ಕಳಪೆ ಪ್ರದರ್ಶನದಿಂದಾಗಿ ಚಿತ್ರದ ಪ್ರದರ್ಶನ ರದ್ದು
ಚಿತ್ರದ ಪ್ರಚಾರಕ್ಕಾಗಿ ಸುಳ್ಳು ಹೇಳಿದರೇ ನಿರ್ಮಾಪಕರು?
ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನಕ್ಕೆ ನಿರ್ಬಂಧ ಹೇರಿದ್ದಕ್ಕೆ ವಿವರಣೆ ನೀಡುವಂತೆ ಸೂಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಮೂಲಕ ವಿವರಣೆ ನೀಡಿರುವ ತಮಿಳುನಾಡು ಸರ್ಕಾರದ ಪರ ವಕೀಲರು “ಕಳಪೆ ಪ್ರದರ್ಶನದಿಂದಾಗಿ ರಾಜ್ಯದಲ್ಲಿ ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನಗಳು ನಿಂತಿವೆ. ಆದರೆ, ಚಿತ್ರದ ಪ್ರಚಾರಕ್ಕಾಗಿ ನಿರ್ಮಾಪಕರು ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಪ್ರತಿಯಾಗಿ ದೂರಿದ್ದಾರೆ.
“ನಮ್ಮ ʼದಿ ಕೇರಳ ಸ್ಟೋರಿʼ ಚಿತ್ರವನ್ನು ಪ್ರದರ್ಶಿಸದಂತೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿದೆ. ತಮಿಳುನಾಡಿನಲ್ಲೂ ಅನಧಿಕೃತವಾಗಿ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಚಿತ್ರದ ನಿರ್ಮಾಪಕರು ರಾಜ್ಯ ಸರ್ಕಾರಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಎರಡೂ ರಾಜ್ಯ ಸರ್ಕಾರಗಳಿಗೆ ವಿವರಣೆ ನೀಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದರು.
ಇದೀಗ ಅಫಡವಿಟ್ ಮೂಲಕ ತಮಿಳುನಾಡು ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಿದ್ದು, “ರಾಜ್ಯದಲ್ಲಿ ʼದಿ ಕೇರಳ ಸ್ಟೋರಿʼ ಚಿತ್ರಕ್ಕೆ ಅನಧಿಕೃತ ನಿರ್ಬಂಧ ಹೇರಲಾಗಿದೆ ಎಂದು ನಿರ್ಮಾಪಕರು ಸುಳ್ಳು ಹೇಳಿಕೆ ನೀಡಿದ್ದಾರೆ. ವಾಸ್ತವದಲ್ಲಿ ಚಿತ್ರಕ್ಕೆ ಪ್ರೇಕ್ಷಕರ ಸ್ಪಂದನೆ ತೀರಾ ಕಳಪೆಯಾಗಿತ್ತು. ಚಿತ್ರದಲ್ಲಿ ಯಾವುದೇ ಜನಪ್ರಿಯ ಕಲಾವಿದರು ಇಲ್ಲದಿರುವುದು ಕೂಡ ಕಳಪೆ ಪ್ರದರ್ಶನಕ್ಕೆ ಕಾರಣ. ʼದಿ ಕೇರಳ ಸ್ಟೋರಿʼ ಬಿಡುಗಡೆಯಾಗಿ 2 ದಿನ ಕಳೆದರೂ ಪ್ರೇಕ್ಷಕರು ಸ್ಪಂದನೆ ಇಲ್ಲದ ಕಾರಣ ಮಲ್ಟಿಪ್ಲೆಕ್ಸ್ ಮಾಲೀಕರುಗಳೇ ಸ್ವಯಂ ಪ್ರೇರಿತರಾಗಿ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದಾರೆ” ಎಂದು ವಾಸ್ತವತೆಯನ್ನು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈದಿನ ವಿಶೇಷ | ಸಾಫ್ಟ್‌ವೇರ್ ಇಂಜಿನಿಯರ್ ʼಡೇರ್‌ಡೆವಿಲ್ ಮುಸ್ತಫಾʼ ಸಿನಿಮಾ ಮಾಡಿದ ಕಥೆ
“ಸರ್ಕಾರದ ಅಧಿಕಾರಿಗಳು ಅನಧಿಕೃತವಾಗಿ ಚಿತ್ರದ ಪ್ರದರ್ಶನವನ್ನು ರದ್ದುಪಡಿಸಿದ್ದಾರೆ ಎಂಬ ಆರೋಪಕ್ಕೆ ಪೂರಕವಾಗಿ ನಿರ್ಮಾಪಕರು ಯಾವುದೇ ಸಾಕ್ಷ್ಯಾಧಾರಗಳನ್ನು ಸಲ್ಲಿಸಿಲ್ಲ. ರಾಜ್ಯದ 19 ಮಲ್ಟಿಪ್ಲೆಕ್ಸ್‌ಗಳಲ್ಲಿ ʼದಿ ಕೇರಳ ಸ್ಟೋರಿʼ ಸಿನಿಮಾ ಬಿಡುಗಡೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪ್ರತಿಯೊಂದು ಮಲ್ಟಿಪ್ಲೆಕ್ಸ್ ಬಳಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. ಆದರೆ, ಸಂವಿಧಾನದ 32ನೇ ವಿಧಿಯಡಿ ನ್ಯಾಯಾಲಯದಿಂದ ಅನುಚಿತ ಲಾಭ ಮತ್ತು ಚಿತ್ರಕ್ಕೆ ಪ್ರಚಾರ ಪಡೆಯುವ ಸಲುವಾಗಿ ನಿರ್ಮಾಪಕರು ಈ ರೀತಿಯ ಸುಳ್ಳು ಹೇಳಿಕೆ ನೀಡಿದ್ದಾರೆ” ಎಂದು ಪ್ರತಿಯಾಗಿ ಆರೋಪಿಸಿದ್ದಾರೆ.
ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆ ಮಾಡಲಾಗಿದೆ ಎಂಬ ಎಳೆಯ ಸುತ್ತʼದಿ ಕೇರಳ ಸ್ಟೋರಿʼ ಚಿತ್ರ ಮೂಡಿಬಂದಿದೆ. ಆದರೆ, ಈ ಚಿತ್ರ ತಿರುಚಿದ ಕಥಾಹಂದರವನ್ನು ಹೊಂದಿದೆ ಎಂಬ ಆರೋಪವಿದೆ.