ಸಿನಿ ರಸಿಕರ ಗಮನ ಸೆಳೆಯುತ್ತಿದೆ ʼದಿ ಸಾಂಗ್ ಆಫ್ ಸ್ಕಾರ್ಪಿಯನ್ಸ್ʼ ಟ್ರೈಲರ್
ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ ಚಿತ್ರ
ಬಾಲಿವುಡ್‌ನ ಖ್ಯಾತ ನಟ ಇರ್ಫಾನ್ ಖಾನ್ ನಮ್ಮನ್ನಗಲಿ ಮೂರು ವರ್ಷಗಳು ಕಳೆದಿವೆ. ಆದರೆ, ಅಭಿಮಾನಿಗಳ ಮನಸ್ಸಿನಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ. ಇರ್ಫಾನ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅವರು ನಟಿಸಿದ್ದ ʼದಿ ಸಾಂಗ್ ಆಫ್ ಸ್ಕಾರ್ಪಿಯನ್ಸ್ʼ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಬುಧವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ರಾಜಸ್ತಾನದ ಮರುಭೂಮಿಗೆ ಹೊಂದಿಕೊಂಡಿರುವ ಬುಡಕಟ್ಟು ಜನರ ಬದುಕಿನ ಸುತ್ತ ಚಿತ್ರದ ಕಥೆಯನ್ನು ಭಾವನಾತ್ಮಕವಾಗಿ ಹೆಣೆಯಲಾಗಿದೆ. ಇರ್ಫಾನ್ ಖಾನ್ ಹಳ್ಳಿಗನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಹಾಲಿವುಡ್‌ನ ಖ್ಯಾತ ನಟಿ ಗೋಲ್ಶಿಫ್ತೆ ಫರಹಾನಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟಿ ವಹಿದಾ ರೆಹಮಾನ್, ಶಶಾಂಕ್ ಅರೋರಾ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಖ್ಯಾತ ನಿರ್ದೇಶಕ ಅನುಪ್ ಸಿಂಗ್ ನಿರ್ದೇಶನದ ಈ ಚಿತ್ರ 2017ರ ಲೊಕಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಇದೇ ಏಪ್ರಿಲ್ 29ಕ್ಕೆ ಇರ್ಫಾನ್ ಖಾನ್ ನಮ್ಮನ್ನಗಲಿ 3 ವರ್ಷ ಕಳೆಯಲಿದೆ. ಈ ಹಿನ್ನೆಲೆ ಅವರ ಸ್ಮರಣಾರ್ಥ ʼದಿ ಸಾಂಗ್ ಆಫ್ ಸ್ಕಾರ್ಪಿಯನ್ಸ್ʼ ಚಿತ್ರವನ್ನು ಏ. 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಇರ್ಫಾನ್ ಖಾನ್ ಸಾವನ್ನಪ್ಪುವ ಒಂದು ತಿಂಗಳು ಮುನ್ನ ಅಂದರೆ 2020ರ ಮಾರ್ಚ್ 13ರಂದು ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ʼಅಂಗ್ರೇಜಿ ಮೀಡಿಯಂʼ ಚಿತ್ರ ತೆರೆಕಂಡಿತ್ತು. ಇದು ಅವರು ಕೊನೆಯದಾಗಿ ನಟಿಸಿದ್ದ ಚಿತ್ರವಾಗಿತ್ತು. ಆದರೆ, ʼದಿ ಸಾಂಗ್ ಆಫ್ ಸ್ಕಾರ್ಪಿಯನ್ಸ್ʼ ಸಿನಿಮಾ, ಚಲನಚಿತ್ರೋತ್ಸವವನ್ನು ಹೊರತುಪಡಿಸಿ ಯಾವುದೇ ಚಿತ್ರಮಂದಿರಗಳಲ್ಲಿ ಈವರೆಗೆ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಇದೀಗ ಇರ್ಫಾನ್ ಅವರ ಸ್ಮರಣಾರ್ಥ ಈ ಚಿತ್ರ ತೆರೆಗೆ ಬರುತ್ತಿದೆ.