15 ದಿನದೊಳಗೆ ʼಓಸಿಐ ಕಾರ್ಡ್ʼ ಹಿಂದಿರುಗಿಸಲು ಸೂಚನೆ
ಕಾನೂನು ಹೋರಾಟಕ್ಕೆ ಸಜ್ಜಾದ ನಟ ಚೇತನ್ ಕುಮಾರ್
‘ಆ ದಿನಗಳು’ ಖ್ಯಾತಿಯ ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚೇತನ್, ಕೇಂದ್ರದ ಈ ನಡೆಯ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಚೇತನ್, “2022ರ ಜೂನ್ನಲ್ಲಿ ನೀವು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದೀರಿ, ನಿಮ್ಮ ವಿಸಾವನ್ನು ಯಾಕೆ ರದ್ದು ಮಾಡಬಾರದು ಎಂದು ಶೋಕಾಸ್ ನೋಟಿಸ್ ನೀಡಿದ್ದರು. ಆಗ ಗೃಹ ಇಲಾಖೆಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸ್ಪಷ್ಟನೆ ನೀಡಿದ್ದೆ. ಕಳೆದ ಶುಕ್ರವಾರ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೀರಿ ಎಂದು ಆರೋಪಿಸಿ ನನ್ನ ವೀಸಾವನ್ನು ರದ್ದುಗೊಳಿಸಿ ಕೇಂದ್ರ ಗೃಹ ಇಲಾಖೆ ನೋಟಿಸ್ ನೀಡಿದೆ. 15 ದಿನಗಳ ಒಳಗಾಗಿ ನನ್ನ ʼಓಸಿಐ ಕಾರ್ಡ್ʼ (ಭಾರತೀಯ ಮೂಲದ ವಿದೇಶಿ ಪ್ರಜೆಗೆ ಭಾರತದಲ್ಲಿ ಅನಿರ್ದಿಷ್ಟ ಅವಧಿಯವರೆಗೆ ವಾಸಿಸಲು ಮತ್ತು ಕೆಲಸ ಮಾಡಲು ಇರುವ ವಲಸೆ ವ್ಯವಸ್ಥೆ) ಅನ್ನು ಹಿಂತಿರುಗಿಸುವಂತೆ ಆದೇಶಿಸಿದೆ. ಕೇಂದ್ರ ಗೃಹ ಇಲಾಖೆಯ ಈ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೃತಿ ಚೌರ್ಯ ಪ್ರಕರಣ | ʼವರಾಹ ರೂಪಂʼ ಹಾಡಿನ ಪ್ರಸಾರಕ್ಕೆ ಮತ್ತೆ ತಡೆ
ಕೇಂದ್ರದ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಚೇತನ್, “ನಮ್ಮ ಸಿದ್ಧಾಂತ ಮತ್ತು ಹೋರಾಟ ಸರ್ಕಾರಕ್ಕೆ ಇಷ್ಟವಾಗಿಲ್ಲ. ʼಬ್ರಾಹ್ಮಣ್ಯ ಲಾಬಿʼ ಎಂದು ಟ್ವೀಟ್ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಿದರು. ಒಂದೂವರೆ ವರ್ಷದ ಹಿಂದೆಯೇ ನನ್ನ ಭದ್ರತೆ ನೀಡಿದ್ದ ಗನ್ ಮ್ಯಾನ್ನನ್ನು ಸರ್ಕಾರ ಹಿಂಪಡೆದುಕೊಂಡಿದೆ. ಸತ್ಯದ ಪರ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊರಿಸಿ ಮೂರು ದಿನ ಜೈಲಿಗೆ ಕಳುಹಿಸಿದ್ದರು. ನಾನು ಎಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇನೆ? ನಾನು ಈ ದೇಶದಲ್ಲಿ ಇರಬಾರದು ಎಂದು ಉದ್ದೇಶ ಪೂರ್ವಕವಾಗಿಯೇ ವೀಸಾ ರದ್ದು ಮಾಡಿದ್ದಾರೆ. ನನ್ನ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ನಾನು ಈ ದೇಶದವನು. ನನ್ನ ಬಳಿಯೂ ʼಆಧಾರ್ ಕಾರ್ಡ್ʼ, ʼಪ್ಯಾನ್ ಕಾರ್ಡ್ʼಗಳಿವೆ. 2018ರಲ್ಲಿ ʼಓಸಿಐ ಕಾರ್ಡ್ʼ ಸಿಕ್ಕಿದೆ. ನಾನು ಕೂಡ ಈ ದೇಶಕ್ಕೆ ಆದಾಯ ತೆರಿಗೆ ಕಟ್ಟುತ್ತೇನೆ. ನನಗೆ ಅಮೆರಿಕಕ್ಕೆ ಹೋಗಲು ಮನಸ್ಸಿಲ್ಲ. ಈ ಬಗ್ಗೆ ವಕೀಲರ ಬಳಿ ಮಾತನಾಡಿದ್ದೇನೆ. ಕಾನೂನು ಹೋರಾಟ ನಡೆಸುತ್ತೇನೆ” ಎಂದಿದ್ದಾರೆ.