ಈದಿನ ವಿಶೇಷ | ಸಾಫ್ಟ್‌ವೇರ್‌ ಇಂಜಿನಿಯರ್‌ ʼಡೇರ್‌ಡೆವಿಲ್‌ ಮುಸ್ತಫಾʼ ಸಿನಿಮಾ ಮಾಡಿದ ಕಥೆ

Date:

ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಥೆ ʼಡೇರ್‌ಡೆವಿಲ್‌ ಮುಸ್ತಫಾʼ ಸಿನಿಮಾ ರೂಪ ಪಡೆದುಕೊಂಡಿದ್ದು, ಇದೇ ಮೇ 19ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಸಾಫ್ಟ್‌ವೇರ್‌ ಕೆಲಸ ಬಿಟ್ಟು ಸಿನಿಮಾರಂಗ ಪ್ರವೇಶಿಸಿರುವ ತೇಜಸ್ವಿ ಅವರ ಅಭಿಮಾನಿ ಶಶಾಂಕ್‌ ಸೋಗಾಲ್‌ ಈ ಸಿನಿಮಾ ನಿರ್ದೇಶಿಸಿದ್ದಾರೆ. ಸದ್ಯ ಪ್ರಚಾರ ಕಾರ್ಯದಲ್ಲಿರುವ ಅವರು ʼಡೇರ್‌ಡೆವಿಲ್‌ ಮುಸ್ತಫಾʼನ ಕಥೆಯನ್ನು ದೃಶ್ಯ ರೂಪಕ್ಕೆ ಅಳವಡಿಸಿದ ಅನುಭವವನ್ನು ಈದಿನ.ಕಾಮ್‌ ಜೊತೆಗೆ ಹಂಚಿಕೊಂಡಿದ್ದಾರೆ.

ʼಡೇರ್‌ಡೆವಿಲ್‌ ಮುಸ್ತಫಾʼ ಒಂದು ಕಿರುಕಥೆ ಅದನ್ನು ಕಮರ್ಶಿಯಲ್‌ ಸಿನಿಮಾ ಮಾಡಲು ನಿಮಗೆ ಸಾಧ್ಯವಾಗಿದ್ದು ಹೇಗೆ?

ಕಿರುಕಥೆಗಳಲ್ಲಿ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕಾದಂಬರಿಗಳಿಗಿಂತ ಕಿರುಕಥೆಗಳೇ ಸಿನಿಮಾ ಮಾಡಲು ಸೂಕ್ತ. ಇಂತಹ ಕಥೆಗಳನ್ನು ಸಿನಿಮಾ ಮಾಡುವಾಗ ತಂತ್ರಜ್ಞರಿಗೆ ಒಂದು ಮಟ್ಟಿಗಿನ ಸ್ವಾತಂತ್ರ್ಯ ಕೂಡ ಇರುತ್ತದೆ. ಅದರಲ್ಲೂ ಪೂರ್ಣಚಂದ್ರ ತೇಜಸ್ವಿ ಅವರು ಕಾಲೇಜು ಕ್ಯಾಂಪಸ್ಸಿನ ಸುತ್ತ ಇಡೀ ಕಥೆ ಹೆಣೆದಿದ್ದಾರೆ. ಕಾಲೇಜು ಕಥನ ಅಂದ ತಕ್ಷಣ ಮೂಲ ಕಥೆಗೆ ಧಕ್ಕೆಯಾಗದ ರೀತಿಯಲ್ಲಿ ಹೆಚ್ಚಿನ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಸೇರಿಸಿ ಸಿನಿಮಾ ರೂಪ ನೀಡುವ ಸಾಧ್ಯತೆಗಳು ಕಾಣಿಸಿದವು. ಹೀಗಾಗಿ ಈ ಸಿನಿಮಾ ಮಾಡುವುದು ನನಗೆ ಸುಲಭವಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜನಪ್ರಿಯ ಕಥೆ, ಕಾದಂಬರಿಗಳನ್ನು ದೃಶ್ಯ ರೂಪಕ್ಕೆ ಇಳಿಸುವಾಗ ಎದುರಾಗುವ ಸವಾಲುಗಳೇನು?

