ಭಗ್ನಪ್ರೇಮಿಗಳ ಪ್ರತಿನಿಧಿಯಂತಿದ್ದ ಮುಖೇಶ್, ದರ್ದ್ ಭರೇ ಗೀತ್ ಗಳ ಮೂಲಕ ವಿಷಾದದ ಛಾಯೆ ಬಿತ್ತಿದ ಬೆರಗಿನ ಗಾಯಕ, ಸದ್ದಿಲ್ಲದೆ ಕೇಳುಗರ ಹೃದಯ ಗೆದ್ದ ಗಾಯಕ. ಅವರು ಇಲ್ಲವಾಗಿ 47 ವರ್ಷಗಳಾದರೂ, ಇಂದಿಗೂ ಅವರ ಗೀತೆಗಳನ್ನು ಆಲಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆ ಮೂಲಕ ಅವರು ನಮ್ಮೊಂದಿಗಿದ್ದಾರೆ. ನೂರು ವರ್ಷ ತುಂಬಿದ ಮುಖೇಶರ ನೆನಪಿಗಾಗಿ...
ʼಕಭೀ ಕಭೀ ಮೇರೇ ದಿಲ್ ಮೇ…ʼ ಹಾಡನ್ನು, ಅದರ ಅರ್ಥವನ್ನು, ಭಾವವನ್ನು, ನಟಿಸಿದ ನಟ-ನಟಿಯರನ್ನು ಮರೆಯಲು ಸಾಧ್ಯವೇ ಇಲ್ಲ. ಇವತ್ತಿಗೂ ಕೇಳಬೇಕೆನ್ನುವ ಹಾಡು. 1976ರಲ್ಲಿ ಬಂದ ʻಕಭೀ ಕಭೀʼ ಚಿತ್ರದ ನಿರ್ದೇಶಕ ಯಶ್ ಛೋಪ್ರಾ ಆದರೂ ನೋಡುಗರ ಮನಸ್ಸಿನ ಮೂಲೆಯಲ್ಲಿ ಜಾಗ ಪಡೆದವರು ಅಮಿತಾಭ್ ಬಚ್ಚನ್ ಮತ್ತು ರಾಖಿ ಗುಲ್ಝಾರ್. ಈ ಜೋಡಿ ಆ ಕಾಲಕ್ಕೆ ಜನಪ್ರಿಯತೆಯ ಉತ್ತುಂಗದಲ್ಲಿತ್ತು. ವೈಯಕ್ತಿಕ ಬದುಕುಗಳಲ್ಲೂ ಪ್ರೇಮ-ವಿರಹಗಳ ವಿಚಿತ್ರ ತೊಳಲಾಟದಲ್ಲಿತ್ತು.
ಆ ಜೋಡಿಯ ಆ ಗಳಿಗೆಯ ವಿರಹ-ವಿಷಾದಕ್ಕೆ ತಕ್ಕಂತೆ ಯಶ್ ಛೋಪ್ರಾರ ಚಿತ್ರಕತೆ ಇತ್ತು. ಸಾಹಿತಿ ಸಾಹಿರ್ ಲೂಧಿಯಾನ್ವಿಯವರ ಗೀತರಚನೆ ಇತ್ತು. ಖಯ್ಯಾಂರ ಸಂಗೀತ ನಿರ್ದೇಶನವಿತ್ತು. ಆಶ್ಚರ್ಯಕರ ಸಂಗತಿ ಎಂದರೆ, ಸಾಹಿರ್ ಕೂಡ, ಅಂಥದೇ ಗೀತರಚನೆಗಳಿಗೆ ಹೆಸರಾಗಿದ್ದರು. ಮತ್ತೊಂದು ಮುಖ್ಯವಾದ ಸಂಗತಿ ಎಂದರೆ, ಈ ಹಾಡನ್ನು ಹಾಡಿದ ಲತಾ ಮಂಗೇಶ್ಕರ್ ಮತ್ತು ಮುಖೇಶ್, ಸಾಹೀರ್ ಅನುಭವಿಸಿದ ವಿಷಾದವನ್ನು ಗಾಯನದಲ್ಲಿ ತಂದಿದ್ದರು. ಆ ಪ್ರೇಮ ವಿರಹವನ್ನು ಎಲ್ಲರೆದೆಗೆ ಇಳಿಸಿದ್ದರು.
