ವಿವಾದಿತ ಟೈಟಲ್ ಅರ್ಜುನ್ ಜನ್ಯ ಪಾಲು
ಶಿವಣ್ಣನ ಚಿತ್ರಕ್ಕೆ ʼರೋಸಿ 45ʼ ಟೈಟಲ್ ಫಿಕ್ಸ್
ಸ್ಯಾಂಡಲ್ವುಡ್ನ ಖ್ಯಾತ ನಟ ಲೂಸ್ ಮಾದ ಯೋಗಿ ಇತ್ತೀಚೆಗೆ ತಮ್ಮ 50ನೇ ಚಿತ್ರವನ್ನು ಘೋಷಣೆ ಮಾಡಿದ್ದರು. ಚಿತ್ರಕ್ಕೆ ʼರೋಸಿʼ ಎಂದು ಹೆಸರಿಡಲಾಗಿತ್ತು. ಏಪ್ರಿಲ್ 9ರಂದು ಚಿತ್ರದ ಮುಹೂರ್ತ ಕೂಡ ಅದ್ದೂರಿಯಾಗಿ ಜರುಗಿತ್ತು. ಆದರೆ, ಇದೀಗ ಚಿತ್ರದ ಟೈಟಲ್ ವಿವಾದಕ್ಕೆ ಕಾರಣವಾಗಿದೆ.
ಯೋಗಿ ನಟನೆಯ ಚಿತ್ರಕ್ಕೆ ʼರೋಸಿʼ ಎಂದು ಹೆಸರಿಟ್ಟಿರುವುದನ್ನು ಪ್ರಶ್ನಿಸಿ ನಿರ್ಮಾಪಕ ರಮೇಶ್ ರೆಡ್ಡಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ. ಅರ್ಜುನ್ ಜನ್ಯ ಮತ್ತು ಶಿವರಾಜ್ ಕುಮಾರ್ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದು, ʼ45ʼ ಹೆಸರಿನಲ್ಲಿ ಈಗಾಗಲೇ ಜನಪ್ರಿಯಗೊಂಡಿರುವ ಈ ಚಿತ್ರಕ್ಕಾಗಿ ʼರೋಸಿ 45ʼ ಎಂಬ ಟೈಟಲ್ ಅನ್ನು ಕಳೆದ ಏಪ್ರಿಲ್ 6ರಂದು ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದರು ಎನ್ನಲಾಗಿದೆ.
ಯೋಗಿ ನಟಿಸುತ್ತಿರುವ ಚಿತ್ರಕ್ಕೂ ʼರೋಸಿʼ ಹೆಸರಿನ ಟೈಟಲ್ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಮೇಶ್ ರೆಡ್ಡಿ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದರು. ಟೈಟಲ್ ವಿವಾದಕ್ಕೆ ಸಂಬಂಧಿಸಿ ಇದೀಗ ತೀರ್ಮಾನ ಪ್ರಕಟಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, “ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಮೂಲಕ ಮೊದಲು ʼರೋಸಿ 45ʼ ಟೈಟಲ್ ಅನ್ನು ನೋಂದಣಿ ಮಾಡಿಸಿದ್ದಾರೆ. ಅದಾದ ನಂತರ ಯೋಗಿ ಅವರ ಚಿತ್ರಕ್ಕೆ ʼರೋಸಿʼ ಎಂದು ಹೆಸರಿಡಲಾಗಿದೆ. ಈಗಾಗಲೇ ನೋಂದಣಿ ಆಗಿರುವ ಟೈಟಲ್ ಅನ್ನು ಸಂಬಂಧಪಟ್ಟವರ ಅನುಮತಿ ಇಲ್ಲದೆ ಮತ್ತೊಬ್ಬರು ಬಳಸುವ ಹಾಗಿಲ್ಲ. ನೋಂದಣಿಯಾಗಿರುವ ಟೈಟಲ್ನ ಹಿಂದೆ ಅಥವಾ ಮುಂದೆ ಬೇರೆ ಹೆಸರು ಸೇರಿಸಿಯೂ ಹೊಸದಾಗಿ ನೋಂದಣಿ ಮಾಡುವ ನಿಯಮವಿಲ್ಲ” ಎಂದಿದ್ದಾರೆ. ಹೀಗಾಗಿ ಯೋಗಿ ಅವರ ನೂತನ ಚಿತ್ರಕ್ಕೆ ʼರೋಸಿʼ ಹೆಸರಿನ ಟೈಟಲ್ ಬಳಸದಂತೆ ಸೂಚಿಸಿದ್ದಾರೆ.
ಏಪ್ರಿಲ್ 9ರಂದು ಯೋಗಿ ನಟನೆಯ 50ನೇ ಚಿತ್ರ ಸೆಟ್ಟೇರಿತ್ತು. ಖ್ಯಾತ ನಟ ಡಾಲಿ ಧನಂಜಯ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ʼಹೆಡ್ ಬುಷ್ʼ ಖ್ಯಾತಿಯ ನಿರ್ದೇಶಕ ಶೂನ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿನಿ ರಸಿಕರ ಗಮನ ಸೆಳೆಯುತ್ತಿದೆ ʼರಾಘುʼ ಟ್ರೈಲರ್
ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಈ ಹಿಂದೆ ʼ45ʼ ಎಂದಷ್ಟೇ ಹೆಸರಿಡಲಾಗಿತ್ತು. ಇದೀಗ ʼರೋಸಿ 45ʼ ಎಂದು ಬದಲಿಸಲಾಗಿದೆ. ಈ ಚಿತ್ರದಲ್ಲಿ ಹಿರಿಯ ನಟ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜೊತೆಯಾಗಿ ನಟಿಸಲಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.