ್ಯಾ ಬದಲಾವಣೆಯಾಗಿದೆ. ಮರಣ ಹೊಂದಿದವರು, ಕಾಯಂ ಆಗಿ ಸ್ಥಳಾಂತರಗೊಂಡವರು ಹಾಗೂ ನಕಲಿ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿರುವ ಸಾಧ್ಯತೆಯಿದೆ; ಕಳೆದ ಎರಡು ದಶಕಗಳಲ್ಲಿ ಕೇವಲ ಸಂಕ್ಷಿಪ್ತ ಪರಿಶೀಲನೆಗಳು (ವಾರ್ಷಿಕ ನವೀಕರಣಗಳು) ಮಾತ್ರ ನಡೆದಿರುವುದರಿಂದ, ಮತಪಟ್ಟಿಯಲ್ಲಿರುವ ತಪ್ಪುಗಳನ್ನು ತೆಗೆದುಹಾಕಲು ಎಸ್ಐಆರ್ ಅಗತ್ಯವಿದೆ’ ಎಂದು ಆಯೋಗ ವಾದಿಸುತ್ತಿದೆ.
‘ಹಿಂದಿನ ಸರ್ಕಾರಗಳಲ್ಲಿ ನೇಮಕಗೊಂಡಿದ್ದ ಚುನಾವಣಾ ಆಯುಕ್ತರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವನ್ನು ಮೋದಿ ಸರ್ಕಾರ ತಡವಾಗಿಯಾದರೂ ಸರಿಪಡಿಸುತ್ತಿದೆ’ ಎಂದು ಮುಗ್ಧ ಮತದಾರರನ್ನು ನಂಬಿಸಲು ಈ ವಿವರಣೆಯನ್ನು ಹೆಣೆಯಲಾಗಿದೆ. ಈ ವಿವರಣೆಗಳನ್ನು ಸಿದ್ದಪಡಿಸಿರುವುದೂ ಚುನಾವಣಾ ಆಯೋಗವಲ್ಲ, ಮೋದಿ ಸರ್ಕಾರ.
ಆದರೆ, ಕಳೆದ 75 ವರ್ಷಗಳಲ್ಲಿ ನೋಂದಾಯಿತ ಮತದಾರರ ಪಟ್ಟಿಯ ಬದಲಾವಣೆಗಳು ಮೇಲ್ನೋಟಕ್ಕೆ ಪರಿಶೀಲನೆಯಂತೆ ಕಂಡರೂ, ವಾಸ್ತವದಲ್ಲಿ ಇದು ಪರಿಶೀಲನೆಯಲ್ಲ. ಬದಲಾಗಿ, ಪ್ರಸ್ತುತ ಮತದಾರರ ಪಟ್ಟಿಗಳನ್ನು ಸಂಪೂರ್ಣವಾಗಿ ಹರಿದು ಹಾಕಿ, ಮುಂಬರುವ ದಿನಗಳಲ್ಲಿ ತಾವು ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗುವ ರೀತಿಯಲ್ಲಿ ಹೊಸ ಪಟ್ಟಿಗಳನ್ನು ಸಿದ್ದಪಡಿಸುವುದು ಮೋದಿ ಸರ್ಕಾರದ ಕುತಂತ್ರ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್ಐಆರ್’
ಅಂದಹಾಗೆ, ಸ್ವಾತಂತ್ರ್ಯದ ನಂತರ, ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿನ ತತ್ವವನ್ನು ಜಾರಿಗೆ ತರಲು ಚುನಾವಣಾ ಆಯೋಗವು 1948 ರಿಂದ 1952 ರವರೆಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಭೂತಪೂರ್ವ ಕಾರ್ಯದಲ್ಲಿ ತೊಡಗಿತ್ತು. ಈ ಕಾರ್ಯ ಪೂರ್ಣಗೊಳ್ಳಲು ನಾಲ್ಕು ವರ್ಷಗಳು ಬೇಕಾದವು. ಏಕೆಂದರೆ ಭಾರತದ 5 ಲಕ್ಷ ನಗರಗಳು, ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಮನೆ-ಮನೆಗೆ, ಗುಡಿಸಲು-ಗುಡಿಸಲಿಗೆ ಹೋಗಿ ಎಣಿಸುವುದನ್ನು ಹೊರತುಪಡಿಸಿ, ವಿಶ್ವದ ಅತಿ ದೊಡ್ಡ ಮತದಾರರ ಸಮೂಹವನ್ನು ಗುರುತಿಸಿ ಪಟ್ಟಿ ಮಾಡಲು ಅಂದು ಬೇರೆ ಯಾವುದೇ ಮಾರ್ಗವಿರಲಿಲ್ಲ.