ಭಗ್ನಪ್ರೇಮಿಗಳ ಪ್ರತಿನಿಧಿಯಂತಿದ್ದ ಮುಖೇಶ್, ದರ್ದ್ ಭರೇ ಗೀತ್ ಗಳ ಮೂಲಕ ವಿಷಾದದ ಛಾಯೆ ಬಿತ್ತಿದ ಬೆರಗಿನ ಗಾಯಕ, ಸದ್ದಿಲ್ಲದೆ ಕೇಳುಗರ ಹೃದಯ ಗೆದ್ದ ಗಾಯಕ. 1976ರಲ್ಲಿ ದೂರದ ಅಮೆರಿಕದ ಡೆಟ್ರಾಯಿಟ್ನಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನೀಡಲು ಹೋಗಿದ್ದ 53ರ ಹರೆಯದ ಮುಖೇಶ್, ವೇದಿಕೆ ಹತ್ತುತ್ತಿದ್ದಂತೆ ಹೃದಯಸ್ತಂಭನವಾಗಿ ಕೊನೆಯುಸಿರೆಳೆದಿದ್ದರು.
ಇಂತಹ ಮುಖೇಶ್ ಹುಟ್ಟಿದ್ದು ಜುಲೈ 22, 1923ರಂದು, ಇಂದಿಗೆ ಮುಖೇಶ್ ಜನಿಸಿ ಬರೋಬ್ಬರಿ ನೂರು ವರ್ಷಗಳು.
ಪಂಜಾಬಿನ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಮುಖೇಶ್, ಹತ್ತು ಮಕ್ಕಳಲ್ಲಿ ಆರನೆಯವರು. ಇವರ ಪೂರ್ಣ ಹೆಸರು ಮುಖೇಶ್ ಚಂದ್ರ ಮಾಥುರ್. ದಿಲ್ಲಿಯಲ್ಲಿ ಹತ್ತನೇ ತರಗತಿಯವರೆಗೆ ಓದಿದ ಮುಖೇಶ್, ಸಹಾಯಕ ಸರ್ವೇಯರ್ ಕೆಲಸಕ್ಕೆ ಸೇರಿದರು. ಆದರೆ ಇವರ ಮನಸ್ಸು ಗಾಯನ ಲೋಕದಲ್ಲಿ ವಿಹರಿಸುತ್ತಿತ್ತು. ತಮ್ಮ ಪಾಡಿಗೆ ತಾವು ಗುನುಗುವುದು ರೂಢಿಯಾಗಿತ್ತು. ತಂಗಿಯ ಸಂಗೀತಾಭ್ಯಾಸಕ್ಕೆ ಬಂದ ಶಿಕ್ಷಕರು ಮುಖೇಶ್ ಗಾಯನ ಗಮನಿಸಿ, ಅವರಿಗೆ ಸಂಗೀತದ ಆರಂಭಿಕ ಪಾಠಗಳನ್ನು ಹೇಳಿಕೊಟ್ಟರು. ಅದರ ಬಲದಿಂದ ಕೆಲವು ಹಾಡುಗಳನ್ನು ಧ್ವನಿಮುದ್ರಿಸುವ ಪ್ರಯೋಗಕ್ಕೂ ಕೈಹಾಕಿದ ಮುಖೇಶ್, ಆ ಮೂಲಕ ಮುಂಬೈಗೆ ತೆರಳಿ ಚಿತ್ರನಟನಾಗುವ ಕನಸು ಕಂಡಿದ್ದರು. ಕಾಕತಾಳೀಯವೆಂಬಂತೆ, ಮುಖೇಶರು ತಮ್ಮ ಸೋದರಿಯ ಮದುವೆಯಲ್ಲಿ ಹಾಡುತ್ತಿದ್ದುದನ್ನು ಗಮನಿಸಿದ ಬಂಧು ಮೋತೀಲಾಲರು, ಅವರನ್ನು ತಮ್ಮ ಜತೆ ಮುಂಬೈಗೆ ಕರೆದೊಯ್ದರು. ಸಂಗೀತ ವಿದ್ವಾಂಸರಿಂದ ಸಂಗೀತಾಭ್ಯಾಸ ಮಾಡಿಸಿದರು. ಅದು ಮೋತಿಲಾಲರ ಪರಿಚಿತರಾಗಿದ್ದ, ಆಗಿನ ಸುಪ್ರಸಿದ್ಧ ಗಾಯಕರಾಗಿದ್ದ ಕೆ.