ಪತ್ರಕರ್ತೆಯ ಕಠಿಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಂದರ್ಶನ ನಿಲ್ಲಿಸಿರುವ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಸಾರ ಮಾಧ್ಯಮ ABC TVಯ ದಕ್ಷಿಣ ಏಷ್ಯಾದ ಪ್ರತಿನಿಧಿ ನಡೆಸಿದ ಸಂದರ್ಶನದ ವೇಳೆ ಈ ರೀತಿಯ ಬೆಳವಣಿಗೆ ನಡೆದಿದೆ.
ಭಾರತದಲ್ಲಿ ಬಾಲಿವುಡ್ ಅನ್ನು ಇತ್ತೀಚಿನ ವರ್ಷಗಳಲ್ಲಿ ‘ಪ್ರೊಪಗಾಂಡ’ವನ್ನಾಗಿ ಬಳಸಲಾಗುತ್ತಿದೆಯೇ? ಎಂಬ ಬಗ್ಗೆ ಆಸ್ಟ್ರೇಲಿಯಾದ ಸುದ್ದಿ ಮಾಧ್ಯಮವು ಸುಮಾರು 30 ನಿಮಿಷಗಳ ಸಾಕ್ಷ್ಯಚಿತ್ರ ರಚಿಸಿತ್ತು. ಇದರಲ್ಲಿ ಬಾಲಿವುಡ್ ನಟಿ ಸ್ವರ ಭಾಸ್ಕರ್, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಹಲವು ಮಂದಿ ಬಾಲಿವುಡ್ ಮಂದಿಯನ್ನು ಮಾತನಾಡಿಸಿದೆ.
ಈ ಸಾಕ್ಷ್ಯಚಿತ್ರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಬಿಜೆಪಿ, ಸಂಘಪರಿವಾರ ಹಾಗೂ ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಹರಡಲು ಕಾರಣವಾಗಿದೆ ಎಂಬ ಆರೋಪದ ಬಗ್ಗೆ ಪ್ರಶ್ನಿಸಿದ ನಂತರ, ಸರಿಯಾದ ಉತ್ತರ ನೀಡಲು ಸಾಧ್ಯವಾಗದೇ ಸಂದರ್ಶನವನ್ನು ಮಧ್ಯದಲ್ಲಿ ನಿಲ್ಲಿಸಿದ್ದಾರೆ. ಈ ಸಂದರ್ಶನದ ದೃಶ್ಯ ಸಾಮಾಜಿಕ ಮಾಧ್ಯಮ ‘ಎಕ್ಸ್’ ಸೇರಿದಂತೆ ಫೇಸ್ ಬುಕ್ನಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಸಂದರ್ಶನ ನಿಲ್ಲಿಸಿದ ಬಳಿಕ, ಸಂದರ್ಶಕ ಪತ್ರಕರ್ತೆಯ ತಂಡಕ್ಕೆ ವಿವೇಕ್ ಅಗ್ನಿಹೋತ್ರಿ ಬೆದರಿಕೆಯನ್ನು ಕೂಡಾ ಹಾಕಿರುವುದು ದಾಖಲಾಗಿದೆ.
ಭಾರತದಲ್ಲಿ ಮೋದಿ ಸರ್ಕಾರವು ಬಾಲಿವುಡ್ನ ಮೇಲೆ ಹಿಡಿತ ಸಾಧಿಸಿ, ಅದನ್ನು ಪರಿಣಾಮಕಾರಿಯಾಗಿ ಪ್ರಚಾರದ ಸಾಧನವಾಗಿ ಪರಿವರ್ತಿಸುತ್ತಿರುವ ವಿಚಾರವಾಗಿ ಈ ಸಾಕ್ಷ್ಯಚಿತ್ರ ತಯಾರಿಸಲಾಗಿದೆ.
ಪತ್ರಕರ್ತೆ ಅವನಿ ಡಯಾಸ್ ಅವರ ಪ್ರಶ್ನೆಗಳಿಗೆ ವಿವೇಕ್ ಅಗ್ನಿಹೋತ್ರಿ ಉತ್ತರ ನೀಡಲು ತಡವರಿಸುವುದನ್ನು ಗಮನಿಸಿ, ವಿವೇಕ್ ಅವರ ಮಾಧ್ಯಮ ತಂಡದ ಸದಸ್ಯರೋರ್ವರು ಮಧ್ಯದಲ್ಲಿ ಬಂದು, ಸಂದರ್ಶನ ನಿಲ್ಲಿಸುವಂತೆ ಸೂಚಿಸಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.