ಈ ಮತದಾರರ ಪಟ್ಟಿಯನ್ನು 1967ರವರೆಗೆ ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಲಾಗುತ್ತಿತ್ತು. ನಂತರ ಪ್ರಧಾನಿ ಇಂದಿರಾ ಗಾಂಧಿಯವರು ಕೇಂದ್ರ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಪ್ರತ್ಯೇಕಿಸಿದ ನಂತರ, 1971ರಿಂದ ಪ್ರತಿ ಐದು ವರ್ಷಗಳಲ್ಲಿ ಎರಡು ಬಾರಿ ನವೀಕರಿಸುವ ಪ್ರಕ್ರಿಯೆ ಜಾರಿಗೆ ಬಂದಿತು. ಇದು ಚುನಾವಣಾ ಆಯೋಗದ ಕೆಲಸದ ಹೊರೆಯನ್ನು ದುಪ್ಪಟ್ಟುಗೊಳಿಸಿತು. ಆದರೆ, ಮತದಾರರ ನಿಖರವಾದ ಡೇಟಾವನ್ನು ಕಾಯ್ದುಕೊಳ್ಳಲು ಇದು ನೆರವಾಯಿತು. ಜೊತಗೆ, 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯು ಆಯೋಗಕ್ಕೆ ದುಪ್ಪಟ್ಟು ಕೆಲಸದ ಹೊರೆಯನ್ನು ನಿಭಾಯಿಸಲು ಸಹಕಾರ ನೀಡಿತು. ಡಿಜಿಟಲ್ ಡೇಟಾ ಸಂಗ್ರಹವು ಚಾಲ್ತಿಗೆ ಬಂದ ನಂತರ, ಆಯೋಗದ ಕೆಲಸದ ಹೊರೆ ಕ್ರಮೇಣ ಸುಲಭವಾಯಿತು.
ಇಪ್ಪತ್ತು ವರ್ಷಗಳ ನಂತರ, ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (EVM) ಮತ್ತು ದಾಖಲೆ ನಿರ್ವಹಣೆಯನ್ನು ಪರಿಚಯಿಸಿದಾಗ ಆಯೋಗದ ಕೆಲಸ ಇನ್ನೂ ಸುಲಭವಾಯಿತು. ಇವಿಎಂಗಳನ್ನು 1998ರಲ್ಲಿ ಆಯ್ದ ರಾಜ್ಯಗಳಲ್ಲಿ ಮತ್ತು 2004ರಲ್ಲಿ ದೇಶಾದ್ಯಂತ ಜಾರಿಗೆ ತರಲಾಯಿತು. ಚುನಾವಣಾ ಪ್ರಕ್ರಿಯೆಯು ಎಲೆಕ್ಟ್ರಾನಿಕ್ ಮತದಾನ ಮತ್ತು ದಾಖಲೆ ನಿರ್ವಹಣೆಗೆ ಸಂಪೂರ್ಣವಾಗಿ ಬದಲಾಗಿದ್ದರಿಂದ, ಆಯೋಗಕ್ಕೆ 2002-2004ರ ನಡುವೆ ತನ್ನ ಮೊದಲ ತೀವ್ರ ಪರಿಶೀಲನೆ ನಡೆಸಲು ಸಾಧ್ಯವಾಯಿತು. ಇದು ಸಮಗ್ರ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿತು. ಆದರೆ, ಅವತ್ತಿನ ಪರಿಷ್ಕರಣೆಗೂ ಇಂದಿನ ಎಸ್ಐಆರ್ಗೆ ಭಾರೀ ವ್ಯತ್ಯಾಸಗಳಿವೆ. ಅಂದು, ಮತಪಟ್ಟಿಯಿಂದ ಹೊರಗಿದ್ದವರನ್ನು ಒಳಗೊಳ್ಳುವ ಉದ್ದೇಶವಿತ್ತು. ಇಂದು, ಮತಪಟ್ಟಿಯಲ್ಲಿ ಇರುವವರನ್ನೇ ಹೊರಹಾಕಲು ಉದ್ದೇಶಿಸಲಾಗಿದೆ. ಆದರೂ, ಮೋದಿ ಸರ್ಕಾರ ತನ್ನ ಎಸ್ಐಆರ್ಗೆ 2002ರ ಪರಿಷ್ಕರಣೆಯನ್ನೇ ಆಧಾರ ಬಿಂದುವಾಗಿ ತೋರಿಸಿಕೊಳ್ಳುತ್ತಿದೆ.