ಎಲ್ ಸೈಗಲ್ ಗಮನಕ್ಕೆ ಬಂದಿತ್ತು. ಮುಖೇಶರ ಗಾಯನಕ್ಕೆ ಭವಿಷ್ಯವಿದೆ ಎಂಬುದು ಸೈಗಲ್ ಗೆ ಗೊತ್ತಿತ್ತು. ಆಶ್ಚರ್ಯಕರ ಸಂಗತಿ ಎಂದರೆ, ಮುಖೇಶ್ ಸೈಗಲ್ರನ್ನು ಮಾನಸಗುರುವನ್ನಾಗಿ ಸ್ವೀಕರಿಸಿದ್ದರು. ಹಾಡುವುದಕ್ಕೆ ಅವಕಾಶ ಸಿಕ್ಕಾಗ ಅವರನ್ನೇ ಅನುಕರಣೆ ಮಾಡುತ್ತಿದ್ದರು.
1941ರಲ್ಲಿ ಕೆ.ಎಲ್ ಸೈಗಲ್ ಗೆಳೆಯರಲ್ಲೊಬ್ಬರು ನಿರ್ಮಿಸುತ್ತಿದ್ದ ‘ನಿರ್ದೋಷ್’ ಚಿತ್ರಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ಆ ಚಿತ್ರಕ್ಕೆ ಗಾಯಕ-ನಾಯಕ ಪಾತ್ರವನ್ನು ಸೈಗಲರ ಶಿಫಾರಸ್ಸಿನ ಮೇರೆಗೆ ಮುಖೇಶರಿಗೆ ನೀಡಲಾಯಿತು. ಚಿತ್ರ ತೆರೆಕಂಡು ಜನಪ್ರಿಯವಾಯಿತು. ಮುಖೇಶರ ಮೊದಲ ಹಾಡು, ‘ದಿಲ್ ಹೀ ಬುಝಾ ಹುಆ ಹೋ ತೋ…’ ಜನರ ನಾಲಿಗೆಯ ಮೇಲೆ ನಲಿದಾಡುವಂತಾಯಿತು. ಅದರ ಬಲದಿಂದ ಅವರಿಗೆ ರಣಜೀತ್ ಮೂವಿಟೋನ್ ಕಂಪೆನಿಯಲ್ಲಿ ಮೂರು ವರ್ಷಗಳ ಕಾಂಟ್ರಾಕ್ಟ್ ದೊರೆಯಿತು. ಆ ಮೂರು ವರ್ಷಗಳಲ್ಲಿ ಮುಖೇಶ್ ಅನೇಕ ಚಿತ್ರಗಳಲ್ಲಿ ನಟಿಸಿದರೂ, ಕೆಲವು ಮಾತ್ರ ತೆರೆ ಕಂಡವು. ಗಲ್ಲಾಪೆಟ್ಟಿಗೆಯಲ್ಲಿ ಸೋತವು. ಅಲ್ಲಿಗೆ ಮುಖೇಶರಿಗೆ ಚಿತ್ರಜಗತ್ತಿನಲ್ಲಿ ತಮ್ಮ ಸ್ಥಾನದ ಅರಿವಾಗಿತ್ತು. ಮೂರು ವರ್ಷಗಳ ಕಾಂಟ್ರಾಕ್ಟ್ ಮುಗಿದಿತ್ತು. ನಟನೆಯಿಂದ ಹಿಂದೆ ಸರಿದು ಹಿನ್ನೆಲೆ ಗಾಯನದತ್ತ ಗಮನ ಹರಿಸುವುದು ಅಗತ್ಯವಾಗಿತ್ತು.
ಇದನ್ನು ಓದಿದ್ದೀರಾ?: ನಾಸಿರುದ್ದೀನ್ ಶಾ: ಅಭಿಮಾನಿಗಳ ಎದೆ ತುಂಬುವ ಬೆಳಕು
1943-44ರಲ್ಲಿ ಕೆಲವು ಚಿತ್ರಗಳಿಗೆ ಹಿನ್ನೆಲೆ ಗಾಯಕನಾಗಿ ಹಲವು ಹಾಡುಗಳನ್ನು ಹಾಡಿದರೂ, ಕೇಳುಗರ ಮನಗೆಲ್ಲುವಲ್ಲಿ ಮುಖೇಶ್ ಸೋತರು. 1945ರಲ್ಲಿ ಬಂದ ‘ಪಹಲೀ ನಜರ್’ ಚಿತ್ರದ ‘ದಿಲ್ ಜಲ್ತಾ ಹೈ ತೋ ಜಲ್ನೇ ದೇ’ ಹಾಡು ಇವರನ್ನು ನಾಡಿಗೆ ಪರಿಚಯಿಸಿತು. ಇಷ್ಟಾದರೂ ಕೈಯಲ್ಲಿ ಕಾಸಿಲ್ಲ, ವಾಸಿಸಲು ಮನೆಯಿಲ್ಲ. ಇಂತಹ ದಿಕ್ಕೆಟ್ಟ ದಿನಗಳಲ್ಲಿಯೇ ಮುಖೇಶ್, ಶ್ರೀಮಂತ ಕುಟುಂಬದ ಸರಳಾ ತ್ರಿವೇದಿಯವರನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ 1946ರಲ್ಲಿ ಸರಳವಾಗಿ ಮದುವೆಯಾದರು.
1948ರಲ್ಲಿ ಬಂದ ‘ಮೇಲಾ’, 1949ರಲ್ಲಿ ಬಿಡುಗಡೆಯಾದ ‘ಅಂದಾಜ್’ ಚಿತ್ರಗಳಲ್ಲಿ ನೌಶಾದರ ಸಂಗೀತ ನಿರ್ದೇಶನದಲ್ಲಿ ಹಾಡಲು ಮುಖೇಶ್ಗೆ ಅವಕಾಶ ಸಿಕ್ಕಿತು. ನೌಶಾದರ ಸೂಚನೆಯ ಮೇರೆಗೆ ಗಾಯನ ಶೈಲಿಯನ್ನು ಬದಲಿಸಿಕೊಂಡ ಮುಖೇಶ್, ಮುಂದಕ್ಕೆ ಅದನ್ನೇ ರೂಢಿಸಿಕೊಂಡರು. ಅದರಲ್ಲೂ ‘ಅಂದಾಜ್’ನಲ್ಲಿ ಹಾಡಿದ ‘ತೂ ಕಹೇ ಅಗರ್…’, ‘ಝೂಮ್ ಝೂಮ್ ಕೇ ನಾಚೇ ಆಜ್…’, ‘ಹಮ್ ಆಜ್ ಕಹೀಂ ದಿಲ್ ಖೋ ಬೈಠೇ…’ ಮತ್ತು ‘ಟೂಟೇ ನ ದಿಲ್ ಟೂಟೇ ನ…’ ಹಾಡುಗಳಲ್ಲಿ ಮುಖೇಶರ ಸ್ವಂತಿಕೆ ಎದ್ದು ಕಂಡಿತು.
