ಕಾವೇರಿ ಹೋರಾಟದ ಟೈಮಲ್ಲಿ ಜಡೆಮಾಯಸಂದ್ರ ಜಗ್ಗೇಶಿಯ ಸ್ಕ್ಯಾನಿಂಗು..!

Date:

Advertisements
ಎಷ್ಟೋ ಜನ ಜೀವನವಿಡೀ ಶ್ರಮಿಸಿದರೂ ಸಿಗದ ರಾಜಕೀಯ ಪದವಿಗಳು ಅನಾಯಾಸವಾಗಿ ಸಿಕ್ಕಿದ್ದರೂ ಜಗ್ಗೇಶಿ ಕನ್ನಡಿಗರು ನೆನಪಿಟ್ಟುಕೊಳ್ಳುವಂತಹ ಒಂದೇ ಒಂದು ಕೆಲಸ ಮಾಡಿದ ಉದಾಹರಣೆಯಿಲ್ಲ. ಕರ್ನಾಟಕದ ಮೂಲೆ ಮೂಲೆಯ ಜನ ಕಾವೇರಿಗಾಗಿ ಬೀದಿಗಿಳಿದು ಹೋರಾಡುತ್ತಿರುವಾಗ ಜಗ್ಗೇಶಿ ಸ್ಕ್ಯಾನಿಂಗು ಅನ್ನುತ್ತಿದ್ದಾರೆ.

ಕಾವೇರಿ ನೀರಿಗಾಗಿ ಕನ್ನಡಿಗರು ಬೀದಿಗಿಳಿದು ಹೋರಾಡುತ್ತಿದ್ದಾರೆ. ವಾರದಲ್ಲಿ ಎರಡು ಬಾರಿ ಬಂದ್- ಒಮ್ಮೆ ಬೆಂಗಳೂರು ಬಂದ್, ಮತ್ತೊಮ್ಮೆ ಕರ್ನಾಟಕ ಬಂದ್- ಕೂಡ ಮಾಡಲಾಗಿದೆ. ಕಾವೇರಿ ಹೋರಾಟದ ಬಗ್ಗೆ ಮೊದಲು ಸಿನಿಮಾದವರು ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಎಂದಿನಂತೆ, ಹೋರಾಟಗಾರರು ಸಿನಿಮಾದವರನ್ನು ಈ ಬಗ್ಗೆ ತರಾಟೆಗೆ ತೆಗೆದುಕೊಂಡರು. ನಂತರ ಬೀದಿಗಿಳಿದ ಚಿತ್ರರಂಗದವರು, ಅವರವರ ನಾಲೆಡ್ಜ್‌ಗೆ ತಕ್ಕಂತೆ, ಅವರವರ ಸ್ಟಾರ್‌ಡಮ್‌ಗೆ ತಕ್ಕಂತೆ ಹೇಳಿಕೆಗಳನ್ನು ಕೊಟ್ಟರು. ಕೆಲವರು ಕಾವೇರಿ ವಿವಾದವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗದೇ ತೆರೆಯ ಮೇಲೆ ಡೈಲಾಗ್‌ ಹೊಡೆದಂತೆ, ವೇದಿಕೆಯಲ್ಲೂ ಡೈಲಾಗ್ ಹೊಡೆದು ಹೋದರು.

ಇಷ್ಟೆಲ್ಲ ನಡೆಯುತ್ತಿದ್ದರೂ, ಪಾರ್ಟ್ ಟೈಮ್ ಸಂಸದ, ಫುಲ್ ಟೈಮ್ ನಟ ಜಗ್ಗೇಶ್ ಉರುಫ್ ಜಡೆಮಾಯಸಂದ್ರ ಜಗ್ಗೇಶಿ ಮಾತ್ರ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ.

