ಬಾಲಿವುಡ್‌ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಬೆಳಗ್ಗೆ ಮುಂಬೈ ಸಮೀಪದ ಕಾರ್ಜತ್‌ನಲ್ಲಿರುವ ತಮ್ಮದೇ ಒಡೆತನದ ಎನ್‌ಡಿ ಸ್ಟುಡಿಯೋದಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಸಮಸ್ಯೆ ಉಂಟಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಆಗಸ್ಟ್ 9ರಂದು ನಿತಿನ್ 58ನೇ ವಸಂತಕ್ಕೆ ಕಾಲಿಡಲಿದ್ದರು. ಹುಟ್ಟುಹಬ್ಬಕ್ಕೆ ಕೆಲವೇ ದಿನಗಳಿರುವಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಮಾಹಿತಿ ಪಡೆದ ಖಾಲಾಪುರ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿತಿನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಸ್ಥಳೀಯ ಶಾಸಕ ಮಹೇಶ್ ಬಾಲ್ಡಿ ನಿತಿನ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದು, “ನಿತಿನ್ ಆತ್ಮಹತ್ಯೆಗೆ ಶರಣಾಗಲು ಹಣಕಾಸಿನ ಸಮಸ್ಯೆಯೇ ಕಾರಣ. ಅವರ ಎನ್‌ಡಿ ಸ್ಟುಡಿಯೋ ಕಳೆದ ಕೆಲ ದಿನಗಳಿಂದ ನಷ್ಟದಲ್ಲಿ ನಡೆಯುತ್ತಿತ್ತು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ” ಎಂದಿದ್ದಾರೆ. ರಿತೇಶ್ ದೇಶಮುಖ್ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರು ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ʼಹಮ್ ದಿಲ್ ದೇ ಚುಕೆ ಸನಮ್ʼ, ʼದೇವದಾಸ್ʼ, ʼಜೋಧಾ ಅಕ್ಬರ್ʼ, ʼಲಗಾನ್ʼ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಿತಿನ್ ಅದ್ದೂರಿ ಸೆಟ್‌ಗಳನ್ನು ನಿರ್ಮಿಸುವ ಮೂಲಕ ಬಾಲಿವುಡ್‌ನಲ್ಲಿ ಸ್ಟಾರ್ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಕೇವಲ ಕಲಾ ನಿರ್ದೇಶಕನಾಗಿ ಮಾತ್ರವಲ್ಲದೇ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ಹೆಸರು ಮಾಡಿದ್ದರು.
ಸಿನಿಮಾ ಶೂಟಿಂಗ್‌ಗೆ ಸೆಟ್‌ಗಳನ್ನು ನಿರ್ಮಿಸುವ ಸಲುವಾಗಿ 2005ರಲ್ಲಿ ಕಾರ್ಜತ್‌ನಲ್ಲಿ 52 ಎಕ್ಕರೆ ಪ್ರದೇಶದಲ್ಲಿ ಎನ್‌ಡಿ ಸ್ಟುಡಿಯೋವನ್ನು ಪ್ರಾರಂಭಿಸಿದ್ದರು. ʼಜೋಧಾ ಅಕ್ಬರ್ʼ, ʼಲಗಾನ್ʼ ಮುಂತಾದ ಚಿತ್ರಗಳನ್ನು ಇದೇ ಸ್ಟುಡಿಯೋದಲ್ಲಿ ಚಿತ್ರಿಸಲಾಗಿದೆ. ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ʼಬಿಗ್ ಬಾಸ್ʼನ ಚಿತ್ರೀಕರಣ ಕೂಡ ಇದೇ ಸ್ಟುಡಿಯೋದಲ್ಲಿ ನಡೆಯುತ್ತದೆ.