ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ನಯನತಾರ ನಟನೆಯ ‘ಅನ್ನಪೂರ್ಣಿ’ ಸಿನಿಮಾ ವಿವಾದಕ್ಕೀಡಗಿದೆ. ಹಿಂದೂ ದಾರ್ಮಿಕ ನಂಬಿಕೆಗಳಿಗೆ ಧಕ್ಕೆ ಹಾಗೂ ಲವ್ ಜಿಹಾದ್ ಒಳಗೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮುಖಂಡರೊಬ್ಬರು ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಹಿಂದೂ ಸಂಘಟನೆಯ ಮುಖಂಡ ರಮೇಶ್ ಸೋಲಂಕಿ ಅವರು, ‘ಅನ್ನಪೂರ್ಣಿ’ ಸಿನಿಮಾದ ನಾಯಕಿ ಹಿಜಾಬ್ ಧರಿಸಿ ನಮಾಜ್ ಮಾಡುವುದು. ಆಕೆಯ ಸ್ನೇಹಿತ ನಾಯಕಿಯನ್ನು ಲವ್ ಜಿಹಾದ್‌ಗೆ ಒತ್ತಾಯಿಸಿ ಮತಾಂತರಕ್ಕೆ ಆಮಿಶವೊಡ್ಡುವುದು ಕೂಡ ಸಿನಿಮಾದಲ್ಲಿ ಒಳಗೊಂಡಿದೆ. ಇದರ ಜೊತೆಗೆ ಭಗವಾನ್ ರಾಮ ಮತ್ತು ಆತನ ಪತ್ನಿ ಸೀತಾ ಕೂಡ ಮಾಂಸಾಹಾರಿಗಳೆನ್ನುವ ದೃಶ್ಯಗಳಿವೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಾಯಕಿ ನಯನತಾರ, ನಿರ್ದೇಶಕ ನಿಲೇಶ್ ಕೃಷ್ಣ, ನಿರ್ಮಾಪಕರಾದ ಆರ್ ರವೀಂದ್ರ,ಜಿತಿನ್ ಸೇಠಿ,ಪುನೀತ್ ಗೋಯಂಕಾ, ಝೀ ಸ್ಟುಡಿಯೋ ಸಿಬಿಒ ಹಾಗೂ ಭಾರತದ ನೆಟ್‌ಫ್ಲಿಕ್ಸ್ ಮುಖ್ಯಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ದೂರು ದಾಖಲಿಸಿರುವ ಬಗ್ಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಮೇಶ್ ಸೋಲಂಕಿ, ಈ ಕುರಿತು ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಮತ್ತು ಚಿತ್ರದ ನಿರ್ಮಾಪಕರು ಮತ್ತು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾಯಕಿ ನಯನತಾರ ಒಳಗೊಂಡ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗಷ್ಟೆ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಕೂಡ ರಾಮ ಮಾಂಸಹಾರಿ ಎಂದು ಹೇಳಿಕೆ ನೀಡಿ ನಂತರ ವಿಷಾದ ವ್ಯಕ್ತಪಡಿಸಿದ್ದರು.
ನಯನತಾರ ನಟನೆಯ ‘ಅನ್ನಪೂರ್ಣಿ’ ಡಿಸೆಂಬರ್ 1ರಂದು ತಮಿಳುನಾಡಿನಲ್ಲಿ ಬಿಡುಗಡೆಯಾಗಿತ್ತು. ಆದರೆ ಡಿ.29ರಂದು ಒಟಿಟಿಯಲ್ಲಿ ಹಿಂದಿ ಸೇರಿ ದಕ್ಷಿಣ ರಾಜ್ಯಗಳ ಭಾಷೆಗಳಲ್ಲಿ ಬಿಡುಗಡೆಯಾದ ನಂತರ ದೂರು ದಾಖಲಿಸಲಾಗಿದೆ.