ಪ.ರಂಜಿತ್‌ ಅವರ ನೀಲಂನಲ್ಲಿ ಬಿಡುಗಡೆಯಾದ ’ಲವ್‌ ಅಂಡ್ ಲೆಟ್ ಲವ್’ ಕಿರುಚಿತ್ರ ಏನೆಲ್ಲಾ ಹೇಳುತ್ತದೆ?

Date:

Advertisements

ಕೇವಲ 7 ನಿಮಿಷ 47 ಸಕೆಂಡ್‌ಗಳ ಈ ಕಿರುಚಿತ್ರದಲ್ಲಿ ಯಾವುದೇ ಸಂಭಾಷಣೆ ಇಲ್ಲ. ಮೌನವೇ ಇಲ್ಲಿನ ಭಾಷೆ. ಇದು ಕೇವಲ ಲೆಸ್ಬಿಯನ್ ಕತೆಯಷ್ಟೇ ಅಲ್ಲ

ತಮಿಳಿನ ’ನಕ್ಷತ್ತಿರಮ್ ನಗರ್ಗಿರದು’ ಸಿನಿಮಾ ಮೂಲಕ ಪ್ರೀತಿಯ ಹಲವು ನಮೂನೆಗಳನ್ನು ತೆರೆದಿಡುವ ಪ್ರಯತ್ನ ಮಾಡಿದವರು ಪ.ರಂಜಿತ್‌. “ಪ್ರೀತಿ ಎಂಬುದು ರಾಜಕೀಯವೂ ಹೌದು” ಎಂಬ ತಾತ್ವಿಕತೆಯನ್ನು ಚರ್ಚಿಸಿದ ಈ ಸಿನಿಮಾ, ’ಗೇ, ಲೆಸ್ಬಿಯನ್, ಟ್ರಾನ್ಸ್‌ಜೆಂಡರ್‌, ದ್ವಿಲಿಂಗ’- ಈ ಎಲ್ಲ ರೀತಿಯ ಪ್ರೀತಿಗಳನ್ನು ಸ್ಪರ್ಶಿಸುವ ಪ್ರಯತ್ನ ಮಾಡಿತ್ತು. ಪ್ರೀತಿ ಕೇವಲ ಗಂಡು- ಹೆಣ್ಣಿಗೆ ಸೀಮಿತವಾಗಿಲ್ಲ ಎಂಬುದನ್ನು ದಾಟಿಸಲು ಯತ್ನಿಸಿದ್ದ ರಂಜಿತ್‌, ತಮ್ಮದೇ ’ನೀಲಂ ಸೋಷಿಯಲ್’ ಯೂಟ್ಯೂಬ್ ಚಾನೆಲ್‌ನಿಂದ ಅಂತಹದ್ದೇ ಕಥೆಯ ವಿಶಿಷ್ಟವಾದ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರ ಹೆಸರು ’ಲವ್ ಅಂಡ್ ಲೆಟ್ ಲವ್’.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಭಾಗವಾಗಿರುವ ‘ಕ್ವೀರ್‌’ ಜಗತ್ತನ್ನು ’ನಾನು ಲೇಡೀಸ್’ ಸಿನಿಮಾ ಮೂಲಕ ತೆರೆಗೆ ತಂದವರು ಶೈಲಜಾ ಪಡಿಂಡಾಲ. ತಮ್ಮ ಸಮುದಾಯದ ಐಡೆಂಟಿಟಿ ವಿಚಾರದಲ್ಲಿ ಕಲೆಯನ್ನು ಸಶಕ್ತವಾಗಿ ಬಳಸುತ್ತಿರುವ ಶೈಲಜಾ ಅವರು ಈ ಕಿರುಚಿತ್ರದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

