ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ನಟ ಮೋಹನ್ ಬಾಬು ಬರೋಬ್ಬರಿ 30 ವರ್ಷಗಳ ಬಳಿಕ ಚೆನ್ನೈನಲ್ಲಿ ಮತ್ತೆ ಒಂದಾಗಿದ್ದಾರೆ. ಇದಕ್ಕೆ ಕಾರಣ, ತೆಲುಗಿನ ʼಪೆದರಾಯುಡುʼ ಸಿನಿಮಾ.
1995ರ ಜೂನ್ 15ರಂದು ಸೂಪರ್ ಹಿಟ್ ಚಿತ್ರ ‘ಪೆದರಾಯುಡು’ ತೆರೆಕಂಡಿತ್ತು. ಈಗ ಆ ಸಿನಿಮಾಗೆ 30 ವರ್ಷ ಕಳೆದಿದೆ. ಆ ಸ್ಮರಣೀಯ ಕ್ಷಣಗಳನ್ನು ರಜನಿ ಮತ್ತು ಮೋಹನ್ ಬಾಬು ಮೆಲುಕು ಹಾಕಿದ್ದಾರೆ. ಇದೇ ಖುಷಿಯಲ್ಲಿ ಇಬ್ಬರೂ ವಿಷ್ಣು ಮಂಚು ಅವರ ‘ಕಣ್ಣಪ್ಪ’ ಸಿನಿಮಾ ವೀಕ್ಷಿಸಿದ್ದಾರೆ.
ಅಂದಹಾಗೆ, ಜೂನ್ 27 ರಂದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕಣ್ಣಪ್ಪ ಚಿತ್ರ ಬಿಡುಗಡೆಯಾಗಲಿದೆ. ಚಿತ್ರ ವೀಕ್ಷಿಸಿದ ಬಳಿಕ ರಜನಿಕಾಂತ್ ಕೊಂಚ ಭಾವುಕರಾಗಿದ್ದಾರೆ. “ಇದು ಅಸಾಧಾರಣ ಚಿತ್ರ. ಭಾವನೆ, ದೃಶ್ಯ ವೈಭವ ಮತ್ತು ಅಧ್ಯಾತ್ಮ—all extraordinary” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ರಜನಿಕಾಂತ್ ಬಗ್ಗೆಯೂ ಮಾತನಾಡಿದ ಮೋಹನ್ ಬಾಬು, “ಇವತ್ತು 22 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ರಜನಿಕಾಂತ್ ಅವರ ಆಲಿಂಗನ ದೊರೆತಿದೆ. ಈಗ ನಾನು ಹೆದರುವುದಿಲ್ಲ. ನಾನು ಅಜೇಯ. ಕಣ್ಣಪ್ಪ ಬರುತ್ತಾನೆ!” ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.
ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಪುತ್ರನ ಚಿತ್ರಕ್ಕೆ ಮೋಹನ್ ಬಾಬು ಬಂಡವಾಳ ಹೂಡಿ ನಿರ್ಮಾಪಕರಾಗಿದ್ದಾರೆ. ಬಹುತಾರಾಗಣದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ಮೋಹನ್ ಬಾಬು, ಶರತ್ಕುಮಾರ್, ಮಧೂ ಮುಂತಾದ ಹಿರಿಯ ನಟರು ನಟಿಸಿದ್ದಾರೆ. ಮೋಹನ್ ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಕಾಜಲ್ ಅಗರ್ವಾಲ್ ಮುಂತಾದ ಸ್ಟಾರ್ ಕಲಾವಿದರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ನಟಿ ರಚಿತಾ ರಾಮ್ ವಿರುದ್ಧ ಕಠಿಣ ಕ್ರಮಕ್ಕೆ ನಿರ್ದೇಶಕ ನಾಗಶೇಖರ್ ಒತ್ತಾಯ