ವಿ. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಿಚ್ಚ 46 ಸಿನಿಮಾ ನಿರ್ಮಾಣ
ವಿಜಯ್ ಕಾರ್ತಿಕೇಯನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ
ಒಂದು ವರ್ಷದ ದೀರ್ಘ ಅವಧಿಯ ನಂತರ ನಟ ಸುದೀಪ್ ಅವರ ಹೊಸ ಸಿನಿಮಾದ ‘ಕಿಚ್ಚ 46’ ಹೆಸರಿನ ಟೀಸರ್ ಭಾನುವಾರ (ಜುಲೈ 2) ಬಿಡುಗಡೆಯಾಗಿದೆ.
ವಿಕ್ರಾಂತ್ ರೋಣ ಸಿನಿಮಾ ಬಳಿಕ ನಟ ಸುದೀಪ್ ಕೆಲ ಕಾಲ ವಿರಾಮ ಪಡೆದಿದ್ದರು. ಇತ್ತೀಚೆಗೆ ಹೊಸ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಸುದೀಪ್ ಸಿನಿಮಾ ಮಾಹಿತಿ ಬಗ್ಗೆ ಎದುರು ನೋಡುತ್ತಿದ್ದ ಅಭಿಮಾನಿಗಳ ಕುತೂಹಲವನ್ನು ಈ ಟೀಸರ್ ತಣಿಸಿದೆ.
ಕಿಚ್ಚ 46 ಹೆಸರಿನ ಚಿತ್ರ ಇತ್ತೀಚೆಗೆ ಸೆಟ್ಟೇರಿತ್ತು. ಸಿನಿಮಾಗೆ ಶೀರ್ಷಿಕೆಯನ್ನು ಇನ್ನೂ ನೀಡಿಲ್ಲ. ಇದು ಸುದೀಪ್ ಅವರ 46 ನೇ ಚಿತ್ರವಾದ್ದರಿಂದ ಸದ್ಯ ಟೀಸರ್ ಈ ಹೆಸರಿನಿಂದಲೇ ಬಿಡುಗಡೆಯಾಗಿದೆ.
ಸಿನಿಮಾದ ಪ್ರೋಮೊ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದಾಗಿ ಕಿಚ್ಚ ಸುದೀಪ್ ಇತ್ತೀಚೆಗೆ ಹೇಳಿದ್ದರು. ಈಗ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಸುದೀಪ್ ಅವರು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅವರ ಪಾತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಗರಿಗೆದರಿದೆ.
ಕಿಚ್ಚ 46 ಹೆಸರಿನ ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ನಟ ಸುದೀಪ್ ಅಭಿಮಾನಿಗಳ ವಲಯದಲ್ಲೂ ಟೀಸರ್ ವೈರಲ್ ಆಗಿದೆ. ಟೀಸರ್‌ನಲ್ಲಿ ಸುದೀಪ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕೊನೆಯಲ್ಲಿ ‘ನಾನು ಮನುಷ್ಯ ಅಲ್ಲ, ರಾಕ್ಷಸ’ ಎಂಬ ಸುದೀಪ್ ಸಂಭಾಷಣೆ ಇದೆ.
ಟೀಸರ್‌ನಲ್ಲಿ ರಕ್ತಪಾತದ ದೃಶ್ಯಗಳೇ ತುಂಬಿವೆ. ಸುದೀಪ್ ಮೈಗೆ ಅಂಟಿದ ರಕ್ತದ ಕಲೆ, ಬಸ್ ಒಳಗೆ ಸುತ್ತಲೂ ಬಿದ್ದಿರುವ ಮೃತದೇಹದ ಭಾಗಗಳು ಮತ್ತು ಬಂದೂಕು ಹಿಡಿದು ಖಳನಾಯಕನ ತಲೆಗೆ ಗುರಿಯಿಟ್ಟು ಗುಂಡಿಕ್ಕುವ ದೃಶ್ಯ ಮತ್ತು ಎದುರಾಳಿಗಳನ್ನು ಕಾದಾಟಕ್ಕೆ ಆಹ್ವಾನಿಸುವ ದೃಶ್ಯದ ಜತೆಗೆ ‘ನಾನು ಮನಷ್ಯನಲ್ಲ, ರಾಕ್ಷಸ’ ಎಂಬ ಡೈಲಾಗ್‌ನೊಂದಿಗೆ ಟೀಸರ್ ಮುಕ್ತಾಯವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆಗೊಂಡಿದೆ.
ಸಿನಿಮಾ ಶೀರ್ಷಿಕೆಯ ಅಡಿಬರಹವಾಗಿ ‘ರಾಕ್ಷಸನ ಹೋರಾಟ ಆರಂಭ’ ಎಂಬ ಸಾಲನ್ನು ಬರೆದುಕೊಂಡಿರುವ ಸುದೀಪ್ ಟೀಸರ್ ಅನ್ನು ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇದು ಸ್ಟೇಷನ್ ಮಾಸ್ಟರ್ ಮಾಡುವ ಕೆಲಸ; ಪ್ರಧಾನಿಯ ವಂದೇ ಭಾರತ್ ಉದ್ಘಾಟನೆ ಛೇಡಿಸಿದ ಪ್ರಕಾಶ್ ರೈ
ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ವಿ. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಬಾಲಿ, ತುಪಾಕಿ ಮತ್ತು ಅಸುರನ್ ಮೊದಲಾದ ಹಿಟ್ ಸಿನಿಮಾಗಳ ನೀಡಿರುವ ಕಲೈಪುಲಿ ಎಸ್. ತನು ಅವರು ಕಿಚ್ಚನ 46ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಸಹ ನಿರ್ಮಾಣದ ಪಾಲು ಹೊಂದಿದೆ.
ಈ ಬಾರಿಯೂ ಸುದೀಪ್ ಅವರು ಹೊಸ ಪ್ರತಿಭೆಗೆ ಮಣೆ ಹಾಕಿದ್ದಾರೆ. ಕಿಚ್ಚ 46 ಚಿತ್ರ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ.