ಸೀತೆ ನೇಪಾಳದ ಮಗಳು ಎಂದ ಕಟ್ಮಂಡು ಮೇಯರ್
ಚಿತ್ರದಿಂದ ವಿವಾದಾತ್ಮಕ ಸಂಭಾಷಣೆ ಕೈಬಿಡಲು ಆಗ್ರಹ
ತೆಲುಗಿನ ಖ್ಯಾತ ನಟ ಪ್ರಭಾಸ್ ಅಭಿನಯದ ʼಆದಿಪುರುಷ್ʼ ಸಿನಿಮಾ ಶುಕ್ರವಾರ ಜಗತ್ತಿನಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ವಿವಾದಾತ್ಮಕ ಸಂಭಾಷಣೆಯ ಕಾರಣಕ್ಕೆ ನೇಪಾಳದಲ್ಲಿ ಈ ಚಿತ್ರದ ಪ್ರದರ್ಶನಗಳು ರದ್ದಾಗಿವೆ.
ರಾಮಾಯಣದ ಕಥೆಯನ್ನು ಆಧರಿಸಿ ತೆರೆಗೆ ಬಂದಿರುವ ʼಆದಿಪುರುಷ್ʼ ಸಿನಿಮಾದಲ್ಲಿ ʼಸೀತೆ ಭಾತರದ ಮಗಳುʼ ಎಂಬ ಸಂಭಾಷಣೆ ಇದೆ. ಸದ್ಯ ಈ ಸಂಭಾಷಣೆಯೇ ನೇಪಾಳಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕಟ್ಮಂಡು ಸೇರಿದಂತೆ ನೇಪಾಳದೆಲ್ಲೆಡೆ ಚಿತ್ರದ ಪ್ರದರ್ಶನವನ್ನು ರದ್ದುಪಡಿಸಲಾಗಿದೆ.
ನೇಪಾಳದ ರಾಜಧಾನಿ ಕಟ್ಮಂಡುವಿನ ಮೇಯರ್ ಬಾಲೆಂದ್ರ ಶಾ ಸಾಮಾಜಿಕ ಜಾಲತಾಣಗಳಲ್ಲಿ ʼಆದಿಪುರುಷ್ʼ ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದು, “ಜಾನಕಿ ಭಾರತದವಳಲ್ಲ, ಆಕೆ ನೇಪಾಳದ ಮಗಳು. ʼಆದಿಪುರುಷ್ʼ ಸಿನಿಮಾದಿಂದ ವಿವಾದಾತ್ಮಕ ಸಂಭಾಷಣೆಯನ್ನು ತೆಗೆದು ಹಾಕದ ಹೊರತು ಕಟ್ಮಂಡುವಿನಲ್ಲಿ ಯಾವುದೇ ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ನೇಪಾಳದ ಚಲನಚಿತ್ರ ಸೆನ್ಸಾರ್ ಮಂಡಳಿ ಕೂಡ ʼಆದಿಪುರುಷ್ʼ ಚಿತ್ರತಂಡಕ್ಕೆ ನೋಟಿಸ್ ನೀಡಿದೆ. “ಸಿನಿಮಾದಿಂದ ವಿವಾದಾತ್ಮಕ ಸಂಭಾಷಣೆಯನ್ನು ತೆಗೆದು ಹಾಕುವ ವರೆಗೂ ನೇಪಾಳದಲ್ಲಿ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ” ಎಂದು ತಿಳಿಸಿದೆ.