ಮುಖೇಶರ ಅದೃಷ್ಟ ಹೇಗಿತ್ತೆಂದರೆ, ಅಂದಿನ ಸೂಪರ್ ಸ್ಟಾರ್ ಗಳಾದ ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ಗಳಿಗೆ ಮಹಮ್ಮದ್ ರಫೀ ಪರ್ಮನೆಂಟ್ ಗಾಯಕರಾಗಿದ್ದರು. ಸಂಗೀತ ಸಾಮ್ರಾಟ ಸೈಗಲ್ರನ್ನೇ ಸೈಡಿಗೆ ಸರಿಸಿ, ಚಿತ್ರೋದ್ಯಮವನ್ನು ಆಳುತ್ತಿದ್ದ ರಫೀ ಮುಂದೆ ಮತ್ತೊಬ್ಬ ಗಾಯಕರು ನಿಲ್ಲುವಂತಿರಲಿಲ್ಲ. ಇಂತಹ ಪ್ರಬಲ ಪೈಪೋಟಿಯ ಕಾಲದಲ್ಲಿ, 1948ರಲ್ಲಿ ಬಂದ, ರಾಜ್ ಕಪೂರ್ ನಾಯಕನಟನಾಗಿ ನಟಿಸಿದ ‘ಆಗ್’ ಚಿತ್ರದಲ್ಲಿ ಮುಖೇಶರಿಗೊಂದು ಅವಕಾಶ ಸಿಕ್ಕಿತು. ಇದು ಮುಂದೆ ಸಂಗೀತ ನಿರ್ದೇಶಕರಾದ ಶಂಕರ್-ಜೈಕಿಶನ್ ಜೋಡಿ ‘ಆವಾರಾ’ ಮತ್ತು ‘ಶ್ರೀ 420’ ಚಿತ್ರಗಳಲ್ಲಿ ಮುಖೇಶರನ್ನೇ ಮುಖ್ಯಗಾಯಕರನ್ನಾಗಿ ಹಾಡಿಸುವಂತೆ ಮಾಡಿತು. ಈ ಚಿತ್ರಗಳ ಹಾಡುಗಳು ಅದೆಷ್ಟರ ಮಟ್ಟಿಗೆ ಜನಪ್ರಿಯವಾದವೆಂದರೆ; ಭಾರತದಲ್ಲಷ್ಟೇ ಅಲ್ಲ, ರಷ್ಯಾ, ಚೀನಾದಲ್ಲೂ ಜನಮೆಚ್ಚುಗೆ ಗಳಿಸಿದವು. ರಾಜ್ ಕಪೂರ್ ಎಂದರೆ ಮುಖೇಶ್ ಎಂಬಷ್ಟರಮಟ್ಟಿಗೆ ಬಂಧ ಬಿಗಿಯಾಯಿತು.
ಇಷ್ಟಾದರೂ ಮುಖೇಶರಿಗೆ ಚಿತ್ರಜಗತ್ತಿನಲ್ಲಿ ಗಟ್ಟಿಯಾಗಿ ನೆಲೆಯೂರುವುದು ಸಾಧ್ಯವಾಗಲಿಲ್ಲ. ಸಂತೃಪ್ತಿ ಸಮಾಧಾನ ಎನ್ನುವುದು ಸಿಗಲೇ ಇಲ್ಲ. ಮತ್ತೆ ಅಭಿನಯ-ನಿರ್ಮಾಣದತ್ತ ಮನಸ್ಸು ಎಳೆಯುವುದೂ ನಿಲ್ಲಲಿಲ್ಲ. ಆ ನಿಟ್ಟಿನಲ್ಲಿ ‘ಭೈರವಿ’, ‘ಮಲ್ಹಾರ್’, ‘ಮಾಶುಕಾ’, ‘ಅನುರಾಗ್’ ಎಂಬ ಚಿತ್ರಗಳನ್ನು ಮಾಡಿದರು. ಆದರೆ ಆ ಚಿತ್ರಗಳಾವುವೂ ಗೆಲ್ಲದೆ, ಮುಖೇಶರನ್ನು ಮತ್ತಷ್ಟು ಹತಾಶೆಗೆ ದೂಡಿದವು. ಅದಷ್ಟೇ ಅಲ್ಲ, ಗಾಯನ ಕ್ಷೇತ್ರ ಬಿಟ್ಟು ನಟನೆಗೆ ಹಾರಿದ್ದು, ಈ ಕ್ಷೇತ್ರದಲ್ಲಿಯ ಅವಕಾಶಗಳನ್ನೂ ಇಲ್ಲವಾಗಿಸಿತ್ತು. ಸುಮಾರು ಐದು ವರ್ಷಗಳವರೆಗೆ ಅವರಿಗೆ ಅವಕಾಶಗಳು ದೊರೆಯದೆ ಆರ್ಥಿಕಸ್ಥಿತಿ ತುಂಬಾ ಹದಗೆಟ್ಟಿತ್ತು.