ಜಗ್ಗೇಶಿ ರಾಜ್ಯಸಭಾ ಸದಸ್ಯರು. ಕನ್ನಡ ನಾಡು, ನುಡಿ, ಕಾವೇರಿ ತಾಯಿ ಇತ್ಯಾದಿಗಳ ಬಗ್ಗೆ ತಮ್ಮ ಸಿನಿಮಾಗಳಲ್ಲಿ ಪುಂಖಾನುಪುಂಖ ಡೈಲಾಗ್ ಹೊಡೆದವರು. ಜೊತೆಗೆ ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸಲು ಆಗಿಂದಾಗ್ಗೆ ನಾಡು, ನುಡಿಗಳ ಬಗ್ಗೆ ಎಮೋಷನಲ್‌ ಆಗಿ ವಿಚಿತ್ರವಾದ ಟ್ವೀಟ್‌ಗಳನ್ನು ಮಾಡುವವರು. ಅಂಥ ಜಗ್ಗೇಶಿ ಕಾವೇರಿ ಹೋರಾಟದಲ್ಲಿ ಕಾಣಿಸಿಕೊಳ್ಳದೇ ಇದ್ದುದು ಯಾಕೆ?     

Advertisements

ಸ್ಟಾರ್ ಆದ ದರ್ಶನ್‌ರನ್ನೇ ಬಿಡದ ಹೋರಾಟಗಾರರು ಜಗ್ಗೇಶ್‌ರನ್ನು ಬಿಡುವರೇ? ಕನ್ನಡಿಗರು ತಮ್ಮನ್ನು ಗುಮ್ಮುವುದು (ಅವರದೇ ಡೈಲಾಗ್‌) ಗ್ಯಾರಂಟಿ ಎಂದುಕೊಂಡ ಜಗ್ಗೇಶ್‌, ಆಗ ಎರಡು ಫೋಟೋಗಳನ್ನು ಬಿಡುಗಡೆ ಮಾಡಿದರು. ಅವೆರಡೂ ಅವರು MRI ಸ್ಕ್ಯಾನಿಂಗ್‌ಗೆ ಒಳಗಾದ ಚಿತ್ರಗಳು. ಜೊತೆಗೆ ತನಗೆ L4L5 Compression ಆಗಿದೆ. ಹಾಗಾಗಿ ಎರಡು ವಾರಗಳ ಚಿಕಿತ್ಸೆ ಮತ್ತು ಬೆಡ್‌ ರೆಸ್ಟ್‌ ಕಡ್ಡಾಯ ಎಂದು ವೈದ್ಯರು ಸೂಚಿಸಿದ್ದಾರೆ ಎನ್ನುವ ಸಮಜಾಯಿಷಿ.

ಅವರಿಗೆ ನಿಜವಾಗಿಯೂ ಆರೋಗ್ಯ ಸಮಸ್ಯೆಯಾಗಿದ್ದರೆ, ಅವರು ಕಾವೇರಿ ಹೋರಾಟಕ್ಕೆ ಬರಲೇಬೇಕಿತ್ತು ಎಂದು ಯಾರೂ ಹೇಳಲು ಸಾಧ್ಯವಿರಲಿಲ್ಲ. ಆದರೆ, ಅವರು ಹಂಚಿಕೊಂಡಿರುವ ಫೋಟೋಗಳೇ ಜನರ ಅನುಮಾನಕ್ಕೆ ಕಾರಣವಾಗಿವೆ. ಸ್ಕ್ಯಾನಿಂಗ್ ಯಂತ್ರದಲ್ಲಿ ಮುಖ ಕಾಣುವಂತೆ ಮಲಗಿರುವ ಜಗ್ಗೇಶಿಯ ಕೈಯಲ್ಲಿ ಉಂಗುರ ಇದೆ, ಕಿವಿಯಲ್ಲಿ ಓಲೆ ಇದೆ. ಜೊತೆಗೆ ಅವರ ಮೈಮೇಲೆ ಸ್ಕ್ಯಾನಿಂಗ್‌ಗೆ ಕರೆದುಕೊಂಡು ಹೋಗುವಾಗ ರೋಗಿಗೆ ಹಾಕುವಂಥ ಡ್ರೆಸ್ಸೇ ಇಲ್ಲ. ಹೀಗಾಗಿ ತಮ್ಮ ಕಿವಿ ಮೇಲೆ ಜಗ್ಗೇಶಿ ಹೂವು ಇಡೋದಕ್ಕೆ ಮಾಡಿರೋ ಪ್ರಯತ್ನ ಇದು ಎಂದು ಅವರ ಅಭಿಮಾನಿಗಳಾದಿಯಾಗಿ ಕನ್ನಡಿಗರು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಚೆನ್ನಾಗಿ ಗುಮ್ಮುತ್ತಿದ್ದಾರೆ.  

