ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ ಸೇರಿ ಈ ವಾರ 5 ಪ್ರಮುಖ ಚಿತ್ರಗಳು ತೆರೆಗೆ

Date:

ಬಾಲಿವುಡ್‌ ಖ್ಯಾತ ನಟ ದಿವಂಗತ ಇರ್ಫಾನ್‌ ಖಾನ್‌ ಅಭಿನಯದ ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ, ತಮಿಳಿನ ಹಿರಿಯ ನಿರ್ದೇಶಕ ಮಣಿರತ್ನಂ ನಿರ್ದೇಶನದ ʼಪೊನ್ನಿಯನ್‌ ಸೆಲ್ವನ್‌-2ʼ ಸೇರಿದಂತೆ 5 ಪ್ರಮುಖ ಚಿತ್ರಗಳು ಈ ವಾರ ತೆರೆಗೆ ಬರುತ್ತಿವೆ

ರಾಘವೇಂದ್ರ ಸ್ಟೋರ್ಸ್‌

ಹಿರಿಯ ನಟ ಜಗ್ಗೇಶ್‌ ಅಭಿನಯದ ಬಹುನಿರೀಕ್ಷಿತ ʼರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾ ಈ ಶುಕ್ರವಾರ ತೆರೆಗೆ ಬರುತ್ತಿದೆ. ಬ್ರಹ್ಮಚಾರಿಯ ಬದುಕಿನ ಸುತ್ತ ಹಾಸ್ಯಮಯವಾಗಿ ಮೂಡಿಬಂದಿರುವ ಚಿತ್ರಕ್ಕೆ ಸಂತೋಷ್‌ ಆನಂದ್‌ರಾಮ್‌ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ ಜಗ್ಗೇಶ್‌ ಬಾಣಸಿಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ಅಡುಗೆ ಮಾಡುವವನು ಎಂಬ ಕಾರಣಕ್ಕೆ ಹೆಣ್ಣು ಸಿಗದೆ ಬ್ರಹ್ಮಚಾರಿಯಾಗಿ ಉಳಿದ ವ್ಯಕ್ತಿಯ ಬದುಕಿನ ಸುತ್ತ ಹಾಸ್ಯಮಯವಾಗಿ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಶ್ವೇತಾ ಶ್ರೀವಾತ್ಸವ್‌ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟ ದತ್ತಣ್ಣ, ಅಚ್ಯುತ್‌ ಕುಮಾರ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಘು

ಸ್ಯಾಂಡಲ್‌ವುಡ್‌ನ ಖ್ಯಾತ ನಟ ವಿಜಯ್‌ ರಾಘವೇಂದ್ರ ಏಕಾಂಗಿಯಾಗಿ ನಟಿಸಿರುವ ʼರಾಘುʼ ಸಿನಿಮಾ ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ʼಆನʼ ಮತ್ತು ʼಬ್ಯಾಂಗ್‌ʼ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಎಂ. ಆನಂದ್‌ ರಾಜ್‌ ಈ ಪ್ರಯೋಗಾತ್ಮಕ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ವ್ಯಕ್ತಿಯೊಬ್ಬನ ದುರಂತಮಯ ಬದುಕಿನ ಸುತ್ತ ಚಿತ್ರದ ಕಥೆಯನ್ನು ಹೆಣೆಯಾಗಿದೆ. ಕ್ರೈಂ, ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಹಿರಿಯ ನಟ ಶಿವರಾಜ್‌ ಕುಮಾರ್‌ ಕಂಠದಾನ ಮಾಡಿರುವುದು ವಿಶೇಷ. ರಿತ್ವಿಕ್‌ ಮುರಳಿಧರ್‌ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದ್ದು, ರನ್ವಿತ್‌ ಶಿವಕುಮಾರ್‌ ಹಾಗೂ ಅಭಿಷೇಕ್‌ ಬಂಡವಾಳ ಹೂಡಿದ್ದಾರೆ.

ಪೊನ್ನಿಯನ್‌ ಸೆಲ್ವನ್‌-2

ತಮಿಳಿನ ಹಿರಿಯ ನಿರ್ದೇಶಕ ಮಣಿರತ್ನಂ ನಿರ್ದೇಶನದ ʼಪೊನ್ನಿಯನ್‌ ಸೆಲ್ವನ್‌-2ʼ ಸಿನಿಮಾ ಈ ವಾರ ಪ್ಯಾನ್‌ ಇಂಡಿಯಾ ಮಾದರಿಯಲ್ಲಿ ಬಿಡುಗಡೆಯಾಗುತ್ತಿದೆ. ಚೋಳ ಸಾಮ್ರಾಜ್ಯದ ಗತ ವೈಭವದ ಕುರಿತು ತಮಿಳಿನ ಖ್ಯಾತ ಸಾಹಿತಿ ಕಲ್ಕಿ ಕೃಷ್ಣಮೂರ್ತಿ ಅವರು ರಚಿಸಿರುವ ಜನಪ್ರಿಯ ʼಪೊನ್ನಿಯಿನ್‌ ಸೆಲ್ವನ್‌ʼ ಕಾದಂಬರಿಯನ್ನು ಆಧಾರಿಸಿ ಮಣಿರತ್ನಂ ಎರಡು ಭಾಗಗಳಲ್ಲಿ ʼಪೊನ್ನಿಯನ್‌ ಸೆಲ್ವನ್‌ʼ ಸಿನಿಮಾ ತಯಾರಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ʼಪೊನ್ನಿಯಿನ್‌ ಸೆಲ್ವನ್‌-1ʼ ಭರ್ಜರಿ ಯಶಸ್ಸು ಗಳಿಸಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿತ್ತು. ಇದೀಗ ʼಪೊನ್ನಿಯಿನ್‌ ಸೆಲ್ವನ್‌-2ʼ ಬಿಡುಗಡೆಗೆ ಸಜ್ಜಾಗಿದೆ. ತಮಿಳಿನ ಸ್ಟಾರ್‌ ನಟ ಚಿಯಾನ್‌ ವಿಕ್ರಮ್‌ ಆದಿತ್ಯ ಕರಿಕಾಳನ್‌ ಪಾತ್ರದಲ್ಲಿ ನಟಿಸಿದ್ದು, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ, ತ್ರಿಷಾ ಕೃಷ್ಣನ್‌, ಪ್ರಕಾಶ್‌ ರಾಜ್‌, ಕಿಶೋರ್‌ ಕುಮಾರ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು, ʼಲೈಕಾ ಪ್ರೊಡಕ್ಷನ್ಸ್‌ʼ ಬಂಡವಾಳ ಹೂಡಿದೆ.

ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ

ಬಾಲಿವುಡ್‌ನ ಖ್ಯಾತ ನಟ ಇರ್ಫಾನ್‌ ಖಾನ್‌ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅವರು ನಟಿಸಿದ್ದ ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ ಚಿತ್ರ ಈ ವಾರ ತೆರೆಗೆ ಬರಲು ಸಜ್ಜಾಗಿದೆ. ರಾಜಸ್ತಾನದ ಮರುಭೂಮಿಗೆ ಹೊಂದಿಕೊಂಡಿರುವ ಬುಡಕಟ್ಟು ಜನರ ಬದುಕಿನ ಸುತ್ತ ಚಿತ್ರದ ಕಥೆಯನ್ನು ಭಾವನಾತ್ಮಕವಾಗಿ ಹೆಣೆಯಲಾಗಿದೆ. ಹಾಲಿವುಡ್‌ನ ಖ್ಯಾತ ನಟಿ ಗೋಲ್ಶಿಫ್ತೆ ಫರಹಾನಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟಿ ವಹಿದಾ ರೆಹಮಾನ್‌, ಶಶಾಂಕ್‌ ಅರೋರಾ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಅನುಪ್‌ ಸಿಂಗ್‌ ನಿರ್ದೇಶನದ ಈ ಚಿತ್ರ 2017ರ ಲೊಕಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಅದಾದ ಬಳಿಕ ಯಾವುದೇ ಚಿತ್ರಮಂದಿರಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಇದೀಗ ಇರ್ಫಾನ್‌ ಅವರ ಸ್ಮರಣಾರ್ಥ ಈ ಚಿತ್ರ ತೆರೆಗೆ ಬರುತ್ತಿದೆ.

ಏಜೆಂಟ್‌

ತೆಲುಗಿನ ಖ್ಯಾತ ನಟ ಅಖಿಲ್‌ ಅಕ್ಕಿನೇನಿ ಅಭಿನಯದ ʼಏಜೆಂಟ್‌ʼ ಸಿನಿಮಾ ಕೂಡ ಈ ವಾರ ತೆರೆಗೆ ಬರಲಿದೆ. ಪತ್ತೆಧಾರಿ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಆ್ಯಕ್ಷನ್ ಮತ್ತು ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡಿದೆ. ಚಿತ್ರದಲ್ಲಿ ಅಖಿಲ್‌ ಅಕ್ಕಿನೇನಿ ಆ್ಯಕ್ಷನ್ ಲುಕ್‌ನಲ್ಲಿ ಮಿಂಚಿದ್ದು, ನಟಿ ಸಾಕ್ಷಿ ವೈದ್ಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂನ ಹಿರಿಯ ನಟ ಮಮ್ಮುಟ್ಟಿ, ಡಿನೋ ಮೊರಿಯಾ, ವಿಕ್ರಮ್‌ಜಿತ್‌ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುರೇಂದರ್‌ ರೆಡ್ಡಿ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಿದ್ದು, ಎಸ್‌ ತಮನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ʼಏಜೆಂಟ್‌ʼ ಚಿತ್ರಕ್ಕೆ ರಾಮಬ್ರಹ್ಮಂ ಸುಂಕರ ಬಂಡವಾಳ ಹೂಡಿದ್ದಾರೆ. ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರೋಗ್ಯದಲ್ಲಿ ದಿಢೀರ್ ಏರುಪೇರು: ಬಿಗ್‌ಬಿ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಆರೋಗ್ಯದಲ್ಲಿ ದಿಢೀರ್ ಆಗಿ...

ಅಶ್ಲೀಲ ವಿಡಿಯೋ ಪ್ರಸಾರ : 18 ಒಟಿಟಿ, 19 ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಕೇಂದ್ರ

ಹಲವು ಎಚ್ಚರಿಕೆಗಳ ನಡುವೆಯೂ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ 18 ಒಟಿಟಿ...

ತುಮಕೂರು | ತುಕಾಲಿ ಸಂತೋಷ್‌ ಕಾರು ಅಪಘಾತ; ಆಟೋ ಚಾಲಕ ಸಾವು

ಬಿಗ್‌ಬಾಸ್‌ ಸೀಸನ್ 10ರ ಸ್ಪರ್ಧಿ, ಹಾಸ್ಯ ನಟ ತುಕಾಲಿ ಸಂತೋಷ್ ಅವರ...

ದೇಶ ವಿಭಜಿಸಲು, ಸೌಹಾರ್ದತೆ ಕದಡಲು ಸಿಎಎ ಜಾರಿ: ನಟ ಕಮಲ್ ಹಾಸನ್

ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರನ್ನು ವಿಭಜಿಸಲು ಮತ್ತು ಸಾಮರಸ್ಯವನ್ನು ನಾಶಮಾಡಲು ಕೇಂದ್ರ...