ಕನ್ನಡದ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರು ಮಹಾಭಾರತದ ಬಗ್ಗೆ ಬರೆದಿರುವ ‘ಪರ್ವ’ವನ್ನು, ‘ದಿ ಕಾಶ್ಮೀರ್ ಫೈಲ್ಸ್’ನ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿನಿಮಾವನ್ನಾಗಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಇಂದು(ಅ. 21) ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ‘ಪರ್ವ’ ಸಿನಿಮಾದ ‘ಟೈಟಲ್ ಲಾಂಚ್’ ಕಾರ್ಯಕ್ರಮ ನಡೆಸಿರುವ ವಿವೇಕ್ ಅಗ್ನಿಹೋತ್ರಿ, ಎಸ್ ಎಲ್ ಭೈರಪ್ಪ ಮತ್ತವರ ತಂಡ, ಸಿನಿಮಾ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ಅವರು ನನಗೆ ಕರೆ ಮಾಡಿ, ಪರ್ವ ಕಾದಂಬರಿಯನ್ನು ಸಿನಿಮಾ ಮಾಡುವ ವಿಚಾರವಾಗಿ ಎಸ್ಎಲ್ ಭೈರಪ್ಪ ಅವರ ಬಳಿ ಮಾತನಾಡಿ ಎಂದು ನನಗೆ ಅವರು ಸೂಚಿಸಿದ್ದರು. ಅದಕ್ಕೂ ಮುನ್ನ ಮಂಗಳೂರಿನಲ್ಲಿ ಭೈರಪ್ಪ ಅವರ ಸಂದರ್ಶನವನ್ನು ನಾನು ಮಾಡಿದ್ದೆ. ಅವರ ಆಲೋಚನೆಗಳಿಗೆ ನಾನು ಬೆರಗಾಗಿದ್ದೆ. ನನ್ನ ಚಿಂತನೆಗಳು ಕೂಡ ಅವರ ರೀತಿ ಇದೆ ಅನಿಸಿತು. ಅಲ್ಲಿಂದ ನಾನು ಅವರ ಜೊತೆ ಸಂಪರ್ಕ ಬೆಳೆಸಿಕೊಂಡೆ. ನನ್ನ ತಂದೆ ಕೂಡ ಲೇಖಕ ಆಗಿದ್ದರು. ಭೈರಪ್ಪ ಅವರು ನನ್ನ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿದ್ದರು. ತಮ್ಮ ಪರ್ವ ಕೃತಿಗೆ ಸಿನಿಮಾ ರೂಪದಲ್ಲಿ ನಾವು ನ್ಯಾಯ ಒದಗಿಸಬಹುದು ಅಂತ ಅವರಿಗೆ ಅನಿಸಿತು. ಅಲ್ಲಿಂದ ಚರ್ಚೆ ಶುರುವಾಯಿತು’ ಎಂದು ತಿಳಿಸಿದ್ದಾರೆ.
BIG ANNOUNCEMENT:
Is Mahabharat HISTORY or MYTHOLOGY?
We, at @i_ambuddha are grateful to the almighty to be presenting Padma Bhushan Dr. SL Bhyrappa’s ‘modern classic’:
PARVA – AN EPIC TALE OF DHARMA.There is a reason why PARVA is called ‘Masterpiece of masterpieces’.
1/2 pic.twitter.com/BiRyClhT5c
— Vivek Ranjan Agnihotri (@vivekagnihotri) October 21, 2023
‘ನಾನು ಸಾಯೋದಕ್ಕೂ ಮುನ್ನ ಪರ್ವ ಸಿನಿಮಾ ಮಾಡಬೇಕು. ಮಹಾಭಾರತ ಎಂದರೆ ಅದು ಭಾರತದ ಸಾಕ್ಷಿಪ್ರಜ್ಞೆ, ಭೈರಪ್ಪ ಅವರು ಸಾಕಷ್ಟು ಅಧ್ಯಯನ ನಡೆಸಿ ಈ ಕೃತಿ ಬರೆದಿದ್ದಾರೆ. ಈ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದಕ್ಕೆ ಹಾಗೂ ಭೈರಪ್ಪ ಅವರು ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನೂರಾರು ವರ್ಷಗಳ ಕಾಲ ಧರ್ಮದ ಬಗ್ಗೆ ಯಾರಿಗೆ ಯಾವುದೇ ಪ್ರಶ್ನೆ ಇದ್ದರೂ ಸಿನಿಮಾ ಉತ್ತರ ನೀಡುತ್ತದೆ ಎಂಬ ನಂಬಿಕೆ ನನಗಿದೆ. ಪರ್ವ ಸಿನಿಮಾ ಮೂರು ಭಾಗಗಳಲ್ಲಿ ಮೂಡಿಬರಲಿದೆ ‘ ಎಂದು ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.