ಕೆಳಗಿನ ಕೋಷ್ಟಕವು ಆ ಎಸ್ಐಆರ್ನ ಫಲಿತಾಂಶಗಳನ್ನು ನೀಡುತ್ತದೆ:
2002–2004ರ ಎಸ್ಐಆರ್ ಪ್ರಭಾವ
| ರಾಜ್ಯ / ಕೇಂದ್ರಾಡಳಿತ ಪ್ರದೇಶ | ಮತದಾರರ ಸಂಖ್ಯೆ (ಎಸ್ಐಆರ್ಗೆ ಮುನ್ನ) | ಮತದಾರರ ಸಂಖ್ಯೆ (ಎಸ್ಐಆರ್ ನಂತರ) | ಅಂದಾಜು ಹೆಚ್ಚಳ |
| ಉತ್ತರ ಪ್ರದೇಶ | 8.90 ಕೋಟಿ | 11.06 ಕೋಟಿ | +2.16 ಕೋಟಿ |
| ಪಶ್ಚಿಮ ಬಂಗಾಳ | 4.20 ಕೋಟಿ | 4.74 ಕೋಟಿ | +0.54 ಕೋಟಿ |
| ಬಿಹಾರ | 3.85 ಕೋಟಿ | 4.50 ಕೋಟಿ | +0.65 ಕೋಟಿ |
| ಮಹಾರಾಷ್ಟ್ರ | 4.80 ಕೋಟಿ | 5.40 ಕೋಟಿ | +0.60 ಕೋಟಿ |
| ರಾಜಸ್ಥಾನ | 3.10 ಕೋಟಿ | 3.47 ಕೋಟಿ | +0.37 ಕೋಟಿ |
| ಮಧ್ಯಪ್ರದೇಶ | 3.00 ಕೋಟಿ | 3.47 ಕೋಟಿ | +0.47 ಕೋಟಿ |
| ಗುಜರಾತ್ | 2.90 ಕೋಟಿ | 3.37 ಕೋಟಿ | +0.47 ಕೋಟಿ |
| ಆಂಧ್ರಪ್ರದೇಶ | 4.50 ಕೋಟಿ | 5.11 ಕೋಟಿ | +0.61 ಕೋಟಿ |
| ತಮಿಳುನಾಡು | 3.80 ಕೋಟಿ | 4.16 ಕೋಟಿ | +0.36 ಕೋಟಿ |
| ಕೇರಳ | 1.95 ಕೋಟಿ | 2.13 ಕೋಟಿ | +0.18 ಕೋಟಿ |
| ಕರ್ನಾಟಕ | 3.20 ಕೋಟಿ | 3.70 ಕೋಟಿ | +0.50 ಕೋಟಿ |
| ಒಟ್ಟು ಭಾರತ | 61.0 ಕೋಟಿ | 67.1 ಕೋಟಿ | +6.1 ಕೋಟಿ |
ಸಂಕ್ಷಿಪ್ತವಾಗಿ ಹೇಳುವುದಾದರೆ, 1951 ಮತ್ತು 2004ರ ನಡುವೆ ಚುನಾವಣಾ ಆಯೋಗದ ಬೆಳೆಯುತ್ತಿರುವ ಅನುಭವ ಮತ್ತು ಹಂತಹಂತವಾಗಿ ಸುಧಾರಿಸಿದ ನೋಂದಣಿ ಹಾಗೂ ದಾಖಲೆ ನಿರ್ವಹಣಾ ವಿಧಾನಗಳು ಮತದಾರರ ಸಂಖ್ಯೆಯನ್ನು ಹೆಚ್ಚಿಸಿದವು. ಆದರೆ, 2025-26ರ ಎಸ್ಐಆರ್ ತದ್ವಿರುದ್ಧವಾದ ಫಲಿತಾಂಶವನ್ನು ನೀಡಿದೆ. ಮತದಾರರ ಸಂಖ್ಯೆಯನ್ನು ಬಹುತೇಕ ಅದೇ ಪ್ರಮಾಣದಲ್ಲಿ ಕಡಿಮೆ ಮಾಡಿದೆ.
