5 ಲಕ್ಷ ಮೌಲ್ಯದ ವಜ್ರದ ಆಭರಣ ಕದ್ದಿದ್ದ ವ್ಯಕ್ತಿ
ಕಳ್ಳತನವಾದ ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ
ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಅವರ ಮನೆಯಲ್ಲಿ ವಜ್ರದ ಆಭರಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಮನೆಕೆಲಸದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮೇ 16ರಂದು ಅರ್ಪಿತಾ ಖಾನ್ ತಮ್ಮ ಕೋಣೆಯಲ್ಲಿ ಮೇಕಪ್ ಸಾಮಗ್ರಿಗಳ ಜೊತೆಗೆ ಇರಿಸಿದ್ದ 5 ಲಕ್ಷ ಮೌಲ್ಯದ ವಜ್ರದ ಕಿವಿಯೋಲೆಗಳು ದಿಢೀರ್ ಕಾಣೆಯಾಗಿವೆ. ಆಭರಣ ಕಾಣೆಯಾಗಿದ್ದನ್ನು ಕಂಡು ಗಾಬರಿಗೊಂಡ ಅರ್ಪಿತಾ ಕುಟುಂಬಸ್ಥರು ಮತ್ತು ಮನೆಯಲ್ಲಿದ್ದ ಸಹಾಯಕ ಸಿಬ್ಬಂದಿಯ ಬಳಿ ವಿಚಾರಿಸಿದ್ದಾರೆ. ಆ ಹೊತ್ತಿಗಾಗಲೇ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ ಸಂದೀಪ್ ಆಭರಣದ ಜೊತೆಗೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
4 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ಆತ ತನ್ನ ಜೊತೆಗಿದ್ದ ಬೇರೆ ಯಾರಿಗೂ ಮಾಹಿತಿ ನೀಡದೆ ಮನೆಯಿಂದ ಹೊರ ಹೋಗಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅರ್ಪಿತಾ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼದಹಾಡ್ʼ ವೆಬ್ ಸರಣಿಗೆ ಹಂತಕ ಸೈನೇಡ್ ಮೋಹನ್ ಕಥೆ ಸ್ಫೂರ್ತಿಯೇ?
ದೂರಿನನ್ವಯ ಸೆಕ್ಷನ್ 381ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆಲವೇ ಹೊತ್ತಿನಲ್ಲಿ ಆರೋಪಿಯನ್ನು ಬಂಧಿಸಿದ್ದು, ಆತನ ಮನೆಯಲ್ಲಿದ್ದ ಅರ್ಪಿತಾ ಅವರ ವಜ್ರದ ಆಭರಣವನ್ನು ಕೂಡ ವಶಪಡಿಸಿಕೊಂಡಿದ್ದಾರೆ.