ಆಕ್ಷೇಪಾರ್ಹ ಸಂಭಾಷಣೆ ತೆಗೆಯಲು ಆಗ್ರಹ
ಚಿತ್ರತಂಡದ ವಿರುದ್ಧ ವ್ಯಾಪಕ ಆಕ್ರೋಶ
ತೆಲುಗಿನ ಸ್ಟಾರ್ ನಟ ಪ್ರಭಾಸ್ ಮುಖ್ಯಭೂಮಿಕೆಯ, ಓಂ ರಾವತ್ ನಿರ್ದೇಶನದ ʼಆದಿಪುರುಷ್ʼ ಸಿನಿಮಾ ಜಗತ್ತಿನಾದ್ಯಂತ ಪ್ರದರ್ಶನ ಕಾಣುತ್ತಿದೆ. ರಾಮಾಯಣದ ಕಥೆಯನ್ನು ಆಧರಿಸಿ ತೆರೆಗೆ ಬಂದಿರುವ ಈ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿರುವ ʼಹಿಂದೂ ಸೇನಾʼ ಸಂಘಟನೆಯ ಅಧ್ಯಕ್ಷ ವಿಷ್ಣು ಗುಪ್ತಾ, ಚಿತ್ರತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಹಿಂದೂ ಸೇನಾ ಅಧಕ್ಷ ವಿಷ್ಣು ಗುಪ್ತಾ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ” ʼಆದಿಪುರುಷ್ʼ ಚಿತ್ರದಲ್ಲಿ ಹಿಂದೂ ದೇವತೆಗಳಾದ ರಾಮ, ಸೀತೆ, ಹನುಮಂತನ ಪಾತ್ರಗಳನ್ನು ಅಸಂಬದ್ಧವಾಗಿ ಚಿತ್ರಿಸಲಾಗಿದೆ. ಹಿಂದೂ ದೇವತೆಗಳ ಕುರಿತ ಆಕ್ಷೇಪಾರ್ಹ ಸಂಭಾಷಣೆಗಳು ಕೂಡ ಚಿತ್ರದಲ್ಲಿವೆ. ʼಆದಿಪುರುಷ್ʼ ಚಿತ್ರತಂಡ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ. ವಾಲ್ಮಿಕಿ ಮಹರ್ಷಗಳು ರಚಿಸಿದ ʼರಾಮಾಯಣʼ ಮತ್ತು ಸಂತ ತುಳಸಿದಾಸರ ʼರಾಮಚರಿತ ಮಾನಸʼ ಮಹಾಕಾವ್ಯಗಳಲ್ಲಿ ಇರುವ ಕಥೆಗೂ ʼಆದಿಪುರುಷ್ʼ ಚಿತ್ರದಲ್ಲಿನ ನಿರೂಪಣೆಗೆ ಸಂಬಂಧವೇ ಇಲ್ಲ” ಎಂದು ಆರೋಪಿಸಿದ್ದಾರೆ. ಚಿತ್ರದಲ್ಲಿನ ಆಕ್ಷೇಪಾರ್ಹ ಸನ್ನಿವೇಶಗಳು ಮತ್ತು ಸಂಭಾಷಣೆಗಳನ್ನು ಕೂಡಲೇ ತೆಗೆದು ಹಾಕಲು ಚಿತ್ರತಂಡಕ್ಕೆ ಸೂಚಿಸುವಂತೆ ಮನವಿ ಮಾಡಿದ್ದಾರೆ.
ಶಿವಸೇನಾದ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ʼಆದಿಪುರುಷ್ʼ ಚಿತ್ರತಂಡದ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, “ಆದಿಪುರುಷ್ ಸಿನಿಮಾಗೆ ಸಂಭಾಷಣೆ ಬರೆದಿರುವ ಮನೋಜ್ ಮುಂತಾಶಿರ್ ಮತ್ತು ನಿರ್ದೇಶಕ ಓಂ ರಾವತ್ ಇಬ್ಬರೂ ಭಾರತೀಯರ ಕ್ಷಮೆ ಕೇಳಬೇಕು. ಚಿತ್ರದಲ್ಲಿ ನಮ್ಮ ದೇವತೆಗಳ ಬಗ್ಗೆ ವಿಶೇಷವಾಗಿ ಹನುಮಂತನ ಕುರಿತ ಸಂಭಾಷಣೆಗಳು ಕೀಳುಮಟ್ಟದ್ದಾಗಿವೆ. ಮನರಂಜನೆಯ ಹೆಸರಿನಲ್ಲಿ ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಲಾಗುತ್ತಿದೆ. ಹಣ ಗಳಿಕೆಯ ಉದ್ದೇಶಕ್ಕೆ ಮರ್ಯಾದಾ ಪುರುಷೋತ್ತಮ ರಾಮನ ಕುರಿತು ಬೇಕಾಬಿಟ್ಟಿ ಸಿನಿಮಾ ಮಾಡಿ ಅಗೌರವ ಸಲ್ಲಿಸುವುದು ಸ್ವೀಕಾರಾರ್ಹವಲ್ಲ” ಎಂದಿದ್ದಾರೆ.
ʼಆದಿಪುರುಷ್ʼ ಸಿನಿಮಾದ ಮೊದಲ ಟೀಸರ್ ಕಳಪೆಯಾಗಿದೆ ಎಂಬ ಟೀಕೆಗಳು ಕೇಳಿಬಂದ ಬೆನ್ನಲ್ಲೇ ನಿರ್ದೇಶಕ ಓಂ ರಾವತ್, ಧಾರ್ಮಿಕ ಭಾವನೆಗಳನ್ನು ಮುಂದಿರಿಸಿಕೊಂಡು ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಿದ್ದರು. ಸದ್ಯ ಅದೇ ಪ್ರಚಾರ ತಂತ್ರ ಇಡೀ ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಸುದ್ದಿ ಓದಿದ್ದೀರಾ? ನೇಪಾಳದಲ್ಲಿ ಆದಿಪುರುಷ್ ಸಿನಿಮಾ ಪ್ರದರ್ಶನ ರದ್ದು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಈ ಚಿತ್ರವನ್ನು ಬೆಂಬಲಿಸಿದ್ದ ಬಿಜೆಪಿ ನಾಯಕರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದ್ದಾರೆ. ವ್ಯಾಪಾಕ ಟೀಕೆ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಮೊದಲ ದಿನ ಚಿತ್ರ 140 ಕೋಟಿ ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.