2025-26ರ ಎಸ್ಐಆರ್ ಪ್ರಭಾವ
| ರಾಜ್ಯ/ಕೇಂದ್ರಾಡಳಿತ ಪ್ರದೇಶ | ಒಟ್ಟು ಮತದಾರರು (ಕರಡು ಪಟ್ಟಿಗೆ ಮುನ್ನ) | ಪರಿಷ್ಕೃತ ಮತದಾರರು (ಅಂತಿಮ ಪಟ್ಟಿ) | ತೆಗೆದುಹಾಕಲಾದ ಮತದಾರರು (ನಿವ್ವಳ) | ಬದಲಾವಣೆ (%) |
| ಅಂಡಮಾನ್ ಮತ್ತು ನಿಕೋಬಾರ್ ದ್ವಿಪಗಳು | 3.10 ಲಕ್ಷ | 2.58 ಲಕ್ಷ | -0.52 ಲಕ್ಷ | -16.6% |
| ಛತ್ತೀಸ್ಗಢ | 2.12 ಕೋಟಿ | 1.87 ಕೋಟಿ | -25 ಲಕ್ಷ | -11.8% |
| ಗೋವಾ | 11.85 ಲಕ್ಷ | 10.57 ಲಕ್ಷ | -1.28 ಲಕ್ಷ | -10.8% |
| ಗುಜರಾತ್ | 5.08 ಕೋಟಿ | 4.40 ಕೋಟಿ | -68 ಲಕ್ಷ | -14.5% |
| ಕೇರಳ | 2.78 ಕೋಟಿ | 2.69 ಕೋಟಿ | -9 ಲಕ್ಷ | -3.24% |
| ಲಕ್ಷದ್ವೀಪ | 0.57 ಲಕ್ಷ | 0.57 ಲಕ್ಷ | -206 | -0.35% |
| ಮಧ್ಯಪ್ರದೇಶ | 5.74 ಕೋಟಿ | 5.39 ಕೋಟಿ | -34.25 ಲಕ್ಷ | -5.96% |
| ಪುದುಚೇರಿ | 10.21 L | 9.44 ಲಕ್ಷ | -0.77 ಲಕ್ಷ | -7.54% |
| ರಾಜಸ್ಥಾನ | 5.46 ಕೋಟಿ | 5.15 ಕೋಟಿ | -31 ಲಕ್ಷ | -5.7% |
| ತಮಿಳುನಾಡು | 6.41 ಕೋಟಿ | 5.67 ಕೋಟಿ | -74 ಲಕ್ಷ | -11.5% |
| ಉತ್ತರ ಪ್ರದೇಶ | 15.44 ಕೋಟಿ | 13.39 ಕೋಟಿ | ~2.05 ಕೋಟಿ | -13.21% |
| ಪಶ್ಚಿಮ ಬಂಗಾಳ | 7.69 ಕೋಟಿ | 6.86 ಕೋಟಿ | -83 ಲಕ್ಷ | -10.9% |
| ಒಟ್ಟು (ಹಂತ II) | 50.99 ಕೋಟಿ | 45.81 ಕೋಟಿ | -5.18 ಕೋಟಿ | -10.2% |
