ಅಂಧಾಭಿಮಾನ ಎನ್ನುವುದು ನಟ ದರ್ಶನ್ ಅಭಿಮಾನಿಗಳಿಗೆ ಸೀಮಿತವಾಗಿಲ್ಲ. ತಮ್ಮ ನೆಚ್ಚಿನ ನಟ ನೀಡಿದ ಹೇಳಿಕೆಗಳು ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವ ಇತರ ಅಭಿಮಾನಿಗಳೂ ಇದ್ದಾರೆ. ಆದರೆ ಒಂದು ಕೊಲೆಯನ್ನು ಸಮರ್ಥಿಸಿಕೊಳ್ಳುವುದು, ಅವರೇ ನಮ್ಮ ದೇವರು ಎಂದು ಘೋಷಣೆ ಕೂಗುವುದು ಜನರು ಯಾವ ಹೀನಾಯ ಮನಸ್ಥಿತಿಗೆ ತಲುಪುತ್ತಿದ್ದಾರೆ ಎಂಬುದರ ಸೂಚಕ.
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೂನ್ ತಿಂಗಳಲ್ಲಿ ಬಂಧಿಸಲಾಗಿದ್ದ ನಟ ದರ್ಶನ್‌ಗೆ ಬುಧವಾರ (ಅಕ್ಟೋಬರ್ 30) ಜಾಮೀನು ಲಭಿಸಿದೆ. ಆರೋಗ್ಯ ಸಮಸ್ಯೆಯನ್ನು ಆಧರಿಸಿ ಕರ್ನಾಟಕ ಹೈಕೋರ್ಟ್ ಆರೋಪಿ ನಟ ದರ್ಶನ್‌ಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿದ್ದು, ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆಯಾಗಿದ್ದಾರೆ. ಇವೆಲ್ಲವುದರ ನಡುವೆ ಹೆಚ್ಚು ಸುದ್ದಿಯಾಗುತ್ತಿರುವುದು ದರ್ಶನ್ ಅಂಧಾಭಿಮಾನಿಗಳ ಚೀರಾಟ, ಹುಚ್ಚಾಟ.
ನಟ, ನಟಿ, ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳ ಮೇಲೆ ಅಭಿಮಾನ ಇರುವುದು ಸಾಮಾನ್ಯ. ಆದರೆ ಅದು ಅತಿರೇಕವಾದಾಗ ಅದನ್ನು ಯಾವುದೇ ನಿಜವಾದ ಅಭಿಮಾನಿ ಸಮರ್ಥಿಸಿಕೊಳ್ಳಲಾರ. ದರ್ಶನ್ ಕೈದಿ ಸಂಖ್ಯೆಯನ್ನು ಟ್ಯಾಟೂ ಹಾಕಿಸಿಕೊಳ್ಳುವುದು, ಮಕ್ಕಳಿಗೆ ಅದೇ ಸಂಖ್ಯೆಯ ಬಟ್ಟೆ ತೊಡಿಸುವುದು ಹೀಗೆ ಅಂಧಾಭಿಮಾನಿಗಳ ಹುಚ್ಚಾಟಕ್ಕೆ ಕೊನೆಯಿಲ್ಲ.
ಇದನ್ನು ಓದಿದ್ದೀರಾ? ಕೊಲೆ ಪ್ರಕರಣದಲ್ಲಿ ಜಾಮೀನು | ನಟ ದರ್ಶನ್ ಜೈಲಿನಿಂದ ಬಿಡುಗಡೆ
ನಿರಂತರವಾಗಿ ಹಿಂಸೆಗೆ ಒಳಗಾದ ವ್ಯಕ್ತಿಯೋರ್ವ ತಿರುಗಿಬಿದ್ದು ಪ್ರತೀಕಾರವಾಗಿ ಕೊಲೆ ಮಾಡಿದಂತೆ ಸಿನಿಮಾದಲ್ಲಿ ತೋರಿಸಿದಾಗ ನಾವು ತಿಳಿಯದೆಯೇ ಹಿಂಸಾಪ್ರಿಯರಾಗುತ್ತೇವೆ. ಆದರೆ ಸಿನಿಮಾ ಲೋಕದಿಂದ ಹೊರಬಂದ ಬಳಿಕ ಅದು ನಮಗೊಂದು ಸಿನಿಮಾವಾಗಷ್ಟೇ ಕಾಣಬೇಕು, ಕಾಣುತ್ತದೆ. ಆದರೆ ಕುರುಡು ಅಭಿಮಾನವಿದ್ದಾಗ ಆ ನಟ ದೇವರಾಗಿ ಕಾಣುತ್ತಾನೆ, ಆತ ವೈಯಕ್ತಿಕ ಜೀವನದಲ್ಲಿ ಮಾಡಿದ ತಪ್ಪೆಲ್ಲವೂ ಸರಿ ಎಂಬಂತೆ ಗೋಚರಿಸುತ್ತದೆ.
