ಕನ್ನಡ ಚಿತ್ರರಂಗದ ಸದ್ಯದ ದೊಡ್ಡ ಸಮಸ್ಯೆ ಯಾವುದು? ರಾಜ್ ಬಿ ಶೆಟ್ಟಿ ಹೇಳಿದ್ದು ನಿಜವೇ?

Date:

Advertisements

ಎಷ್ಟೇ ಅದ್ಧೂರಿ ಮೇಕಿಂಗ್ ಇರಲಿ, ಒಂದು ಚಿತ್ರಕ್ಕೆ ಉತ್ತಮ ಕಥೆಯ ಅಡಿಪಾಯ ಇಲ್ಲವೆಂದರೆ, ಉತ್ತಮ ಸ್ಕ್ರಿಪ್ಟ್‌ನ ಬೆಂಬಲ ಇಲ್ಲವೆಂದರೆ, ಅದು ‘ಕಬ್ಜ’ದಂತೆ, ‘ಕ್ರಾಂತಿ’ಯಂತೆ ವಿಫಲವಾಗುವುದು ಗ್ಯಾರಂಟಿ. ರಾಜ್ ಬಿ ಶೆಟ್ಟಿ ಹೇಳಿದಂತೆ, ಕನ್ನಡ ಚಿತ್ರರಂಗದಲ್ಲಿ ಸ್ಕ್ರಿಪ್ಟ್ ರೈಟರ್ಸ್ ಹೆಚ್ಚಾಗಬೇಕೆಂದರೆ, ಅವರಿಗೆ ಉತ್ತಮ ಸಂಭಾವನೆ ನೀಡುವಂತಾಗಬೇಕು.

ಕನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಒಂದು ಮುಖ್ಯ ವಿಚಾರದ ಬಗ್ಗೆ ಗಮನ ಸೆಳೆದಿದ್ದಾರೆ. ತಮ್ಮ ನಟನೆಯ ‘ಟೋಬಿ’ ಸಿನಿಮಾದ ಬಿಡುಗಡೆಪೂರ್ವ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಾಜ್ ಶೆಟ್ಟಿ, ಹೋದಲ್ಲಿ ಬಂದಲ್ಲಿ ಕನ್ನಡ ಚಿತ್ರರಂಗದ ಒಂದು ದೊಡ್ಡ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ.       

ಅಂದಹಾಗೆ, ರಾಜ್ ಬಿ ಶೆಟ್ಟಿ, ಪದೇ ಪದೆ ಪ್ರಸ್ತಾಪಿಸುತ್ತಿರುವ ಕನ್ನಡ ಚಿತ್ರರಂಗದ ಆ ಸಮಸ್ಯೆ ಕಥೆಗಾರರದ್ದು. ಕನ್ನಡ ಚಿತ್ರರಂಗದಲ್ಲಿ ಕಥೆಗಾರರಿಗೆ ಬೆಲೆ ಇಲ್ಲ ಎನ್ನುವುದು ಅವರ ಮಾತು.

Advertisements

ಇದು ಹೊಸ ವಿಚಾರವೇನೂ ಅಲ್ಲ. ದಶಕಗಳಿಂದಲೂ ಅನೇಕರು ಹೇಳುತ್ತಲೇ ಬಂದಿರುವ ವಿಚಾರ. ಕನ್ನಡ ಚಿತ್ರಗಳು ನೆಲಕಚ್ಚಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಉದ್ಯಮದವರಿಗೆ ಕನ್ನಡ ಚಿತ್ರರಂಗದಲ್ಲಿ ಕಥೆಗಾರರಿಲ್ಲ ಎನ್ನುವುದು ನೆನಪಾಗುತ್ತದೆ.

ಕಳೆದ ವರ್ಷ ಕನ್ನಡ ಚಿತ್ರರಂಗ ‘ಕಾಂತಾರ’ ಮತ್ತು ‘ಕೆಜಿಎಫ್ 2’ ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿತ್ತು. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ನೋಡುತ್ತಿದೆ ಎನ್ನುವ ಹೆಮ್ಮೆಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದವು. ಆದರೆ, ಒಂದೇ ವರ್ಷದಲ್ಲಿ ಪರಿಸ್ಥಿತಿ ತಿರುಗುಮರುಗಾಗಿದೆ. ‘ಕ್ರಾಂತಿ’ ಮತ್ತು ‘ಕಬ್ಜ’ದಂಥ ದೊಡ್ಡ ಚಿತ್ರಗಳು, ಮೇಕಿಂಗ್‌ನ ಹೊರತಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ಪಲ್ಟಿ ಹೊಡೆದಿದ್ದು ಕಥೆಯ ಕಾರಣದಿಂದಲೇ ಎನ್ನುವುದು ಚಿತ್ರರಂಗದ ಅನುಭವಕ್ಕೆ ಬಂದಿದೆ.  