2002-2004ರ ಎಸ್ಐಆರ್ ಮತದಾರರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾದರೆ, 2025ರ ಎಸ್ಐಆರ್ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಈ ಎರಡು ಪ್ರವೃತ್ತಿಯಲ್ಲಿ ಭಾರತೀಯ ನಾಗರಿಕರು ಯಾವುದನ್ನು ನಂಬಬೇಕು? ಇದಕ್ಕೆ ಉತ್ತರವನ್ನು ಈ ಎರಡೂ ಡೇಟಾಗಳನ್ನು ಮೂರನೆಯದರೊಂದಿಗೆ ಹೋಲಿಸುವ ಮೂಲಕ ಕಂಡುಕೊಳ್ಳಬಹುದು: ಅದುವೇ 2004 ಮತ್ತು 2024ರ ನಡುವಿನ ಭಾರತದ ಜನಸಂಖ್ಯೆಯ ಬದಲಾವಣೆ. ಭಾರತದ ಜನಸಂಖ್ಯೆಯು 2004ರಲ್ಲಿ 113.6 ಕೋಟಿಯಿಂದ 2024ರಲ್ಲಿ 144.2 ಕೋಟಿಗೆ ಬೆಳೆದಿದೆ.
ಇದಲ್ಲದೆ, ಕೆಳಗಿನ ಕೋಷ್ಟಕವು ತೋರಿಸುವಂತೆ, ಈ ಹೆಚ್ಚಳವು ಈ ಅವಧಿಯ ಲೋಕಸಭಾ ಚುನಾವಣೆಗಳಲ್ಲಿ ನೋಂದಾಯಿತ ಮತದಾರರ ಸಂಖ್ಯೆಯ ಹೆಚ್ಚಳದಲ್ಲಿ ಸಂಪೂರ್ಣವಾಗಿ ಪ್ರತಿಫಲಿಸಿದೆ:
| ವರ್ಷ | ಲೋಕಸಭೆ | ನೋಂದಾಯಿತ ಮತದಾರರು |
| 2004 | 14ನೇ | 67.15 ಕೋಟಿ |
| 2009 | 15ನೇ | 71.67 ಕೋಟಿ |
| 2014 | 16ನೇ | 83.41 ಕೋಟಿ |
| 2019 | 17ನೇ | 91.20 ಕೋಟಿ |
| 2024 | 18ನೇ | 97.79 ಕೋಟಿ |
ಮತದಾರರ ಸಂಖ್ಯೆಯು 20 ವರ್ಷಗಳಲ್ಲಿ 30.64 ಕೋಟಿಯಷ್ಟು ಹೆಚ್ಚಳವಾಗಿದೆ. ಅಂದರೆ, ವರ್ಷಕ್ಕೆ ಸುಮಾರು 1.5 ಕೋಟಿಯಷ್ಟು ಹೆಚ್ಚಳ ಕಂಡಿದೆ. ಈ ಮತದಾರರ ಪಟ್ಟಿಗಳನ್ನು ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಇಬ್ಬರ ಅಧಿಕಾರಾವಧಿಯಲ್ಲೂ ಸಿದ್ಧಪಡಿಸಲಾಗಿತ್ತು. ಮತದಾರರ ಏರಿಕೆಯ ಸಂಖ್ಯೆಯು ಇದೇ ಅವಧಿಯಲ್ಲಿ ದೇಶದ 18 ವರ್ಷ ಮೇಲ್ಪಟ್ಟ ಜನಸಂಖ್ಯೆಯ ಬೆಳವಣಿಗೆಗೆ ಸಮಾನವಾಗಿದೆ. ಆದ್ದರಿಂದ, ಮುಖ್ಯ ಚುನಾವಣಾ ಆಯುಕ್ತರು ಹೇಳುವ; ಭಾರೀ ವಲಸೆ, ವಾಸಸ್ಥಳ ಬದಲಾವಣೆಯ ನೋಂದಣಿ ಮಾಡದಿರುವುದು ಅಥವಾ ಮರಣವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂಬ ವಾದವು ಅಸಂಭವವೆಂದು ತೋರುತ್ತದೆ.