ಯಾವುದೇ ಒಂದು ಮೂಲ ಕಥೆ ಆಧರಿಸಿ ಸಿನಿಮಾ ಮಾಡಲು ಹೊರಟಾಗ ಅಥವಾ ಈಗಾಗಲೇ ಪ್ರದರ್ಶನ ಕಂಡಿರುವ ಸಿನಿಮಾವನ್ನು ರೀಮೇಕ್‌ ಮಾಡಲು ಮುಂದಾದಾಗ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸುವ ಅಗತ್ಯವಿರುತ್ತದೆ. ಮೂಲ ಅಂಶಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಚಿತ್ರಕಥೆ ನಿರೂಪಿಸಬೇಕಾದ ಹೊಣೆ ನಮ್ಮ ಮೇಲಿರುತ್ತದೆ. ನಮ್ಮ ಚಿತ್ರದಲ್ಲೂ ಮೂಲ ಕಥೆಯ ಆಶಯ ಮುಖ್ಯವಾಗಿರಿಸಿಕೊಂಡು ನಿರೂಪಣೆ ಮಾಡಿದ್ದೇವೆ. ಇನ್ನೇನಿದ್ದರೂ ಸಿನಿಮಾ ನೋಡಿ ಜನ ತೀರ್ಪು ಕೊಡಬೇಕಷ್ಟೇ.

ಈ ಸಿನಿಮಾ ತೇಜಸ್ವಿ ಅವರ ಅಭಿಮಾನಿಗಳು ಹಣ ಹೂಡಿ ನಿರ್ಮಿಸಿರುವುದಂತೆ?

‘ಡೇರ್‌ ಡೆವಿಲ್‌ ಮುಸ್ತಾಫಾ’ ದೊಡ್ಡ ಕ್ಯಾನ್ವಸ್‌ನ ಮತ್ತು ದೊಡ್ಡ ಮಟ್ಟದ ಬಂಡವಾಳ ಬೇಡುವ ಚಿತ್ರ. ಅದರಲ್ಲೂ ಕಾದಂಬರಿ ಆಧಾರಿತ ಸಿನಿಮಾ. ಚಿತ್ರದ ಪಾತ್ರವರ್ಗದಲ್ಲಿರುವ ಎಲ್ಲರೂ ಹೊಸ ಪ್ರತಿಭೆಗಳು. ಹೀಗಾಗಿ ನಮ್ಮ ಬಳಿ ಯಾವ ನಿರ್ಮಾಪಕರೂ ಇರಲಿಲ್ಲ. ಸಿನಿಮಾ ಮಾಡಲು ಹಣವೂ ಇರಲಿಲ್ಲ. ಆದರೆ, ಬೇಕಾದಷ್ಟು ಸಮಯವಿತ್ತು, ಕಥಾವಸ್ತು ಕೂಡ ಸಿದ್ಧವಾಗಿತ್ತು. ಮೊದ ಮೊದಲು ತೇಜಸ್ವಿ ಅವರ ಕಥೆಯನ್ನು ಸಿನಿಮಾ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರೋಮೋಗಳನ್ನು ಬಿಟ್ಟಾಗ ನನ್ನ ಕಿರುಚಿತ್ರ ನೋಡಿದ್ದ ಕೆಲ ಸ್ನೇಹಿತರು ಜೊತೆಯಾದರು. ನಂತರದ ದಿನಗಳಲ್ಲಿ ಹಂತ ಹಂತವಾಗಿ ತೇಜಸ್ವಿ ಅವರ ಅಭಿಮಾನಿಗಳು ನಮ್ಮ ಬೆಂಬಲಕ್ಕೆ ನಿಂತರು. ನೋಡ ನೋಡುತ್ತಾ ನೂರು ಮಂದಿ ತೇಜಸ್ವಿ ಅಭಿಮಾನಿಗಳೇ ಈ ಚಿತ್ರಕ್ಕೆ ಬಂಡವಾಳ ಹೂಡಿದರು. ʼಡೇರ್‌ ಡೆವಿಲ್‌ ಮುಸ್ತಾಫಾʼ ತೇಜಸ್ವಿಯಂತಹ ಲೇಖಕರೊಬ್ಬರ ಅಭಿಮಾನಿಗಳೇ ನಿರ್ಮಿಸಿರುವ ಚಿತ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಇಂಜಿನಿಯರಿಂಗ್‌ ಹಿನ್ನೆಲೆಯ ನೀವು ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ?

