ತೆಲುಗಿನ ಸ್ಟಾರ್ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಹೈದರಾಬಾದ್‌ನ ಥಿಯೇಟರ್‌ನಲ್ಲಿ ಈ ಸಿನಿಮಾ ವೀಕ್ಷಣೆ ವೇಳೆ ಪ್ರೇಕ್ಷಕರೊಬ್ಬರ ಮೇಲೆ ಹನುಮ ಭಕ್ತರು ಎಂದು ಹೇಳಿಕೊಂಡ ಗುಂಪಿನವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ರಾಮಾಯಣದ ಕಥೆಯನ್ನು ಆಧರಿಸಿರುವ ಆದಿಪುರುಷ್ ಸಿನಿಮಾ ಪ್ರದರ್ಶಿಸುವ ಎಲ್ಲ ಥಿಯೇಟರ್‌ಗಳಲ್ಲಿ ʼಹನುಮಂತʼನಿಗಾಗಿ ಒಂದು ಸೀಟನ್ನು ಕಾಯ್ದಿರಿಸಲು ಚಿತ್ರದ ನಿರ್ದೇಶಕ ಓಂ ರಾವತ್ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕರಿಗೆ ಮನವಿ ಮಾಡಿದ್ದರು. ಅದರಂತೆ ಎಲ್ಲ ಥಿಯೇಟರ್‌ಗಳಲ್ಲೂ ಹನುಮಂತನಿಗಾಗಿ ಒಂದು ಸೀಟನ್ನು ಖಾಲಿ ಬಿಡಲಾಗಿತ್ತು. ಹೈದರಾಬಾದ್‌ನ ʼಬ್ರಮರಾಂಭʼ ಥಿಯೇಟರ್‌ನಲ್ಲಿ ಹೀಗೆ ಖಾಲಿ ಇದ್ದ ಸೀಟಿನಲ್ಲಿ ಪ್ರೇಕ್ಷಕನೋರ್ವ ತಿಳಿಯದೆ ಕುಳಿತುಕೊಂಡಿದ್ದಕ್ಕಾಗಿ ಹನುಮ ಭಕ್ತರು ಎಂದು ಹೇಳಿಕೊಂಡವರು ಆತನನ್ನು ಮನಬಂದಂತೆ ಥಳಿಸಿದ್ದಾರೆ.
ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಘಟನೆಯ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಹಲವರು ಗುಂಪಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಕೆಲವರು ಗೊಂದಲವನ್ನು ಬಗೆ ಹರಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಇನ್ನೊಂದೆಡೆ ʼಆದಿಪುರುಷ್ʼ ಸಿನಿಮಾ ನೋಡಿದ ಬಳಿಕ ಮಾಧ್ಯಮಗಳಿಗೆ ತನ್ನ ಅಭಿಪ್ರಾಯ ಹೇಳುತ್ತಿದ್ದ ಪ್ರೇಕ್ಷಕನ ಮೇಲೂ ಪ್ರಭಾಸ್ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲ್ಲೆ ನಡೆಸಿದವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ʼಬ್ರಮರಾಂಭʼ ಥಿಯೇಟರ್ ಮಾತ್ರವಲ್ಲದೆ, ದೇಶಾದ್ಯಂತ ಹಲವು ಥಿಯೇಟರ್‌ಗಳಲ್ಲಿ ʼಹನುಮಂತʼನಿಗಾಗಿ ಕಾಯ್ದಿಸಿಲಾಗಿರುವ ಸೀಟುಗಳಿಗೆ ಪೂಜೆ ಸಲ್ಲಿಸಿ ನಂತರ ʼಆದಿಪುರುಷ್ʼ ಸಿನಿಮಾ ಪ್ರದರ್ಶನ ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಸಿನಿಮಾ ನೋಡಿರುವ ಪ್ರಭಾಸ್ ಅಭಿಮಾನಿಗಳು, “ಚಿತ್ರದಲ್ಲಿ ನಿರೂಪಣೆ ಸರಿ ಇಲ್ಲ, ಗ್ರಾಫಿಕ್ಸ್ ಕೂಡ ಹೇಳಿಕೊಳ್ಳುವ ಮಟ್ಟಿಗಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