What is PARVA? Watch. pic.twitter.com/E91Zo1PLbB
— Vivek Ranjan Agnihotri (@vivekagnihotri) October 21, 2023
ಈ ವೇಳೆ ಯಾವಾಗ ಸಿನಿಮಾ ಬಿಡುಗಡೆಯಾಗಬಹುದು ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿವೇಕ್ ಅಗ್ನಿಹೋತ್ರಿ, ಮೂರು ಭಾಗಗಳನ್ನು ನಾವು ಒಮ್ಮೆಲೇ ಶೂಟಿಂಗ್ ಮಾಡಲಿದ್ದೇವೆ. ಆದರೆ ಯಾವಾಗ ಬಿಡುಗಡೆ ಮಾಡುತ್ತೇವೆ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸ್ಕ್ರಿಪ್ಟ್ ಬರೆದ ಬಳಿಕ ಪಾತ್ರದ ಬಗ್ಗೆ ತಿಳಿಸುತ್ತೇವೆ’ ಎಂದು ಹೇಳಿದರು.
ಎಸ್ ಎಲ್ ಭೈರಪ್ಪ ಮಾತನಾಡಿ,ʻʻ 34 ವರ್ಷಗಳ ಹಿಂದೆ ಇದೇ ಹಾಲ್ನಲ್ಲಿ ಮಹಾಭಾರತವನ್ನು ಸಿನಿಮಾವಾಗಿ ನೋಡಿದ್ದೆ. ಪರ್ವ ನಾಟಕವನ್ನು ಪ್ರಕಾಶ್ ಬೆಳವಾಡಿ ನಿರ್ದೇಶಿಸಿ, ನಟನೆ ಸಹ ಮಾಡಿದ್ದರು. ನಿರ್ದೇಶಕ ವಿವೇಕ್ ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಭಾರತಕ್ಕೆ ಮಾತ್ರ ಪರ್ವ ಸಿನಿಮಾ ಸೀಮಿತವಾಗಬಾರದು. ಕನ್ನಡ, ಹಿಂದಿ ಮಾತ್ರವಲ್ಲದೆ ಆಂಗ್ಲ ಭಾಷೆಯಲ್ಲೂ ನನ್ನ ಕಾದಂಬರಿ ಸಿನಿಮಾವಾಗಿ ತೆರೆಗೆ ಬರಬೇಕು. ಪರ್ವ ಕಾದಂಬರಿ ಸಿನಿಮಾವಾಗಿ ಮೂಡಿಬರಲು ವಿವೇಕ್ ಅವರಿಗೆ ನನ್ನ ಒಪ್ಪಿಗೆ ಹಾಗೂ ಹಾರೈಕೆಯಿದೆ. ಪರ್ವ ಕಾದಂಬರಿಯನ್ನು ಈ ಮುಂಚೆ ಸಿನಿಮಾವಾಗಿ ಮಾಡುತ್ತೇವೆ ಎಂದು ಯಾರೂ ಬಂದು ಕೇಳಿರಲಿಲ್ಲ. ಆ ಧೈರ್ಯ ಯಾರಿಗೂ ಇರಲಿಲ್ಲʼʼ ಎಂದರು.
‘ದಿ ಕಾಶ್ಮೀರ್ ಫೈಲ್ಸ್’ ಮೂಲಕ ಸಾಕಷ್ಟು ಹಣ ಮಾಡಿದ್ದ ನಿರ್ದೇಶಕ ಅಗ್ನಿಹೋತ್ರಿ, ಇತ್ತೀಚೆಗೆ ‘ದಿ ವ್ಯಾಕ್ಸಿನ್ ವಾರ್’ ಎಂಬ ಸಿನಿಮಾ ಕೂಡ ಬಿಡುಗಡೆಗೊಳಿಸಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಈ ಸಿನಿಮಾದ ಬಗ್ಗೆ ಮಾತನಾಡಿದ್ದರೂ ಕೂಡ, ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸಲು ವಿಫಲವಾಯಿತು. ಆ ಬಳಿಕ ‘ಪರ್ವ’ವನ್ನು ಕೈಗೆತ್ತಿಕೊಂಡಿದ್ದಾರೆ. ಅಲ್ಲದೇ, ಟ್ವಿಟ್ಟರ್ನಲ್ಲಿ ‘ಪರ್ವ’ ಎಂದರೆ ಏನು ಎಂಬುದನ್ನು ವಿವರಿಸುವಂತಹ ವಿಡಿಯೋವನ್ನು ಕೂಡ ಅವರು ಶೇರ್ ಮಾಡಿದ್ದಾರೆ.
‘ಪರ್ವ’ದ ಲೇಖಕ ಎಸ್.ಎಲ್. ಭೈರಪ್ಪ ಅವರು ‘ಟೈಟಲ್ ಲಾಂಚ್’ ಮಾಡಿದರು. ಈ ವೇಳೆ ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ ಉಪಸ್ಥಿತರಿದ್ದರು.