ಕಾವೇರಿ ವಾರದ ಹಿಂದೆ ಹುಟ್ಟಿಕೊಂಡ ಸಮಸ್ಯೆ ಅಲ್ಲ; ವಾರದ ನಂತರ ಬಗೆಹರಿಯುವುದೂ ಇಲ್ಲ. ಒಬ್ಬ ಎಂಪಿ ಆಗಿ, ನಾಡು ನುಡಿ ಬಗ್ಗೆ ಭಾಷಣ ಕೆತ್ತುವ ನಟನಾಗಿ ಜಗ್ಗೇಶಿ ಈ ಹಿಂದೆಯೂ ಈ ಸಂಬಂಧ ಏನೂ ಮಾಡಿಲ್ಲ; ಮುಂದೆಯೂ ಏನಾದರು ಮಾಡ್ತಾರೆ ಎನ್ನುವ ಭರವಸೆಯೂ ಇಲ್ಲ. ಹೋರಾಟದ ಬಿಸಿ ಆರುವವರೆಗೆ ಕೊಂಚ ‘ರೆಸ್ಟ್’ ಮಾಡಿ ನಂತರ ಜನರ ಮುಂದೆ ಹೋಗೋಣ ಎಂದು ನವರಸ ನಟನಾ ಚತುರ ಜಗ್ಗೇಶಿ ತೀರ್ಮಾನಿಸಿರಬಹುದು ಎನ್ನುವ ಗುಮಾನಿ ಅನೇಕರಲ್ಲಿದೆ.

‘ಹಿಂದೆ ಕಾವೇರಿ ಹೋರಾಟದ ಸಂದರ್ಭದಲ್ಲಿ ಅಂಬರೀಶ್ ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ರಾಜೀನಾಮೆಯನ್ನೇ ಕೊಟ್ಟಿದ್ದರು’ ಎಂದು ಮಾಜಿ ನಟಿ, ಹಾಲಿ ಮಂಡ್ಯ ಸಂಸದೆ ಸುಮಲತಾ ಮೊನ್ನೆ ಪತ್ರಕರ್ತರಿಗೆ ನೆನಪಿಸಿದ್ದಾರೆ. ಕನ್ನಡಿಗರು ನೆನೆಯಲು ಇಷ್ಟಪಡದ ಆ ರಾಜಕೀಯ ಪ್ರಹಸನವನ್ನು ಸುಮಲತಾ ಮೇಡಂ ನೆನಪಿಸಿಬಿಟ್ಟಿದ್ದಾರೆ. ಪಾಪ, ಮೇಡಂ ರಾಜಕೀಯಕ್ಕೆ ಹೊಸಬರು. ಸಿನಿಮಾಗಳಲ್ಲಿ ನಿರ್ದೇಶಕರು ಹೇಳಿಕೊಟ್ಟ ಡೈಲಾಗ್‌ಗಳನ್ನು ಉರು ಹೊಡೆದು ಒಪ್ಪಿಸುತ್ತಿದ್ದ ಸುಮಲತಾ ಮೇಡಂಗೆ ಈ ರಾಜಕೀಯ ಇತಿಹಾಸ ಇವೆಲ್ಲ ಅರ್ಥವಾಗಲ್ಲ. ಮೇಡಂ ಹೇಳಿದಂತೆ, ಆಗ ಅಂಬರೀಶ್ ಅವರು ರಾಜೀನಾಮೆ ಕೊಟ್ಟಿದ್ದರು, ನಿಜ. ಆದರೆ, ಆಗ ಅಂಬರೀಶ್ ನಿಯಮಾವಳಿ ಪ್ರಕಾರ ರಾಜೀನಾಮೆ ಪತ್ರ ಸಲ್ಲಿಸಿರಲೇ ಇಲ್ಲ. ಅದೂ ಅವರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ಬದಲಿಗೆ ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದ್ದರು. ಹೀಗಾಗಿ ಅವರ ರಾಜೀನಾಮೆ ಅಂಗೀಕಾರವಾಗಿರಲೇ ಇಲ್ಲ. ಹಾಗೆಂದು ಅಂಬಿ ನಂತರ ಸಂಸತ್‌ಗೆ ಹೋಗಲೂ ಇಲ್ಲ. ಅವರ ರಾಜೀನಾಮೆ ಕಥೆ ಏನಾಯಿತು ಎನ್ನುವುದು ಬೇರೆಯವರಿಗಿರಲಿ, ಸ್ವತಃ ಅಂಬರೀಶ್ ಅವರಿಗೂ ಗೊತ್ತಿರಲಿಲ್ಲ. ಹಾಗೇ ಅವರ ಅವಧಿ ಮುಗಿದುಹೋಗಿತ್ತು. ಸಂಕಷ್ಟದ ಕಾಲದಲ್ಲಿ ಸಂಸತ್‌ನಲ್ಲಿ ಕನ್ನಡರಿಗರ ಪರವಾಗಿ ಹೋರಾಡಬೇಕಿದ್ದ ಅಂಬಿಯ ಸಂಸದ ಸ್ಥಾನ ಹೀಗೆ ವ್ಯರ್ಥವಾಗಿಹೋಗಿತ್ತು. ಈಗ ಸುಮಲತಾ ಮೇಡಂ ಕೂಡ, ತಮ್ಮ ಅವಧಿ ಎಂಟತ್ತು ತಿಂಗಳಿರುವಾಗ, ಕಾವೇರಿ ಗಲಾಟೆ ತಾರಕಕ್ಕೇರಿರುವಾಗ, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವಾಗ- ಮತ್ತದೇ ರಾಜೀನಾಮೆಯ ನಾಟಕವಾಡುತ್ತಿದ್ದಾರೆ. ಜಗ್ಗೇಶಿ ಕೂಡ ಅಂಥದ್ದೇ ನಾಟಕ ಮಾಡುತ್ತಿದ್ದಾರೆಯೇ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ: ಕಾವೇರಿ ವಿವಾದ | ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್‌