ನಾನು ಮೈಸೂರು ಮೂಲದವನು. ಜೆಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮುಗಿಸಿ, ನಾಲ್ಕೈದು ವರ್ಷಗಳ ಕಾಲ ಸಾಫ್ಟವೇರ್‌ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಆದರೆ, ಚಿಕ್ಕಂದಿನಿಂದಲೂ ರಂಗಾಯಣದ ಜೊತೆಗೆ ಅವಿನಾಭಾವ ನಂಟಿತ್ತು. ಹಲವು ನಾಟಕಗಳಲ್ಲಿ ಬಾಲ ನಟನಾಗಿ ಅಭಿನಯಿಸಿದ್ದೆ. ಕಾಲೇಜು ದಿನಗಳಲ್ಲೂ ಸ್ಕಿಟ್‌ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಮೊದಲಿನಿಂದಲೂ ಸಿನಿಮಾ ಬಗ್ಗೆ ಅಪಾರ ಆಸಕ್ತಿ ಇತ್ತು. ಒಮ್ಮೆ ಪುನೀತ್‌ ರಾಜ್‌ಕುಮಾರ್‌ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದೆ. ಆಗ ಪುನೀತ್‌ ಅವರು ನನ್ನ ಕನಸಿನ ಬಗ್ಗೆ ಕೇಳಿದಾಗ, ಸಿನಿಮಾ ನಿರ್ದೇಶಕನಾಗುವ ಬಯಕೆ ಹಂಚಿಕೊಂಡಿದ್ದೆ. ಆಗಿನಿಂದ ಜನ ಕೂಡ ನನ್ನನ್ನು ಸಿನಿಮಾ ನಿರ್ದೇಶಕನಾಗಲಿರುವ ಹುಡುಗ ಎಂಬಂತೆಯೇ ನೋಡಲು ಶುರು ಮಾಡಿದರು. ಈ ಬೆಳವಣಿಗೆಗಳು ನನ್ನನ್ನು ಸಿನಿಮಾದತ್ತ ವಾಲುವಂತೆ ಮಾಡಿದವು. ಸಮಯ ಸಿಕ್ಕಾಗಲೆಲ್ಲ ಕಿರುಚಿತ್ರಗಳನ್ನು ನಿರ್ದೇಶಿಸತೊಡಗಿದೆ. ಹೀಗೆ ನಾಲ್ಕೈದು ಕಿರುಚಿತ್ರಗಳನ್ನು ಮಾಡಿದ್ದೆ. ಆ ಪೈಕಿ ʼಫಟಿಂಗʼ ಕಿರುಚಿತ್ರ ಜನಪ್ರಿಯವಾಯ್ತು. ಆ ನಂತರ ನಾನು ಕೂಡ ಜನರನ್ನು ರಂಜಿಸಬಲ್ಲೆ ಎಂಬ ವಿಶ್ವಾಸ ಬಂತು. ಕಿರು ಚಿತ್ರಗಳನ್ನು ಮಾಡಿಕೊಂಡಿದ್ದ ನನಗೆ ʼಡೇರ್‌ ಡೆವಿಲ್‌ ಮುಸ್ತಾಫಾʼದಂತಹ ಕತೆ ಓದಿದಾಗ ಇದನ್ನು ಸಿನಿಮಾ ಮಾಡಲೇಬೇಕು ಎನ್ನಿಸಿತು. ಆ ಕಥೆಯಲ್ಲಿನ ಸೂಕ್ಷ್ಮಗಳನ್ನು ಗಮನಿಸಿದಾಗ, ಕಾಲೇಜು ಕ್ಯಾಂಪಸ್‌ನಲ್ಲಿ ಲವಲವಿಕೆಯಿಂದ ಗಂಭೀರ ವಿಚಾರಗಳನ್ನು ಚರ್ಚಿಸುವ ತೇಜಸ್ವಿ ಅವರ ರೀತಿ ತುಂಬಾ ಇಷ್ಟವಾಯ್ತು. ಹೀಗಾಗಿ ಈ ಕಥೆಯನ್ನೇ ಆಯ್ದುಕೊಂಡು ಪೂರ್ಣ ಪ್ರಮಾಣದಲ್ಲಿ ಚಿತ್ರ ನಿರ್ದೇಶನಕ್ಕಿಳಿದೆ.