Advertisements

ಕೇವಲ 7 ನಿಮಿಷ 47 ಸಕೆಂಡ್‌ಗಳ ಈ ಕಿರುಚಿತ್ರದಲ್ಲಿ ಯಾವುದೇ ಸಂಭಾಷಣೆ ಇಲ್ಲ. ಮೌನವೇ ಇಲ್ಲಿನ ಭಾಷೆ. ನಿರ್ದೇಶಕಿ ಶೈಲಜಾ ಈ ಕುರಿತು ಹೀಗೆ ಹೇಳುತ್ತಾರೆ: “ಸಂಭಾಷಣೆಗಳು ನನ್ನ ದೃಷ್ಟಿಯ ರಾಜಕೀಯ ಸಾರಕ್ಕೆ ನ್ಯಾಯವನ್ನು ಒದಗಿಸುವುದಿಲ್ಲ. ಸರಳವಾಗಿ ಪ್ರೀತಿಸಲು ಮತ್ತು ಪ್ರೀತಿಸಲು ಬಿಡಲು ಭಾಷೆ ಬೇಕಿಲ್ಲ” ಎಂಬುದು ಅವರ ಸ್ಪಷ್ಟ ನಿಲುವು.

shailaja Pandidala
ನಿರ್ದೇಶಕಿ ಶೈಲಜಾ ಪಡಿಂಡಾಲ

ಸಿನಿಮಾಗಳು ಚಿತ್ರಕತೆಯ ಮೂಲಕ ಮಾತನಾಡಬೇಕು. ಅದುವೆ ಅದರ ಗಟ್ಟಿತನ. ಈ ಕಿರುಚಿತ್ರದ ಒಂದೊಂದು ಫ್ರೇಮ್‌ ಕೂಡ ಅಸ್ಮಿತೆಯ ರಾಜಕಾರಣಕ್ಕೆ ಶಕ್ತಿ ತುಂಬುವಂತಿವೆ.

ಆಕೆ ವಯಸ್ಕ ಲೆಸ್ಬಿಯನ್ ಹೆಣ್ಣುಮಗಳು. ತಾಯಿ ಸಿಂಗಲ್ ಪೇರೆಂಟ್. ಅಂದು ಫೆಬ್ರುವರಿ 14 (ಪ್ರೇಮಿಗಳ ದಿನ). ತಾಯಿ ಮತ್ತು ಮಗಳು ತಮ್ಮ ದಿನಚರಿಯನ್ನು ಆರಂಭಿಸುವ ರೀತಿ ಮತ್ತು ಅದು ಕೊನೆಯಾಗುವ ರೀತಿ- ಇದರ ನಡುವೆ ಮೌನವೊಂದು ಪ್ರವಹಿಸುತ್ತದೆ. ಅಲ್ಲಿ ನಡೆಯುವ ಪ್ರೇಮದ ವಿನಿಮಯ, ಮೈತ್ರಿ, ಒಪ್ಪುಗೆ, ಅಪ್ಪುಗೆ, ಗೌರವ- ಈ ಕಿರುಚಿತ್ರದ ತಿರುಳು.

ಲೆಸ್ಬಿಯನ್‌ ಮಗಳ ಕೋಣೆಯಲ್ಲಿನ ಸಂಗತಿಗಳನ್ನು ಗಮನಿಸಿದರೆ ಇದೊಂದು ಲೆಸ್ಬಿಯನ್ ಪ್ರೇಮ ಕಥೆಯಷ್ಟೇ ಅಲ್ಲ ಎಂಬುದು ಅರ್ಥವಾಗುತ್ತದೆ. ಆ ಹೆಣ್ಣು ಕೇವಲ ಮನೋಬಯಕೆಗೆ ಸೀಮಿತವಾದ ಲೆಸ್ಬಿಯನ್ ಅಲ್ಲ, ಅವಳಿಗೆ ಆಳವಾದ ಓದು ಇದೆ. ಜೊತೆಗೆ ಉತ್ತಮ ಚಿತ್ರಕಲೆಗಾರ್ತಿ, ಕನಸುಗಾರ್ತಿ ಮತ್ತು ಬಂಡಾಯಗಾರ್ತಿ. ಚಿತ್ರದಲ್ಲಿ ತೋರಿಸುವ ನೀಲಿ ಕ್ಯಾನ್ವಾಸ್ ಮತ್ತು ಕೆಲವು ಪುಸ್ತಕಗಳು ಆಕೆಯ ಆಸಕ್ತಿ ಮತ್ತು ಮನೋಬಲವನ್ನು ಸ್ಪಷ್ಟಪಡಿಸುತ್ತವೆ.

