ಮಲೆಯಾಳಂ ಭಾಷೆಯ, ಉನ್ನಿ ಮುಕುಂದನ್ ಅಭಿನಯದ ಮಾರ್ಕೊ ಸಿನಿಮಾವನ್ನು ಈಗಾಗಲೇ ಟಿವಿ ಬ್ರಾಡ್ಕಾಸ್ಟಿಂಗ್ನಿಂದ ಬ್ಯಾನ್ ಮಾಡಲಾಗಿದೆ. ಇದೀಗ, ಒಟಿಟಿ ಇಂದಲೂ ಬ್ಯಾನ್ ಆಗುವ ಭೀತಿ ಎದುರಾಗಿದೆ.
ಮಾರ್ಕೊ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಹಿಂಸಾತ್ಮಕ ಸಿನಿಮಾ ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದಲೇ ಸಿನಿಮಾಗೆ ಸ್ಯಾಟಲೈಟ್ ಪ್ರಸಾರದ ಹಕ್ಕು ನೀಡಲು ಕೇರಳ ಸೆನ್ಸಾರ್ ಮಂಡಳಿ ನಿರಾಕರಿಸಿತ್ತು. ಟಿವಿ ಚಾನೆಲ್ಗಳಲ್ಲಿ ಪ್ರಸಾರ ಮಾಡದಂತೆ ತಡೆಯೊಡ್ಡಿತ್ತು. ಆ ನಂತರ, ಸಿನಿಮಾ ಒಟಿಟಿ ಪ್ಲಾಟ್ಫಾಮ್ ‘ಸೋನಿ ಲೈವ್’ನಲ್ಲಿ ಬಿಡುಗಡೆಯಾಗಿದೆ. ಈಗ, ಒಟಿಟಿಯಿಂದಲೂ ತೆಗೆಯಲು ಆದೇಶಿಸುವಂತೆ ಕೇಂದ್ರ ಸೆನ್ಸಾರ್ ಮಂಡಳಿಗೆ (ಸಿಬಿಎಫ್ಸಿ) ಕೇರಳ ಸೆನ್ಸಾರ್ ಮಂಡಳಿ ಪತ್ರ ಬರೆದಿದೆ.
2024ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ಅತ್ಯಂತ ಹಿಂಸಾತ್ಮಕ ದೃಶ್ಯಗಳೇ ತುಂಬಿವೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಸಿನಿಮಾದಲ್ಲಿನ ಹಿಂಸಾತ್ಮಕತೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಟೀಕಿಸಿದ್ದರು. ಸಿನಿಮಾಗೆ ಸ್ಯಾಟ್ಲೈಟ್ ಹಕ್ಕುಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸಿಬಿಎಫ್ಸಿ ಕೂಡ ಹೇಳಿತ್ತು.
“ಮಾರ್ಕೊ ಸಿನಿಮಾಗೆ ಸಿಬಿಎಫ್ಸಿಗೆ ‘ಎ’ ಸರ್ಟಿಫಿಕೇಟ್ ನೀಡಿದೆ. ಇಂತಹ ಸಿನಿಮಾಗಳನ್ನು ಮಕ್ಕಳು ವೀಕ್ಷಿಸದಂತೆ ಪೋಷಕರು ಗಮನವಹಿಸಬೇಕು. ಇದು ಕುಟುಂಬದೊಂದಿಗೆ ನೋಡಲು ಸಾಧ್ಯವಿಲ್ಲದ ಸಿನಿಮಾ. ಈ ಸಿನಿಮಾಗೆ ಸ್ಯಾಟಲೈಟ್ ಹಕ್ಕು ನೀಡಲಾಗಿಲ್ಲ” ಎಂದು ಸಿಬಿಎಓಫ್ಸಿ ಪ್ರಾದೇಶಿಕ ಅಧಿಕಾರಿ ನದೀಮ್ ತುಫಾಲಿ ತಿಳಿಸಿದ್ದಾರೆ.
ಸಿನಿಮಾದಲ್ಲಿ ಹಿಂಸಾತ್ಮಕ ದೃಶ್ಯಗಳನ್ನು ಸಮರ್ಥಿಸಿಕೊಂಡಿರುವ ನಾಯಕ ನಟ ಉನ್ನಿ ಮುಕುಂದನ್, “ಹಿಂಸೆಯು ಮಾನವ ವಿಕಾಸದ ಒಂದು ಭಾಗ. ನಾವು ಯುದ್ಧಗಳನ್ನು ಮಾಡಿದ್ದೇವೆ. ಯುದ್ಧಗಳ ಮೂಲಕವೇ ಶಾಂತಿ ಸಾಧಿಸಿದ್ದೇವೆ. ನಮ್ಮ ಸಮಾಜದಲ್ಲಿ ಹಿಂಸೆ ಅಸ್ತಿತ್ವದಲ್ಲಿದೆ ಎಂಬುದು ಸತ್ಯ. ಸಮಾಜದಲ್ಲಿರುವ ಹಿಂಸೆಗೆ ಹೋಲಿಸಿದರೆ, ಅದರ 10% ಹಿಂಸೆ ಕೂಡ ಮಾರ್ಕೊ ಸಿನಿಮಾದಲ್ಲಿ ಇಲ್ಲ” ಎಂದಿದ್ದಾರೆ.