ಫಿಲ್ಮ್ ಫೆಸ್ಟಿವಲ್ | ‘ಪೈರ್’ ಚೆನ್ನಾಗಿದೆ; ಉದ್ಘಾಟನಾ ಚಿತ್ರಕ್ಕಿರಬೇಕಾದ ನಿರೀಕ್ಷೆ ಹುಸಿಗೊಳಿಸಿದೆ

Date:

Advertisements
'ಪೈರ್' ಚಿತ್ರ ಚೆನ್ನಾಗಿದೆ. ನಿಜಬದುಕಿನ ಕತೆಯನ್ನು ಹೇಳುತ್ತದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದ ಉದ್ಘಾಟನಾ ಚಿತ್ರಕ್ಕಿರಬೇಕಾದ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ..

ಬಹುದೊಡ್ಡ ಬೆಳ್ಳಿಪರದೆಯ ಮೇಲೆ ಚಿತ್ರ ಅನಾವರಣಗೊಳ್ಳುವುದೇ ಬೆಳ್ಳಿ ಮೋಡಗಳಿಂದ ಆವೃತ್ತವಾದ ಹಿಮಾಲಯದ ಪರ್ವತಶ್ರೇಣಿಗಳಿಂದ. ಉದ್ದುದ್ದ ಬೆಳೆದುನಿಂತ ಮರಗಳು, ಬೆಟ್ಟಗುಡ್ಡಗಳು, ಕಡಿದಾದ ಕಣಿವೆ ಸಾಲು, ನೋಡಿದಷ್ಟೂ ಹಸಿರು, ಆ ಹಸಿರನ್ನು ಆವರಿಸಿದ ಮಂಜು, ಸುರಿಯುವ ಮಳೆ- ಒಂದು ಸಲ ದೀರ್ಘ ಉಸಿರೆಳೆದುಕೊಂಡು ನಿರಾಳಾಗಬೇಕೆನಿಸುತ್ತದೆ.

ಅಂತಹ ದುರ್ಗಮ ಪ್ರದೇಶದಲ್ಲಿ, ಕಠಿಣ ಹಾದಿಯಲ್ಲಿ ಇಬ್ಬರು ವೃದ್ಧರು ಕಷ್ಟಪಟ್ಟು ಕಡಿದಾದ ಬೆಟ್ಟ ಹತ್ತುತ್ತಿರುತ್ತಾರೆ. ವಯಸ್ಸಾದ ಗಂಡ ಪದಮ್ ಸಿಂಗ್, ಆತನ ಹಿಂಬಾಲಿಸುವ ಪತ್ನಿ ತುಲಸಿ. ಪದಮ್ ಬಗಲಿಗೆ ತೂಗುಬಿದ್ದ ಸಣ್ಣ ಡಬ್ಬದಂತಹ ಡೋಲು ಬಾರಿಸುತ್ತ, ಹೇಳಿದ್ದೇ ಪದ ಹೇಳುತ್ತಾ ಮುಂದೆ ಮುಂದೆ ಹೋಗುತ್ತಿರುತ್ತಾನೆ. ಆತನನ್ನು ಹಿಂಬಾಲಿಸುವ ಪತ್ನಿ ತುಲಸಿ, ಸುಸ್ತಾಗಿ ಕೂತರೂ, ಹಾಡುವುದನ್ನು ನಿಲ್ಲಿಸು ಎಂದರೂ ಕೇಳದೆ, ಜಲಪಾತದೆದುರು ಹೋಗಿ ನಿಲ್ಲುತ್ತಾನೆ. ಇಬ್ಬರೂ ಒಟ್ಟಿಗೆ ನೆಗೆದು, ಬದುಕಿನ ಪಯಣ ಮುಗಿಸೋಣ ಎಂದು ನಿರ್ಧರಿಸುತ್ತಾರೆ. ಆದರೆ ಅಂದುಕೊಂಡಂತಾಗುವುದಿಲ್ಲ.

‘ಪೈರ್’ ಚಿತ್ರದ ಮೊದಲ ಈ ದೃಶ್ಯ- ಇಡೀ ಚಿತ್ರದ ಕತೆಯನ್ನು ಹೇಳುತ್ತದೆ. ಬದುಕಿನ ಚಲನಶೀಲತೆಯನ್ನು ಸಾರುತ್ತದೆ. ಪದಮ್‌ ಮತ್ತು ತುಲಸಿ- ಇಬ್ಬರಿಗೂ 80 ಮೀರಿದೆ. ಇಬ್ಬರೂ ಹಿಮಾಲಯದ ಬೆಟ್ಟಗುಡ್ಡಗಳ ಸಾಲಿನಲ್ಲಿ ಒಂದು ಮುರುಕಲು ಮನೆ, ಜೊತೆಗೆ ಒಂದಷ್ಟು ಆಡುಗಳು, ಹಸು-ಕರುವಿನೊಂದಿಗೆ ಬದುಕುತ್ತಿದ್ದಾರೆ. ಅವರ ಜಡ, ನಿಸ್ತೇಜ, ನಿರುತ್ಸಾಹದ ಬದುಕಿನಲ್ಲಿ ಅವರಿಗೆ ಇರುವುದೊಂದೇ ನಿರೀಕ್ಷೆ- ಕಳೆದ 28 ವ‍‍ರ್ಷಗಳ ಹಿಂದೆ ಕೆಲಸಕ್ಕಾಗಿ ಮನೆ ತೊರೆದುಹೋದ ಮಗ ಹರಿಯಾ- ತಮ್ಮ ಕೊನೆಗಾಲದಲ್ಲಾದರೂ ಬರುತ್ತಾನೆ, ತಮ್ಮನ್ನು ಸ್ವರ್ಗಕ್ಕೆ ಕಳಿಸಲು ಬೇಕಾದ ವಿಧಿ ವಿಧಾನಗಳನ್ನು ಮುಂದೆ ನಿಂತು ನೆರವೇರಿಸುತ್ತಾನೆ… ಎಂದು.  

Advertisements

ಇದನ್ನು ಓದಿದ್ದೀರಾ?: ಕನ್ನಡದ ಸಜ್ಜನ – ಕೆ.ಎಸ್. ಅಶ್ವಥ್ ಅವರ ನೂರರ ನೆನಪು

ಮಗನ ಬರುವಿಕೆಗಾಗಿ ವೃದ್ಧರಿಬ್ಬರು ಕಾದು ಕುಳಿತಿದ್ದಾರೆ- ಸಾಮ್ಯುಯಲ್ ಬೆಕೆಟ್‌ರ ‘ವೇಟಿಂಗ್ ಫಾರ್ ಗೋಡಾಟ್’ ರೀತಿ. ಹಾಗೆಯೇ ಕಾಯುವಿಕೆಯಲ್ಲಿ ಬಸವಳಿದಿದ್ದಾರೆ- ಗುಲ್ಝಾರ್ ಅವರ ‘ಇಂತಝಾರ್ ಕಿ ಗಡಿ ಬಹುತ್ ಕಟಿಣ್ ಹೈ’ ಎನ್ನುವಂತೆ.  

ಪದಮ್ ಮತ್ತು ತುಲಸಿ ವಾಸವಿರುವ ಕೂಗಳತೆಯ ದೂರದಲ್ಲಿ, ಅವರದೇ ಬುಡಕಟ್ಟಿನ ಒಂದಷ್ಟು ಸಂಸಾರಗಳಿವೆ. ಆದರೆ ಆ ಸಂಸಾರಗಳು ಅಲ್ಲಿ- ಏನೂ ಇಲ್ಲದ ಜಾಗದಲ್ಲಿ- ಉಳಿಯಲಾಗದೆ ಬೇರೆ ಬೇರೆ ಕಾರಣಗಳಿಂದ ಊರು ತೊರೆಯುತ್ತಿವೆ. ಜನಗಳು ವಿರಳವಾಗಿ, ಮನೆಗಳು ಮುರಿದುಬಿದ್ದ ಮಹಲುಗಳಂತೆ ಕಾಣುತ್ತಿವೆ.

ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ವೃದ್ಧೆ ತುಲಸಿ ಕಾಯಿಲೆಗೆ ತುತ್ತಾಗುವುದು, ಪದಮ್ ಹತ್ತಿರದ ಬಂಧುಗಳನ್ನು ಆಶ್ರಯಿಸುವುದು, ಅವರ ನೆರವಿಗಾಗಿ ಆಡುಗಳನ್ನು ಅವರಿಗೆ ಉಡುಗೊರೆಯಾಗಿ ಕೊಡುವುದು- ಅದು ಆ ವೃದ್ಧರು ಅಳವಡಿಸಿಕೊಂಡ ಬದುಕಿನ ಕಲೆ. ಮಗ ಮರಳಿ ಊರಿಗೆ ಬರುತ್ತಾನೆಂದು ಪತ್ರ ತಂದ ಪೋಸ್ಟ್‌ಮನ್‌ಗೂ ಒಂದು ಆಡು. ಆ ಸಿಹಿ ಸುದ್ದಿ ತಂದದ್ದಕ್ಕೆ ಬುಡಕಟ್ಟಿನ ಬಂಧುಗಳಿಗೆಲ್ಲ ಭೋಜನದ ವ್ಯವಸ್ಥೆ.

ಹೀಗೆ ಮನೆ ತೊರೆದು ಹೋದ ಮಗನ ನಿರೀಕ್ಷೆಯಲ್ಲಿ ಆ ವೃದ್ಧರಿಬ್ಬರ ಬದುಕು ಸಾಗಿದೆ. ನಿಧಾನವಾಗಿ ಹಳ್ಳಿ ಖಾಲಿಯಾಗುತ್ತಿದೆ. ಉಳಿದವರು ಈ ವೃದ್ಧರಿಬ್ಬರೇ. ಅಂತಹ ಬರಡು ಬದುಕಿನಲ್ಲಿಯೂ ಪದಮ್ ಸಿಂಗ್‌ನ ಸಾರಾಯಿ, ತುಲಸಿಯ ಬೀಡಿ, ಬದುಕನ್ನೇ ಹಾಸ್ಯ ಮಾಡಿ ನಗುವ ಜೋಡಿ- ಬದುಕಿನ ಮತ್ತೊಂದು ಮಗ್ಗುಲನ್ನು ಪರಿಚಯಿಸುತ್ತಾ ಸಾಗುತ್ತದೆ.  

‘ಕೆಮ್ಮಿದೆ, ಬೀಡಿ ಯಾಕ್ ಸೇದ್ತಿದೀಯಾ’ ಎನ್ನುವ ಪದಮ್‌ಗೆ; ‘ಲಿವರ್ ಸುಟ್ಟೋಯ್ತದೆ, ಸಾರಾಯಿ ಯಾಕ್ ಕುಡಿತಿದೀಯಾ’ ಎನ್ನುವ ತುಲಸಿ- ತಮ್ಮ ಮಾತಿಗೆ ತಾವೇ ನಗುವುದು. ಗಂಡ ಮಲಗಿದ್ದಾಗ ಎದ್ದು ಹೋಗಿ ಆಡುಗಳ ಲೆಕ್ಕ ಹಾಕುವುದು. ಅದು ಗಂಡನಿಗೆ ಗೊತ್ತಾಗುವುದು. ಆಡುಗಳು ಕಡಿಮೆಯಾಗಿದ್ದರೂ, ಆಕೆ ಗಂಡನನ್ನು ಕೇಳದೆ ಸುಮ್ಮನೆ ಬಂದು ಮಲಗುವುದು- ಬಡವರ ಉದಾರತೆ ನೋಡುಗರ ಮನತಟ್ಟುತ್ತದೆ. ಪದಮ್ ಕೂಡ ಸುತ್ತಮುತ್ತಲ ಬಂಧುಗಳಿಗೆ ಆಡು ಮರಿಗಳನ್ನು ಉಡುಗೊರೆಯಾಗಿ ಕೊಡುವುದು, ಕೊಟ್ಟಿದ್ದನ್ನು ವಾಪಸ್ ಕೊಟ್ಟರೆ ಬೇಸರಿಸಿಕೊಳ್ಳುವುದು- ಸ್ವಾಭಿಮಾನಿಗಳ ಸಹಿಷ್ಣು ಗುಣವನ್ನು ಸಾರುತ್ತದೆ.   

ತಕ್ಷಣಕ್ಕೆ ನೆರವಿಗೆ ಬರುತ್ತಿದ್ದ ಲಕ್ಷ್ಮಣ್, ಜೀವನ್, ಭೂಪಾಲ್ ಕುಟುಂಬಗಳು ತಪ್ಪಲನ್ನು ತೊರೆದು ಹೋದರೂ, ವೃದ್ಧರು ಹೋಗಲಾಗದೆ, ಉಳಿಯಲಾಗದೆ ಒದ್ದಾಡುತ್ತಾರೆ. ಕೊನೆಗೆ ನಾವು ಹಿಮಾಲಯದ ಮಕ್ಕಳು, ನಮಗೆ ಮುಕ್ತಿ ಅಂತ ಏನಾದರೂ ಸಿಗಬೇಕಾದರೆ, ಈ ಪ್ರಕೃತಿಯ ಮಡಿಲಲ್ಲಿಯೇ ಸಿಗಲಿ, ಇದೇ ನಮ್ಮ ಮನೆ, ಊರು ಎಂಬ ದೃಢ ನಿರ್ಧಾರಕ್ಕೆ ಬರುತ್ತಾರೆ. ಅಂತಿಮ ಸಂಸ್ಕಾರಕ್ಕೆ ಎರಡು ಚಿತೆಗಳನ್ನೂ ಸಿದ್ಧಮಾಡಿಟ್ಟುಕೊಳ್ಳುತ್ತಾರೆ.

ಕುತೂಹಲಕರ ಅಂಶವೆಂದರೆ, 28 ವರ್ಷಗಳ ಹಿಂದೆ ಮನೆ ತೊರೆದ ಮಗ, ಅಪಘಾತದಲ್ಲಿ ಮರಣ ಹೊಂದಿದ್ದಾನೆಂದು ತುಲಸಿಗೆ ತಿಳಿದಿರುತ್ತದೆ. ಆದರೆ ಗಂಡ ಪದಮ್ ಸಿಂಗ್‌ನಿಗೆ ಹೇಳಿರುವುದಿಲ್ಲ. ಮಗನ ಬರುವಿಕೆಯ ಸುದ್ದಿ ತರುವ ಪೋಸ್ಟ್‌ಮನ್‌ ಕೂಡ, ಇವರಿಬ್ಬರ ಕಾಯುವಿಕೆಯನ್ನು ಜೀವಂತವಾಗಿರಿಸುವಲ್ಲಿ, ಸಾವನ್ನು ಮುಂದೂಡುವಲ್ಲಿ ಸುಳ್ಳು ಪತ್ರಗಳನ್ನು ಸೃಷ್ಟಿಸುತ್ತಾನೆ. ಕೊನೆಗೆ ತುಲಸಿಯ ಮೂಲಕವೇ ಕಟು ಸತ್ಯ ಗೊತ್ತಾದಾಗ ಒದ್ದಾಡುತ್ತಾನೆ. ಆ ಇಬ್ಬರು ವೃದ್ಧರು ಊರು ತೊರೆದು ಹೋದರಾ, ಉಳಿದರಾ, ಸತ್ತರಾ- ಅದಕ್ಕಾಗಿಯಾದರೂ ಚಿತ್ರ ನೋಡಿ.

ಚಿತ್ರಕತೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವ ವಿನೋದ್ ಕಾಪ್ರಿ, ಚಿತ್ರವನ್ನು ಸುಂದರ ದೃಶ್ಯಕಾವ್ಯವಾಗಿಸುವಲ್ಲಿ ಸಫಲರಾಗಿದ್ದಾರೆ. ಅದಕ್ಕೆ ಸಾಥ್ ನೀಡಿರುವ ಸಿನಿಮಾಟೋಗ್ರಾಫರ್ ಮಾನಸ್ ಭಟ್ಟಾಚಾರ್ಯ- ಹಿಮಾಲಯದ ಪರ್ವತಶ್ರೇಣಿಯಲ್ಲಿ ಪ್ರೇಕ್ಷಕರನ್ನು ಅಡ್ಡಾಡಿಸಿದ್ದಾರೆ. ಕಣ್ಣೋಡುವ ಉದ್ದಕ್ಕೂ ಹಸಿರು ಹೊದ್ದ ಬೆಟ್ಟಸಾಲು, ಮಂಜಿನ ಹೊಗೆ ಹೊಮ್ಮುವ ಕಣಿವೆ, ಮರ, ಮಳೆ, ಜಲಪಾತ ಮನಸಿಗೆ ಮುದ ನೀಡುತ್ತದೆ. ಆದರೆ, ಸಂಕಲನದ ಹೊಣೆ ಹೊತ್ತಿರುವ ಪೆಟ್ರಿಸಿಯಾ ರೊಮಲ್ ಮತ್ತು ಶುಭಜಿತ್ ಸಿಂಘಾ, ಪ್ರಕೃತಿ ಮತ್ತು ಬದುಕನ್ನು ಬೆಸೆಯುವಲ್ಲಿ ವಿಫಲರಾಗಿದ್ದಾರೆ. ಅತ್ತ ಪ್ರಕೃತಿಯ ಸೊಬಗನ್ನು ಸವಿಯಲೂ ಆಗದೆ, ಇತ್ತ ವೃದ್ಧರ ಬದುಕಿನ ದಾರುಣತೆಯನ್ನು ಅನುಭವಿಸಲೂ ಆಗದೆ, ಪ್ರೇಕ್ಷಕರನ್ನು ಗೊಂದಲಗೊಳಿಸಿದ್ದಾರೆ. ಚಿತ್ರ ಚಿತ್ತಕ್ಕಿಳಿಯುವಲ್ಲಿ ತೊಡಕುಂಟುಮಾಡಿದ್ದಾರೆ.