1958ರಲ್ಲಿ ದಿಲೀಪ್ ಕುಮಾರ್ ಅಭಿನಯದ ‘ಯಹೂದಿ’ ಚಿತ್ರದ ‘ಯೆಹ್ ಮೇರಾ ದೀವಾನಾಪನ್ ಹೈ…’ ಹಾಡು ಬಿಡುಗಡೆಯಾದಾಗ ಮುಖೇಶ್ ಮತ್ತೆ ಚಲನಚಿತ್ರಾಕಾಶದಲ್ಲಿ ಹೊಳೆಯುವ ನಕ್ಷತ್ರವಾದರು. ಮುಂದುವರೆದು, ಬಿಮಲ್ ರಾಯ್ ನಿರ್ದೇಶನದ ‘ಮಧುಮತಿ’ ಚಿತ್ರದಲ್ಲಿ ಸಲಿಲ್ ಚೌಧುರಿ ಸಂಗೀತ ನಿರ್ದೇಶನದಲ್ಲಿ ಹಾಡಿದ ಎಲ್ಲ ಹಾಡುಗಳೂ ಜನಪ್ರಿಯವಾದವು. 1960ರಿಂದ 76ರವರೆಗಿನ, ಸುಮಾರು 15 ವರ್ಷಗಳ ಕಾಲ ಅತ್ಯಂತ ಹೃದಯಂಗಮ ಹಾಡುಗಳಿಂದ ಮುಖೇಶ್ ಕೇಳುಗರ ಎದೆಯನ್ನು ತೇವಗೊಳಿಸಿದರು. ಸುಮಾರು 1,300 ಹಾಡುಗಳ ಬಹಳ ದೊಡ್ಡ ಸ್ವರಸಂಪತ್ತನ್ನು ಕೇಳುಗರಿಗಾಗಿ ಬಿಟ್ಟುಹೋದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿದರು. ಶ್ರೇಷ್ಠ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪುರಸ್ಕಾರವನ್ನೂ ಪಡೆದರು.
ಮುಖೇಶರಿಗೆ ಹಾಡಿನ ಸನ್ನಿವೇಶವನ್ನು ವಿವರಿಸಿದಂತೆಯೇ ತಾನು ಹಿನ್ನೆಲೆ ಗಾಯನವನ್ನು ನೀಡುವ ಪಾತ್ರದ ಒಳಹೊಕ್ಕು ಅದರ ಸಂವೇದನೆಯನ್ನು ಅನುಭವಿಸಿ, ಅದಕ್ಕೆ ತಕ್ಕಂತೆ ಹಾಡುವ ಸಾಮರ್ಥ್ಯವಿತ್ತು. ಅದಕ್ಕೊಂದು ಉತ್ತಮ ಉದಾಹರಣೆಯಾಗಿ, ‘ಜಾನೇ ಕಹಾ ಗಯೇ ಓ ದಿನ್’ ಹಾಡನ್ನು ಹೆಸರಿಸಬಹುದು. ಭಗ್ನ ಪ್ರೇಮಿಗಳ ಪ್ರತಿನಿಧಿಯಂತಿದ್ದ ಮುಖೇಶ್, ಶೋ ಮ್ಯಾನ್ ರಾಜ್ ಕಪೂರ್ ತೆಗೆಯುತ್ತಿದ್ದ ಸಿನಿಮಾಗಳ ಕಾಯಂ ಗಾಯಕರಾಗಿದ್ದರು. ನೋವು, ಸಂಕಟ, ಯಾತನೆಗಳನ್ನು ಸ್ವರಗಳಿಗಿಳಿಸಿ, ಕೇಳುಗರ ಕರುಳಿಗಿಳಿಸುವ ಮಾಂತ್ರಿಕತೆಯನ್ನು ಮುಖೇಶ್ ಮೈಗೂಡಿಸಿಕೊಂಡಿದ್ದರು.
ಮುಖೇಶರು ಮತ್ತೊಬ್ಬ ನಾಯಕನಟ ಮನೋಜ್ ಕುಮಾರ್ಗೆ ಹೆಚ್ಚು ಹಾಡಿದರಲ್ಲದೆ, ಕಲ್ಯಾಣ್ಜೀ-ಆನಂದ್ಜೀಯವರ ಸಂಗೀತ ನಿರ್ದೇಶನದಲ್ಲಿ ಹೆಚ್ಚಿನ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. 1978ರಲ್ಲಿ ಬಂದ ರಾಜ್ ಕಪೂರರ ‘ಸತ್ಯಮ್ ಶಿವಮ್ ಸುಂದರಮ್’ ಚಿತ್ರದಲ್ಲಿ ಲಕ್ಷ್ಮೀಕಾಂತ್-ಪ್ಯಾರೇಲಾಲರ ಸಂಗೀತ ನಿರ್ದೇಶನದಲ್ಲಿ ಬಂದ ‘ಚಂಚಲ್, ಶೀತಲ್, ನಿರ್ಮಲ್, ಕೋಮಲ್ ಸಂಗೀತ್ ಕೀ ದೇವೀ ಸ್ವರ್ ಸಜ್ನೀ’ ಹಾಡು ಅವರ ಕೊನೆಯ ಹಾಡಾಯಿತು ಎಂಬ ಉಲ್ಲೇಖ ಒಂದು ಕಡೆ ಇದ್ದರೆ; 1975ರಲ್ಲಿ ಬಂದ ‘ಧರಮ್ ಕರಮ್’ ಚಿತ್ರದ ‘ಎಕ್ ದಿನ್ ಬಿಕ್ ಜಾಯೇಗಾ…’ ಗೀತೆ ಅವರ ಕೊನೆಯ ಗಾಯನ ಎನ್ನುವವರೂ ಇದ್ದಾರೆ, ಇರಲಿ.
ಮುಖೇಶ್ ಹಾಡುಗಳ ಮೋಡಿಗೆ ಮನಸೋಲದವರೇ ಇಲ್ಲ ಎನ್ನಬೇಕು. 70ರ ದಶಕದ ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಎಂದೇ ಹೆಸರು ಪಡೆದಿದ್ದ ಕರ್ನಾಟಕದ ಬಿ.ಎಸ್ ಚಂದ್ರಶೇಖರ್, ಮುಖೇಶರ ಅಭಿಮಾನಿಯಾಗಿದ್ದು, ಫೀಲ್ಡ್ನಲ್ಲಿ ಯಾವಾಗಲೂ ಗುನುಗುತ್ತಿದ್ದರಂತೆ. ಇದನ್ನು ಕಂಡಿದ್ದ ಕ್ಯಾಪ್ಟನ್ ಗವಾಸ್ಕರ್, ಚಂದ್ರು ಬೌಲಿಂಗ್ ಮಾಡುವಾಗ, ಅವರಿಗೆ ಖುಷಿಯಾಗಲಿ, ವಿಕೆಟ್ ಕೀಳಲಿ ಎಂದು ಮುಖೇಶರ ಹಾಡನ್ನು ತಾವೂ ಗುನುಗುತ್ತಿದ್ದರಂತೆ. ಗವಾಸ್ಕರ್ ಗುನುಗುವುದನ್ನು ಕಂಡು ವಿಕೇಟ್ ಕೀಪರ್ ಕಿರ್ಮಾನಿ, ಸ್ಲಿಪ್ ನಲ್ಲಿದ್ದ ಗುಂಡಪ್ಪ ವಿಶ್ವನಾಥ್ ಕೂಡ ದನಿಗೂಡಿಸುತ್ತಿದ್ದರಂತೆ. ಈ ಸ್ವಾರಸ್ಯಕರ ಸಂಗತಿಯನ್ನು ಹಿಂದೊಮ್ಮೆ ಕ್ರಿಕೆಟ್ ಕುರಿತು ಬರೆಯುವ ಅಂಕಣಕಾರ ರಾಜನ್ ಬಾಲ ಬರೆದದ್ದುಂಟು.
ವಿಷಾದ ಮುಖೇಶರ ಬದುಕಿನುದ್ದಕ್ಕೂ ಬೆನ್ನೇರಿ ಬಂದಿತ್ತು. ಬಾಲಕನಿಂದ ಹಿಡಿದು ಕೊನೆಗಾಲದವರೆಗೆ, ನಿಟ್ಟುಸಿರೇ ನಿತ್ಯವಾಗಿತ್ತು. ಅವರು ಚಿತ್ರೋದ್ಯಮಕ್ಕೆ ಬಂದದ್ದು ನಾಯಕನಾಗಲು. ಆದರೆ ಮುಖೇಶರನ್ನು ಕಣ್ತುಂಬಿಕೊಳ್ಳುವ ಕಣ್ಣುಗಳು ಮುಚ್ಚಿ, ಕೇಳುವ ಕಿವಿಗಳು ಕಾತರಿಸುತ್ತಿದ್ದವು. ಅದಕ್ಕೂ ಒಗ್ಗಿಕೊಂಡರು. ಸಂಗೀತ ಸಾಮ್ರಾಟರಾದ ಸೈಗಲ್, ರಫೀ, ಕಿಶೋರ್ ಕುಮಾರ್ಗಳ ಅಬ್ಬರದಲ್ಲಿಯೂ, ತಮ್ಮದೇ ಆದ ಖಾಸಗಿ ಕೋಣೆಯೊಂದನ್ನು ನಿರ್ಮಿಸಿಕೊಂಡರು. ಖಾಸಗಿತನದಲ್ಲಿ ಹಾಡಿಕೊಳ್ಳುವ ಸಂಕಟ ಸಂತೈಸುವ ಹಾಡುಗಳಿಂದಲೇ ಖ್ಯಾತಿ ಗಳಿಸಿದರು. ಅನಾಥ ಭಾವಕ್ಕೆ ಅದ್ಭುತ ಸ್ವರಗಳ ಮೂಲಕ ಮುಲಾಮು ಹಚ್ಚಿದರು. ಮುಖೇಶ್ ಇಲ್ಲವಾಗಿ 47 ವರ್ಷಗಳಾದರೂ, ಇಂದಿಗೂ ಮುಖೇಶರ ದರ್ದ ಭರೇ ಗೀತ್ಗಳನ್ನು ಆಲಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆ ಮೂಲಕ ಅವರು ನಮ್ಮೊಂದಿಗಿದ್ದಾರೆ.

ಲೇಖಕ, ಪತ್ರಕರ್ತ
ಒಳ್ಳೆಯ ಲೇಖನ.
ಮುಖೇಶರ ದರ್ದ್ ಭರೇ ಹಾಡುಗಳಂತೆಯೇ ಅವರ ಹಲವಾರು ಲವಲವಿಕೆಯ ಗೀತೆಗಳೂ ಸಹ ಉತ್ಕೃಷ್ಟವಾಗಿವೆ ಮತ್ತು ಬಹಳ ಜನಪ್ರಿಯವೂ ಆಗಿವೆ.
ಈ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ೯೦ ರ ದಶಕದಲ್ಲಿ ಬಿ.ಎಂ.ರಶೀದ್ ಬರೆದ ಮುಖೇಶ್ ಕುರಿತು ಲೇಖನದ ನೆನಪನ್ನು ತಮ್ಮ ಈ ಬರಹ ನೆನಪಿಸಿತು;ಮುಖೇಶ್ ರವರ ಕುರಿತು ತುಂಬ ಆತ್ಮೀಯವಾಗಿ ಬರೆದಿದ್ದಿರಿ;ನನ್ನ ನೆಚ್ಚಿನ ಗಾಯಕ ಮುಖೇಶ್ ಇಂದಿಗೂ ತಮ್ಮ ಹಾಡುಗಳಿಂದ ಜೀವಂತ…
ಒಂದು ಸಣ್ಣದಾದ ನಿವೇದನೆ;ಲಂಕೇಶರ ಕುರಿತು ಮುಂದೆ ಸಾಧ್ಯವಾದರೇ ಒಂದು ಸಣ್ಣ ಪುಸ್ತಕ ತನ್ನಿ;ಲಂಕೇಶ್ ರವರ ಆಪ್ತಬಳಗದಲ್ಲಿ ತಾವು ಕಾರ್ಯನಿರ್ವಹಿಸುತ್ತಿದ್ದಿರಿ;ಅವರ ಕುರಿತು ಈ ಕಾಲಘಟ್ಟದಲ್ಲಿ ತಮ್ಮ ಪುಸ್ತಕ ಬರಬೇಕಾದದ್ದು ಕಾಲದ ಬೇಡಿಕೆಯಾಗಿದೆ…@ ಬಸವರಾಜ್ ಸರ್…