ಮಲಯಾಳಂ ಸಿನಿಮಾ ರಂಗದಲ್ಲಿ ಹಾಸ್ಯ ನಟನಾಗಿ ಹಾಗೂ ಮಿಮಿಕ್ರಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಕಲಾಭವನ್ ಹನೀಫ್ ನಿಧನರಾಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಮಲಯಾಳಂ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಿಮಿಕ್ರಿ ಕಲೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದರು. ಪತ್ನಿ ಸೇರಿ ಸಿತಾರಾ ಮತ್ತು ಶಾರುಖ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಈವರೆಗೂ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾಭವನ್ ‘ಚೆಪ್ಪುಕಿಲುಕ್ಕನ ಚಂಗತಿ’ ಸಿನಿಮಾದ ಮೂಲಕ 1991ರಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು.
ಕೊಚ್ಚಿಯ ಮಟ್ಟಾಣ್ ಚೇರಿಯಲ್ಲಿ ಜನಿಸಿದ್ದ ಕಲಾಭವನ್ ಹನೀಫ್, ರಂಗಭೂಮಿ ಕಲಾವಿದರಾಗುವುದಕ್ಕೂ ಮುನ್ನ ಮಿಮಿಕ್ರಿ ಕಲಾವಿದರಾಗಿ ತಮ್ಮವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ನಂತರ ಕಲಾಭವನ್ ಗುಂಪಿಗೆ ಸೇರ್ಪಡೆಯಾಗಿದ್ದ ಅವರು, ನಟನಾಗಿ ಪ್ರಾಮುಖ್ಯತೆ ಪಡೆದಿದ್ದರು.
1991ರಲ್ಲಿ ‘ಚೆಪ್ಪುಕಿಲುಕ್ಕನ ಚಂಗತಿ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಬೆನ್ನಿಗೇ, ಸಂದೇಶಂ (1991), ಗಾಡ್ ಫಾದರ್ (1991), ಮಲಪ್ಪುರಂ ಹಾಜಿ ಮಹಾನಾಯ ಜೋಜಿ (1994) ಹಾಗೂ ತೆಂಕಾಸಿಪಟ್ಟಣಂ (2000) ಚಿತ್ರಗಳಲ್ಲಿ ಸಣ್ಣದಾದರೂ ಗಮನ ಸೆಳೆಯುವ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಛೋಟಾ ಮುಂಬೈ (2007), ಉಸ್ತಾದ್ ಹೋಟೆಲ್ (2012), ದೃಶ್ಯಂ (2013), ಅಮರ್ ಅಕ್ಟರ್ ಅಂಟೋನಿ (2015) ಹಾಗೂ ಕಟ್ಟಪ್ಪನಯಿಲೆ ರಿತ್ವಿಕ್ ರೋಷನ್ (2016)ನಂತಹ ಜನಪ್ರಿಯ ಚಿತ್ರಗಳಲ್ಲೂ ಅವರು ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದರು.
2024ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿರುವ ಜೂಡ್ ಆ್ಯಂಟನಿ ಜೋಸೆಫ್ ನಿರ್ದೇಶನದ ‘2018’ ಚಿತ್ರದಲ್ಲಿ ಅವರು ಅಣೆಕಟ್ಟು ನಿರ್ವಾಹಕರಾಗಿ ಗಮನಾರ್ಹ ಪಾತ್ರದಲ್ಲಿ ನಟಿಸಿದ್ದರು.
ಆಶಿಶ್ ಚಿನ್ನಪ್ಪ ನಿರ್ದೇಶನದ ವಿಡಂಬನಾತ್ಮಕ ಹಾಸ್ಯ ನಾಟಕವಾದ ‘ಜಲಾಧರ ಪಂಪ್ ಸೆಟ್ ಸಿನ್ಸ್ 1962’ನಲ್ಲಿ ಅವರು ಊರ್ವಶಿ ಹಾಗೂ ಇಂದ್ರನ್ಸ್ ಪಾತ್ರಗಳಲ್ಲಿ ಕೊನೆಯದಾಗಿ ನಟಿಸಿದ್ದರು. ಇದರ ಜೊತೆಗೆ ಧಾರಾವಾಹಿ, ಮಿಮಿಕ್ರಿ ವೇದಿಕೆಗಳಲ್ಲೂ ಪ್ರದರ್ಶನ ನೀಡಿ, ತಮ್ಮದೇ ಖ್ಯಾತಿಯನ್ನು ಗಳಿಸಿಕೊಂಡಿದ್ದರು.
ಇವರ ನಿಧನಕ್ಕೆ ಮಲಯಾಳಂ ಚಿತ್ರರಂಗ ಸಂತಾಪ ಸೂಚಿಸಿದ್ದು, ಖ್ಯಾತ ನಟರಾದ ಮಮ್ಮುಟ್ಟಿ, ದಿಲೀಪ್ ಸೇರಿದಂತೆ ಹಲವು ನಟರು ಅಂತಿಮ ದರ್ಶನಗೈದರು. ಶುಕ್ರವಾರ 11.30ರ ಸುಮಾರಿಗೆ ಕಲಾಭವನ್ ಹನೀಫ್ ಹುಟ್ಟೂರಾಗಿರುವ ಕೊಚ್ಚಿಯ ಮಟ್ಟಾಣ್ ಚೇರಿಯಲ್ಲಿರುವ ಚೇಂಬುಟ್ಟ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.