ಆ ಬಳಿಕ “ನೀವು ಎಲ್ಲಿಗೆ ಹೋಗುತ್ತೀರಿ ಮತ್ತು ಎಲ್ಲಿಂದ ಬರುತ್ತೀರಿ ಎಂದು ನನಗೆ ಅರ್ಥವಾಯಿತು. ಆ ವಿಚಾರದಲ್ಲಿ ನಾನು ಸಾಕಷ್ಟು ಅನುಭವಿ.” ಎಂದು ವಿವೇಕ್ ಅಗ್ನಿಹೋತ್ರಿ ಪತ್ರಕರ್ತೆಗೆ ಬೆದರಿಕೆ ಹಾಕಿರುವುದು ಕೂಡ ದಾಖಲಾಗಿದೆ.
‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುತ್ತದೆಯೇ ಎಂದು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ವಿವೇಕ್, ‘ಮೊದಲನೆಯದಾಗಿ ಅದಕ್ಕೆ ನಾನು ಜವಾಬ್ದಾರನಲ್ಲ. ಅಲ್ಲದೆ, 90 ರ ದಶಕದಿಂದಲೂ ಬಿಜೆಪಿ ಕಾಶ್ಮೀರಿಗಳ ಬಗ್ಗೆ ಮಾತನಾಡುತ್ತಿದೆ; ಇದು ಹೇಳದ ಕಥೆಯಲ್ಲ” ಎಂದು ಅವರು ಹೇಳಿದರು.

‘ನಾನು ಬಿಜೆಪಿಯ ವಕ್ತಾರನಲ್ಲ, ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರವು ತಮ್ಮ ಚಲನಚಿತ್ರವನ್ನು ಪ್ರಚಾರ ಮಾಡಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಪ್ರಚಾರ ಮಾಡಿಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಪತ್ರಕರ್ತೆ ಕೇಳಿದ್ದ ಪ್ರಶ್ನೆಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡುವುದಕ್ಕೆ ನಿರಾಕರಿಸಿದರು.
ಈ ಸಂದರ್ಭದಲ್ಲಿ ವಿವೇಕ್ ಅವರ ತಂಡದ ಸದಸ್ಯರು ಸಂದರ್ಶನವನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಈಗ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, 2002 ಗುಜರಾತಿನ ಗೋದ್ರಾ ಗಲಭೆಯ ಬಳಿಕ ಆಗಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರನ್ನು ಪತ್ರಕರ್ತ ಕರಣ್ ಥಾಪರ್ ನಡೆಸಿದ್ದ ಸಂದರ್ಶನವನ್ನು ಮಧ್ಯದಲ್ಲೇ ನಿಲ್ಲಿಸಿ, ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ನೀರು ಕೇಳಿ, ಕುಡಿದಿದ್ದರು. ಆ ಸಂದರ್ಶನಕ್ಕೆ ವಿವೇಕ್ ಅಗ್ನಿಹೋತ್ರಿಯ ಸಂದರ್ಶನವನ್ನು ಹಲವರು ಹೋಲಿಕೆ ಮಾಡಿದ್ದಾರೆ.
ಏತನ್ಮಧ್ಯೆ, ಸಂದರ್ಶನದಲ್ಲಿ ಮಾತನಾಡಿದ್ದ ನಟಿ ಸ್ವರಾ ಭಾಸ್ಕರ್ ಅವರನ್ನು ಕೇಂದ್ರ ಸರ್ಕಾರ ಹಾಗೂ ಮೋದಿಯವರ ಹೆಸರು ಎತ್ತಿ ಮಾತನಾಡದಂತೆ ತಡೆದಿರುವುದು ಕೂಡ ಈ ಸಾಕ್ಷ್ಯ ಚಿತ್ರದಲ್ಲಿ ದಾಖಲಾಗಿದೆ.