ಜಗ್ಗೇಶಿ ತಾವು ತುರುವೇಕೆರೆಯ ಜಡೆಮಾಯಸಂದ್ರ ಎನ್ನುವ ಊರಿನಿಂದ ಬಂದ ಬಡವ ಎಂದು ಸದಾ ಹೇಳಿಕೊಳ್ಳುತ್ತಿರುತ್ತಾರೆ. ಅದೇ ಕಾರಣಕ್ಕಾಗಿ ತುರುವೇಕೆರೆಯ ಜನ 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ ಅವರನ್ನು ಗೆಲ್ಲಿಸಿದ್ದರು. ಜನರ ಪ್ರೀತಿಗೆ, ಪಕ್ಷದ ವಿಶ್ವಾಸಕ್ಕೆ ತಿಲಾಂಜಲಿಯಿಟ್ಟಿದ್ದ ಜಗ್ಗೇಶಿ, ಬಿಜೆಪಿಗೆ ನೆಗೆದಿದ್ದರು. ರಾಜ್ಯದಲ್ಲಿ ಆಪರೇಷನ್‌ ಕಮಲದ ಮೊದಲ ಬ್ಯಾಚ್‌ನ ಕ್ಯಾಂಡಿಡೇಟ್‌ಗಳಲ್ಲಿ ಜಗ್ಗೇಶಿಯೂ ಒಬ್ಬರು. ಅದರ ನಂತರ ಯಾವ ಚುನಾವಣೆಯನ್ನೂ ಗೆಲ್ಲಲು ಅವರಿಗೆ ಸಾಧ್ಯವಾಗಿಯೇ ಇಲ್ಲ. ವಾಸ್ತವವಾಗಿ, ಅವರು ರಾಜಕೀಯವನ್ನು ಮತ್ತು ಜನಸೇವೆಯನ್ನು ಎಂದೂ ಗಂಭೀರವಾಗಿ ತೆಗೆದುಕೊಂಡವರೇ ಅಲ್ಲ. ಇಷ್ಟಾದರೂ ಕೆಎಸ್ಸಾರ್ಟಿಸಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ, ರಾಜ್ಯಸಭೆ ಸದಸ್ಯ ಇಷ್ಟೆಲ್ಲ ಪದವಿ ದಕ್ಕಲು ಅವರು ಪ್ರಬಲ ಒಕ್ಕಲಿಗ ಜಾತಿಗೆ ಸೇರಿದವರು ಎನ್ನುವುದು ಮುಖ್ಯ ಕಾರಣ. ಎಷ್ಟೋ ಜನ ಹಗಲು ರಾತ್ರಿ ಕನಸುವ, ಜೀವನವಿಡೀ ಶ್ರಮಿಸಿದರೂ ಸಿಗದ ಪದವಿ, ಹುದ್ದೆಗಳು ಅನಾಯಾಸವಾಗಿ ಸಿಕ್ಕಿದ್ದರೂ ಜಗ್ಗೇಶಿ ಕನ್ನಡಿಗರು ನೆನಪಿಟ್ಟುಕೊಳ್ಳುವಂತಹ ಒಂದೇ ಒಂದು ಕೆಲಸ ಮಾಡಿದ ಉದಾಹರಣೆಯಿಲ್ಲ. ಕರ್ನಾಟಕದ ಮೂಲೆ ಮೂಲೆಯ ಜನ ಕಾವೇರಿಗಾಗಿ ಬೀದಿಗಿಳಿದು ಹೋರಾಡುತ್ತಿರುವಾಗ ಜಗ್ಗೇಶಿ ಸ್ಕ್ಯಾನಿಂಗು ಅನ್ನುತ್ತಿದ್ದಾರೆ.

ಜಗ್ಗೇಶಿಯ ಈ ಬೃಹನ್ನಾಟಕ ನೋಡಿದ ಜಡೆಮಾಯಸಂದ್ರದ ಜನ, ಇನ್ನು ಜಗ್ಗೇಶಿ ತಮ್ಮ ಊರಿನ ಹೆಸರು ಎತ್ತಬಾರದು ಎಂದು ಫರ್ಮಾನು ಹೊರಡಿಸಲು ಹೊರಟಿದ್ದಾರೆ ಎನ್ನುವುದು ಕೇವಲ ಸುಳ್ಳು ಸುದ್ದಿಯೇ? ನವರಸ ನಟನಾ ಚತುರನೇ ಇದನ್ನು ಪತ್ತೆ ಹಚ್ಚಿ ಹೇಳಬೇಕು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. Neevu E Dina badku.. Congi Dina antha hesritkolli you are just mouth piece of congi manehal governament.
    Keep supporting this jihadi government like this all the best

  2. Paradarshakavadha lekana. Jaggesh obba avakashavadi, Ambarish thanagi sikka avakasa horadalu upayogisa kollalilla, anukampda aleyalli gedda sumalatha ge role/responsibility/work ethics yavudhara parijgyanna illa matthu eemadhya obba incompetent, inexperienced, unfit MP Ramya nu jana Jai andbitru.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X