ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ. ಕೇಶವಮೂರ್ತಿಗೆ ಹೈಕೋರ್ಟ್‌ನಿಂದ ಕಾರ್ತಿಕ್, ನಿಖಿಲ್ ನಾಯಕ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಜಾಮೀನು ಸಿಕ್ಕಿದೆ.
ಈ ಮೂವರು ರೇಣುಕಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ವೇಳೆ ಆರೋಪಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷಿನಾಶ ಮಾಡಲು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಪೊಲೀಸರು ಸಾಕ್ಷ್ಯನಾಶ ಆಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಕೊಲೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಮೂವರಿಗೆ ಇಂದು ಜಾಮೀನು ಸಿಕ್ಕಿದೆ.
ಜಾಮೀನು ಕೋರಿ ಎ16 ಕೇಶವ್ ಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಒಬ್ಬರ ಶ್ಯೂರಿಟಿ, ತನಿಖೆ ಸಹಕರಿಸಲು ಸೂಚಿಸಿ ಜಾಮೀನು ನೀಡಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 70 ಲಕ್ಷ ರೂ. ಸಿಕ್ಕಿರುವ ಕಾರಣ ಐಟಿ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಅವರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮನವಿಗೆ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಕೋರ್ಟ್ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದರ್ಶನ್ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.