ದರ್ಶನ್ ಹಿಂಬಾಲಕರ ಅತಿರೇಕ ಒಂದೆರಡಲ್ಲ!
ದರ್ಶನ್ ವಿರುದ್ಧ ಪ್ರಬಲವಾದ ಸಾಕ್ಷಿಗಳು ಸಿಗುವುದಕ್ಕೂ ಮುನ್ನ ನಮ್ಮ ನಟ ತಪ್ಪು ಮಾಡಿಲ್ಲ ಎಂದು ಹೇಳುವುದು ತಮ್ಮ ನೆಚ್ಚಿನ ನಟನ ಮೇಲೆ ಅಭಿಮಾನಿಗಳಿಗೆ ಇರುವ ನಂಬಿಕೆ ಎಂದು ಹೇಳಬಹುದು. ಆದರೆ “ಒಂದು ಕೊಲೆ ಮಾಡಿದ್ದರಲ್ಲಿ ತಪ್ಪೇನಿದೆ” ಎಂದು ಹೇಳುವುದು, “ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ ರೇಣುಕಸ್ವಾಮಿ ಕೊಲೆ ಮಾಡಿ ದರ್ಶನ್ ಒಳ್ಳೆಯ ಕೆಲಸ ಮಾಡಿದರು” ಎಂದು ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಎಷ್ಟು ಸರಿ?
ಇದನ್ನು ಓದಿದ್ದೀರಾ? ರೇಣುಕಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು
ಇವೆಲ್ಲವೂ ಒಂದೆಡೆ ಇಟ್ಟು ದರ್ಶನ್ ಕುರುಡು ಅಭಿಮಾನಿಗಳ ಅತಿರೇಕವನ್ನು ನಾವು ಒಮ್ಮೆ ನೆನಪಿಸಿಕೊಳ್ಳೋಣ ಎಂದರೆ ಉದಾಹರಣೆಗಳು ಹಲವಿವೆ. ಮಾಧ್ಯಮಕ್ಕೆ ದರ್ಶನ್ ಕೆಟ್ಟದಾಗಿ ಬೈದಿರುವ ಆಡಿಯೋವನ್ನೇ ಡಿಜೆ ಹಾಡಾಗಿ ಪರಿವರ್ತಿಸಿ ಗಣೇಶನ ಹಬ್ಬದಲ್ಲಿ ಕುಣಿಯುವುದು, ದರ್ಶನ್ ಖೈದಿ ಸಂಖ್ಯೆಯುಳ್ಳ ಬಟ್ಟೆಯನ್ನು ಮಕ್ಕಳಿಗೆ ತೊಡಿಸುವುದು, ದರ್ಶನ್ ಖೈದಿ ಸಂಖ್ಯೆ ಹಚ್ಚೆಯನ್ನು ದೇಹದ ಮೇಲೆ ಹಾಕಿಸಿಕೊಳ್ಳುವುದು, ದೇವಸ್ಥಾನದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡುವುದು, ದರ್ಶನ್ ತಪ್ಪು ಮಾಡಿದವನಿಗೆ ಶಿಕ್ಷೆ ಕೊಟ್ಟ ಎನ್ನುವುದು, ದರ್ಶನ್ ಖೈದಿ ಸಂಖ್ಯೆಯೇ ನಮ್ಮ ಲಕ್ಕಿ ನಂಬರ್ ಎನ್ನುವುದು, ದರ್ಶನ್ ಬಿಡುಗಡೆಯಾಗುವವರೆಗೂ ಚಪ್ಪಲಿ ಹಾಕಲ್ಲ ಎನ್ನುವುದು, ದರ್ಶನ್ ನೋಡುವುದಕ್ಕೋಸ್ಕರ ನಾನು ಅವರ ಸಂಸಾರ ಎನ್ನುವುದು, ದರ್ಶನ್ ಬಿಡುಗಡೆ ವೇಳೆ ಜೈಲಿನ ಹೊರಗೆ ಊಟ-ತಿಂಡಿ ಬಿಟ್ಟು ಕಾಯುವುದು, ಜೈಕಾರ ಹಾಕುವುದು, ದರ್ಶನ್ ಬಗ್ಗೆ ಹೇಳಿಕೆ ನೀಡಿದವರಿಗೆ ಜೀವ ಬೆದರಿಕೆ ಹಾಕುವುದು, ಕೆಟ್ಟದಾಗಿ ಬೈಯುವುದು- ಇವೆಲ್ಲವೂ ಅಂಧಾಭಿಮಾನಿಗಳ ಅತಿರೇಕವೇ ಆಗಿದೆ.