ಜಗತ್‌ ಪ್ರಸಿದ್ಧ ಕಲಾವಿದೆ ಫ್ರೀಡಾರನ್ನು ಆಕೆ ಆರಾಧಿಸುತ್ತಾಳೆ; ಜೊತೆಗೆ ಮ್ಯಾಕ್ಸಿಂ ಗೋರ್ಕಿ, ಆಡ್ರೆ ಲಾರ್ಡ್ ಅವರಂತಹ ಕತೆಗಾರರನ್ನು ಮತ್ತು ರಾಜಕೀಯ ಕಾರ್ಯಕರ್ತರನ್ನು ಮೆಚ್ಚುತ್ತಿದ್ದಾಳೆ. ಧರ್ಮ ಮತ್ತು ದೇವರನ್ನು ಪ್ರಶ್ನಿಸುವ RICHSRD DAWKINS ಅವರ SELFISH GENE  ಪುಸ್ತಕ, ಅಸಮಾನ ಭಾರತವನ್ನು ತೆರೆದಿಟ್ಟ ಬಾಬಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ, “Annihilation of caste” (ಜಾತಿ ನಿರ್ಮೂಲನೆ) ಮೊದಲಾದವುಗಳು ಆಕೆಯ ಮೇಜಿನ ಮೇಲಿವೆ.

ಗಂಡನನ್ನು ಕಳೆದುಕೊಂಡಿರುವ ತಾಯಿ, ತನ್ನ ಮಗಳನ್ನು ದಿಟ್ಟತನದಲ್ಲಿ ಬೆಳೆಸಿದ್ದಾಳೆ; ಅವರಿಬ್ಬರು ತಾಯಿ-ಮಗಳಷ್ಟೇ ಅಲ್ಲ ನಿಜವಾದ ಸ್ನೇಹಿತರಂತೆ ಬದುಕುತ್ತಿದ್ದಾರೆ. ತಾಯಿಗೂ ಒಬ್ಬ ಪ್ರಿಯಕರ ಇದ್ದಾನೆ. ಪ್ರೇಮಿಗಳ ದಿನದಂದು ಆತನನ್ನು ಭೇಟಿಯಾಗುವ ತಯಾರಿಯಲ್ಲಿ ಆಕೆ ಇದ್ದಾಳೆ. ಮಗಳಿಗೆ ಇದು ತಿಳಿದಿಲ್ಲ. ನವ ವಧುವಿನಂತೆ ಸಿಂಗಾರಗೊಂಡ ತಾಯಿಯನ್ನು ಕಂಡು ಮಗಳು ಅಪ್ಪಿ ಪ್ರೀತಿಯನ್ನು ಹಂಚಿಕೊಳ್ಳುತ್ತಾಳೆ. ಇಬ್ಬರ ಕಣ್ಣಲ್ಲೂ ಪ್ರೀತಿ ಮತ್ತು ಮುಗುಳುನಗೆ ವಿನಿಮಯವಾಗುತ್ತದೆ.

ಮತ್ತೊಂದು ಅಂಶ- ಆ ತಾಯಿ, ಮಗಳಂತೆ ಓದಿದವಳಲ್ಲ. ನೆನಪುಗಳೊಂದಿಗೆ ಬದುಕುತ್ತಿರುವವಳು. ಆದರೆ ಅಪಾರ ಜೀವನಾನುಭವದ ಆಕೆ ಮಗಳನ್ನು ದಿಟ್ಟವಾಗಿ ಬೆಳೆಸಿದ್ದಾಳೆ. ಸಿಂಗಲ್ ಪೇರೆಂಟ್ ಎಂಬುದೇ ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಸ್ವಾತಂತ್ರ್ಯಗಳಾಗಿರುವ ಸೂಚನೆಯೂ ಹೌದು. ಇದು ವ್ಯವಸ್ಥೆಯ ಕುಹಕಗಳಿಗೆ ಸೊಪ್ಪು ಹಾಕದೆ ಬದುಕುವ ರೀತಿ.