ಡಾಲಿ ಧನಂಜಯ ನಿಮ್ಮ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅವರ ಬಗ್ಗೆ ಹೇಳಿ…

ಕಾಲೇಜು ದಿನಗಳಿಂದಲೂ ಧನಂಜಯ ನನಗೆ ಪರಿಚಿತರು. ಹಾಗೆಂದು ನಾನು ಯಾವತ್ತಿಗೂ ನಮ್ಮ ಸಿನಿಮಾಗೆ ಬಂಡವಾಳ ಹೂಡುವಂತೆ ಅವರ ಬಳಿ ಕೇಳಿರಲಿಲ್ಲ. ‘ಬಡವ ರಾಸ್ಕಲ್‌’ ಸಿನಿಮಾ ಯಶಸ್ಸು ಕಂಡ ಬಳಿಕ ಹೊಸಬರಿಗೆ ಬೆಂಬಲ ನೀಡುವುದಾಗಿ ಧನಂಜಯ ಹೇಳಿಕೊಂಡಿದ್ದರು. ಅದೇ ಹೊತ್ತಿನಲ್ಲಿ ಅವರಿಗೆ ನಮ್ಮ ಸಿನಿಮಾದ ಶೋ ರೀಲ್‌ಗಳನ್ನು ತೋರಿಸಿದ್ದೆವು. ಸಾಹಿತ್ಯದ ಬಗ್ಗೆ ಆಸಕ್ತಿ ಇರುವ ಧನಂಜಯ, ತೇಜಸ್ವಿ ಅವರ ಕತೆಯನ್ನು ದೃಶ್ಯ ರೂಪದಲ್ಲಿ ನೋಡಿ ಬೆರಗಾದರು. ಅದಾದ ಬಳಿಕ ಇಡೀ ಸಿನಿಮಾ ನೋಡಿ, “ಈ ಸಿನಿಮಾ ಬಹಳ ಜನಕ್ಕೆ ತಲುಪಬೇಕು. ನಾನೇ ಸಿನಿಮಾವನ್ನು ಪ್ರಸ್ತುತಪಡಿಸುತ್ತೇನೆ” ಎಂದು ಮುಂದೆ ಬಂದರು. ಅವರಿಂದಾಗಿ ಕೆಆರ್‌ಜಿ ಸ್ಟುಡಿಯೋದವರು ಕೂಡ ಸಿನಿಮಾ ವಿತರಣೆಗೆ ಒಪ್ಪಿಕೊಂಡರು.

