ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯಲ್ಲಿ ನಡೆದ ನಟ ನಾಗಭೂಷಣ್ ಕಾರು ಅಪಘಾತವನ್ನು ‘ಹಿಟ್ ಅಂಡ್ ರನ್’ ಪ್ರಕರಣ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಅಪಘಾತ ಮಾಡಿ ನಾನು ಅಲ್ಲಿಂದ ಓಡಿಲ್ಲ. ಆ ಕ್ಷಣದಲ್ಲಿ ಒಬ್ಬ ಮನುಷ್ಯನಾಗಿ ಏನು ಮಾಡಲಿಕ್ಕೆ ಏನು ಸಾಧ್ಯವೋ ಅವೆಲ್ಲವನ್ನೂ ಮಾಡಿದ್ದೇನೆ. ಯಾಕೆಂದರೆ ನನಗೂ ಕೂಡ ತಂದೆ ಕಳೆದುಕೊಂಡ ನೋವು ಗೊತ್ತಿದೆ’ ಎಂದು ತಿಳಿಸಿದ್ದಾರೆ.
ಅಪಘಾತದ ಬಳಿಕ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ನಾಗಭೂಷಣ್, ಅಪಘಾತವಾದ ನಂತರ ನಾನು ಎಲ್ಲಿಗೂ ಓಡಿ ಹೋಗಿಲ್ಲ. ನನ್ನ ಕಾರು ಅಲ್ಲಿಯೇ ಇತ್ತು. ನಾನು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದೆ. ಪೊಲೀಸರ ತನಿಖೆಗೂ ನಾನು ಹೋಗಿರುವೆ. ದಯವಿಟ್ಟು ಹಿಟ್ ಅಂಡ್ ರನ್ ಕೇಸು ಎಂದು ಸುದ್ದಿ ಬಿತ್ತರಿಸಬೇಡಿ. ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ಹೇಳುತ್ತಾ ಭಾವುಕರಾದರು.
‘ನನ್ನ ಕಾರು ಕೂಡ ಸ್ಪೀಡ್ ಆಗಿ ಇರಲಿಲ್ಲ. ವೇಗವಾಗಿ ಓಡಿಸುವುದಕ್ಕೂ ಆ ರಸ್ತೆಯಲ್ಲಿ ಆಗುವುದಿಲ್ಲ. ದಿಢೀರಾಗಿ ಆ ದಂಪತಿ ಫುಟ್ಪಾತ್ನಿಂದ ರಸ್ತೆಗೆ ಇಳಿದರು. ಹಾಗಾಗಿ ನನಗೆ ಏನೂ ಮಾಡಲಿಕ್ಕೆ ಆಗಲಿಲ್ಲ. ಕಾರು ಅಪಘಾತವಾಯಿತು. ಆ ಕುಟುಂಬಕ್ಕೆ ಆದ ನೋವು ನನಗೆ ಅರಿವಿದೆ. ಅವರ ಕುಟುಂಬವನ್ನು ಸಂಪರ್ಕಿಸಿದ್ದೇವೆ. ಮುಂದಿನ ದಿನಗಳಲ್ಲಿ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡುವೆ’ ಎಂದು ನಾಗಭೂಷಣ್ ತಿಳಿಸಿದ್ದಾರೆ.
‘ನಾನು ಚಿಕ್ಕವನಿರುವಾಗ ಗೌರಿ ಹಬ್ಬದ ದಿನದಂದು ನನ್ನ ತಂದೆಯು ಇಂಥದ್ದೇ ಕಾರು ಅಪಘಾತದಲ್ಲಿ ನಿಧನರಾದರು. ಅದನ್ನು ಮಾಡಿದ್ದು ಯಾರು ಎನ್ನುವುದು ಈವರೆಗೂ ನಮಗೆ ಗೊತ್ತಿಲ್ಲ. ಅಪಘಾತ ಮಾಡಿದ ನಂತರ ಯಾರೂ ಓಡಿ ಹೋಗಬೇಡಿ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ. ನನ್ನ ತಂದೆಯ ಘಟನೆಯಿಂದ ನಾನು ಕಲಿತದ್ದು ಇದನ್ನೇ’ ಎಂದು ತಿಳಿಸಿದರು.
‘ಘಟನೆಯ ಬಗ್ಗೆ ಹೆಚ್ಚಿನ ವಿವರ ಹೇಳಿದರೆ ತಪ್ಪಾಗುತ್ತದೆ. ಯಾಕೆಂದರೆ ಅದು ತನಿಖಾ ಹಂತದಲ್ಲಿ ಇದೆ. ಪೊಲೀಸ್ನವರು ಯಾವಾಗ ಕರೆದರೂ ನಾನು ಹೋಗುವೆ. ತನಿಖಾಧಿಕಾರಿಗಳಿಗೆ ಸಹಕರಿಸುವೆ. ಈಗಾಗಲೇ ವಿಚಾರಣೆಗೆ ಹೋಗಿಯೂ ಬಂದಿರುವುದಾಗಿ ನಾಗಭೂಷಣ್ ತಿಳಿಸಿದರು. ಇನ್ನೂ ಆ ಘಟನೆಯ ನೋವಿನಿಂದ ಆಚೆ ಬರುವುದಕ್ಕೆ ಸಾಧ್ಯವಾಗಿಲ್ಲ. ಮಾನಸಿಕವಾಗಿ ಕುಗ್ಗಿದ್ದೇನೆ’ ಎಂದು ನಟ ನಾಗಭೂಷಣ್ ತಿಳಿಸಿದ್ದಾರೆ.
ಕಳೆದ ಸೆ.30ರಂದು ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ಬೆಂಗಳೂರಿನ ಉತ್ತರಹಳ್ಳಿಯ ವಸಂತ ನಗರ ಮುಖ್ಯ ರಸ್ತೆಯಲ್ಲಿ ಅಪಘಾತವಾಗಿತ್ತು. ಘಟನೆಯಲ್ಲಿ ಎಸ್ ಪ್ರೇಮಾ(48) ಎಂಬವರು ಮೃತಪಟ್ಟಿದ್ದರೆ, ಅವರ ಪತಿ ಬಿ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದರು. ಅವರಿನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.