ಅಂಧಾಭಿಮಾನ ಎನ್ನುವುದು ನಟ ದರ್ಶನ್ ಅಭಿಮಾನಿಗಳಿಗೆ ಸೀಮಿತವಾಗಿಲ್ಲ. ತಮ್ಮ ನೆಚ್ಚಿನ ನಟ ನೀಡಿದ ಹೇಳಿಕೆಗಳು ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವ ಇತರ ಅಭಿಮಾನಿಗಳೂ ಇದ್ದಾರೆ. ಆದರೆ ಒಂದು ಕೊಲೆಯನ್ನು ಸಮರ್ಥಿಸಿಕೊಳ್ಳುವುದು, ಅವರೇ ನಮ್ಮ ದೇವರು ಎಂದು ಘೋಷಣೆ ಕೂಗುವುದು ಜನರು ಯಾವ ಹೀನಾಯ ಮನಸ್ಥಿತಿಗೆ ತಲುಪುತ್ತಿದ್ದಾರೆ ಎಂಬುದರ ಸೂಚಕ.
ಹಾಗೆ ನೋಡಿದರೆ ಅಂಧ ಭಕ್ತರಿಗೂ, ಅಂಧಾಭಿಮಾನಿಗಳಿಗೂ ವ್ಯತ್ಯಾಸ ಕಾಣುವುದಿಲ್ಲ. ಅಂಧ ಭಕ್ತರು ತಮ್ಮ ರಾಜಕೀಯ ನಾಯಕನನ್ನು ಆರಾಧಿಸುವಾಗ, ಇತ್ತ ಅಂಧಾಭಿಮಾನಿಗಳು ತಮ್ಮ ನೆಚ್ಚಿನ ನಟರ ಗುಂಗಲ್ಲೇ ಕಾಲ ಕಳೆಯುತ್ತಾರೆ. “ಡಿ ಬಾಸ್ ಬರೀ ಒಂದೇ ಕೊಲೆ ಮಾಡಿರುವುದು. ನಮಗೆ ಊಟವೂ ಬೇಡ, ಟೀ ಕೂಡಾ ಬೇಡ, ನಮ್ಮ ಡಿ ಬಾಸ್ ಅನ್ನು ಒಮ್ಮೆ ನೋಡಿದರೆ ಸಾಕು” ಎಂದು ಜೈಲಿನ ಹೊರಗೆ ಹಗಲಿರುಳು ಕಾಯುವುದು ಅಭಿಮಾನಿಗಳ ಅತಿರೇಕವಲ್ಲದೆ ಮತ್ತೇನು? ದರ್ಶನ್ ಅಭಿಮಾನಿಗಳು ಕೂಡಾ ತಪ್ಪನ್ನು ಸಮರ್ಥಿಸುವ ಅಂಧಾಭಿಮಾನಿಗಳಾಗದೆ ಪ್ರಬುದ್ಧ ಅಭಿಮಾನಿಗಳಾಗುವುದು ಯಾವಾಗ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.