ಈ ಸುದ್ದಿ ಓದಿದ್ದೀರಾ?: ಚುನಾವಣೆ ಹೊತ್ತಲ್ಲೂ ಸಖತ್‌ ಸದ್ದು ಮಾಡುತ್ತಿರುವ ʼಡೇರ್‌ಡೆವಿಲ್‌ ಮುಸ್ತಫಾʼ

ಡಾ. ಬ್ರೋ ಖ್ಯಾತಿಯ ಯುಟ್ಯೂಬರ್‌ ಗಗನ್‌ ನಿಮ್ಮ ಸಿನಿಮಾ ಟ್ರೈಲರ್‌ಗೆ ಧ್ವನಿಯಾಗಿದ್ದಾರೆ…

ನನಗೆ ಈ ಹಿಂದೆ ಡಾ. ಬ್ರೋ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಸುಮ್ಮನೆ ಯುಟ್ಯೂಬ್‌ ನೋಡುತ್ತಿದ್ದಾಗ ಅವರ ವಿಡಿಯೋ ಕಣ್ಣಿಗೆ ಬಿತ್ತು. ನನ್ನ ಜೊತೆಗಿದ್ದವರು ಅವರ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡಿದ್ದರು. ಹೀಗಾಗಿ ಅವರ ವಿಡಿಯೋಗಳನ್ನು ನೋಡಲು ಶುರು ಮಾಡಿದೆ. ಅವರ ಮಾತು, ನಡೆದುಕೊಳ್ಳುವ ರೀತಿಯನ್ನು ನೋಡಿದಾಗ ನಮ್ಮವನೇ ಎನ್ನುವಷ್ಟರ ಮಟ್ಟಿಗೆ ಮನಸ್ಸಿಗೆ ಹತ್ತಿರವಾದರು. ಹೀಗಾಗಿ ನಮ್ಮ ಸಿನಿಮಾ ಟ್ರೈಲರ್‌ಗೆ ಡಾ. ಬ್ರೋ ಧ್ವನಿಯಾದರೆ ನೋಡುಗರಿಗೆ ಆಪ್ತವಾಗಿರುತ್ತದೆ ಎನ್ನಿಸಿತು. ನಮ್ಮ ತಂಡದಲ್ಲಿ ಕೆಲವರಿಗೆ ಅವರ ಪರಿಚಯವಿತ್ತು. ಟ್ರೈಲರ್‌ಗೆ ಧ್ವನಿಯಾಗುವಂತೆ ಸಂಪರ್ಕಿಸಿದಾಗ ಮೊದಲಿಗೆ ಅವರು ಹಿಂದೇಟು ಹಾಕಿದರು. ಆದರೆ, ಈ ಸಿನಿಮಾ ಯುವ ಸಮೂಹದ ಸುತ್ತ ಮೂಡಿಬಂದಿರುವುದರಿಂದ ಅವರ ಧ್ವನಿಯೇ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟೆ, ಆ ನಂತರವಷ್ಟೇ ಅವರು ಧ್ವನಿ ನೀಡಲು ಒಪ್ಪಿಕೊಂಡರು. ಅವರು ಒಪ್ಪಿದ್ದನ್ನು ಕೇಳಿ ನಾನಂತೂ ಬೆರಗಾದೆ. ಯಾಕೆಂದರೆ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಳ್ಳುವ ಮನಸ್ಥಿತಿ ಅವರದ್ದು. ಜನರ ಪಾಲಿಗೆ ಮನೆ ಮಗನಂತಿರುವ ನಾನು ಸಿನಿಮಾದವರ ಸಹವಾಸ ಮಾಡಿ ಸೆಲೆಬ್ರಿಟಿಯಂತೆ ವರ್ತಿಸಬಾರದು ಎಂಬ ಸ್ಪಷ್ಟತೆ ಅವರಿಗಿದೆ. ಹೀಗಾಗಿ ಅವರು ಒಪ್ಪಿಕೊಂಡಿದ್ದು ನಿಜಕ್ಕೂ ಖುಷಿ ಕೊಟ್ಟಿತ್ತು. ಆ ಸಂದರ್ಭದಲ್ಲಿ ಅವರು ದುಬೈನಲ್ಲಿದ್ದರು. ಅಲ್ಲೇ ಒಂದು ಸ್ಟುಡಿಯೋ ಬುಕ್‌ ಮಾಡಿದೆವು. ಅಲ್ಲಿಂದಲೇ ಅಬಚೂರನ್ನು ಪರಿಚಯಿಸುವ ತಮ್ಮ ಧ್ವನಿಯನ್ನು ರೆಕಾರ್ಡ್‌ ಮಾಡಿ ಕಳಿಸಿಕೊಟ್ಟರು. ಅವರು ಟ್ರೈಲರ್‌ಗೆ ಮಾತ್ರ ಧ್ವನಿ ನೀಡಿದ್ದಾರೆ. ಸಿನಿಮಾದಲ್ಲಿ ಅವರ ಧ್ವನಿ ಇಲ್ಲ, ಅವರು ನಟಿಸಿಯೂ ಇಲ್ಲ.