ಒಂದು ಕಡೆ ಬಿಡುಗಡೆಯಾದ ದೊಡ್ಡ ಬಜೆಟ್‌ನ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲುತ್ತಿವೆ. ಇನ್ನೊಂದೆಡೆ ಸ್ಟಾರ್‌ಗಳ ಚಿತ್ರಗಳೇ ಬರುತ್ತಿಲ್ಲ. ಸಣ್ಣ ಚಿತ್ರಗಳು ಚೆನ್ನಾಗಿದ್ದರೂ ಅವನ್ನು ನೋಡಲು ಜನ ಥಿಯೇಟರ್‌ಗಳತ್ತ ಪ್ರೇಕ್ಷಕರು ಪಾದವೂರುತ್ತಿಲ್ಲ. ಅಪರೂಪಕ್ಕೆ ‘ಡೇರ್ ಡೆವಿಲ್ ಮುಸ್ತಾಫಾ’ದಂಥ ಕಾದಂಬರಿ ಆಧಾರಿತ ಚಿತ್ರ ಬಂದು ಒಂದು ಚೇತೋಹಾರಿ ಅನುಭವ ನೀಡಿತು ಎನ್ನುವುದನ್ನು ಬಿಟ್ಟರೆ, ಅತ್ಯುತ್ತಮ ಎನ್ನುವಂಥದ್ದು ಏನೂ ಘಟಿಸಲೇ ಇಲ್ಲ. ಇದರಿಂದ ಕನ್ನಡ ಚಿತ್ರ ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ರಾಜ್ ಬಿ ಶೆಟ್ಟಿ ಚಿತ್ರರಂಗದ ಮೂಲಭೂತ ಸಮಸ್ಯೆಯೊಂದರತ್ತ ಗಮನ ಸೆಳೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬರಹಗಾರರ ತೀವ್ರ ಕೊರತೆಯಿದೆ ಎನ್ನುವುದು ರಾಜ್ ಶೆಟ್ಟಿ ಅಭಿಪ್ರಾಯ. ಅದಕ್ಕೆ ಕಾರಣ ಕನ್ನಡ ಸಿನಿಮಾ ಉದ್ಯಮವು ಕಥೆಗಾರರನ್ನು ಬೆಂಬಲಿಸುತ್ತಿಲ್ಲ, ಪೋಷಿಸುತ್ತಿಲ್ಲ. ಇದರಿಂದಾಗಿ ಇವತ್ತು ಸ್ಕ್ರಿಪ್ಟ್ ಬರೆಯುವವರೇ ನಮ್ಮಲ್ಲಿ ಅಪರೂಪ ಎನ್ನುವಂತಾಗಿದೆ. ಇದರಿಂದಾಗಿಯೇ ಕನ್ನಡದಲ್ಲಿ ಒಳ್ಳೆ ಚಿತ್ರಗಳು ಬರುತ್ತಿಲ್ಲ. ಇದು ರಾಜ್ ಶೆಟ್ಟಿ ಮಾತಿನ ಸಾರಾಂಶ.

ಅವರ ಮಾತು ನೂರಕ್ಕೆ ನೂರು ನಿಜ. ಈ ಸಮಸ್ಯೆಗೆ ಪರಿಹಾರ ಏನು ಅನ್ನುವುದನ್ನೂ ಕೂಡ ರಾಜ್ ಬಿ ಶೆಟ್ಟಿಯೇ ಹೇಳಿದ್ದಾರೆ. ಬರಹಗಾರರಿಗೆ ಒಳ್ಳೆ ಸಂಭಾವನೆ ಕೊಡುವುದೇ ಅವರನ್ನು ಬೆಳೆಸುವ ಏಕೈಕ ಮಾರ್ಗ ಎನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ದಶಕದಿಂದೀಚೆಗೆ ಸಿನಿಮಾ ನಿರ್ಮಾಣದ ವೆಚ್ಚ ಭಾರೀ ಎನ್ನುವಷ್ಟು ಹೆಚ್ಚಾಗಿದೆ. ನೂರಾರು ಕೋಟಿ ರೂಪಾಯಿ ವೆಚ್ಚದ ಚಿತ್ರಗಳು ನಿರ್ಮಾಣವಾಗುತ್ತಿವೆ. ಸ್ಟಾರ್‌ಗಳು ಹತ್ತಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಒಂದು ಹಾಡಿನ ಚಿತ್ರೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡಿ ಅದ್ಧೂರಿ ಸೆಟ್‌ಗಳನ್ನು ನಿರ್ಮಿಸುತ್ತಾರೆ. ಒಂದು ಫೈಟ್‌ಗೆ ಹಣವನ್ನು ನೀರಿನಂತೆ ಚೆಲ್ಲುತ್ತಾರೆ. ಅಗತ್ಯವಿಲ್ಲದಿದ್ದರೂ ವಿದೇಶಗಳಲ್ಲಿ ಹಾಡನ್ನು ಚಿತ್ರೀಕರಿಸುತ್ತಾರೆ. ಆದರೆ, ಚಿತ್ರವೊಂದರ ಜೀವಾಳವಾದ ಕಥೆಗಾರನಿಗೆ, ಸ್ಕ್ರಿಪ್ಟ್ ರೈಟರ್‌ಗೆ ಸಂಭಾವನೆ ಕೊಡುವ ವಿಚಾರದಲ್ಲಿ ವಿಪರೀತ ಜುಗ್ಗತನ ಮಾಡುತ್ತಾರೆ. ಕಥೆಗೆ, ಸ್ಕ್ರಿಪ್ಟ್‌ಗೆ ಸಂಭಾವನೆ ಕೊಡುವ ಪದ್ಧತಿಯೇ ನಮ್ಮ ಚಿತ್ರರಂಗದಲ್ಲಿ ಇಲ್ಲ ಎನ್ನುವುದು ವಿಪರ್ಯಾಸವಾದರೂ ಸತ್ಯ.        

ತುಂಬಾ ಹೆಸರು ಮಾಡಿರುವ ಬರಹಗಾರನಿಗೂ ಇವತ್ತು ನಮ್ಮಲ್ಲಿ ಲಕ್ಷ ರೂಪಾಯಿ ಸಂಭಾವನೆ ಸಿಗುವುದಿಲ್ಲ. ಹಾಗೆಂದು, ಸಿನಿಮಾಗಳಿಗೆ ಕಥೆ ಬರೆಯುವುದು ಸರಳ ಕ್ರಿಯೆಯೇನಲ್ಲ; ಏಳೆಂಟು ತಿಂಗಳು, ಒಮ್ಮೊಮ್ಮೆ ವರ್ಷಗಟ್ಟಲೇ ಅದಕ್ಕಾಗಿ ಶ್ರಮಿಸಬೇಕು. ಡೈರೆಕ್ಟರ್‌ನಿಂದ ಹಿಡಿದು ಹೀರೋ, ಪ್ರೊಡ್ಯೂಸರ್ ಎಲ್ಲರಿಗೂ ಕಥೆ ಹೇಳಿ ಒಪ್ಪಿಸಬೇಕು. ಮುಖ್ಯವಾಗಿ, ಆ ಸಿನಿಮಾವನ್ನು ಕಮರ್ಷಿಯಲ್ ಆಗಿ ಗೆಲ್ಲಿಸಬೇಕು. ಇಷ್ಟೆಲ್ಲ ಆದರೂ ಆತನಿಗೆ ಸಿಗುವುದು ದುಗ್ಗಾಣಿ ಬೆಲೆ. ‘ಕೆಲವರು ತಿಂಗಳಿಗೆ ಐದು ಸಾವಿರ ಕೊಡುತ್ತಾರೆ. ಕೆಲವರು ಏಳೆಂಟು ತಿಂಗಳಿಗೆ ಸೇರಿಸಿ 25 ಸಾವಿರ ರೂಪಾಯಿ ಕೊಡುತ್ತಾರೆ. ಎಲ್ಲೋ ಕೆಲವರು ಅಪರೂಪಕ್ಕೆ ಲಕ್ಷ ರೂಪಾಯಿ ಕೊಡುತ್ತಾರೆ’ ಎಂದು ರಾಜ್ ಬಿ ಶೆಟ್ಟಿಯವರೇ ತಮ್ಮ ಸ್ವಾನುಭವವನ್ನು ಹೇಳಿಕೊಂಡಿದ್ದಾರೆ.

ಇದರಿಂದ ಏನಾಗಿದೆ ಎಂದರೆ, ನಮ್ಮಲ್ಲಿ ಕಥೆಗಾರರೇ ಸೃಷ್ಟಿಯಾಗುತ್ತಿಲ್ಲ. ಹಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಇತ್ಯಾದಿಗಳನ್ನು ಬರೆದುಕೊಂಡೇ ಬದುಕಿದ ಕೆ.ನಂಜುಂಡರಂಥವರ ದಾರುಣ ಅನುಭವಗಳು ನಮ್ಮ ಕಣ್ಣ ಮುಂದಿವೆ. 50ಕ್ಕೂ ಹೆಚ್ಚು ಚಿತ್ರಗಳಿಗೆ ಬರವಣಿಗೆ ಮಾಡಿರುವ ನಂಜುಂಡ, ಚಿತ್ರರಂಗದ ಇಂಥ ಧೋರಣೆಯಿಂದಾಗಿ ಅಸಹಾಯಕ ಬದುಕು ನಡೆಸಿ, ದೀನವಾದ ಸಾವು ಕಂಡರು.

ಈ ಕಾರಣಕ್ಕೆ ಇಂದು ಚಿತ್ರರಂಗಕ್ಕೆ ಯಾರೂ ಸ್ಕ್ರಿಪ್ಟ್ ರೈಟರ್ ಆಗಬೇಕು ಎನ್ನುವ ಆಶಯದೊಂದಿಗೆ ಅಡಿಯಿಡುತ್ತಿಲ್ಲ. ಕಥೆ ಬರೆಯುವವರು ಅಂತಿಮವಾಗಿ ನಿರ್ದೇಶಕರಾಗಬೇಕೆನ್ನುವ ಬಯಕೆ ಹೊಂದಿರುತ್ತಾರೆ. ಇಷ್ಟಾದರೂ ನಿರ್ಮಾಪಕರು ನಿರ್ದೇಶಕರಿಗೆ ಸಂಭಾವನೆ ನಿಗದಿ ಮಾಡುವಾಗ ಅವರ ಸ್ಕ್ರಿಪ್ಟ್‌ಗೆ ಯಾವುದೇ ಹೆಚ್ಚುವರಿ ಹಣ ನೀಡುವುದಿಲ್ಲ ಎನ್ನುವುದು ಗಮನಾರ್ಹ.

ಕನ್ನಡ ಚಿತ್ರರಂಗದಲ್ಲಿ ಹಿಂದೆ ಚಿ ಉದಯಶಂಕರ್ ಅವರಂಥ ಒಳ್ಳೆಯ ಕಥೆಗಾರರಿದ್ದರು. ಎಂ ಡಿ ಸುಂದರ್ ಅವರಂಥ ಸ್ಕ್ರಿಪ್ಟ್ ರೈಟರ್ ಇದ್ದರು. ರಾಜ್‌ಕುಮಾರ್ ಚಿತ್ರಗಳಿಗೆ ಕಥೆ ಓಕೆ ಮಾಡುವುದು ಒಂದು ದೊಡ್ಡ ಪ್ರಕ್ರಿಯೆಯೇ ಆಗಿತ್ತು. ಪಾರ್ವತಮ್ಮ, ವರದಪ್ಪನಂಥವರು ಮೊದಲು ಕಥೆ ಒಪ್ಪಬೇಕಿತ್ತು. ಅದರಿಂದಾಗಿಯೇ ಆಗ ಉತ್ತಮ ಚಿತ್ರಗಳು ಬಂದವು. ಅವರ ಕಾಲದ ನಂತರ ನಿಜಕ್ಕೂ ಚಿತ್ರರಂಗ ಕಥೆಗಾರರ ತೀವ್ರ ಕೊರತೆ ಎದುರಿಸಿತು. ಆಗ ತೆಲುಗು, ತಮಿಳು ಚಿತ್ರರಂಗಗಳಿಂದ ಸ್ಕ್ರಿಪ್ಟ್‌ ರೈಟರ್ಸ್ ಅನ್ನು ಕರೆಸಿಕೊಳ್ಳುವ ಪರಿಪಾಠ ಮೊದಲಾಯಿತು. ಜನಾರ್ದನ ಮಹರ್ಷಿಯಂಥವರು ತೆಲುಗು, ತಮಿಳಿನ ಮೂರ್ನಾಲ್ಕು ಚಿತ್ರಗಳನ್ನು ನೋಡಿ ಒಂದು ಕಿಚಡಿ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದರು. ನಮ್ಮದೇ ಕಥೆಗಾರರಿಗೆ ಕೆಲವು ಸಾವಿರ ಕೂಡ ಕೊಡದ ನಿರ್ಮಾಪಕರು ಮಹರ್ಷಿಯಂಥವರಿಗೆ ಲಕ್ಷಾಂತರ ರೂಪಾಯಿ ಕೊಟ್ಟ ಪವಾಡವೂ ನಡೆಯಿತು. ನಂತರ ರೀಮೇಕ್ ಚಾಳಿ ಶುರುವಾಯಿತು. ಕನ್ನಡದಲ್ಲಿ ಕಥೆಗಾಗಿ ಒಂದು ಲಕ್ಷ ಖರ್ಚು ಮಾಡಿ ಅಭ್ಯಾಸವಿರದ ನಿರ್ಮಾಪಕರು 10, 15 ಲಕ್ಷ ರೂಪಾಯಿ ಕೊಟ್ಟು ಪರಭಾಷಾ ಚಿತ್ರಗಳ ಹಕ್ಕು ತಂದು ರೀಮೇಕ್ ಮಾಡತೊಡಗಿದರು. ನಂತರ ಡಬ್ಬಿಂಗ್ ಬರುವುದರೊಂದಿಗೆ ಆ ಪ್ರವೃತ್ತಿ ಬಹುತೇಕ ಅಂತ್ಯ ಕಂಡಿತು.     

ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಸ್ಕ್ರಿಪ್ಟ್ ಬರೆದು ಬದುಕುತ್ತಿರುವ ಬೆರಳೆಣಿಕೆಯ ಬರಹಗಾರರಿದ್ದಾರೆ. ಮಾಸ್ತಿ ಮಂಜು ಅಂಥವರ ಪೈಕಿ ಮುಖ್ಯರಾದವರು. ಟಿ ಕೆ ದಯಾನಂದ್ ಕೂಡ ತಮ್ಮ ನಿರ್ದೇಶನದ ಮೊದಲ ಚಿತ್ರ ಸೋತ ನಂತರ ಸ್ಕ್ರಿಪ್ಟ್ ರೈಟರ್ ಆಗಿ ಬದಲಾಗಿದ್ದಾರೆ. ಇನ್ನು ಸಂಭಾಷಣೆಕಾರರಾಗಿ ಬೇಡಿಕೆ ಇದ್ದ ಮಂಜು ಮಾಂಡವ್ಯ ನಿರ್ದೇಶಕರಾಗಿ ಬದಲಾಗಿದ್ದಾರೆ. ಅದೇ ರೀತಿ ಬಹುತೇಕ ಬರಹಗಾರರೆಲ್ಲ ನಿರ್ದೇಶಕರಾಗಿ ಬದಲಾಗಿ ತಮ್ಮ ತಮ್ಮ ಚಿತ್ರಗಳಿಗೆ ತಾವೇ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಕೆಲವರು ನಿರ್ದೇಶನದ ಬಗ್ಗೆ ಆಸಕ್ತಿ, ಒಲವು ಇಲ್ಲದಿದ್ದರೂ ಬರಹಗಾರರಾಗಿ ಉಳಿದರೆ ಬದುಕಲು ಸಾಧ್ಯವಿಲ್ಲ ಎಂದು ನಿರ್ದೇಶಕನ ಟೋಪಿಯನ್ನೂ ಹಾಕಿಕೊಂಡಿದ್ದಾರೆ.   

ನೆರೆಯ ಮಲೆಯಾಳಂ, ತಮಿಳು, ತೆಲುಗು ಚಿತ್ರರಂಗಗಳಲ್ಲಿ ಪರಿಸ್ಥಿತಿ ಇಷ್ಟು ದಯನೀಯವಾಗಿಲ್ಲ. ಅಲ್ಲಿ ಸ್ಕ್ರಿಪ್ಟ್ ರೈಟರ್ಸ್‌ಗೆ ಬೇಡಿಕೆ ಇದೆ. ಬೆಲೆಯೂ ಇದೆ. ಚಿತ್ರವೊಂದರ ಸ್ಕ್ರಿಪ್ಟ್‌ಗಾಗಿ ಕೋಟಿ ರೂಪಾಯಿ ಸಂಭಾವನೆ ಪಡೆದವರೂ ಅಲ್ಲಿದ್ದಾರೆ.

ಈ ಸುದ್ದಿ ಓದಿದ್ದೀರಾ: ಕಿಚ್ಚ – ಕುಮಾರ್ ವಿವಾದ | ರಾಜ್‌ಕುಮಾರ್ ಮೌಲ್ಯಪ್ರಜ್ಞೆ ದಾರಿದೀಪವಾಗಲಿ

ಕನ್ನಡದ ಸ್ಟಾರ್‌ಗಳ ಪೈಕಿ ಬಹುತೇಕರು ತಮ್ಮ ಬಿಲ್ಡಪ್‌ಗೆ ಕೋಟ್ಯಂತರ ಖರ್ಚು ಮಾಡಬೇಕೆನ್ನುವ ಬೇಡಿಕೆಯುಳ್ಳವರೇ ಹೊರತು, ಕಥೆಗೆ ಪ್ರಾಮುಖ್ಯತೆ ಕೊಡುವವರು ಕಡಿಮೆ. ಅಪವಾದವೆಂಬಂತೆ, ರಕ್ಷಿತ್ ಶೆಟ್ಟಿ ಸೆವೆನ್ ಆಡ್ಸ್ ಎನ್ನುವ ತಮ್ಮದೇ ಸ್ಕ್ರಿಪ್ಟ್ ರಚನಾ ತಂಡವನ್ನು ರೂಪಿಸಿದ್ದಾರೆ. ಅದರಲ್ಲಿರುವವರಿಗೆ ಉತ್ತಮ ಸಂಭಾವನೆಯನ್ನೂ ಕೊಡುತ್ತಾರೆನ್ನುವ ಮಾತುಗಳಿವೆ. ಅವರಿಂದ ಗ್ರೇಟ್ ಎನ್ನುವಂಥ ಚಿತ್ರ ಬರದೇ ಇರಬಹುದು. ಆದರೆ, ಕನಿಷ್ಠ ಅವರು ಸ್ಕ್ರಿಪ್ಟ್‌ಗೆ ಮಹತ್ವ ಕೊಡುತ್ತಿದ್ದಾರೆ ಎನ್ನುವುದು ಇಲ್ಲಿನ ಮುಖ್ಯ ಅಂಶ. ಉಳಿದ ಬಹುತೇಕರದ್ದು ಅದ್ದೂರಿ ಮೇಕಿಂಗ್‌ನ ಬೇಡಿಕೆಯೇ ಹೊರತು ಕಥೆಯ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವವರಲ್ಲ.

ಎಷ್ಟೇ ಅದ್ಧೂರಿ ಮೇಕಿಂಗ್ ಇರಲಿ, ಅದಕ್ಕೆ ಒಂದು ಉತ್ತಮ ಕಥೆಯ ಅಡಿಪಾಯ ಇಲ್ಲವೆಂದರೆ, ಉತ್ತಮ ಸ್ಕ್ರಿಪ್ಟ್‌ನ ಬೆಂಬಲ ಇಲ್ಲವೆಂದರೆ, ಅದು ‘ಕಬ್ಜ’ದಂತೆ, ‘ಕ್ರಾಂತಿ’ಯಂತೆ ವಿಫಲವಾಗುವುದು ಗ್ಯಾರಂಟಿ. ಅತ್ಯುತ್ತಮ ಚಿತ್ರಗಳನ್ನು ಮಾಡುವುದಿರಲಿ, ಕನಿಷ್ಠ ಕರ್ಮಷಿಯಲ್ ಆಗಿ ಗೆಲ್ಲುವಂಥ ಚಿತ್ರಗಳನ್ನು ಮಾಡಲು ಕೂಡ ತಿಣುಕಾಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಇದು ನಮ್ಮ ಚಿತ್ರರಂಗದ ಮಹಾಮಹಿಮ ನಿರ್ಮಾಪಕರಿಗೆ, ನಿರ್ದೇಶಕರಿಗೆ ಎಷ್ಟು ಬೇಗ ಅರ್ಥವಾದರೆ ಅಷ್ಟು ಒಳ್ಳೆಯದು.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಕೇರಳ | ಟ್ರಕ್‌ಗೆ ಕಾರು ಡಿಕ್ಕಿ; ಮಲಯಾಳಂ ನಟನಿಗೆ ಗಾಯ

ಮಲಯಾಳಂ ನಟ ಬಿಜು ಕುಟ್ಟನ್‌ ಅವರು ಇಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

Download Eedina App Android / iOS

X