‘ಕೆಫೆ ಬುದ್ಧ’ದಲ್ಲಿ ಕೊನೆಯ ದೃಶ್ಯ. ಪ್ರೀತಿ, ಕಾರುಣ್ಯದ ಪ್ರತೀಕವಾದ ಬುದ್ಧನ ಹೆಸರಿನ ಕೆಫೆ. ತಾಯಿ ಮತ್ತು ಮಗಳು ಬದುಕಿನ ರೀತಿಯಲ್ಲಿ ಭಿನ್ನವಾಗಿದ್ದರೂ, ಇಬ್ಬರೂ ಬುದ್ಧ ಕೆಫೆಗೆ ಬಂದಿದ್ದಾರೆ. ಜಾತಿ ವಿರುದ್ಧ, ಅಸಮಾನತೆಗಳ ವಿರುದ್ಧ ಸಿಡಿದ ಗೌತಮ ಬುದ್ಧ ಮನಸ್ಸಿನ ಅಭೇಧ್ಯ ಕೋಟೆಗಳನ್ನು ಬೇಧಿಸಿದವನು. ಬುದ್ಧ ಎಂದರೆ ಎಚ್ಚೆತ್ತವನೂ ಎಂಬ ಅರ್ಥವೂ ಇದೆ. ಅಂಥವನಲ್ಲಿ ತರತಮಗಳಿಗೆ ನೆಲೆಯಿಲ್ಲ ಎಂಬುದು ರೂಪಕವಾಗಿ ಬಳಕೆಯಾಗಿದೆ.

ಜಗತ್ತಿನ ಪ್ರಸಿದ್ಧ ಕತೆಗಾರ ಗೇರ್ಬಿಯಲ್ ಗಾರ್ಸಿಯಾ ಮಾರ್ಕ್ವೇಜ್‌ನ ‘One Hundred Years of Solitude’ (ಒಂದು ನೂರು ವರ್ಷಗಳ ಏಕಾಂತ) ಕೃತಿ ತಾಯಿಯ ಪ್ರಿಯಕರನ ಕೈಯಲ್ಲಿದೆ. ಮಧ್ಯಮ ವಯಸ್ಸು ದಾಟಿ ಇಳಿ ವಯಸ್ಸಿನತ್ತ ಜಾರುತ್ತಿರುವ ವ್ಯಕ್ತಿಯ ಕೈಯಲ್ಲಿರುವುದು ಜಗತ್ತು ಮೆಚ್ಚಿದ ಅದ್ಭುತ ಕೃತಿ. ಆತ ಪ್ರೇಯಸಿಯ ಬರುವಿಗಾಗಿ ಕಾಯುತ್ತಿದ್ದಾನೆ. ಆ ತಾಯಿ ಬರುತ್ತಾಳೆ. ಇಬ್ಬರೂ ಮೌನದಲ್ಲೇ ಪ್ರೇಮವನ್ನು ಹಂಚಿಕೊಳ್ಳುತ್ತಾ ತನ್ನ ಸುತ್ತಲಿನ ಜನರನ್ನು ಗಮನಿಸುತ್ತಿದ್ದಾರೆ. ಅಲ್ಲಿಬ್ಬರು ಹುಡುಗಿಯರು ರೊಮ್ಯಾನ್ಸ್‌ನಲ್ಲಿ ತೊಡಗಿದ್ದಾರೆ. ಸಂತೋಷದಿಂದಲೇ ನೋಡುತ್ತಾರೆ. ಆದರೆ ನಿಧಾನಕ್ಕೆ ಆ ತಾಯಿಯ ಮುಖ ಬಿಳುಚಿದಂತಾಗುತ್ತದೆ. ಈ ಮೌನದ ಪ್ರತಿಕ್ರಿಯೆಗೆ ಎರಡು ಅರ್ಥಗಳಿವೆ ಎನಿಸುತ್ತದೆ. ಒಂದು- ಸಿಂಗಲ್ ಪೇರೆಂಟ್ ಆಗಿರುವ ತಾನು ಪ್ರಿಯಕರನನ್ನು ಹೊಂದಿರುವುದು ಮಗಳಲ್ಲಿ ಕಸಿವಿಸಿ ತರುತ್ತಿರಬಹುದು, ಎರಡು- ಮಗಳು ಲೆಸ್ಬಿಯನ್ ಗೆಳತಿಯನ್ನು ಹೊಂದಿರುವುದು. ಆದರೆ ಕ್ಷಣಾರ್ಧದಲ್ಲಿ ಈ ಉಭಯ ಪ್ರೇಮಕ್ಕೆ ಸಮ್ಮತಿ ದೊರಕುತ್ತದೆ. ಒಬ್ಬೊರಿಗೊಬ್ಬರು ಮೆಚ್ಚುಗೆ ನೀಡಿ, “ನೀನು ಪ್ರೀತಿಸು, ಮತ್ತೊಬ್ಬರನ್ನು ಪ್ರೀತಿಸಲು ಬಿಡು” ಎಂಬ ಸ್ಥಿತಿಗೆ ಬರುತ್ತಾರೆ.