ಹಾಗಾದರೆ, ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಮತದಾರರ ಸಂಖ್ಯೆ ಕುಸಿತವನ್ನು, ಅದೂ ಹಿಂದೆ ನೋಂದಾಯಿತವಾಗಿದ್ದ ಮತದಾರರ ಪೈಕಿ ಹತ್ತನೇ ಒಂದು ಭಾಗಕ್ಕಿಂತಲೂ ಹೆಚ್ಚು ಕುಸಿದಿರುವುದನ್ನು ವಿವರಿಸುವುದು ಹೇಗೆ?
ಇದಕ್ಕೆ ಕೇವಲ ಎರಡು ಸಾಧ್ಯತೆಗಳಿರಬಹುದು: ಮೊದಲನೆಯದಾಗಿ; ಪೂರ್ಣ 20 ವರ್ಷಗಳ ಹಿಂದೆ ಅಂದರೆ 2004ರ ‘ಪರಂಪರೆಯ ಮತದಾರರ ಪಟ್ಟಿ’ಯಲ್ಲಿ (legacy electoral rolls) ಇಲ್ಲದವರು ಈಗ ತಮ್ಮ ಮೂಲ ಮನೆಗಳಿಗೆ ಮರಳಿ, ತಾವು ಅರ್ಹ ಮತದಾರರೆಂದು ಸಬೀತು ಪಡಿಸಲು ಇಚ್ಚಿಸಿದ್ದು, ಅದಕ್ಕೆ ಅಗತ್ಯವಿರುವ ವಾಸಸ್ಥಳದ ದಾಖಲೆಗಳನ್ನು ಸಂಗ್ರಹಿಸಲು ಮುಂದಾಗಿದ್ದರೂ, ಆ ದಾಖಲೆಗಳನ್ನು ಪಡೆಯುವುದನ್ನು ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ಕಷ್ಟಕರಗೊಳಿಸಿದೆ. ಆದ್ದರಿಂದ, ಬಹುಸಂಖ್ಯಾತರು ದಾಖಲೆಗಳನ್ನು ಪಡೆಯಲು ಪ್ರಯತ್ನಿಸುವುದನ್ನೇ ಕೈಬಿಟ್ಟಿದ್ದಾರೆ.
ಎರಡನೆಯದಾಗಿ; ಇದು ಮೋದಿಯವರ ನೆಚ್ಚಿನ ತಂತ್ರವಾಗಿದ್ದು, ತಾವು ನಿಜವಾಗಿಯೂ ಭಾರತೀಯ ನಾಗರಿಕರು ಮತ್ತು ಬಾಂಗ್ಲಾದೇಶ, ಮ್ಯಾನ್ಮಾರ್ ಅಥವಾ ಯಾವುದೇ ಇತರ ಸ್ಥಳದಿಂದ ಬಂದ ಅಕ್ರಮ ವಲಸಿಗರಲ್ಲ ಎಂಬುದನ್ನು ಸಾಬೀತುಪಡಿಸುವ ಅಗತ್ಯವನ್ನು ಸೃಷ್ಟಿಸಿದೆ. ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್ ಅನ್ನು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದ್ದರೂ, ವಲಸೆ ಕಾರ್ಮಿಕರು ಅಗತ್ಯವಿರುವ ಪ್ರತಿಯೊಂದು ಇತರ ಗುರುತಿನ ಪುರಾವೆಗಳನ್ನು ಅವರ ಸ್ವಂತ ಮನೆಯಿಂದಲೇ ಪಡೆಯಬೇಕಾಗುತ್ತದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್ಐಆರ್ – ಕೇವಲ ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ 10%ರಷ್ಟು ಕುಸಿತವು, ಮತ ಚಲಾಯಿಸಲು ಪ್ರಯತ್ನಿಸುವುದನ್ನೇ ಕೈಬಿಟ್ಟಿರುವ ಜನರ ಸಂಖ್ಯೆ ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸುತ್ತದೆ. ಸಹಜವಾಗಿ, ಮೋದಿ ಮತ್ತು ಬಿಜೆಪಿ ಬಯಸುತ್ತಿರುವುದೂ ಇದನ್ನೇ. ಏಕೆಂದರೆ, ಮತಪಟ್ಟಿಯಿಂದ ಹೊರಗುಳಿದಿರುವವರು ದೇಶದ ಅತ್ಯಂತ ಬಡ ಜನರಾಗಿದ್ದು, ಗುಂಪಾಗಿ ಮತ ಚಲಾಯಿಸುವ ಪ್ರವೃತ್ತಿ ಹೊಂದಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಣಿ ಗೆಲುವುಗಳು ಮತ್ತು ಇತ್ತೀಚೆಗೆ ಪಂಜಾಬ್ನಲ್ಲಿ ನಡೆದ ಉದಾಹರಣೆಗಳು ತೋರಿಸುವಂತೆ, ಇವರು ತಮಗೆ ಭವಿಷ್ಯದ ಬಗ್ಗೆ ಸಣ್ಣ ಆಶಾವಾದ ಮೂಡಿಸುವವರ ಪರವಾಗಿ ಮತ ಚಲಾಯಿಸುವ ಪ್ರವೃತ್ತಿ ಹೊಂದಿದ್ದಾರೆ.
ಹಲವು ಸಮೀಕ್ಷೆಗಳು ತೋರಿಸಿರುವಂತೆ, ದೇಶದ ಅತ್ಯಂತ ಬಡವರಲ್ಲಿ ಮುಸ್ಲಿಮರ ಪ್ರಮಾಣವೂ ಹೆಚ್ಚಿದೆ. ಹೀಗಾಗಿ, ಕೇವಲ ಸಾಪೇಕ್ಷವಾಗಿ ಸೌಲತ್ತು ಹೊಂದಿದವರು ಮಾತ್ರ ಸುಲಭವಾಗಿ ತಮ್ಮ ಮತಗಳನ್ನು ಚಲಾಯಿಸುವಂತೆ ನೋಡಿಕೊಳ್ಳುವಲ್ಲಿ ಮೋದಿ ಅವರು ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ.
ಆದ್ದರಿಂದ, ಮಮತಾ ಬ್ಯಾನರ್ಜಿ ಅವರ ವಾದ ಸರಿಯಾಗಿದೆ. ಬಂಗಾಳದ ಚುನಾವಣೆಯನ್ನು ಈ ಎಲ್ಲ ಅಂಶಗಳ ಸಂಯೋಜನೆಯ ಮೂಲಕ ‘ಕದಿಯಲಾಗಿತ್ತು’ (ಗೆಲ್ಲಲಾಗಿತ್ತು) ಎಂಬುದು ಹೆಚ್ಚು ಸಂಭವನೀಯವಾಗಿದೆ. ಆದರೆ, ಬಂಗಾಳದಲ್ಲಿ ಏನಾಗಿದೆಯೋ ಅದು ಈಗ ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿಯೂ ಸಂಭವಿಸಲಿದೆ.
ಮಾಹಿತಿ ಮೂಲ: ದಿ ವೈರ್
ಲೇಖಕರು: ಪ್ರೇಮ್ ಶಂಕರ್ ಝಾ (ಅರ್ಥಶಾಸ್ತ್ರಜ್ಞರು, ಲೇಖಕರು ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರು)
ಕನ್ನಡಕ್ಕೆ: ಸೋಮಶೇಖರ್ ಚಲ್ಯ



