ನಿರೀಕ್ಷೆ ಹೆಚ್ಚಿಸಿದ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಚಿತ್ರ
ತಲೈವಾ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಮೊಹಿದ್ದೀನ್ ಭಾಯ್ ಆಗಿ ಸಿನಿ ರಸಿಕರ ಗಮನ ಸೆಳೆಯುತ್ತಿದ್ದಾರೆ. ತಮಿಳಿನ ಬಹುನಿರೀಕ್ಷಿತ ʼಲಾಲ್ ಸಲಾಂʼ ಚಿತ್ರದಲ್ಲಿ ರಜನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಸೋಮವಾರ ಅವರ ಪಾತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ʼಲಾಲ್ ಸಲಾಂʼ ಚಿತ್ರವನ್ನು ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ನಿರ್ದೇಶಿಸುತ್ತಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿ ತಲೈವಾ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ರಜನಿಕಾಂತ್ ಅವರ ವಿಶೇಷ ಪಾತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಮೊಹಿದ್ದೀನ್ ಭಾಯ್ ಅನ್ನು ಪರಿಚಯಿಸಿದೆ. ಈ ಮೂಲಕ ರಜನಿಕಾಂತ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಕೂಡ ಖಚಿತ ಪಡಿಸಿದೆ.
ಫಸ್ಟ್ ಲುಕ್ ಪೋಸ್ಟರ್ ನೋಡಿದ ಅಭಿಮಾನಿಗಳು ರಜನಿಕಾಂತ್ ಅವರ ಹೊಸ ಅವತಾರವನ್ನು ಮೆಚ್ಚಿಕೊಂಡಿದ್ದು, ಮೊಹಿದ್ದೀನ್ ಭಾಯ್ ಅವರನ್ನು ತೆರೆ ಮೇಲೆ ನೋಡಲು ಕಾತುರರಾಗಿದ್ದೇವೆ ಎಂದಿದ್ದಾರೆ.
ಕ್ರಿಕೆಟ್ ಆಟಗಾರರ ಬದುಕಿನ ಸುತ್ತ ಮೂಡಿ ಬರುತ್ತಿರುವ ʼಲಾಲ್ ಸಲಾಂʼ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ತಮಿಳಿನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ʼಲೈಕಾ ಪ್ರೊಡಕ್ಷನ್ಸ್ʼ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.