ಈಗಾಗಲೇ ‘ಡೇರ್‌ಡೆವಿಲ್‌ ಮುಸ್ತಾಫಾ’ ಕತೆ ಓದಿದವರು ನಿಮ್ಮ ಸಿನಿಮಾ ಯಾಕೆ ನೋಡಬೇಕು?

ಮೂಲ ಕಥೆಯ ಆಶಯವನ್ನು ತಿಳಿದವರು ಅದೇ ಕಥೆಯನ್ನು ದೊಡ್ಡ ಪರದೆಯ ಮೇಲೆ ದೃಶ್ಯ ರೂಪದಲ್ಲಿ ನೋಡಿದಾಗ ಸಿಗುವ ಅನುಭವವೇ ಬೇರೆ. ತೇಜಸ್ವಿ ಅವರು ಈ ಕಥೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎನ್ನುವ ಭಾವ ನನ್ನಲ್ಲಿದೆ. ಅವರು ಯಾಕಾಗಿ ಹೀಗೆ ಮಾಡಿರಬಹುದು ಎಂದು ಪತ್ತೆ ಹಚ್ಚಲು ಹಲವು ವಿಫಲ ಪ್ರಯತ್ನಗಳನ್ನು ನಡೆಸಿದ್ದೇನೆ. ಆ ಕತೆಯನ್ನು ಓದುವ ಪ್ರತಿಯೊಬ್ಬರಲ್ಲೂ ಮುಂದೇನಾಯ್ತು ಎಂಬ ಕುತೂಹಲ ಮೂಡುತ್ತದೆ. ಹೀಗಾಗಿ ʼಡೇರ್‌ಡೆವಿಲ್‌ ಮುಸ್ತಾಫಾʼ ಸಿನಿಮಾದಲ್ಲಿ ನನ್ನದೇ ರೀತಿಯಲ್ಲಿ ಕ್ಲೈಮ್ಯಾಕ್ಸ್‌ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಮೂಲ ಕಥೆಯ ಜೊತೆಗೆ ಹೆಚ್ಚಿನ ಪಾತ್ರಗಳು ಮತ್ತು ಸನ್ನಿವೇಶಗಳು ಚಿತ್ರದಲ್ಲಿವೆ. ಇದೆಲ್ಲವೂ ಒಂಥರದ ವಿಶೇಷ. ಹೀಗಾಗಿ ‘ಡೇರ್‌ಡೆವಿಲ್‌ ಮುಸ್ತಾಫಾ’ ಕನ್ನಡಿಗರು ನೋಡಬೇಕಾದ ಸಿನಿಮಾ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...

‘RCB ಸೋಲಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಾರಣ’ ಎಂದು ಅವಹೇಳನಕಾರಿ ಟ್ವೀಟ್: ಕಮಿಷನರ್‌ಗೆ ದೂರು

ಕನ್ನಡ ಚಿತ್ರರಂಗದ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ...