- ಕೋಮು ಸೌಹಾರ್ಧಕ್ಕೆ ಹೆಸರಾಗಿರುವ ಕೇರಳದ ಹೆಸರು ಕೆಡಿಸಲು ಸಂಚು
- ‘ಕೋಮು ಭಾವನೆ ಬಿತ್ತಿ ಸಮಾಜ ಒಡೆಯುವ ದುರುದ್ಧೇಶದ ಸಿನಿಮಾ‘
ವಿವಾದಿತ ಸಿನಿಮಾ ‘ದಿ ಕೇರಳ ಸ್ಟೋರಿ’ ಬಿಡುಗಡೆಗೆ ಸಿದ್ದವಾಗಿದೆ. ಸಿನಿಮಾ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯವನ್ನು ಹೊಂದಿದ್ದು, ಕೇರಳದ ಹೆಸರಿಗೆ ಮಸಿಬಳಿಯುವಂತಿದೆ. ಈ ಸಿನಿಮಾವನ್ನು ರಾಜ್ಯದ ಜನರು ಬಹಿಷ್ಕರಿಸಬೇಕೆಂದು ಕೇರಳ ಸಂಸ್ಕೃತಿ ಹಾಗೂ ಸಿನಿಮಾ ಸಚಿವ ಶಾಜಿ ಚೆರಿಯನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಅದರಲ್ಲಿ, ಕೇರಳದ 32 ಸಾವಿರ ಹಿಂದು, ಕ್ರಿಶ್ಚಿಯನ್ ಯುವತಿಯರು ಮತ್ತು ಮಹಿಳೆಯರನ್ನು ಲವ್ ಜಿಹಾದಿ ಮೂಲಕ ಮತಾಂತರ ಮಾಡಲಾಗುತ್ತದೆ. ಇನ್ನೂ ಕೆಲವರನ್ನು ಮಾನವ ಕಳ್ಳಸಾಗಣೆ ಮಾಡಿ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ದೃಶ್ಯಗಳಿವೆ. ಹೀಗಾಗಿ, ಟ್ರೇಲರ್‌ನ ದೃಶ್ಯಗಳು ಸಿನಿಮಾವನ್ನು ವಿರೋಧಿಸುವಂತೆ ಮಾಡಿದೆ.
“ಕೇರಳದಲ್ಲಿ ಹಿಂದು, ಕ್ರಿಶ್ಚಿಯನ್ ಮಹಿಳೆಯರನ್ನು ಲವ್ ಜಿಹಾದಿಗೆ ಒಳಪಡಿಸಿ, ಅವರನ್ನು ಐಎಸ್ ಉಗ್ರಗಾಮಿ ಸಂಘಟನೆಗೆ ಸೇರಿಸಿ ಚಿತ್ರಹಿಂಸೆ ಕೊಡುತ್ತಿದ್ದ ಘಟನೆಗಳ ಆಧಾರದ ಮೇಲೆ ಈ ಚಿತ್ರನ್ನು ತಯಾರಿಸಲಾಗಿದೆ” ಎಂದು ಚಿತ್ರತಂಡ ಹೇಳಿಕೊಂಡಿದೆ.
ಸಿನಿಮಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, “ಕೇರಳವನ್ನು ಧರ್ಮ ಮತಾಂದರರು ಮತ್ತು ದೇಶ ವಿರೋಧಿಗಳು ಎಂದು ಬಿಂಬಿಸಲು ಸಂಘಪರಿವಾರಿ ಮಾಡುತ್ತಿರುವ ಸಂಚು ಇದು. ಸಿನಿಮಾ ಮೂಲಕ ಸಂಘಪರಿವಾರ ಏನನ್ನು ಹೇಳಲು ಹೊರಟಿದೆ ಎಂಬುದನ್ನು ಈಗಾಗಲೇ ಬಿಡುಗಡೆಯಾದ ಟ್ರೇಲರ್ ಹೇಳುತ್ತಿದೆ” ಎಂದು ಹಲವರು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ʼದಿ ಸಾಂಗ್ ಆಫ್ ಸ್ಕಾರ್ಪಿಯನ್ಸ್ʼ ಸೇರಿ ಈ ವಾರ 5 ಪ್ರಮುಖ ಚಿತ್ರಗಳು ತೆರೆಗೆ
‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೇಲರ್ ಕೇರಳದಲ್ಲಿ ವಾಗ್ಯುದ್ಧಕ್ಕೆ ಎಡೆ ಮಾಡಿಕೊಟ್ಟಿದೆ. ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಸರ್ಕಾರ ಹಾಗೂ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಈ ಚಿತ್ರದ ವಿರುದ್ಧ ಮುಗಿಬಿದ್ದಿವೆ. ಕಾನೂನು ಕ್ರಮ ಜರುಗಿಸಿ ಚಿತ್ರ ಬಿಡುಗಡೆಯಾಗದಂತೆ ಕ್ರಮವಹಿಸಬೇಕೆಂದು ಒತ್ತಾಯಿಸಿವೆ.
“ಸಿನಿಮಾವನ್ನು ಜನ ಬಹಿಷ್ಕರಿಸಬೇಕು. ಈ ಸಿನಿಮಾ ಕೇರಳದಲ್ಲಿ ಬಿಡುಗಡೆಯಾಗದಂತೆ ತಡೆಯಲು ಕಾನೂನು ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ. ಸಿನಿಮಾ ಬಿಡುಗಡೆಗೆ ಸರ್ಕಾರ ಅವಕಾಶ ಕೊಡಬಾರದು” ಎಂದು ಸಂಸ್ಕೃತಿ ಹಾಗೂ ಸಿನಿಮಾ ಸಚಿವ ಶಾಜಿ ಚೆರಿಯನ್ ಹೇಳಿದ್ದಾರೆ.
“ಕೋಮು ಸೌಹಾರ್ಧಕ್ಕೆ ಹೆಸರಾಗಿರುವ ಕೇರಳದ ಹೆಸರು ಕೆಡಿಸಲು ಇದು ಸಂಘಪರಿವಾರದವರು ಮಾಡುತ್ತಿರುವ ಸಂಚು” ಎಂದಿದ್ದ ಪತ್ರಕರ್ತರೊಬ್ಬರು ಈ ಹಿಂದೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ಅವರಿಗೆ ಪತ್ರ ಬರೆದಿದ್ದರು ಮತ್ತು ಸಿನಿಮಾ ಬಿಡುಗಡೆ ಅವಕಾಶ ಕೊಡದಂತೆ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದರು.
“ತಪ್ಪು ಸಂದೇಶ ತಲುಪಿಸುವ ‘ದಿ ಕೇರಳ ಸ್ಟೋರಿ’ ಚಿತ್ರವು ತೆರೆ ಕಾಣದಂತೆ ಕ್ರಮವಹಿಸಿ” ಎಂದು ಕೇರಳದ ಸಂಸದ ಜಾನ್ ಬ್ರಿಟಾಸ್ ಅವರು 2022 ನವೆಂಬರ್ 9ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು.
ಯಾರೆಲ್ಲ ಚಿತ್ರದಲ್ಲಿದ್ದಾರೆ?
ಸುದೀಪ್ತೊ ಸೇನ್ ಅವರ ನಿರ್ದೇಶನದ ಈ ಸಿನಿಮಾವನ್ನು ವಿಫುಲ್ ಶಾ ನಿರ್ಮಾಣ ಮಾಡಿದ್ದಾರೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಿಲಾನಿ, ಸಿದ್ಧಿ ಇದ್‌ನಾನಿ ಅವರು ಲವ್ ಜಿಹಾದ್‌ಗೆ ಒಳಗಾಗುವ ಹಿಂದು ಯುವತಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ಇದೇ ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.