“ನಿಮ್ಮಿಬ್ಬರ ಜೋಡಿ ಚೆಂದಾಗಿದೆ” ಎಂದು ಮಗಳು ಆಂಗಿಕವಾಗಿ ಮೆಚ್ಚುಗೆ ಸೂಚಿಸುತ್ತಾರೆ. ಆ ಕಡೆಯಿಂದ ತಾಯಿ, “ನಿಮ್ಮಿಬ್ಬರ ಜೋಡಿಯೂ ಚೆಂದಾಗಿದೆ” ಎಂದು ಪ್ರತಿಕ್ರಿಯಿಸುತ್ತಾಳೆ. ಪ್ರೀತಿಸಿ, ಪ್ರೀತಿಸಲು ಬಿಡಿ ಎಂಬ ಸಂದೇಶವನ್ನು ಮನಮುಟ್ಟುವಂತೆ ದಾಟಿಸಲಾಗಿದೆ. ರೇಖಾಚಿತ್ರವೊಂದನ್ನು ಮಗಳು ತನ್ನ ತಾಯಿಗೆ ನೀಡುವ ಮೂಲಕ ಕಿರುಚಿತ್ರ ಕೊನೆಯಾಗುತ್ತದೆ. ಕಿರುಚಿತ್ರದುದ್ದಕ್ಕೂ ಹರಿದಿರುವ ತಣ್ಣನೆಯ ಸಂಗೀತವೂ ಆರ್ದ್ರತೆಯನ್ನು ಹೆಚ್ಚಿಸಿದೆ.

ಚೈತ್ರಾ ಜೆ.ಆಚಾರ್‌, ಕೈಲಾಸಂ ಗೀತಾ, ಮಾಲಿನಿ, ಬೈಜು ತಾರಾಗಣದಲ್ಲಿದ್ದಾರೆ.

“ಸೆಕ್ಷನ್ 377 ಅನ್ನು ರದ್ದುಗೊಳಿಸಲಾಗಿದ್ದರೂ, ನಾವು ಪಿತೃಪ್ರಭುತ್ವದ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಆದರೆ ಸಾಂಸ್ಕೃತಿಕ ಬದಲಾವಣೆಯ ಅಗತ್ಯವಿದೆ. ತಮ್ಮ ಅಸ್ಮಿತೆಗಾಗಿ ಹೋರಾಡುತ್ತಾ ಘನತೆಯ ಬದುಕಿಗಾಗಿ ಹಂಬಲಿಸುತ್ತಿರುವ ಕ್ವೀರ್‌ ಸಮುದಾಯಕ್ಕೆ ಈ ಸಿನಿಮಾ ಮೂಲಕ ಗೌರವ ಸಲ್ಲಿಸುತ್ತೇನೆ” ಎನ್ನುತ್ತಾರೆ ಶೈಲಜಾ ಪಡಿಂಡಾಲ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X