ಏಪ್ರಿಲ್ 30ರಂದು ಸಲ್ಮಾನ್ ಖಾನ್ ಕೊಲ್ಲುವುದಾಗಿ ಬೆದರಿಕೆ
ಪೊಲೀಸರ ಎದುರು ಗೋರಕ್ಷಕನೆಂದು ಪರಿಚಯಿಸಿಕೊಂಡ ವ್ಯಕ್ತಿ
ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ಗೆ ದುಷ್ಕರ್ಮಿಗಳು ಮತ್ತೆ ಜೀವ ಬೆದರಿಕೆ ಹಾಕಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟನ ಆಪ್ತ ಸಹಾಯಕರಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಇ-ಮೇಲ್ನಲ್ಲಿ ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನಕ್ಕೊಳಗಾದ ಬೆನ್ನಲ್ಲೇ ಮತ್ತೊಂದು ಬೆದರಿಕೆ ಕರೆ ಬಂದಿದೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮುಂಬೈನ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದ ರಾಜಸ್ತಾನ ಮೂಲದ ರಾಕಿ ಭಾಯ್ ಎಂಬಾತ ತಾನು ಗೋ ರಕ್ಷಕ ಎಂದು ಪರಿಚಯಿಸಿಕೊಂಡಿದ್ದಾನೆ. ಜೊತೆಗೆ ಏಪ್ರಿಲ್ 30ರಂದು ಸಲ್ಮಾನ್ ಖಾನ್ರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಂಬೈ ಪೊಲೀಸರು, “ಕರೆ ಮಾಡಿದ್ದ ವ್ಯಕ್ತಿ ತನ್ನನ್ನು ರಾಕಿ ಭಾಯ್ ಎಂದು ಪರಿಚಯಿಸಿಕೊಂಡಿದ್ದಾನೆ. ಇದೇ ಏಪ್ರಿಲ್ 30ರಂದು ನಟನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದೇವೆ” ಎಂದಿದ್ದಾರೆ.
ಕಳೆದ ಮಾರ್ಚ್ನಲ್ಲಿ ಇದೇ ರಾಜಸ್ತಾನದ ಜೋಧ್ಪುರ ಮೂಲದ ಧಾಕಡ್ ರಾಮ್ ಬಿಷ್ಣೋಯಿ, ಸಲ್ಮಾನ್ ಅವರ ಆಪ್ತ ಸಹಾಯಕ ಪ್ರಶಾಂತ್ ಗುಂಜಾಲ್ಕರ್ಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ರವಾನಿಸಿದ್ದ. ಇದಾದ ಕೆಲವೇ ದಿನಕ್ಕೆ ರಾಜಸ್ತಾನ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ಜೋಧ್ಪುರ ಬಳಿಯ ರೋಹಿಚಾ ಕಲನ್ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದರು. ಧಾಕಡ್ ರಾಮ್ ವಿಚಾರಣೆ ನಡೆಯುತ್ತಿರುವಾಗಲೇ ಸಲ್ಮಾನ್ ಖಾನ್ಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿರುವುದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ‘ಚೆನ್ನೈ ಎಕ್ಸ್ಪ್ರೆಸ್’ ನೆನಪಿಸುವ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಟ್ರೈಲರ್
ಏಪ್ರಿಲ್ 21ರಂದು ಸಲ್ಮಾನ್ ಖಾನ್ ನಟನೆಯ ಬಹು ನಿರೀಕ್ಷಿತ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾ ತೆರೆಗೆ ಬರಲಿದೆ. ಜೀವ ಬೆರಿಕೆಯ ನಡುವೆಯೇ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಅವರು ಇತ್ತೀಚೆಗೆ ವಿದೇಶದಿಂದ ದುಬಾರಿ ಬೆಲೆಯ ಬುಲೆಟ್ ಪ್ರೂಫ್ ಕಾರನ್ನು ಆಮದು ಮಾಡಿಸಿಕೊಂಡಿದ್ದು, ಅದರಲ್ಲೇ ಸಂಚರಿಸುತ್ತಿದ್ದಾರೆ. ಮುಂಬೈ ಪೊಲೀಸರು ಸಲ್ಮಾನ್ ಖಾನ್ ಮತ್ತು ಕುಟುಂಬಸ್ಥರಿಗೆ ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ.