ಪಡಿತರ ವ್ಯವಸ್ಥೆಯ ನೈಜ ಸ್ಥಿತಿಯನ್ನು ಅನಾವರಣಗೊಳಿಸಲು ಸಜ್ಜಾಗಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಪೋಸ್ಟ್ ಪ್ರೊಡಕ್ಷನ್ ಹಂತದ ಕೊನೆಯಲ್ಲಿರುವ ಈ ಚಿತ್ರದ ವಿಶೇಷ ಶೀರ್ಷಿಕೆ ಗೀತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಾಷಯ ಕೋರಿದ್ದಾರೆ.
ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ, ಇದು ಹಳ್ಳಿಗಳ ಪಡಿತರ ವ್ಯವಸ್ಥೆ ಮತ್ತು ಅಲ್ಲಿನ ಜನಸಾಮಾನ್ಯರ ಬದುಕಿನ ಸುತ್ತ ಹೆಣೆಯಲಾದ ಕಥೆ. ಸಂಪೂರ್ಣವಾಗಿ ಮಂಡ್ಯ ಜಿಲ್ಲೆಯಲ್ಲೇ ಚಿತ್ರೀಕರಣಗೊಂಡಿರುವುದು ಸಿನಿಮಾದ ಮತ್ತೊಂದು ವಿಶೇಷತೆ. ಸುಮಾರು 52 ದಿನಗಳ ಕಾಲ ಮಂಡ್ಯದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಹಾಡು ಬಿಡುಗಡೆ ಮಾಡಿ ಮಾತನಾಡಿದ ಸಿಎಂ, “ಜನಸಾಮಾನ್ಯರ ಹಸಿವು ನೀಗಿಸಲು ಸರ್ಕಾರ ಪಡಿತರ ವ್ಯವಸ್ಥೆ ತಂದಿದೆ. ಆದರೆ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳಿಂದ ಅದು ಜನರಿಗೆ ಪೂರ್ಣ ಪ್ರಮಾಣದಲ್ಲಿ ತಲುಪುತ್ತಿಲ್ಲ. ಇಂತಹ ವಾಸ್ತವ ಸಂಗತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿರುವುದು ಶ್ಲಾಘನೀಯ. ಈ ಚಿತ್ರವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಲಿ” ಎಂದು ಹಾರೈಸಿದರು.

ಚಿತ್ರದಲ್ಲಿ ನಟ ಕುಮಾರ್ ಬಂಗಾರಪ್ಪ, ರಾಗಿಣಿ ದ್ವಿವೇದಿ ಹಾಗೂ ಹಿರಿಯ ನಟ ದೊಡ್ಡಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿ. ರಾಮಮೂರ್ತಿ ಅವರ ಕಥೆ ಮತ್ತು ಸಂಭಾಷಣೆ ಹೊಂದಿರುವ ಈ ಚಿತ್ರಕ್ಕೆ ಸಾತ್ವಿಕ್ ಪವನ್ ಕುಮಾರ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಇದನ್ನೂ ಓದಿ: ಕಣ್ಣಾಲಿ ಒದ್ದೆ ಮಾಡುವ ʼಗುರುತ್ವಾಕರ್ಷಣೆʼಯ ʼಅವ್ವ ಅವ್ವʼ ಹಾಡು; ಮೆಹಬೂಬ್ ಸಾಬ್ ಧ್ವನಿಗೆ ಸಲಾಂ ಎಂದ ಸಂಗೀತ ಪ್ರಿಯರು
ಜಯಶಂಕರ ಟಾಕೀಸ್ ಅಡಿ ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ಜಂಟಿ ನಿರ್ಮಾಣ ಮಾಡಿದ್ದಾರೆ. ಅನಂತ್ ಆರ್ಯನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಕೇವಲ ಕನ್ನಡಕ್ಕೆ ಸೀಮಿತವಾಗದೆ, ಈ ಚಿತ್ರದ ಗಹನವಾದ ವಿಷಯವನ್ನು ದೇಶದ ಇತರೆ ಭಾಷೆಗಳಿಗೂ ತಲುಪಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಶೀರ್ಷಿಕೆ ಗೀತೆ ಬಿಡುಗಡೆಯ ವೇಳೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ನಿರ್ಮಾಪಕ ಭಾ.ಮ. ಹರೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಚಿತ್ರಕ್ಕೆ ಬೆಂಬಲ ಸೂಚಿಸಿದರು.