ಜಾಗತೀಕರಣದ ನಂತರ, ದೇಶದ ಹಳ್ಳಿಗಳ ಸ್ಥಿತಿ ಹಿಮಾಲಯದ ತಪ್ಪಲಿನ ರಿಮೋಟ್ ಹಳ್ಳಿಗಳಿಗಿಂತ ಭಿನ್ನವಾಗೇನೂ ಇಲ್ಲ. ನೀವು ಯಾವುದೇ ಹಳ್ಳಿಗಳಿಗೆ ಹೋದರೂ, ವೃದ್ಧರು ಮಾತ್ರ ಕಾಣುತ್ತಾರೆ. ಕೆಮ್ಮುತ್ತ, ಕೊಸರಾಡುತ್ತ, ಕೋಲೂರಿಕೊಂಡು ಕಾಲ ನೂಕುತ್ತಿರುವವರು ಕಣ್ಣಿಗೆ ಬೀಳುತ್ತಾರೆ.

article

ಪೈರ್‘ ಚಿತ್ರದ ವೃದ್ಧರು ಕಷ್ಟಸಹಿಷ್ಣುಗಳು, ಸ್ವಾಭಿಮಾನಿಗಳು. ಅದನ್ನು ಅರೆದುಕುಡಿದವರಂತೆ ಪಾತ್ರ ನಿರ್ವಹಿಸಿರುವ ಪದಮ್ ಸಿಂಗ್ ಮತ್ತು ಹೀರಾ ದೇವಿ ಪಾತ್ರದಾರಿಗಳು ಈ ಮೊದಲು ಕ್ಯಾಮೆರಾ ಎದುರಿಸಿದರಲ್ಲ. ಆದರೂ, ಹಿಮಾಲಯದ ಮಕ್ಕಳಂತೆಯೇ ಜೀವಿಸಿದ್ದಾರೆ. ನಿರ್ದೇಶಕರು ಅಪರೂಪದ ವೃದ್ಧರ ಕೊನೆಗಾಲದ ಬದುಕನ್ನು ಹಾಗೂ ಸತ್ಯಕತೆಯನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ. ಇದನ್ನು ಹೊರತುಪಡಿಸಿದರೆ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ತೋರಿಸಬಹುದಾದ ಉತ್ಕೃಷ್ಟ ಚಿತ್ರವೇನಲ್ಲ. ವೃದ್ಧರ ನಿಜಬದುಕನ್ನು ಅನಾವರಣ ಮಾಡಿದರೂ, ಬೌಗೋಳಿಕ ಪರಿಸರವಷ್ಟೇ ಭಿನ್ನ ಎನ್ನುವುದನ್ನು ಬಿಟ್ಟರೆ, ಚಿತ್ರದಲ್ಲಿ ಹೊಸ ಹೊಳಹು ಕಾಣುವುದಿಲ್ಲ.

ಪ್ರೇಕ್ಷಕ ಚಿತ್ರ ನೋಡ್ತಾ ನೋಡ್ತಾ… ಕೊನೆಗೆ, ಗುಲ್ಝಾರ್ ಅವರ ಇಂತಝಾರ್ ಕಿ ಗಡಿ ಬಹುತ್ ಕಠಿಣ್ ಹೈ… ಎನ್ನುವಲ್ಲಿಗೆ ಬಂದು ನಿಂತರೆ ಆಶ್ಚರ್ಯವಿಲ್ಲ.    

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X