ಬಡವರ ಮಗನಾಗಿ ಬೆಳೆದ ನಟ ಡಾಲಿ ಧನಂಜಯ್ ಅದ್ದೂರಿ ಮದುವೆಗೆ ಸಜ್ಜಾಗುತ್ತಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ರಾಜಕೀಯ ಮತ್ತು ಸಿನಿಮಾ ರಂಗದ ನಾಯಕರು, ಪ್ರಮುಖರನ್ನು ಆಹ್ವಾನಿಸುವುದರಲ್ಲಿ ‘ಬ್ಯುಸಿ’ ಆಗಿದ್ದಾರೆ. ಆದರೆ, ಈವರೆಗೆ ನಟ ದರ್ಶನ್ ಅವರಿಗೆ ಧನಂಜಯ್ ಆಹ್ವಾನ ಪತ್ರಿಕೆ ನೀಡಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರನ್ನು ಆಹ್ವಾನಿಸಲು ಧನಂಜಯ್ ಹಿಂದೇಟು ಹಾಕುತ್ತಿದ್ದಾರೆಯೇ ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಸ್ವತಃ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿರುವ ಧನಂಜಯ್ ತಮ್ಮನ್ನು ವಿವಾಹವಾಗುತ್ತಿರುವ ಧನ್ಯತಾ ಅವರನ್ನು ಪರಿಚಯಿಸಿಕೊಟ್ಟಿದ್ದಾರೆ. ಈ ವೇಳೆ, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಧನಂಜಯ್, “ಎಲ್ಲರನ್ನು ಮದುವೆ ಕರೆಯುತ್ತಿದ್ದೇನೆ. ದರ್ಶನ್ ಅವರನ್ನೂ ಭೇಟಿ ಮಾಡಿ, ಕರೆಯಲು ಪ್ರಯತ್ನ ಮಾಡುತ್ತಿದ್ದೇಎ. ಆದರೆ, ಅವರನ್ನು ರೀಚ್ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.
ಅಂದಹಾಗೆ, ರೇಣುಕಾಸ್ವಾಮಿ ಕೊಲೆಯನ್ನು ಖಂಡಿಸಿದ್ದ ಚಿತ್ರರಂಗ ಪ್ರಮುಖರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ದರ್ಶನ್ ಜೈಲು ಸೇರಿದ್ದ ಸಮಯದಲ್ಲಿ ಪ್ರತಿಕ್ರಿಯಿಸಿದ್ದ ಧನಂಜಯ್, “ಕೊಲೆ ಪ್ರಕರಣದ ಬಗ್ಗೆ ಏನು ಮಾತನಾಡುವುದು? ಅಲ್ಲೊಂದು ಜೀವ ಹೋಗಿದೆ. ಒಂದು ತಪ್ಪು ನಡೆದಿದೆ. ರೇಣುಕಾಸ್ವಾಮಿ ತಂದೆ ತಾಯಿ, ಪತ್ನಿಯ ಮುಖ ನೋಡಿದಾಗ ಖಂಡಿತಾ ಬೇಜಾರಾಗುತ್ತದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ದರ್ಶನ್ ಸಹೋದರನಾಗಿ ಹೇಳುತ್ತಿದ್ದೇನೆ, ಅವರಿಂದ ತಪ್ಪಾಗಿದ್ದರೆ ಶಿಕ್ಷೆಯಾಗಲಿ” ಎಂದಿದ್ದರು.
ಹೀಗಾಗಿ, ಧನಂಜಯ್ ಅವರ ಹಿಂದಿನ ಹೇಳಿಕೆಯನ್ನು ಈಗ ತಳುಕು ಹಾಕಿಕೊಂಡು ಧನಂಜಯ್ ಅವರು ಉದ್ದೇಶಪೂರ್ವಕವಾಗಿಯೇ ತಮ್ಮ ವಿವಾಹಕ್ಕೆ ದರ್ಶನ್ ಅವರನ್ನು ಆಹ್ವಾನಿಸಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಆದರೆ, ದರ್ಶನ್ ಅವರನ್ನು ಆಹ್ವಾನಿಸುವ ಪ್ರಯತ್ನ ಮಾಡಿದ್ದೇನೆ ಎಂದು ಧನಂಜಯ್ ಹೇಳಿದ್ದಾರೆ.
ಫೆಬ್ರವರಿ 16ರಂದು ಡಾಲಿ ಧನಂಜಯ್ ಮತ್ತು ಧನ್ಯತಾ ಅವರ ವಿವಾಹ ಮೈಸೂರಿನಲ್ಲಿ ನಡೆಯಲಿದೆ.